Site icon Vistara News

Rain News : ಶುರುವಾಯ್ತು ಮಳೆ ಅವಘಡ; ಮಲಗಿದ್ದಾಗ ಚಾವಣಿ ಕುಸಿದು ಮಹಿಳೆ ಸಾವು

Rain news

ವಿಜಯನಗರ: ಧಾರಕಾರವಾಗಿ ಸುರಿಯುತ್ತಿರುವ ಮಳೆ (Rain News) ನಾನಾ ಅವಾಂತರವನ್ನು ಸೃಷ್ಟಿ ಮಾಡಿದ್ದು, ಜನರ ಸಾವು-ನೋವಿಗೆ ಕಾರಣವಾಗಿದೆ. ಭಾರಿ ಮಳೆಗಾಳಿಗೆ ಚಾವಣಿ ಕುಸಿದು ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಹರಾಳು ಗ್ರಾಮದಲ್ಲಿ ಘಟನೆ ನಡೆದಿದೆ. ನಾಗಮ್ಮ (48) ಮೃತ ದುರ್ದೈವಿ.

ರಾತ್ರಿ ಪೂರ್ತಿ ಸುರಿದ ಭಾರಿ ಮಳೆಯೊಂದಿಗೆ, ರಭಸವಾಗಿ ಬೀಸಿದ ಗಾಳಿಗೆ ಮನೆ ಚಾವಣಿ ಕುಸಿದಿದೆ. ಈ ವೇಳೆ ನಾಗಮ್ಮ ಗಂಭೀರ ಗಾಯಗೊಂಡಿದ್ದರು. ಕೂಡಲೇ ಕುಟುಂಬಸ್ಥರು ಕೊಟ್ಟೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ನಾಗಮ್ಮ ಮೃತಪಟ್ಟಿದ್ದಾರೆ. ಕೊಟ್ಟೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಗುಡುಗು ಮಳೆಗೆ ಕೆರೆಯಂತಾದ ರಸ್ತೆಗಳು

ಬಿಸಿಲಿನ ಧಗೆಗೆ ತತ್ತರಿಸಿದ್ದ ಬೀದರ್ ಜನತೆಗೆ ಶುಕ್ರವಾರ ರಾತ್ರಿಯಿಂದಲೇ ಗುಡುಗು ಮಿಂಚು ಸಹಿತ ಧಾರಾಕಾರ ಮಳೆಯಾಗಿದೆ. ಏಕಾಏಕಿ ಮಳೆಯಿಂದಾಗಿ ವಾಹನ ಸವಾರರು, ಸಾರ್ವಜನಿಕರ ಪರದಾಡಿದರು. ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳು ಕೆರೆಯಂತಾಗಿದ್ದವು. ತರಕಾರಿ, ತೋಟಗಾರಿಕೆ ಬೆಳೆಗಳು ಭಾರಿ ಪ್ರಮಾಣದಲ್ಲಿ ಹಾನಿಯಾಗಿವೆ. ಸಿಡಿಲು ಬಡಿದು ಬರೂರು ಗ್ರಾಮದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಔರಾದ್, ಕಮಲನಗರ, ಭಾಲ್ಕಿ ತಾಲೂಕಿನಲ್ಲಿ‌ ಧಾರಾಕಾರ ಮಳೆ ಆಗುತ್ತಿದ್ದರೆ, ಬಸವಕಲ್ಯಾಣ, ಹುಮನಾಬಾದ್‌, ಚಿಟಗುಪ್ಪಾ ತಾಲೂಕುಗಳಲ್ಲಿ ಸಾಧಾರಣ ಮಳೆಯಾಗುತ್ತಿದೆ.

ಇದನ್ನೂ ಓದಿ: Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

ಮಳೆಯಲ್ಲಿಯೇ ಕ್ರಿಕೆಟ್‌ ಆಟ

ಕೊಪ್ಪಳದಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ವರುಣನ ಆಗಮನದಿಂದ‌ ಜನರು ಸಂತಸಗೊಂಡಿದ್ದರು. ಬಿಸಿಲಿನಿಂದ‌ ಕಂಗೆಟ್ಟಿದ್ದವರು ಮಳೆಯಲ್ಲಿಯೇ ಯುವಕರು ಕ್ರಿಕೆಟ್ ಆಡಿದರು. ಗದಗ ಜಿಲ್ಲೆಯ ಮುಂಡರಗಿ, ಶಿರಹಟ್ಟಿ ಸೇರಿದಂತೆ ಹಲವೆಡೆ ಬಿರುಗಾಳಿ ಸಮೇತ ಗುಡುಗು ಮಳೆಯಾಗುತ್ತಿದೆ. ಮಳೆ ಶುರುವಾದ ಹಿನ್ನೆಲೆ ಜನಜೀವನ‌ ಅಸ್ತವ್ಯಸ್ತವಾಗಿತ್ತು. ಯಾದಗಿರಿ ನಗರದಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದ್ದು, ಕಳೆದ ಅರ್ಧ ಗಂಟೆಯಿಂದ ಸುರಿಯುತ್ತಿದೆ. ಹುಬ್ಬಳ್ಳಿಯಲ್ಲೂ ಎಡಬಿಡದೇ ಮಳೆ ಸುರಿಯುತ್ತಿದೆ. ಕೊಪ್ಪಳ ಜಿಲ್ಲೆಯಲ್ಲೂ ಭಾರಿ ಮಳೆಗೆ ಕೆಲವು ಕಡೆ ಹೊಲದ ಒಡ್ಡುಗಳು ಒಡೆದು ಹೋಗಿವೆ. ಕೊಪ್ಪಳ ತಾಲೂಕಿನ ಬೆಟಗೆರಿ ಹಾಗೂ ಬೋಚನಹಳ್ಳಿಯಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ.

ಕರಾವಳಿಯಲ್ಲೂ ಮಳೆ ಅಬ್ಬರ

ಕರಾವಳಿಯ ಉತ್ತರಕನ್ನಡಕ್ಕೂ ವರುಣ ಕಾಲಿಟ್ಟಿದ್ದಾನೆ. ಕಳೆದೆರಡು ದಿನಗಳಿಂದ ಘಟ್ಟದ ಮೇಲಿನ ತಾಲೂಕುಗಳಲ್ಲಿ ಮಳೆ ಅಬ್ಬರಿಸುತ್ತಿತ್ತು. ಶನಿವಾರ ಬೆಳಗ್ಗೆಯಿಂದ ಕುಮಟಾ, ಅಂಕೋಲಾ ಭಾಗದಲ್ಲಿ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯು ಏಪ್ರಿಲ್ 22ರವರೆಗೆ ಮಳೆಯ ಮುನ್ಸೂಚನೆ ನೀಡಿದೆ. ಶಿರಸಿ, ಸಿದ್ದಾಪುರ, ಮುಂಡಗೋಡ, ಹಳಿಯಾಳ ಭಾಗದಲ್ಲಿ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version