ತಿರುವನಂತಪುರ: ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆ, ಕುಸಿಯುತ್ತಿರುವ ಬೆಟ್ಟ ಗುಡ್ಡಗಳ ನಡುವೆ ಆತಂಕದಲ್ಲಿ ನಡುಗುತ್ತಿರುವ ಕೇರಳಕ್ಕೆ ಮತ್ತೆ ವರ್ಷಾಘಾತದ ಅಲರ್ಟ್ ಘೋಷಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಗುರುವಾರ ಕೇರಳದ ಎಂಟು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಪತ್ತನಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್ ಮತ್ತು ಕಣ್ಣೂರಿನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ತಿರುವನಂತಪುರಂನಲ್ಲಿ ಹಳದಿ ಅಲರ್ಟ್ ಜಾರಿಯಲ್ಲಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಭಾರಿ ಮಳೆ ಮುಂದುವರಿಯಲಿದೆ. ನದಿಗಳು ಉಕ್ಕಿ ಹರಿದು ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ನುಗ್ಗಿರುವ ಕಾರಣ ಅನೇಕ ಜನರು ತಮ್ಮ ಮನೆಗಳಿಂದ ಸುರಕ್ಷಿತ ಜಾಗಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ.
ರಾಜ್ಯದ ಅತಿ ಉದ್ದದ ನದಿಯಾದ ಪೆರಿಯಾರ್ ಉಕ್ಕಿ ಹರಿದು ಸುತ್ತಮುತ್ತಲಿನ ಗ್ರಾಮಗಳಿಗೆ ನೀರು ನುಗ್ಗಿದೆ. ನಿರಂತರ ಮಳೆಯಿಂದಾಗಿ ಚಾಲಕ್ಕುಡಿ, ಪಂಪಾ, ಮಣಿಮಾಲಾ ಮತ್ತು ಅಚನ್‌ಕೋವಿಲ್ ಸೇರಿದಂತೆ ಇತರ ನದಿಗಳು ಅಪಾಯದ ಮಟ್ಟವನ್ನು ಮೀರುವ ಹಂತದಲ್ಲಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳ ಸೂಚನೆಯಂತೆ ಚಾಲಕ್ಕುಡಿ ನದಿಯ ದಡದ ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ತ್ರಿಶೂರ್ ಮತ್ತು ಎರ್ನಾಕುಲಂ ಜಿಲ್ಲೆಗಳ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಜಾಗರೂಕರಾಗಿ ಇರಬೇಕೆಂದು ಹೇಳಿದ್ದಾರೆ.
ಗುಡ್ಡಗಾಡು ಪ್ರದೇಶಗಳ ರಸ್ತೆಗಳಲ್ಲಿ ರಾತ್ರಿಯ ಸಮಯದಲ್ಲಿ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ. ಇಡುಕ್ಕಿಯ ಪೊನ್ಮುಡಿ, ಲೋವರ್ ಪೆರಿಯಾರ್, ಕಲ್ಲರ್ಕುಟ್ಟಿ, ಎರಟ್ಟಯಾರ್ ಮತ್ತು ಕುಂಡಾಲ ಮತ್ತು ಪತ್ತನಂತಿಟ್ಟ ಜಿಲ್ಲೆಯ ಮೂಝಿಯಾರ್ ಆರು ಪ್ರಮುಖ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಮಟ್ಟವು ಆತಂಕಕಾರಿ ಮಟ್ಟಕ್ಕೆ ತಲುಪಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಇದನ್ನೂ ಓದಿ: Monkey-pox | ಕೇರಳ ಆಯ್ತು ಈಗ ದೆಹಲಿಯಲ್ಲಿ ಮಂಕಿ ಫಿಯರ್: ಕರ್ನಾಟಕದಲ್ಲಿ ಹೈ ಅಲರ್ಟ್