ಬೆಂಗಳೂರು: ಹಾವು ಎಂದರೆ ಎಂಥ ಗಟ್ಟಿ ಮನುಷ್ಯನಿಗಾದರೂ ಒಮ್ಮೆ ಭಯವಾಗುತ್ತದೆ. ದಾರಿಯಲ್ಲಿ ಹೋಗುತ್ತಿದ್ದಾಗ ಎದುರಿಗೆ ಕಂಡರೂ ಸಾಕು ಮೈ ಪೂರಾ ಬೆವರಿಬಿಡುತ್ತದೆ. ಅದೇ ಪಕ್ಕವೇ ಬಂದರೆ? ಗಂಟಲು ಒಣಗಿಬಿಡುತ್ತದೆ. ಇಲ್ಲಾಗಿದ್ದೂ ಅದೇ ಕಥೆ. ರಾಜಧಾನಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ (Rain News) ಅಡಗಿದ್ದ ಹಾವುಗಳೆಲ್ಲವೂ ಹೊರ ಬರುತ್ತಿವೆ. ಹೀಗೆ ಮಳೆ (Karnataka rain) ನೀರಿನಲ್ಲಿ ಹರಿದು ಬಂದ ಹಾವೊಂದು (Snake Rescue) ಬೈಕ್‌ನಲ್ಲಿ ಸೇರಿಕೊಂಡು ಅವಾಂತರವನ್ನೇ ಸೃಷ್ಟಿಸಿತ್ತು.
ನಿನ್ನೆ ಭಾನುವಾರ ಮನೆಯಿಂದ ಹೊರಟ ಬೈಕ್ ಸವಾರನೊಬ್ಬನಿಗೆ ಮಳೆಯು ಎದುರಾಗಿತ್ತು. ದಿಢೀರ್ ಸುರಿದ ಮಳೆಯಿಂದಾಗಿ ಬೈಕ್ ಪಾರ್ಕ್ ಮಾಡಿ ರಸ್ತೆ ಬದಿಯ ನಿಲ್ದಾಣದಲ್ಲಿ ನಿಂತಿದ್ದ. ಮಳೆ ಕಡಿಮೆ ಆಯ್ತಲ್ಲ, ಇನ್ನೂ ಮನೆಗೆ ಹೋಗೋಣ ಅಂತ ಬೈಕ್ ಹತ್ರ ಬಂದರೆ ಬೈಕಿಂದ ಹಾವೊಂದು ಎದ್ದು ಬಂದಿದೆ. ಅಬ್ಬಾ.. ಹಾವು ಕಂಡೊಡನೆ ಹೇಗಾಗಿರಬೇಡ ಆ ಸವಾರನಿಗೆ! ಉಸಿರು ನಿಂತಂತೆ ಆಗಿದೆ. ಅಷ್ಟು ಜೋರು ಮಳೆಯಿಂದ ವಾತಾವರಣ ಕೂಲ್ ಆಗಿದ್ದರೂ ಆ ಸವಾರನಿಗೆ ಬೆವರುವಂತಾಗಿತ್ತು.
ಭಾರಿ ಮಳೆಗೆ ಹಾವೊಂದು ನೀರಲ್ಲಿ ಹರಿದು ಬಂದು ಬೈಕ್‌ನಲ್ಲಿ ಬೆಚ್ಚಗೆ ಕುಳಿತಿತ್ತು. ಅದೇ ಭಯದಲ್ಲಿ ಸವಾರ ದಿಕ್ಕು ತೋಚದಂತಾಗಿ ಬೈಕ್‌ನಿಂದ ದೂರ ಉಳಿದಿದ್ದ. ವಿಷಯ ತಿಳಿದು ಸ್ಥಳಕ್ಕೆ ಬಂದ ಉರಗ ತಜ್ಞ ಹಾವು ಹಿಡಿದರು. ಆ ಬಳಿಕ ಸವಾರ ನಿಟ್ಟುಸಿರು ಬಿಟ್ಟರು.
ಇದನ್ನೂ ಓದಿ: Karnataka Rain : ಸಿಡಿಲಿಗೆ ಆಕಳು ಬಲಿ; ಹಲವೆಡೆ ಮಳೆ ಅವಾಂತರಕ್ಕೆ ಜನರು ತತ್ತರ
ಮಳೆಗಾಲದಲ್ಲಿ ಶುರುವಾದ ಹಾವುಗಳ ಕಾಟ
ಎಲ್ಲೆಂದರಲ್ಲಿ ಕಾಣಿಸಿಕೊಳ್ಳುವ ಹಾವುಗಳು ಜನರನ್ನು ಬೆಚ್ಚಿಬೀಳಿಸುತ್ತಿದೆ. ಚಳಿ, ಶೀತಗಾಳಿ ಜಿಟಿ ಜಿಟಿ ಮಳೆ ಶುರುವಾದರೆ ಸಾಕು ಬೆಚ್ಚಗಿರುವ ಜಾಗ ಹುಡುಕಿಕೊಂಡು ಹೊರಬರುತ್ತಿವೆ. ಶೂ ಒಳಗೆ, ಹೆಲ್ಮೆಟ್ , ಸ್ಕೂಟರ್‌ನಲ್ಲಿ ಹಾವುಗಳು ಪ್ರತ್ಯಕ್ಷವಾಗುತ್ತಿವೆ. ಸದ್ಯ ಬೆಂಗಳೂರು ಮಂದಿಗೆ ಹಾವುಗಳ ಕಾಟ ಶುರುವಾಗಿವೆ.
ಬೊಮ್ಮನಹಳ್ಳಿ, ಬ್ಯಾಟರಾಯನಪುರ, ದಾಸರಹಳ್ಳಿ, ಮಹದೇವಪುರ ಮತ್ತು ರಾಜರಾಜೇಶ್ವರಿನಗರ ವಲಯದಲ್ಲಿ ಹಾವುಗಳು ಹೆಚ್ಚು ಕಂಡು ಬರುತ್ತಿವೆ. ಭಾರಿ ಮಳೆಗೆ ಆಶ್ರಯಕ್ಕಾಗಿ ಮನೆಗಳಿಗೆ ಹಾವುಗಳು ನುಗ್ಗುತ್ತಿವೆ. ಇದು ಜನರಲ್ಲಿ ಆತಂಕ ಹೆಚ್ಚಿಸುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ