ಉತ್ತರ ಕನ್ನಡದ ಅಂಕೋಲಾ ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ (Uttara Kannada Landslide) ಇದುವರೆಗೆ ಶಿರೂರು ಮೂಲದ ಒಂದೇ ಕುಟುಂಬದ ನಾಲ್ವರು, ಇಬ್ಬರು ಚಾಲಕರು ಸೇರಿ 6 ಮಂದಿ ಮೃತದೇಹ ಪತ್ತೆಯಾಗಿದೆ. ಮೊದಲ ದಿನ ಶಾಂತಿ ಲಕ್ಷ್ಮಣ ನಾಯ್ಕ(36) ಎಂಬುವವರ ಶವ ಪತ್ತೆಯಾಗಿತ್ತು. 2ನೇ ದಿನ ಲಕ್ಷ್ಮಣ ನಾಯ್ಕ (47), ರೋಶನ್ ಲಕ್ಷಣ ನಾಯ್ಕ(11) ಹಾಗೂ ತಮಿಳುನಾಡು ಮೂಲದ ಟ್ಯಾಂಕರ್ ಚಾಲಕ ಚಿಣ್ಣನ್ (55) ಎಂಬುವವರ ಮೃತದೇಹ ಪತ್ತೆಯಾಗಿದೆ.
ಗುರುವಾರ ಅವಂತಿಕಾ ಲಕ್ಷ್ಮಣ ನಾಯ್ಕ(5), ಲಾರಿ ಚಾಲಕ ಮುರುಗನ್ ಶವ ಸಿಕ್ಕಿದೆ. ಮೊದಲ ನಾಲ್ಕು ಮೃತದೇಹ ಗೋಕರ್ಣದ ದುಬ್ಬನಶಶಿ ಕಡಲತೀರದಲ್ಲಿ ಪತ್ತೆಯಾದರೆ, ಅವಂತಿಕಾ ಮೃತದೇಹ ಕುಮಟಾ ತಾಲ್ಲೂಕಿನ ಗಂಗೆಕೊಳ್ಳ ಭಾಗದಲ್ಲಿ, ಚಾಲಕ ಮುರುಗನ್ ಅಂಕೋಲಾ ತಾಲ್ಲೂಕಿನ ಮಂಜಗುಣಿ ಬಳಿ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ. ಜಿಲ್ಲಾಧಿಕಾರಿ ಹೇಳುವ ಪ್ರಕಾರ ನಾಲ್ಕು ಮಂದಿ ಮಿಸ್ಸಿಂಗ್ ದೂರು ಬಂದಿದೆ. ಹೀಗಾಗಿ ಒಟ್ಟು ಸಾವಿನ ಸಂಖ್ಯೆ 10ಕ್ಕೆ ಏರುವ ಸಾಧ್ಯತೆಯೂ ಇದೆ.
ಪರಿಹಾರದ ಆದೇಶ ಪತ್ರ ವಿತರಣೆ
ಗುಡ್ಡ ಕುಸಿತದಲ್ಲಿ ಮೃತಪಟ್ಟ ಟ್ಯಾಂಕರ್ ಚಾಲಕನ ಕುಟುಂಬಸ್ಥರಿಗೆ ಪರಿಹಾರದ ಆದೇಶ ಪತ್ರವನ್ನು ಉತ್ತರಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ.ಕೆ ವಿತರಿಸಿದರು. ಮೃತ ಚಾಲಕನ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರದ ಆದೇಶ ಹಸ್ತಾಂತರ ಮಾಡಲಾಗಿದೆ. ಜುಲೈ 15 ರಂದು ಶಿರೂರು ಬಳಿ ಗುಡ್ಡ ಕುಸಿದ ಅವಘಡದಲ್ಲಿ ಕಣ್ಮರೆಯಾಗಿದ್ದ ಚಿಣ್ಣನ್ ಮರುದಿನ ಲಕ್ಷಣ ನಾಯ್ಕ ಮೃತದೇಹದೊಂದಿಗೆ ಪತ್ತೆಯಾಗಿತ್ತು. ತಮಿಳುನಾಡಿನ ನಾಮಕ್ಕಲ್ ಮೂಲದ ಗ್ಯಾಸ್ ಟ್ಯಾಂಕರ್ ಚಾಲಕ ಚಿಣ್ಣನ್, ಮಂಗಳೂರಿನಿಂದ ಗೋವಾಕ್ಕೆ ಗ್ಯಾಸ್ ಟ್ಯಾಂಕರ್ ಕೊಂಡೊಯ್ಯುತ್ತಿದ್ದಾಗ ಗುಡ್ಡ ಕುಸಿದಿತ್ತು.
ಸ್ಥಳಕ್ಕಾಗಮಿಸಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ
ಅಂಕೋಲಾದ ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯಿಂದ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ತಂಡ ಭೇಟಿ ನೀಡಿದೆ. ಗುಡ್ಡ ಕುಸಿತ ಸ್ಥಳದಲ್ಲಿ ಕಲ್ಲು, ಮಣ್ಣು ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆ ಜಿಲ್ಲೆಯಲ್ಲಿ ಸರ್ವೆ ನಡೆಸಿ ಭೂಕುಸಿತ ಅಪಾಯವಿರುವ ಸ್ಥಳಗಳನ್ನು ಗುರುತಿಸಿತ್ತು. ಜಿಲ್ಲೆಯ ಸುಮಾರು 436 ಕಡೆ ಭೂಕುಸಿತ ಉಂಟಾಗುವ ಎಚ್ಚರಿಕೆಯನ್ನು ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ನೀಡಿತ್ತು. ಇದೀಗ ಎನ್‌ಎಚ್‌ಎಐ (NHAI) ಅಧಿಕಾರಿಗಳೊಂದಿಗೆ ಗುಡ್ಡ ಕುಸಿತ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Karnataka Rain : ಹಾಸನದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಗುಡ್ಡ ಕುಸಿತ; ಬೆಳಗಾವಿಯಲ್ಲಿ ರಸ್ತೆಗೆ ಉರುಳಿದ ಬೃಹತ್ ಬಂಡೆಗಲ್ಲು
ಮಣ್ಣು ತೆರೆಯುವಾಗ ಮತ್ತೆ ಬರ್ಗಿ ಬಳಿ ಗುಡ್ಡ ಕುಸಿತ
ಉತ್ತರ ಕನ್ನಡದ ಕುಮಟಾದ ಬರ್ಗಿ ಬಳಿ ಮಣ್ಣು ತೆರವುಗೊಳಿಸುವಾಗಲೇ ಮತ್ತೆ ಗುಡ್ಡ ಕುಸಿದಿದೆ. ರಾಷ್ಟ್ರೀಯ ಹೆದ್ದಾರಿ 66ರ ಬರ್ಗಿ ಗ್ರಾಮದ ಗುಡ್ಡ ಕುಸಿಯುವ ದೃಶ್ಯ ಬರ್ಗಿ ಗ್ರಾಮದ ನಿವಾಸಿಯೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಐಆರ್‌ಬಿ ಸಿಬ್ಬಂದಿ ಜೆಸಿಬಿಯಿಂದ ಮಣ್ಣು ತೆಗೆಯುತ್ತಿದ್ದಂತೆ ಮತ್ತೆ ಗುಡ್ಡ ಕುಸಿದಿದ್ದು, ಕೂಡಲೇ ಸಿಬ್ಬಂದಿ ಜೆಸಿಬಿ ಹಿಂದಕ್ಕೆ ತೆಗೆದುಕೊಂಡಿದ್ದಾರೆ. ಹೆದ್ದಾರಿ ಪಕ್ಕದ ಗುಡ್ಡಗಳು ಅಪಾಯಕಾರಿಯಾಗಿ ಪರಿಣಮಿಸಿದ್ದು, ಹೆದ್ದಾರಿ ಅಗಲೀಕರಣಕ್ಕೆ ಅವೈಜ್ಞಾನಿಕ ರೀತಿಯಲ್ಲಿ ಗುಡ್ಡ ಕೊರೆದಿದ್ದೇ ಕುಸಿತಕ್ಕೆ ಕಾರಣ ಎನ್ನಲಾಗಿದೆ.
ದೇವರಬಾವಿಯಲ್ಲೂ ಗುಡ್ಡ ಕುಸಿತ ಭೀತಿ
ಇನ್ನೂ ಶಿರೂರು ಗುಡ್ಡ ಕುಸಿತ ಬೆನ್ನಲ್ಲೇ ಜಿಲ್ಲೆಯ ಹಲವೆಡೆ ಗುಡ್ಡ ಕುಸಿತದ ಆತಂಕ ಹೆಚ್ಚಾಗಿದೆ. ಕುಮಟಾ ತಾಲೂಕಿನ ಗೋಕರ್ಣದ ದೇವರಬಾವಿಯಲ್ಲಿ ಗುಡ್ಡ ಕುಸಿತದ ಭೀತಿ ಇದ್ದು, ಸುಮಾರು 200 ಮೀ ವ್ಯಾಪ್ತಿಯಲ್ಲಿ ಬಿರುಕು ಬಿಟ್ಟಿದೆ. ಗುಡ್ಡ ಇಬ್ಬಾಗವಾಗಿ ಧರೆಗುರುಳುವ ಆತಂಕ ಇದೆ.ಇತ್ತ ಗುಡ್ಡದ ಕೆಳಭಾಗದಲ್ಲಿ 10ಕ್ಕೂ ಹೆಚ್ಚು ಮನೆಗಳಿವೆ. ವ್ಯಾಪಕ ಮಳೆ ಹಾಗೂ ಶಿರೂರು ಗುಡ್ಡ ಕುಸಿದ ಘಟನೆಯಿಂದ ಹೆದರಿ ನಿವಾಸಿಗಳು ಮನೆ ಖಾಲಿ ಮಾಡಿದ್ದಾರೆ. ಸುಮಾರು 50 ಅಡಿ ಅಗಲ ಹಾಗೂ 200 ಅಡಿ ಉದ್ದದಲ್ಲಿ ಬಿರುಕು ಬಿಟ್ಟಿದ್ದು, ಯಾವುದೇ ಕ್ಷಣದಲ್ಲಾದರೂ ಗುಡ್ಡ ಕುಸಿಯುವ ಭೀತಿ ಇದೆ.
ವರದಾ ನದಿ ಪಾತ್ರದಲ್ಲಿ ನೆರೆ ಪರಿಸ್ಥಿತಿ
ಘಟ್ಟದ ಮೇಲಿನ ತಾಲೂಕುಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಉತ್ತರ ಕನ್ನಡದ ಶಿರಸಿ ತಾಲೂಕಿನ ಬನವಾಸಿಯಲ್ಲಿ ವರದಾ ನದಿ ಮೈದುಂಬಿ ಹರಿಯುತ್ತಿದೆ. ವರದಾ ನದಿ ಪಾತ್ರದಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಅಡಿಕೆ, ಅನಾನಸ್, ಶುಂಠಿ ಹಾಗೂ ಭತ್ತದ ಗದ್ದೆಗಳಿಗೆ ನೀರು ನುಗ್ಗಿದೆ. ಬನವಾಸಿ ಭಾಗದ ಮೊಗವಳ್ಳಿ, ಅಜ್ಜರಣಿ ಮತ್ತು ಗುಣಿ, ಭಾಶಿ, ಯಡೂರಬೈಲ್ ಗ್ರಾಮಗಳಿಗೆ ಪ್ರವಾಹ ಭೀತಿ ಇದೆ. ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕುಗಳಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ನದಿಗಳು ತುಂಬಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶಗಳಿಗೆ ನೆರೆ ಭೀತಿ ಇದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ