Site icon Vistara News

Vijayanagara News: ಬಿತ್ತನೆ ಬೀಜ, ರಸ ಗೊಬ್ಬರ ಸಮರ್ಪಕ ಪೂರೈಕೆಗೆ ಡಿಸಿ ದಿವಾಕರ್ ಸೂಚನೆ

DC m s Diwakar instructed for adequate supply of sowing seed, fertilizers in monsoon season

ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಮುಂಗಾರು ಹಂಗಾಮಿನ ಬೆಳೆವಾರು ತಾಲೂಕುವಾರು (Vijayanagara News) ಬಿತ್ತನೆ ಪ್ರಗತಿಯು ನಿಗದಿಪಡಿಸಿದ ಗುರಿಯನುಸಾರ ಆಗಬೇಕು. ಈ ನಿಟ್ಟಿನಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ, ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿನ ಕೇಸ್ವಾನ್ ಹಾಲ್‌ನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, 2024ನೇ ಸಾಲಿನ ಮುಂಗಾರು ಹಾಗೂ ಪೂರ್ವ ಮುಂಗಾರು ಮಳೆ ಅವಧಿಯ ಪೂರ್ವ ಸಿದ್ಧತೆ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಸಮಗ್ರ ಚರ್ಚಿಸಿ, ಬಳಿಕ ಅವರು ಮಾತನಾಡಿದರು.

ಇದನ್ನೂ ಓದಿ: Rameshwaram Cafe : ಅವಧಿ ಮುಗಿದ ವಸ್ತುಗಳಲ್ಲಿ ತಿಂಡಿ ತಯಾರಿ, ರಾಮೇಶ್ವರಂ ಕೆಫೆ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ

2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಿಯಾಯಿತಿಯಲ್ಲಿ ಬಿತ್ತನೆ ಬೀಜ ಹಾಗೂ ಗೊಬ್ಬರ ದಾಸ್ತಾನು ಇರುವ ಬಗ್ಗೆ ರೈತರಿಗೆ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ, ಗ್ರಾಮ ಪಂಚಾಯಿತಿಗಳಲ್ಲಿ ಫಲಕಗಳನ್ನು ಹಾಕಲು ಕ್ರಮ ವಹಿಸಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪೂರ್ವ ಮುಂಗಾರು ಮಳೆಗಳು ಈಗಾಗಲೇ ಆರಂಭವಾಗಿವೆ. ಮೇ 1ರಿಂದ ಮೇ 22ರವರೆಗೆ ವಿವಿಧ ತಾಲೂಕುಗಳು ಸೇರಿದಂತೆ ವಿಜಯನಗರ ಜಿಲ್ಲೆಯಲ್ಲಿ ವಾಡಿಕೆ ಮಳೆ 39 ಮಿ.ಮಿ. ಇದ್ದು, ವಾಸ್ತವಿಕವಾಗಿ 75 ಮಿ.ಮಿ. ಉತ್ತಮ ಮಳೆಯಾಗಿದೆ. ಮುಂಗಾರು ಮಳೆಗಳು ಆರಂಭಗೊಂಡ ಹಿನ್ನೆಲೆಯಲ್ಲಿ ಜನ-ಜಾನುವಾರು ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ: Monsoon : ಮಳೆ ವರದಿ; ಕರ್ನಾಟಕದಲ್ಲಿ ಜೂನ್ 1ರಂದೇ ಮಾನ್ಸೂನ್ ಮಳೆ ಆರಂಭ

ಕೂಡ್ಲಿಗಿ ತಾಲೂಕಿನಲ್ಲಿ 17, ಕೊಟ್ಟೂರು ತಾಲೂಕಿನಲ್ಲಿ 7, ಹರಪನಹಳ್ಳಿ ತಾಲೂಕಿನಲ್ಲಿ 29, ಹೊಸಪೇಟೆ ತಾಲೂಕಿನಲ್ಲಿ 8, ಹಡಗಲಿ ತಾಲೂಕಿನಲ್ಲಿ 12 ಮತ್ತು ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 18 ಸೇರಿ ಒಟ್ಟು 91 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಒಟ್ಟು 196 ಹಳ್ಳಿಗಳಲ್ಲಿ ಖಾಸಗಿ ಬೋರವೆಲ್‌ಗಳ ಮೂಲಕ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿದೆ.

ಮಳೆ ಕೊರತೆ ಮುಂದುವರೆದಲ್ಲಿ ಮುಂಬರುವ ತಿಂಗಳುಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಆಗಬಹುದು ಅಂತ ಹೊಸಪೇಟೆ ತಾಲೂಕಿನಲ್ಲಿ 30, ಹಡಗಲಿಯಲ್ಲಿ 50, ಹಗರಿಬೊಮ್ಮನಹಳ್ಳಿಯಲ್ಲಿ 43, ಹರಪನಹಳ್ಳಿಯಲ್ಲಿ 128, ಕೊಟ್ಟೂರಿನಲ್ಲಿ 21 ಹಾಗೂ ಕೂಡ್ಲಿಗಿಯಲ್ಲಿ 61 ಗ್ರಾಮಗಳು ಸೇರಿದಂತೆ ಒಟ್ಟು 333 ಗ್ರಾಮಗಳಲ್ಲಿ ಮತ್ತು ಹೊಸಪೇಟೆಯ 15 ವಾರ್ಡ್‌ ಮತ್ತು ಹರಪನಹಳ್ಳಿಯ 27 ವಾರ್ಡ್‌ಗಳು ಸೇರಿ ಒಟ್ಟು 46 ವಾರ್ಡ್‌ಗಳನ್ನು ಗುರುತಿಸಲಾಗಿದೆ. ಕುಡಿಯುವ ನೀರು ಕೊರತೆ ಆಗಬಹುದಾದ ಗ್ರಾಮಗಳು ಮತ್ತು ವಾರ್ಡ್‌ಗಳಲ್ಲಿ ಒಪ್ಪಂದಕ್ಕಾಗಿ ಹೆಚ್ಚಿನ ಇಳುವರಿ ನೀಡುವ 602 ಬೋರವೆಲ್‌ಗಳನ್ನು ಈಗಾಗಲೇ ಗುರುತಿಸಿದ್ದು, ಈ ಪೈಕಿ ಈಗಾಗಲೇ 485 ಬೋರವೆಲ್‌ಗಳೊಂದಿಗೆ ಮುಂಗಡ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು ಬಿ. ಮಾತನಾಡಿ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಉತ್ತಮ ಮಳೆ ಸುರಿದಿದೆ. ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕಿನ ಗ್ರಾಮಗಳಲ್ಲಿ ಯಾವುದೇ ಕಡೆಗಳಲ್ಲಿ ನೀರು ನಿಲ್ಲದಂತೆ ತಗ್ಗು ಪ್ರದೇಶವನ್ನು ಸಮತಟ್ಟುಗೊಳಿಸಬೇಕು. ನೀರು ನಿಲ್ಲದೇ ಸರಾಗವಾಗಿ ಹರಿದುಹೋಗುವಂತೆ ಗಟಾರು ದುರಸ್ತಿಗೆ ಗಮನ ಹರಿಸಬೇಕು. ಸೊಳ್ಳೆಗಳು ಉತ್ಪತ್ತಿಯಾಗದಂತೆ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ: Waste Disposal: ಕಸ ವಿಲೇವಾರಿ ಇನ್ನು ಬಿಬಿಎಂಪಿ ಕೆಲಸ ಅಲ್ಲ! ಅದಕ್ಕಾಗಿಯೇ ಬರುತ್ತಿದೆ ಹೊಸ ಸಂಸ್ಥೆ

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version