Site icon Vistara News

Dalit youth thrashed | ಹಾಸನದಲ್ಲಿ ಕಾಫಿ ಬೀಜ ಕದ್ದ ಸಂಶಯದಲ್ಲಿ ಕಾರ್ಮಿಕನನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ

youth thrashed in hassan

#image_title

ಬೆಂಗಳೂರು: ಕಾಫಿ ಬೀಜ ಕದ್ದ ಆರೋಪದಲ್ಲಿ ದಲಿತ ಯುವಕನೊಬ್ಬನ ಮೇಲೆ ಅಮಾನವೀಯ ಹಲ್ಲೆ (Dalit youth thrashed) ಮಾಡಿರುವ ಆಘಾತಕಾರಿ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಯಾವಾಗ ನಡೆದಿದೆ ಎನ್ನುವುದು ಸ್ಪಷ್ಟವಿಲ್ಲ. ಆದರೆ, ಸೋಮವಾರ ಇದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಬೇಲೂರು ತಾಲೂಕಿನ ಅರೇಹಳ್ಳಿ ಸಮೀಪದ ಬೆಳ್ಳಾವರ ಗ್ರಾಮದಲ್ಲಿ ಘಟನೆ ನಡೆದಿದೆ.

ಯುವಕನನ್ನು ಹಗ್ಗದ ಮೂಲಕ ಮರಕ್ಕೆ ಕಟ್ಟಿ ಹಾಕಿರುವುದು, ಅವನ ಸುತ್ತ ಕೆಲವು ಮಂದಿ ನಿಂತಿರುವುದು ಮತ್ತು ಅವರೆಲ್ಲರೂ ಸೇರಿ ಮರದ ತುಂಡು ಮತ್ತು ಕಬ್ಬಿಣದ ರಾಡ್‌ನ ಮೂಲಕ ಹಲ್ಲೆ ಮಾಡಿರುವುದು ವಿಡಿಯೊದಲ್ಲಿ ಕಂಡುಬರುತ್ತಿದೆ. ಈತ ಕಾಫಿ ಬೀಜ ಕದಿಯಲು ಬಂದಾಗಲೇ ಸಿಕ್ಕಿಬಿದ್ದಿದ್ದಾನೆ ಎಂದು ಹೇಳಲಾಗಿದೆ. ಕಾದು ಕುಳಿತಿದ್ದ ಕೆಲವರು ಆತನನ್ನು ಹಿಡಿದು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ್ದಾರೆ. ಕೈ ಕಾಲು ಕಟ್ಟಿ ಹಾಕಿದ್ದಲ್ಲದೆ, ರಾತ್ರಿ ಇಡೀ ತಲೆ ಕೆಳಗಾಗಿ ಮರಕ್ಕೆ ಕಟ್ಟಿಹಾಕಿದ್ದಾರೆ ಎನ್ನಲಾಗಿದೆ. ಜತೆಗೆ ತಲೆಗೆ ಹೊಡೆದ ಹೊಡೆತಗಳಿಂದ ತಲೆಯಲ್ಲಿ ರಕ್ತ ಸುರಿಯುತ್ತಿರುವುದು ಕಂಡುಬಂದಿದೆ.

ಈ ಹಿಂದೆಯೂ ನೀನು ಕಳ್ಳತನ ಮಾಡಿದ್ದೆ ಎಂದು ಆರೋಪಿಸಿ ದೊಣ್ಣೆಯಿಂದ ಮನ ಬಂದಂತೆ ಹಲ್ಲೆ ಮಾಡಿದ್ದಾರೆ. ಇನ್ನೊಮ್ಮೆ ತಪ್ಪು ಮಾಡೊಲ್ಲ ಎಂದು ಕ್ಷಮೆ ಕೇಳಿದರೂ ಬಿಡದೆ ಹಲ್ಲೆ ಮಾಡಿದ್ದಾರೆ.

ಕಾಫಿ ಪ್ಲಾಂಟೇಶನ್‌ನಲ್ಲಿ ಕಳೆದ ಕೆಲವು ಸಮಯದಿಂದ ಕಾಫಿ ಬೀಜ ಕಳವು ನಡೆಯುತ್ತಿದೆ ಎಂದು ಹೇಳಲಾಗಿದೆ. ಪ್ಲಾಂಟೇಶನ್‌ನವರಿಗೆ ಈ ಕಾರ್ಮಿಕನ ಮೇಲೆ ಸಂಶಯವಿತ್ತು ಎನ್ನಲಾಗಿದೆ. ಇಂಥ ಸಂಶಯ ಇರುವ ಸಂದರ್ಭದಲ್ಲಿ ಪೊಲೀಸರಿಗೆ ದೂರು ನೀಡುವ ಬದಲು ತಾವೇ ಕಾನೂನನ್ನು ಕೈಗೆತ್ತಿಕೊಂಡಿದ್ದರ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಐವರು ಸೇರಿ ಯುವಕನ ಮೇಲೆ ಬೇಕಾಬಿಟ್ಟಿ ಹಲ್ಲೆ ಮಾಡಿರುವುದು ಅಮಾನವೀಯ ಎನ್ನುವ ಆಕ್ರೋಶವಿದೆ.

ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆಯೇ ಕಾರ್ಯಾಚರಣೆಗೆ ಇಳಿದ ಹಾಸನ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಐಪಿಸಿ ಕಾಯಿದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಇದನ್ನೂ ಓದಿ | ಯುವಕನ ಮೇಲೆ ಅರಶಿಣಗೆರೆ ಪೊಲೀಸರಿಂದ ಹಲ್ಲೆ, ನಿಂದನೆ; ಮರ್ಯಾದೆಗೆ ಮನನೊಂದು ವಿಷ ಸೇವನೆ, ನ್ಯಾಯಕ್ಕಾಗಿ ಕುಟುಂಬದಿಂದ ಮೊರೆ

Exit mobile version