ಚಿತ್ರದುರ್ಗ: ಮುರುಘಾ ಮಠದ ಮುರುಘಾ ಶರಣರ (Murugha Seer) ವಿರುದ್ಧ ಸುಳ್ಳು ಆರೋಪ ಮಾಡುವಂತೆ ಬಾಲಕಿಯೊಬ್ಬಳ ಮೇಲೆ ಒತ್ತಡ ಹೇರಿದ ಆರೋಪಕ್ಕೆ ಸಂಬಂಧಿಸಿ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಬಸವರಾಜೇಂದ್ರ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬಸವರಾಜೇಂದ್ರ ಮಠದಲ್ಲೇ ಶಿಕ್ಷಕನೆಂದು ಹೇಳಲಾಗುತ್ತಿದ್ದು, ಮಠದ ಹಾಸ್ಟೆಲ್‌ನಲ್ಲಿ ಅಭ್ಯಾಸ ಮಾಡುತ್ತಿದ್ದ ಬಾಲಕಿಯೊಬ್ಬಳಿಗೆ ಕರೆ ಮಾಡಿ ಶ್ರೀಗಳ ವಿರುದ್ಧ ಸುಳ್ಳು ದೂರು ನೀಡುವಂತೆ ಬಗೆ ಬಗೆಯಲ್ಲಿ ಪ್ರಚೋದನೆ ನೀಡುತ್ತಿರುವ ಆಡಿಯೊವೊಂದು ಈಗ ವೈರಲ್ ಆಗಿದೆ. ಈ ಆಡಿಯೊ ಬಹಿರಂಗವಾದ ಬಳಿಕ ಮುರುಘಾಶ್ರೀಗಳ ಮೇಲಿನ ಪ್ರಕರಣಗಳ ಸತ್ಯಾಸತ್ಯತೆಯ ಬಗ್ಗೆ ಮತ್ತೆ ಹಲವು ಪ್ರಶ್ನೆಗಳು ಕೂಡಾ ಎದ್ದಿವೆ.
ಬಾಲಕಿಯೊಬ್ಬಳನ್ನು ಆಕೆಯ ಬಡತನ, ತಾಯಿ ಅನಾರೋಗ್ಯ, ಮನೆಯ ಆರ್ಥಿಕ ಸ್ಥಿತಿಗತಿಗಳನ್ನು ಬಂಡವಾಳ ಮಾಡಿಕೊಂಡು ಸುಳ್ಳು ಹೇಳಿಕೆ ನೀಡಲು ವ್ಯಕ್ತಿಯೊಬ್ಬ ಪ್ರಚೋದನೆ ಮಾಡುತ್ತಿರುವ ಆಡಿಯೊ ಬಹಿರಂಗವಾಗಿತ್ತು. ಇದರ ಬಗ್ಗೆ ಮುರುಘಾಮಠದ ಉಸ್ತುವಾರಿಯಾಗಿರುವ ಬಸವಪ್ರಭು ಶ್ರೀಗಳು ಪೊಲೀಸರಿಗೆ ದೂರು ನೀಡಿದ್ದರು. ೧೪ ನಿಮಿಷಗಳ ಆಡಿಯೋದಲ್ಲಿ ಧ್ವನಿಯನ್ನು ಸ್ವಷ್ಟವಾಗಿ ಗುರುತಿಸಬಹುದಾಗಿದ್ದು, ಅದರ ಆಧಾರದಲ್ಲಿ ಈಗ ಬಸವರಾಜೇಂದ್ರನನ್ನು ಸೆರೆ ಹಿಡಿದು ವಿಚಾರಣೆ ನಡೆಸಲಾಗಿದೆ.
೧೪ ನಿಮಿಷದ ಆಡಿಯೊದಲ್ಲೇನಿದೆ?
ಈಗ ಮುರುಘಾ ಶರಣರ ವಿರುದ್ಧ ಸುಳ್ಳು ದೂರು ನೀಡುವಂತೆ ವ್ಯಕ್ತಿಯೊಬ್ಬರು ಕರೆ ಮಾಡಿರುವ ಆಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಸಂಭಾಷಣೆ 14 ನಿಮಿಷ 15 ಸೆಕೆಂಡ್ ಕಾಲ ಇದ್ದು, ಕರೆ ಮಾಡಿದ ವ್ಯಕ್ತಿ ಬಾಲಕಿಗೆ ಸುಳ್ಳು ದೂರು ನೀಡುವಂತೆ ಪ್ರಚೋದನೆ ಮಾಡಿದ್ದಲ್ಲದೆ, ಸಹಾಯ ಮಾಡುವುದಾಗಿ ಆಮಿಷವನ್ನೂ ಒಡ್ಡಿದ್ದಾನೆ.
ಮೊಬೈಲ್ ಮೂಲಕ ಕರೆ ಮಾಡಿದ ವ್ಯಕ್ತಿಯು ಬಾಲಕಿ ಬಳಿ ನೇರವಾಗಿ ಮುರುಘಾಶ್ರೀ ವಿಷಯವನ್ನು ಪ್ರಸ್ತಾಪಿಸಿದ್ದಾನೆ. “ನೀನೀಗ ಮುರುಘಾ ಶ್ರೀಗಳ ಮೇಲೆ ದೂರು ದಾಖಲಿಸಬೇಕು. ನಿನ್ನ ಮೇಲೆಯೂ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರು ನೀಡು” ಎಂದು ಹೇಳಿದ್ದಾನೆ. ಅದಕ್ಕೆ ಆ ಬಾಲಕಿ, “ಇಲ್ಲಾ.. ನಾನು ಹೇಗೆ ಆ ರೀತಿಯಾಗಿ ದೂರು ನೀಡಲಿ? ನನಗೆ ಆ ರೀತಿಯಾಗಿ ಶ್ರೀಗಳು ಮಾಡಿಲ್ಲ..” ಎಂದು ಹೇಳಿದ್ದಾಳೆ. ಅದಕ್ಕೆ ಆ ವ್ಯಕ್ತಿಯು, “ನೀನು ನಿನ್ನ ಮೇಲೆ ಅತ್ಯಾಚಾರ ಆಗಿದೆ ಎಂದೇನೂ ದೂರು ಕೊಡುವುದು ಬೇಡ. ಹಾಗೇ ಆಗಾಗ ಮೈಮುಟ್ಟುತ್ತಿದ್ದರು, ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದರು ಎಂದು ದೂರು ಕೊಟ್ಟರೆ ಸಾಕು.. ಅಷ್ಟು ಹೇಳಲು ನಿನಗೇನು?” ಎಂದು ಕೇಳಿದ್ದಾನೆ. ಅದಕ್ಕೆ ಆ ಬಾಲಕಿಯು ಸುಳ್ಳು ಹೇಳಲು ನಿರಾಕರಿಸಿದ್ದಾಳೆ. ಹೀಗೆ ೧೪ ನಿಮಿಷಗಳ ಕಾಲ ಆಡಿಯೊ ಸಾಗುತ್ತದೆ. ಈ ಮಧ್ಯೆ ಆ ವ್ಯಕ್ತಿಯು ಸುಳ್ಳು ದೂರು ನೀಡಿದರೆ ನಿನ್ನ ಜೀವನ ಉದ್ದಾರ ಆಗುತ್ತದೆ. ಸಹಾಯ ಮಾಡುತ್ತೇವೆ ಎಂದೂ ಹೇಳಿದ್ದಾನೆ. ಈ ಎಲ್ಲ ಸಂಗತಿಗಳುಳ್ಳ ಆಡಿಯೊ ಈಗ ವೈರಲ್ ಆಗಿದೆ.
ಮದುವೆ ಆಗ್ತೀನಿ ಎನ್ನುವ ಸರ್!
ಮುರುಘಾಶ್ರೀಗಳು ತನ್ನೊಂದಿಗೆ ತಪ್ಪಾಗಿ ನಡೆದುಕೊಂಡಿದ್ದಾರೆ ಎಂದು ಹೇಳಿಕೆ ಕೊಡಲು ಹುಡುಗಿಯನ್ನು ಸಾಕಷ್ಟು ರೀತಿಯಲ್ಲಿ ಪ್ರಚೋದಿಸುವ ಆಡಿಯೊದಲ್ಲಿರುವ ವ್ಯಕ್ತಿ ಒಂದು ಹಂತದಲ್ಲಿ ನಾನೇ ನಿನ್ನನ್ನು ಮದುವೆ ಆಗುತ್ತೇನೆ ಎನ್ನುತ್ತಾನೆ. ಆ ವ್ಯಕ್ತಿ ಯಾವ ಯಾವ ರೀತಿಯಲ್ಲೂ ಪ್ರಚೋದನೆ ಮಾಡಿದರೂ ಹುಡುಗಿ ಮಾತ್ರ ತುಂಬ ಪ್ರೌಢವಾಗಿ ವರ್ತಿಸಿದ್ದಾಳೆ. ನಾನು ಸುಳ್ಳು ಹೇಳುವುದಿಲ್ಲ, ಅದರ ಮೂಲಕ ಸಿಗುವ ಹಣವಾಗಲೀ, ಆಸ್ತಿಯಾಗಲೀ ನನಗೆ ಬೇಡ ಎನ್ನುತ್ತಾಳೆ. ತಾಯಿ ಅನಾರೋಗ್ಯ, ಬಡತನವನ್ನು ಬಣ್ಣಿಸಿ ವ್ಯಕ್ತಿ ಆಕೆಗೆ ಆಮಿಷ ಒಡ್ಡಲು ಯತ್ನಿಸಿದರೂ ಆಕೆ ಮಾತ್ರ ನಾನು ದುಡಿದು ಸಾಕ್ತೀನಿ ಎಂದು ಆತ್ಮಾಭಿಮಾನ ಮೆರೆಯುವುದು ಈ ಆಡಿಯೊದ ವಿಶೇಷ.
ಒಂದು ಹಂತದಲ್ಲಿ ನಿನ್ನನ್ನು ನಾನು ಮದುವೆಯಾಗುತ್ತೇನೆ ಎಂದೆಲ್ಲ ಆಮಿಷ ಒಡ್ಡಿದರೂ ಆಕೆ ಮಾತ್ರ, ನಿಮ್ಮ ಬಗ್ಗೆ ನನಗೆ ಅಂಥ ಭಾವನೆಗಳೇ ಇಲ್ಲ. ಏನಿದ್ದರೂ ನೀವು ನನ್ನ ಸರ್, ಗುರುಗಳು ಎನ್ನುತ್ತಾಳೆ.
ಇದನ್ನ ೂ ಓದಿ | Murugha Seer | ಪರಿಶಿಷ್ಟ ಬಾಲಕಿ ಮೇಲೆ ದೌರ್ಜನ್ಯ, ಧಾರ್ಮಿಕ ಸಂಸ್ಥೆ ದುರುಪಯೋಗ: ಮುರುಘಾ ಶರಣರ ವಿರುದ್ಧ ಟೈಟ್ ಚಾರ್ಜ್‌ಶೀಟ್