ಬೆಂಗಳೂರು: ತನ್ನ ಜನಪ್ರಿಯ ಎಲೆಕ್ಟ್ರಿಕ್ ಕಾರು ನೆಕ್ಸಾನ್ ಇವಿ (Tata Nexon EV) ದೂರ ಪ್ರಯಾಣಕ್ಕೂ ಸೂಕ್ತ ಎಂಬುದನ್ನು ಸಾಬೀತುಪಡಿಸುವ ಉದ್ದೇಶದಿಂದ ಟಾಟಾ ಮೋಟಾರ್ಸ್ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ (K2K) ಸವಾರಿಯನ್ನು ಆಯೋಜಿಸಿ ದಾಖಲೆ ಮಾಡಿದೆ. ಈ ಪ್ರಯಾಣದಲ್ಲಿ ನೆಕ್ಸಾನ್ ಇವಿ ಕಾರು ದಿನಕ್ಕೆ 1000 ಕಿ.ಮೀಯಂತೆ ನಾಲ್ಕು ದಿನದಲ್ಲಿ ಕಾಶ್ಮೀರದಿಂದ- ಕನ್ಯಾಕುಮಾರಿವರೆಗಿನ 4000 ಕಿ. ಮೀ ಪ್ರಯಾಣ ಮಾಡಿದೆ. ಇದು ಎಲೆಕ್ಟ್ರಿಕ್ ಕಾರೊಂದು ಗರಿಷ್ಠ ವೇಗದಲ್ಲಿ ತಲುಪಿದ ದಾಖಲೆ ಎನಿಸಿಕೊಳ್ಳಲಿದೆ.
ಪ್ರಯಾಣದ ನಡುವೆ ಕಾರಿನ ಚಾರ್ಜಿಂಗ್ ಪ್ರಕ್ರಿಯೆಗಾಗಿ ನಿಲ್ಲಿಸಲಾಗಿದೆ. ವೇಗದ ಚಾರ್ಜಿಂಗ್ ಸೌಲಭ್ಯವನ್ನು ಕಲ್ಪಿಸುವ ಮೂಲಕ ಗರಿಷ್ಠ ಗುರಿಯನ್ನು ಸಾಧಿಸಲಾಗಿದೆ. ಈ ಯಾನದ ಮೂಲಕ ಟಾಟಾ ಮೋಟಾರ್ಸ್ ತನ್ನ ದೇಶದ ಉದ್ದಗಲಕ್ಕೂ ಹರಡಿರುವ ಚಾರ್ಜಿಂಗ್ ಮೂಲ ಸೌಕರ್ಯವನ್ನೂ ಕಾರು ಪ್ರಿಯರಿಗೆ ಪ್ರಸ್ತುತಪಡಿಸಿತು. ಎಲ್ಲ ಕಡೆಯೂ ಜಾರ್ಜಿಂಗ್ ಸೌಲಭ್ಯ ಇರುವುದು ಹಾಗೂ ಸುಲಭವಾಗಿ ಚಾರ್ಜ್ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿತು.
ಟಾಟಾ ಮೋಟಾರ್ಸ್ನ ನೆಕ್ಸಾನ್ ಇವಿ ಕಾರಿನ ರೇಂಜ್ ಕೂಡ ಹೆಚ್ಚಿಸಲಾಗಿದೆ. ಒಂದು ಬಾರಿಯ ಪೂರ್ಣ ಚಾರ್ಜ್ಗೆ ಈಗ 453 ಕಿಲೋ ಮೀಟರ್ ಪ್ರಯಾಣ ಸಾಧ್ಯವಿದೆ. ಹೀಗಾಗಿ ನಾಲ್ಕು ದಿನದಲ್ಲಿ ನೆಕ್ಸಾನ್ ಇವಿ K2K ಪ್ರಯಾಣ ಮುಗಿಸಿತು. ನೆಕ್ಸಾನ್ ಇವಿ ಕಾರು ಗಿರಿ, ಕಂದರಗಳ ನಡುವಿನ ರಸ್ತೆಯಲ್ಲಿ ಸಾಗಿದ ಜತೆಗೆ ಅತಿವೇಗದ ಎಕ್ಸ್ಪ್ರೆಸ್ ಹೈವೆನಲ್ಲಿಯೂ ಪ್ರಯಾಣ ಮಾಡಿತು.
ಇದನ್ನೂ ಓದಿ : Tata Nexon EV | ಟಾಟಾದ ನೆಕ್ಸಾನ್ ಇವಿಯ ಆರಂಭಿಕ ಬೆಲೆ ಇನ್ನಷ್ಟು ಅಗ್ಗ; ಕಿಲೋ ಮೀಟರ್ ರೇಂಜ್ ಕೂಡ ಏರಿಕೆ
ಈ ಸಾಧನೆ ಕುರಿತು ಪ್ರತಿಕ್ರಿಯಿಸಿದ ಟಾಟಾ ಮೋಟಾರ್ಸ್ನ ಮಾರಾಟ ವಿಭಾಗದ ಮುಖ್ಯಸ್ಥರಾದ ವಿವೇಕ್ ಶ್ರೀವತ್ಸ, ಹೊಸ ತಾಂತ್ರಿಕತೆಯು ಎಷ್ಟು ಸಾಮರ್ಥ್ಯ ಹೊಂದಿದೆ ಎಂಬುದನ್ನು ಪ್ರಸ್ತುತ ಪಡಿಸುವುದು ಅನಿವಾರ್ಯ. ಈ ಪ್ರಯಾಣದ ಮೂಲಕ ಈಗಾಗಲೇ ನೆಕ್ಸಾನ್ ಇವಿ ಕಾರನ್ನು ಹೊಂದಿರುವ ಮಾಲೀಕರಿಗೆ, ಕಾರಿನ ನಿಜವಾದ ಸಾಮರ್ಥ್ಯಕ್ಕೆ ಸಾಕ್ಷಿ ಒದಗಿಸಿದಂತಾಗುತ್ತದೆ. ಅದೇ ರೀತಿ ಟಾಟಾ ಮೋಟಾರ್ಸ್ನ ಚಾರ್ಜಿಂಗ್ ವ್ಯವಸ್ಥೆಯ ಬಗ್ಗೆ ತಿಳಿಸಿದಂತಾಗುತ್ತದೆ ಎಂದು ಹೇಳಿದರು.