ಜಾರ್ಖಂಡ್ನ ಡುಮ್ಕಾದಲ್ಲಿ 12ನೇ ತರಗತಿ ವಿದ್ಯಾರ್ಥಿನಿ ಅಂಕಿತಾ ಸಿಂಗ್ (Ankita Singh)ಗೆ ಶಾರುಖ್ ಎಂಬಾತ ಬೆಂಕಿ ಹಚ್ಚಿ ಕೊಂದಿದ್ದಾನೆ. ಬಹುದಿನಗಳಿಂದಲೂ ಅಂಕಿತಾಳನ್ನೇ ಹಿಂಬಾಲಿಸುತ್ತಿದ್ದ ಅವನು, ಪ್ರೇಮ ನಿವೇದನೆ ಮಾಡಿದ್ದ. ಆದರೆ ಅಂಕಿತಾ ಒಪ್ಪಿರಲಿಲ್ಲ. ಇದೇ ಸಿಟ್ಟಿಗೆ ಆಕೆಗೆ ಆಗಸ್ಟ್ 23ರಂದು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಅಂಕಿತಾಳನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದ್ದರೂ ಪ್ರಯೋಜನವಾಗಲಿಲ್ಲ. ಆಗಸ್ಟ್ 28ರಂದು ಅವಳು ಮೃತಪಟ್ಟಿದ್ದಾಳೆ.
ಯಾರಿವಳು ಅಂಕಿತಾ ಸಿಂಗ್
ಜಾರ್ಖಂಡ್ನ ಡುಮ್ಕಾದವರಾದ ಅಂಕಿತಾ ಸಿಂಗ್ ಚಿಕ್ಕ ವಯಸ್ಸಿನಲ್ಲಿಯೇ ಅಮ್ಮನನ್ನು ಕಳೆದುಕೊಂಡಿದ್ದಳು. ಕ್ಯಾನ್ಸರ್ ರೋಗ ಆಕೆಯ ತಾಯಿಯನ್ನು ಬಲಿಪಡೆದಿತ್ತು. ತನ್ನ ಪತ್ನಿಯನ್ನು ಹೇಗಾದರೂ ಉಳಿಸಿಕೊಳ್ಳಬೇಕು ಎಂದು ಛಲತೊಟ್ಟಿದ್ದ ಅಂಕಿತಾ ತಂದೆ, ಜಮೀನು, ಆಸ್ತಿಯನ್ನೆಲ್ಲ ಮಾರಿದ್ದರು. ಅದರ ಪರಿಣಾಮ ಈಗಲೂ ಕೂಡ ಅಂಕಿತಾ ಕುಟುಂಬ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಅಂಕಿತಾಗೆ ಈಗಿನ್ನೂ ಅವಳಿಗೆ 19ವರ್ಷ. ಆಸೆಗಣ್ಣಿನ ಹುಡುಗಿ. ಅದಕ್ಕೂ ಮುಖ್ಯವಾಗಿ ತಾನೊಬ್ಬ ಪೊಲೀಸ್ ಅಧಿಕಾರಿಯಾಗಬೇಕು ಎಂದು ಹೆಬ್ಬಯಕೆ ಇಟ್ಟುಕೊಂಡಿದ್ದಳು. ಅಪ್ಪನ ದಿನಗೂಲಿ 200 ರೂಪಾಯಿ. ಇದು ಅಂಕಿತಾ ಓದು, ಮನೆ ಖರ್ಚಿಗೆ ಸಾಕಾಗುತ್ತಿರಲಿಲ್ಲ. ಹೀಗಾಗಿ ಅವಳು ಮಕ್ಕಳಿಗೆ ಟ್ಯೂಷನ್ ಕೊಟ್ಟು ಪ್ರತಿ ತಿಂಗಳೂ 1 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದಳು. ಈಕೆಗೊಂದು ತಂಗಿಯಿದ್ದಾಳೆ. ಅವಳು ಆರನೇ ತರಗತಿ. ಅಂಕಿತಾ-ಆಕೆಯ ತಂಗಿ ಮತ್ತು ತಂದೆ ಮೂವರೂ ಡುಮ್ಕಾದಲ್ಲಿರುವ ಡಬಲ್ ಬೆಡ್ರೂಮಿನ ಮನೆಯೊಂದರಲ್ಲಿ ವಾಸವಾಗಿದ್ದರು.
ಸಾವಿನ ಅಂಚಿನಲ್ಲಿದ್ದ ಕೊನೇ ಹೇಳಿಕೆ
ಆಗಸ್ಟ್ 23ರಂದು ಅಂಕಿತಾ ತನ್ನ ಮನೆಯ ಬೆಡ್ ರೂಮಿನಲ್ಲಿ ಮಲಗಿದ್ದಾಗಳೇ ಶಾರುಖ್ ಬಂದು ಪೆಟ್ರೋಲ್ ಸುರಿದಿದ್ದ. ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಆಕೆ ಬೆಂಕಿಯ ತೀವ್ರತೆಗೆ ಮುಕ್ಕಾಲು ಭಾಗ ಬೆಂದು ಹೋಗಿದ್ದಳು. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಹುಡುಗಿ ಸಾವಿನ ಸ್ಥಿತಿಯಲ್ಲಿ ಇದ್ದವಳು ಕೊನೇದಾಗಿ ಹೇಳಿಕೆ ನೀಡಿದ್ದಳು. ಶಾರುಖ್ ಕಥೆಯನ್ನು ಬಿಚ್ಚಿಟ್ಟಿದ್ದಳು.
‘ಈಗೊಂದು 10 ದಿನಗಳ ಹಿಂದೆ ಶಾರುಖ್ ನನಗೆ ಕಾಲ್ ಮಾಡಿದ್ದ. ನೀನು ನನಗೆ ಸ್ನೇಹಿತೆಯಾಗು, ನನ್ನೊಂದಿಗೆ ಚೆನ್ನಾಗಿ, ಕ್ಲೋಸ್ ಆಗಿರು ಎಂದು ಪೀಡಿಸಿದ್ದ. ಹೀಗೆ ನನಗೆ ಒತ್ತಾಯಿಸುತ್ತಲೇ ಇದ್ದ. ಬಳಿಕ ಆಗಸ್ಟ್ 22ರ ರಾತ್ರಿ 8ಗಂಟೆ ಹೊತ್ತಿಗೆ ಮತ್ತೆ ಕರೆ ಮಾಡಿ, “ನೀನು ನನ್ನೊಂದಿಗೆ ಮಾತನಾಡಿಲ್ಲ ಎಂದರೆ, ನಿನ್ನನ್ನು ಕೊಲ್ಲುತ್ತೇನೆ” ಎಂದು ಬೆದರಿಕೆಯೊಡ್ಡಿದ. ಆಗ ಈ ಬಗ್ಗೆ ನನ್ನ ತಂದೆಗೆ ತಿಳಿಸಿದೆ. ಅಪ್ಪ ನನ್ನನ್ನು ಸಮಾಧಾನ ಪಡಿಸಿದರು. “ಮಂಗಳವಾರ (ಆಗಸ್ಟ್ 23) ನಾನು ಶಾರುಖ್ ಕುಟುಂಬದವರೊಂದಿಗೆ ಮಾತನಾಡುತ್ತೇನೆ. ನಿನಗೇನೂ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ” ಎಂದು ಧೈರ್ಯ ತುಂಬಿದರು. ಸೋಮವಾರ ರಾತ್ರಿ ಊಟ ಮಾಡಿ, ನಾವೆಲ್ಲ ನಮ್ಮ ನಮ್ಮ ರೂಮಿಗೆ ಹೋಗಿ ಮಲಗಿದೆವು. ಆದರೆ ಮಂಗಳವಾರ ಮುಂಜಾನೆ ಹೊತ್ತಿಗೆ ನನಗೆ ಎಚ್ಚರವಾಯಿತು. ಆಗ ನನ್ನ ಬೆನ್ನು ವಿಪರೀತ ಉರಿ-ನೋವಿನಿಂದ ಕೂಡಿತ್ತು. ಸುಟ್ಟ ವಾಸನೆ ಬರುತ್ತಿತ್ತು. ನನ್ನ ಮೈಯಿಗೆ ಬೆಂಕಿ ಹೊತ್ತಿಕೊಂಡಿತ್ತು. ಶಾರುಖ್ ಬೆಡ್ ರೂಮಿನಿಂದ ಓಡಿ ಹೋಗಿದ್ದನ್ನು ನಾನು ನೋಡಿದೆ. ಅಗ್ನಿಯಲ್ಲಿ ಉರಿಯುತ್ತಿದ್ದ ನಾನು ಹಾಗೇ ಓಡಿ, ಅಪ್ಪನಿದ್ದಲ್ಲಿಗೆ ಹೋದೆ. ಅವರು ಬೆಂಕಿಯನ್ನು ನಂದಿಸಿ, ಆಸ್ಪತ್ರೆಗೆ ಸೇರಿಸಿದರು’ ಎಂದು ತನ್ನ ಕೊನೇ ಕ್ಷಣಗಳ ಭಯಾನಕ ಸನ್ನಿವೇಶವನ್ನು ಅಂಕಿತಾ ಬಿಚ್ಚಿಟ್ಟಿದ್ದಾಳೆ.
ಕ್ಷಮೆ ಕೋರಿದ ಸಲ್ಮಾನ್
ಶಾರುಖ್ ಹೀನ ಕೃತ್ಯಕ್ಕೆ ಆತನ ಸಹೋದರ ಸಲ್ಮಾನ್ ಮರುಗಿದ್ದಾನೆ. ಅಂಕಿತಾ ಮನೆಯ ಕಿಟಕಿ ಒಡೆದು, ಆಕೆಯ ಬೆಡ್ ರೂಮಿಗೆ ಹೋಗಿ ಬೆಂಕಿ ಹಚ್ಚಿದ್ದನ್ನು ನನಗೆ ಕಲ್ಪಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ದಯವಿಟ್ಟು ಕ್ಷಮಿಸಿ ಬಿಡಿ ಎಂದು ಕೇಳಿಕೊಂಡಿದ್ದಾನೆ. ಅಂಕಿತಾ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡುವುದಕ್ಕೂ ಮೊದಲೇ ಸಲ್ಮಾನ್ ತನ್ನ ಚಿಕ್ಕಪ್ಪನೊಂದಿಗೆ ಅಂಕಿತಾಳ ಮನೆಗೆ ಹೋಗಿ ಕ್ಷಮೆ ಯಾಚಿಸಿದ್ದ. ದಯವಿಟ್ಟು ಪೊಲೀಸರಿಗೆ ತಿಳಿಸಬೇಡಿ. ಶಾರುಖ್ನನ್ನು ಕೂಡಲೇ ಊರುಬಿಟ್ಟು ಕಳಿಸುತ್ತೇವೆ ಎಂದೂ ಕೇಳಿಕೊಂಡಿದ್ದರು. ಆದರೆ ಅದಕ್ಕೆ ಅಂಕಿತಾ ತಂದೆ ಅದಕ್ಕೆ ಸೊಪ್ಪು ಹಾಕಲಿಲ್ಲ. ಸದ್ಯ ಶಾರುಖ್ ಬಂಧಿತನಾಗಿದ್ದಾನೆ.
ಇದನ್ನೂ ಓದಿ: Shameless Smile | ಯುವತಿಗೆ ಬೆಂಕಿ ಹಚ್ಚಿ ಕೊಂದ ಆರೋಪಿ, ಪೊಲೀಸರು ಬಂಧಿಸಿದಾಗ ನಾಚಿಕೆಯಿಲ್ಲದೆ ನಕ್ಕ ವಿಡಿಯೊ ನೋಡಿ