Site icon Vistara News

ಲಕ್ಷ್ಮಣ ಸವದಿಗೆ ಮತ್ತೆ ಅದೃಷ್ಟ: ವಿಧಾನ ಪರಿಷತ್‌ ಬಿಜೆಪಿ ಪಟ್ಟಿ ಘೋಷಣೆ

BJP MLC Ticket karnataka

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಮಾಜಿ ಸಚಿವ ಲಕ್ಷ್ಮಣ ಸವದಿ ಸೇರಿ ಮೂವರನ್ನು ಆಯ್ಕೆ ಮಾಡಲಾಗಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಮಂಗಳವಾರ ಬಿಜೆಪಿ ಟಿಕೆಟ್‌ ಘೋಷಣೆ ಮಾಡಲಾಗಿದ್ದು, ಛಲವಾದಿ ನಾರಾಯಣಸ್ವಾಮಿ, ಎಸ್‌. ಕೇಶವಪ್ರಸಾದ್‌ ಹಾಗೂ ಹೇಮಲತಾ ನಾಯಕ್‌ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ.

ಕಾಂಗ್ರೆಸ್‌ನಿಂದ ನಾಗರಾಜು ಯಾದವ್‌ ಹಾಗೂ ಅಬ್ದುಲ್‌ ಜಬ್ಬಾರ್‌ ಅವರ ಹೆಸರನ್ನು ಸೋಮವಾರವೇ ಘೋಷಣೆ ಮಾಡಲಾಗಿತ್ತು. ಬಿಜೆಪಿಯಲ್ಲಿ ಕೊನೆ ಕ್ಷಣದ ಅಚ್ಚರಿಯೆಂಬಂತೆ ಟಿಕೆಟ್‌ ಘೋಷಣೆ ಮಾಡಲಾಗಿದೆ. ರಾಜ್ಯ ಕೋರ್‌ ಕಮಿಟಿಯಿಂದ ಹೆಸರು ಶಿಫಾರಸಾಗಿದ್ದ ಬಿ.ವೈ. ವಿಜಯೇಂದ್ರ ಹೆಸರನ್ನು ವರಿಷ್ಠರು ತಿರಸ್ಕರಿಸಿದ್ದಾರೆ.

ಇದನ್ನೂ ಓದಿ | ಜಾತಿ ಗಣತಿ: ಜೈ ಎಂದ ನಿತೀಶ್‌, ತೇಜಸ್ವಿ ಬೇಡಿಕೆಗೆ ಅಸ್ತು, ಮಿತ್ರಪಕ್ಷ ಬಿಜೆಪಿಗೆ ಮುಜುಗರ

ಕೇಶವ ಪ್ರಸಾದ್‌ ಈ ಹಿಂದಿನಿಂದಲೂ ಬಿಜೆಪಿ ಕಾರ್ಯಕರ್ತರಾಗಿದ್ದು, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರ ಜತೆಗೆ ಗುರುತಿಸಿಕೊಂಡವರು. ಈ ಹಿಂದೆ ರಾಜ್ಯ ಬಿಜೆಪಿ ಕಾರ್ಯಾಲಯ ಕಾರ್ಯದರ್ಶಿಯಾಗಿದ್ದ ಕೇಶವ ಪ್ರಸಾದ್‌ ಅವರನ್ನು, ಬಿ.ಎಸ್‌. ಯಡಿಯೂರಪ್ಪ ರಾಜ್ಯ ಅಧ್ಯಕ್ಷರಾದ ನಂತರ ವಜಾ ಮಾಡಿದ್ದರು. ಲಕ್ಷ್ಮಣ ಸವದಿ ಸಹ ಬಿ.ಎಲ್‌. ಸಂತೋಷ್‌ ಅವರ ಜತೆಗೆ ಹೆಚ್ಚು ಗುರುತಿಸಿಕೊಂಡವರು. ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಸೋತ ಅವರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದೆ.

ಛಲವಾದಿ ನಾರಾಯಣಸ್ವಾಮಿ ಅವರು ಈ ಹಿಂದೆ ಹೆಚ್ಚು ಯಡಿಯೂರಪ್ಪ ಅವರ ಜತೆಗೆ ಗುರುತಿಸಿಕೊಂಡವರು. ಪರಶಿಷ್ಟ ಜಾತಿಗೆ ಸೇರಿದ ನಾರಾಯಣಸ್ವಾಮಿ ಸಂಗಟನೆಯಲ್ಲೂ ಸಕ್ರಿಯರಾಗಿದ್ದವರು, ಎಸ್‌.ಸಿ. ಮೋರ್ಚಾ ಅಧ್ಯಕ್ಷರಾಗಿದ್ದರು. ಹೇಮಲತಾ ನಾಯಕ್‌ ಕೊಪ್ಪಳದವರಾಗಿದ್ದು, ರಾಜ್ಯ ಕಾರ್ಯದರ್ಶಿ ಹೊಣೆ ನಿಭಾಯಿಸುತ್ತಿದ್ದಾರೆ. ಸಂಸದ ಕರಡಿ ಸಂಗಣ್ಣ ಅವರೊಂದಿಗೆ ಗುರುತಿಸಿಕೊಂಡವರು, ಜೆಡಿಎಸ್‌ನಿಂದ ಕರಡಿ ಸಂಗಣ್ಣ ಅವರೊಂದಿಗೇ ಬಿಜೆಪಿಗೆ ಆಗಮಿಸಿದವರು.

Exit mobile version