ಬೆಂಗಳೂರು: ಎಲ್ಲ ಹಂತದ ಅಧಿಕಾರಿಗಳು ಕಚೇರಿಗಳನ್ನು ಬಿಟ್ಟು ತಿಂಗಳಿಗೆ 15 ದಿನ ಅರಣ್ಯದಲ್ಲಿರಬೇಕು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಸೂಚಿಸಿದರು.
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಆಯೋಜಿಸಿದ್ದ ನಿಗಮದ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಹಿರಿಯ ಅಧಿಕಾರಿಗಳು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದೀರಿ. ಕಚೇರಿ ಬಿಟ್ಟು ಹೊರಗೇ ಬರುತ್ತಿಲ್ಲ. ಅರಣ್ಯಕ್ಕೆ ಹೋಗಿ. ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಂದ ಹಿಡಿದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳವರೆಗಿನ ಎಲ್ಲರಿಗೂ ಇದು ಅನ್ವಯವಾಗುತ್ತದೆ. ತಿಂಗಳಲ್ಲಿ ೧೫ ದಿನ ಅರಣ್ಯದಲ್ಲಿ ಇದ್ದರೆ ಉಳಿದ ಸಿಬ್ಬಂದಿಗೆ ಆತ್ಮಸ್ಥೈರ್ಯ ಬರುತ್ತದೆ. ಅವರಿಗೆ ಮಾರ್ಗದರ್ಶನ ಸಿಗುತ್ತದೆ. ಹಿರಿಯ ಅಧಿಕಾರಿಗಳು ಅರಣ್ಯ ಕಾಪಾಡುವ ಕೆಲಸದಲ್ಲಿ ಇದ್ದಾರೆ ಎಂಬ ಭಾವನೆ ಬರುತ್ತದೆ. ಹೀಗಾಗಿ ೧೫ ದಿನ ಅರಣ್ಯದಲ್ಲಿ ಇರಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.
ಐದು ವರ್ಷಗಳಲ್ಲಿ ಅರಣ್ಯ ಪ್ರದೇಶವನ್ನು ಕನಿಷ್ಠ ಶೇ. 30ಕ್ಕೆ ಹೆಚ್ವಿಸಲು ಪ್ರಯತ್ನಿಸಿ ಎಂದ ಸಿಎಂ ಬಸವರಾಜ ಬೊಮ್ಮಾಯಿ, ಪ್ರಸ್ತುತ ಶೇ.23ರಷ್ಟಿರುವ ಅರಣ್ಯ ಪ್ರದೇಶವನ್ನು ಐದು ವರ್ಷಗಳಲ್ಲಿ ಕನಿಷ್ಠ ಶೇ.30ಕ್ಕೆ ಹೆಚ್ವಿಸಲು ಪ್ರಯತ್ನಿಸಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಪರಿಸರ ಆಯವ್ಯಯ
ಈ ಬಾರಿಯ ಬಜೆಟ್ ನಲ್ಲಿ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಪರಿಸರ ಆಯವ್ಯಯವನ್ನು ರೂಪಿಸಲಾಗಿದೆ. ಪ್ರತಿ ವರ್ಷ ಪರಿಸರ ಹಾನಿಯಾಗುತ್ತದೆ. ಅರಣ್ಯ, ಗಾಳಿ, ಭೂಮಿ, ನೀರು, ಮಣ್ಣು, ಹಾನಿಯಾದಾಗ ಮಾನವನ ಜೀವನ ಸಂಕಷ್ಟಕ್ಕೆ ಈಡಾಗುತ್ತದೆ. ಪ್ರತಿ ವರ್ಷ ಉಂಟಾಗುವ ಹಾನಿಯನ್ನು ಅದೇ ವರ್ಷದಲ್ಲಿ ಸರಿದೂಗಿಸುವ ಕೆಲಸವನ್ನು ಮಾಡಲಾಗುತ್ತದೆ. ಇದನ್ನು ನಿರಂತರವಾಗಿ ಮಾಡಿದಾಗ ಮಾತ್ರ ನಮ್ಮ ಪರಿಸರ ಸಮತೋಲನ ಕಾಯ್ದುಕೊಳ್ಳಬಹುದು.
ಈ ಮೂಲಕ ಉತ್ತಮ ಪರಿಸರ ನಿರ್ಮಾಣ ಸಾಧ್ಯವಿದೆ. ಈ ದೂರದೃಷ್ಟಿ ಇಟ್ಟುಕೊಂಡು ಸುಮಾರು 100 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಅರಣ್ಯಗಳ ಸರ್ವೆ ಕೈಗೊಂಡು ನಿರ್ದಿಷ್ಟ ಕಾರ್ಯಕ್ರಮವನ್ನು ಅನುಷ್ಠಾನ ಮಾಡಬೇಕು. ಅನುದಾನವಿರುವ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವುದು ಮಾತ್ರವಲ್ಲ, ಪರಿಸರ ಉಳಿಸುವ, ಅಗತ್ಯವಿರುವ ಕಾರ್ಯಕ್ರಮಗಳನ್ನು ರೂಪಿಸಬೇಕು. ಭೂಮಿಗೆ ಒಳಿತಾಗುವ ಕಾರ್ಯಕ್ರಮಗಳನ್ನು ರೂಪಿಸಿದರೆ ಅಗತ್ಯ ನೆರವನ್ನು ಸರ್ಕಾರ ನೀಡುತ್ತದೆ. ಈ ವರ್ಷ ಒದಗಿಸಿರುವ 100 ಕೋಟಿ ರೂ. ಗಳನ್ನು ಸಮರ್ಪಕವಾಗಿ ಬಳಸಿದರೆ ಇನ್ನು 100 ಕೋಟಿಗಳನ್ನು ಒದಗಿಸಲು ಸರ್ಕಾರ ಸಿದ್ಧವಿದೆ ಎಂದರು.
ಗಂಧದ ಕುರಿತು ಕಾನೂನು ಸಡಿಲ
ಗಂಧದ ಮರ ಬೆಳೆಸಲು ರೈತರನ್ನು ಉತ್ತೇಜಿಸಲು ಕಟ್ಟುಪಾಡುಗಳನ್ನು ಸಡಿಲಗೊಳಿಸಬೇಕು. ಗಂಧದ ಮರಗಳನ್ನು ಬೆಳೆಸಲು ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ. ರೈತರು ಬೆಳೆದು ಅದರಿಂದ ಆದಾಯ ಪಡೆದುಕೊಳ್ಳಯುವಂತಾಗಬೇಕು. ಗಂಧದ ಮರದ ಕಳ್ಳತನ ನಿಲ್ಲಿಸಲು, ಅದನ್ನು ಹೆಚ್ಚಾಗಿ ಬೆಳೆಯಬೇಕು ಹಾಗೂ ಹಲವಾರು ವರ್ಷಗಳಿಂದ ಇರುವ ಕಟ್ಟುಪಾಡುಗಳನ್ನು ಸಡಿಲಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಆಗ್ರೋ ಫಾರೆಸ್ಟರಿಗೆ ಅತಿ ಹೆಚ್ಚಿನ ಆದ್ಯತೆ ನೀಡಿ
ಆಗ್ರೋ ಫಾರೆಸ್ಟರಿ ಅರಣ್ಯ ಇಲಾಖೆಯ ಕಾರ್ಯಕ್ರಮಗಳಲ್ಲಿ ತಳಮಟ್ಟದಲ್ಲಿದೆ. ಅದಕ್ಕೆ ಆದ್ಯತೆ ನೀಡಬೇಕು. ರೈತ ಮಾತ್ರ ಪರಿಸರವನ್ನು ಉಳಿಸಲು ಸಾಧ್ಯ. ಭೂಮಿಯ ಜೊತೆಗೆ ನಿರಂತರವಾಗಿ ಸಂಪರ್ಕವಿರುವವನು ರೈತ. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಗ್ರೋ ಫಾರೆಸ್ಟರಿಯತ್ತ ಗಮನ ಹರಿಸಬೇಕು. ಮಣ್ಣಿನ ಸಂರಕ್ಷಣೆ ಆಗ್ರೋ ಫಾರೆಸ್ಟರಿಯಿಂದ ಸಾಧ್ಯ. ವನಮಹೋತ್ಸವಕ್ಕೆ 13 ಲಕ್ಷ ಸಸಿಗಳನ್ನು ನೆಡಲಾಗುತ್ತಿರುವುದು ಸ್ವಾಗತಾರ್ಹ. ಇದನ್ನು ಇನ್ನಷ್ಟು ಹೆಚ್ಚಿಸಬೇಕು. ಸಸಿಗಳ ಉತ್ಪಾದನೆಯೂ ರಾಜ್ಯದಲ್ಲಿ ಹೆಚ್ಚಾಗಬೇಕು. ಆಗ ಮಾತ್ರ ಅರಣ್ಯ ಪ್ರದೇಶವನ್ನು ಹೆಚ್ಚಿಸಬಹುದು. ಸಸಿಗಳ ಸಂಖ್ಯೆ ಹೆಚ್ಚಾದಾಗ ಅವುಗಳನ್ನು ನೆಟ್ಟು ಉಳಿಸಲು ಅಗತ್ಯವಿರುವ ಯೋಜನೆಯನ್ನು ರೂಪಿಸೋಣ ಎಂದು ಹೇಳಿದರು.