Site icon Vistara News

Hemant Soren | ವಿಶ್ವಾಸಮತ ಗೆದ್ದ ಜಾರ್ಖಂಡ್ ಸಿಎಂ, ಬಿಜೆಪಿ ವಿರುದ್ಧ ಫುಲ್ ಗರಂ

Hemant Soren

ರಾಂಚಿ: ಬಿಜೆಪಿ ವಾಕೌಟ್ ಮಧ್ಯೆಯೇ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ (Hemant Soren) ಅವರು ವಿಧಾನಸಭೆಯಲ್ಲಿ ವಿಶ್ವಾಸಮತವನ್ನು ಗೆದ್ದಿದ್ದಾರೆ. ಗಣಿ ಗುತ್ತಿಗೆಯನ್ನು ನಿಯಮಬಾಹಿರವಾಗಿ ವಿಸ್ತರಿಸಿಕೊಂಡ ಆರೋಪದಲ್ಲಿ ಶಾಸಕ ಸ್ಥಾನವನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಹೇಮಂತ್ ಸೊರೆನ್ ಅವರು, ಬಿಜೆಪಿಯು ತಮ್ಮ ಶಾಸಕರನ್ನು ಸೆಳೆಯುವ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸುತ್ತಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲೇ ವಿಶೇಷ ಅಧಿವೇಶನ ಕರೆದು, ವಿಶ್ವಾಸಮತ ಸಾಬೀತುಪಡಿಸಿದ್ದಾರೆ.

ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಯುಪಿಎ ಕೂಟದ 30 ಶಾಸಕರು ಐದು ದಿನಗಳಿಂದ ನೆರೆಯ ಛತ್ತೀಸ್‌ಗಢದಲ್ಲಿ ಬೀಡು ಬಿಟ್ಟಿದ್ದರು. ಆ ಶಾಸಕರೆಲ್ಲರೂ ಭಾನುವಾರ ಸಂಜೆ ರಾಂಚಿಗೆ ಆಗಮಿಸಿದ್ದರು. ಅವರೆಲ್ಲರೂ ಸೋಮವಾರ ವಿಶ್ವಾಸಮತಯಾಚನೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಬಿಜೆಪಿ ಶಾಸಕರನ್ನು ಖರೀದಿಸುತ್ತಿದೆ ಎಂದು ಆರೋಪಿಸಿ, ಜೆಎಂಎಂ ಶಾಸಕರನ್ನೆಲ್ಲ ಛತ್ತೀಸ್‌ಗಢಕ್ಕೆ ಕಳುಹಿಸಲಾಗಿತ್ತು.

ಜನ ತರಕಾರಿ ಖರೀದಿಸಿದ್ರೆ, ಬಿಜೆಪಿ ಶಾಸಕರನ್ನು ಖರೀದಿಸುತ್ತದೆ!
ವಿಶ್ವಾಸಮತ ಯಾಚನೆ ವೇಳೆ ಮಾತನಾಡಿದ ಹೇಮಂತ್ ಸೊರೆನ್ ಅವರು, ”ಬಿಜೆಪಿಯು ದೇಶದಲ್ಲಿ ನಾಗರಿಕ ಯುದ್ಧದ ರೀತಿಯ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಚುನಾವಣೆಗಳನ್ನು ಗೆಲ್ಲುವುದಕ್ಕಾಗಿ ದಂಗೆಗಳಿಗೆ ಪ್ರೋತ್ಸಾಹಿಸುತ್ತಿದೆ. ನಮ್ಮ ಸರ್ಕಾರವನ್ನು ಬೀಳಿಸಲು ಅಸ್ಸಾಮ್ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ಅವರು ಜೆಎಂಎಂ ಶಾಸಕರ ಖರೀದಿಗೆ ಮುಂದಾಗಿದ್ದರು” ಎಂದು ಆರೋಪಿಸಿದ್ದರು.

”ಬಿಜೆಪಿಯು ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದೆ. ಶಾಸಕರ ಕುದುರೆ ವ್ಯಾಪಾರದಲ್ಲಿ ತೊಡಗಿದೆ. ನಾವು ವಿಧಾನಸಭೆಯಲ್ಲಿ ನಮ್ಮ ಶಕ್ತಿಯನ್ನು ಪ್ರದರ್ಶಿಸುತ್ತೇವೆ. ಜನರು ಬಟ್ಟೆ, ರೇಷನ್, ತರಕಾರಿ ಖರೀದಿಸುವುದನ್ನು ನಾವು ಕೇಳಿದ್ದೇವೆ. ಆದರೆ, ಬಿಜೆಪಿಯವರು ಶಾಸಕರನ್ನು ಖರೀದಿಸುವಲ್ಲಿ ಯಾವಾಗಲೂ ನಿರತರಾಗಿರುತ್ತಾರೆ. ದೇಶದಲ್ಲಿ ಮೊದಲ ಬಾರಿಗೆ ಬುಡಕಟ್ಟು ಮಹಿಳೆಯೊಬ್ಬರನ್ನು ರಾಷ್ಟ್ರಪತಿ ಮಾಡಿದ ಬೆನ್ನಲ್ಲೇ, ಬಿಜೆಪಿಯು ಬುಡಕಟ್ಟು ಸಮುದಾಯಕ್ಕೆ ಸೇರಿದ ಮುಖ್ಯಮಂತ್ರಿ(ಹೇಮಂತ್ ಸೊರೆನ್)ಯನ್ನು ಪದಚ್ಯುತಗೊಳಿಸುವ ಯತ್ನ ಮಾಡುತ್ತಿದೆ,” ಎಂದು ಜಾರ್ಖಂಡ್ ಸಿಎಂ ಆರೋಪಿಸಿದರು.

ಬಿಜೆಪಿ ಸಭಾತ್ಯಾಗ
ಒಂದು ದಿನದ ವಿಶೇಷ ಅಧಿವೇಶನದ ವೇಳೆ, ಪ್ರತಿಪಕ್ಷ ಬಿಜೆಪಿ ಪೂರ್ತಿಯಾಗಿ ಪ್ರತಿಭಟನೆಯಲ್ಲಿ ನಿರತವಾಗಿತ್ತು. ಕಲಾಪ ಪೂರ್ತಿ ಗದ್ದಲ ಕೇಳಿ ಬಂತು. ಇನ್ನೇನು ವಿಶ್ವಾಸಮತ ಯಾಚನೆ ಪ್ರಕ್ರಿಯೆ ಆರಂಭವಾಗಬೇಕು ಎನ್ನುವಷ್ಟರಲ್ಲಿ ಸಭಾ ತ್ಯಾಗ ಮಾಡಿತು.

ಏನಿದು ಗಣಿ ಗುತ್ತಿಗೆ ಪ್ರಕರಣ?
ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ ಅವರು ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಸೊರೆನ್‌ ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸಬೇಕು ಎಂದು ಚುನಾವಣೆ ಆಯೋಗವು ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ ಅವರು ತಮ್ಮ ಗಣಿಯ ಗುತ್ತಿಗೆ ಅವಧಿಯನ್ನು ತಾವೇ ವಿಸ್ತರಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ನೀಡಿದ ದೂರಿನ ಅನ್ವಯ ಚುನಾವಣೆ ಆಯೋಗವು ತನಿಖೆ ನಡೆಸಿದೆ. ತನಿಖೆ ಬಳಿಕ ಸೊರೆನ್‌ ಅವರು ನಿಯಮ ಉಲ್ಲಂಘಿಸಿರುವುದು ಕಂಡುಬಂದ ಕಾರಣ ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸಬೇಕು ಎಂದು ಮುಚ್ಚಿದ ಲಕೋಟೆಯಲ್ಲಿ ಆಯೋಗವು ರಾಜಭವನಕ್ಕೆ ಶಿಫಾರಸು ಕಳುಹಿಸಿತ್ತು. ಈ ಹಿನ್ನೆಲೆಯಲ್ಲಿ ಜಾರ್ಖಂಡದಲ್ಲಿ ರಾಜಕೀಯ ಮೇಲಾಟ ಶುರುವಾಗಿದೆ.

ಇದನ್ನೂ ಓದಿ | Hemant Soren | ಜಾರ್ಖಂಡ್‌ ಸಿಎಂ ತಲೆದಂಡ, ಹೇಮಂತ್‌ ಸೊರೆನ್‌ ಪತ್ನಿಯೇ ಮುಂದಿನ ಮುಖ್ಯಮಂತ್ರಿ?

Exit mobile version