ಮಂಗಳೂರು: ಕಾಂತಾರ ಸಿನಿಮಾದ ಕೊನೆಯಲ್ಲಿ ಬರುವ ವರಾಹ ರೂಪಂ ಹಾಡಿನ ದೃಶ್ಯವನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹಂಚಿದ ಯುವತಿಯೊಬ್ಬರ ವಿರುದ್ಧ ಆಕ್ರೋಶ ಸ್ಫೋಟಗೊಂಡಿದೆ. ಯುವತಿ ಪಂಜುರ್ಲಿ ದೈವದಂತೆ ವೇಷ ಹಾಕಿಕೊಂಡು ನೃತ್ಯ ಮಾಡಿದ್ದಾರೆ. ಸಿನಿಮಾದಲ್ಲಿರುವ ದೃಶ್ಯಗಳನ್ನೇ ಮರು ಸೃಷ್ಟಿಗೆ ಪ್ರಯತ್ನಿಸಿದ್ದಾರೆ. ಆದರೆ, ಇದು ಕರಾವಳಿ ಮತ್ತು ಇತರ ಭಾಗದ ಜನರನ್ನು ತೀವ್ರವಾಗಿ ಕೆರಳಿಸಿದೆ.
ಮೇಕಪ್ ಆರ್ಟಿಸ್ಟ್ ಆಗಿರುವ ಶ್ವೇತಾ ಎಸ್. ರೆಡ್ಡಿ ಎಂಬವರು ಈ ರೀತಿ ಬಣ್ಣ ಹಚ್ಚಿಕೊಂಡು ನೃತ್ಯ ಮಾಡಿದ್ದು ಅದನ್ನು ಇನ್‌ಸ್ಟಾ ಗ್ರಾಂ ಮೂಲಕ ಹರಿಬಿಟ್ಟಿದ್ದಾರೆ. makeoverbyshwetha.s_reddy ಎಂಬ ಇನ್‌ಸ್ಟಾ ಖಾತೆಯಲ್ಲಿ ಮೂರು ವಿಡಿಯೊಗಳನ್ನು ಹಾಕಲಾಗಿದೆ. ಎರಡರಲ್ಲಿ ವರಾಹ ರೂಪಂ ಹಾಡಿನ ನೃತ್ಯದ ಸನ್ನಿವೇಶವಗಳಿದ್ದರೆ, ಮತ್ತೊಂದರಲ್ಲಿ ಮೇಕಪ್ ಮಾಡುವ ದೃಶ್ಯಗಳಿವೆ.
ಯಾಕೆ ಆಕ್ರೋಶ?
ದೈವಾರಾಧನೆಯನ್ನು ಯಾವುದೇ ಪ್ರದರ್ಶನಕ್ಕೆ ಬಳಸಿಕೊಳ್ಳಬಾರದು ಎಂಬುದು ಕರಾವಳಿ ಭಾಗದಲ್ಲಿ ವ್ಯಾಪಕವಾಗಿರುವ ಆಗ್ರಹ. ಅದರಲ್ಲೂ ದೈವ ನರ್ತಕರು ಇಂಥ ಯಾವುದೇ ಪ್ರದರ್ಶನವನ್ನು ಆಕ್ಷೇಪಿಸುತ್ತಾರೆ. ಕರಾವಳಿಯಲ್ಲೂ ಯಾವುದೇ ವೇದಿಕೆಯಲ್ಲಿ ಸಾಂಸ್ಕೃತಿಕ ಪ್ರದರ್ಶನವಾಗಿಯೂ ಬಳಸಲು ವಿರೋಧಿಸುತ್ತಾರೆ. ಈ ನಿಲುವಿನ ಬಗ್ಗೆಯೂ ಸಾಕಷ್ಟು ಆಕ್ಷೇಪಗಳಿವೆ.
ಹಾಗಿರುವಾಗ ಒಬ್ಬ ಯುವತಿ ಪಂಜುರ್ಲಿಯಂತೆ ವೇಷ ಧರಿಸಿ ನೃತ್ಯ ಮಾಡಿರುವುದು ಭೂತಾರಾಧನೆಗೆ ಮಾಡಿದ ಅಪಮಾನ, ದೈವಾರಾಧನೆಯನ್ನು ಅಣಕ ಮಾಡಿದಂತಾಗಿದೆ ಎಂದು ನೆಟ್ಟಿಗರು ಸಿಟ್ಟಿಗೆದ್ದಿದ್ದಾರೆ.
ರಿಷಬ್ ಕೂಡಾ ಎಚ್ಚರಿಕೆ ಹೆಜ್ಜೆ ಇಟ್ಟಿದ್ದರು
ಕಾಂತಾರ ಚಿತ್ರದ ಶೂಟಿಂಗ್ ವೇಳೆ ನಾಯಕ ಮತ್ತು ನಿರ್ದೇಶಕ ರಿಷಭ್ ಶೆಟ್ಟಿ ಅವರು ತುಂಬಾ ಎಚ್ಚರಿಕೆಯ ಹೆಜ್ಜೆಗಳನ್ನು ಇಟ್ಟಿದ್ದರು. ದೈವ ನರ್ತಕರನ್ನು ಕರೆಸಿಕೊಂಡು ವಿಚಾರ ವಿನಿಮಯ ನಡೆಸಿ, ಶುದ್ಧಾಚರಣೆಗಳೊಂದಿಗೆ ಮುನ್ನೆಚ್ಚರಿಕೆ ವಹಿಸಿ ಇಡೀ ಸಿನಿಮಾದ ಚಿತ್ರೀಕರಣ ಮಾಡಿದ್ದರು. ಹೀಗಾಗಿ ಚಿತ್ರದ ಬಗ್ಗೆ ಭೂತಾರಾಧಕರ ವರ್ಗದಿಂದ, ವಿದ್ವಾಂಸರಿಂದ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ.
ನೆಟ್ಟಿಗರ ಆಕ್ರೋಶ ಹರಿದ ರೀತಿ
ನೆಟ್ಟಿಗರು ಶ್ವೇತಾ ರೆಡ್ಡಿ ಅವರ ಮೇಲೆ ನಾನಾ ರೀತಿಯಲ್ಲಿ ದಾಳಿ ಮಾಡಿದ್ದು, ಕೂಡಲೇ ರೀಲ್ಸ್ ತೆಗೆದುಹಾಕಬೇಕು ಎಂದು ಎಚ್ಚರಿಸಿದ್ದಾರೆ.
– ದಯವಿಟ್ಟು ಇದನ್ನು ಡಿಲೀಟ್ ಮಾಡಿ. ನಮಗೆ ನಮ್ಮ ಸಂಸ್ಕೃತಿ ಮೇಲೆ ತುಂಬಾ ಗೌರವವಿದೆ. ಅದನ್ನು ಹಾಳು ಮಾಡಬೇಡಿ.
-ನೀವು ಒಬ್ಬ ಒಳ್ಳೆಯ ಮೇಕಪ್ ಆರ್ಟಿಸ್ಟ್ ಆಗಿರಬಹುದು. ಆದರೆ, ತುಳು ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಸ್ಪಷ್ಟ ಜ್ಞಾನ, ತಿಳುವಳಿಕೆ ಇಲ್ಲದೆ ಈ ರೀತಿ ಮಾಡಲು ಹೋಗಬೇಡಿ.
– ನೀವು ದೈವದ ಬಗ್ಗೆ ನಮಗೆ ಇರುವ ನಂಬಿಕೆಯನ್ನು ಅಪಮಾನ ಮಾಡಿದ್ದೀರಿ. ತಕ್ಷಣ ಡಿಲೀಟ್ ಮಾಡಿ. ಇಲ್ಲದಿದ್ದರೆ ತಕ್ಕ ಶಿಕ್ಷೆ ಅನುಭವಿಸುತ್ತೀರಿ.
– ಫಾಲೋವರ್ಸ್ ಲೈಕ್‌ಗೋಸ್ಕರ ನಮ್ಮ ದೈವ ದೇವರನ್ನು ಅಪಮಾನ ಮಾಡಿದರೆ ನಾವು ಸುಮ್ಮನೆ ಇರಲ್ಲ. ಮರ್ಯಾದೆಯಿಂದ ಪೋಸ್ಟ್ ಡಿಲೀಟ್ ಮಾಡಿ ಕ್ಷಮೆ ಕೇಳಿದರೆ ಸರಿ, ಇಲ್ಲದಿದ್ದರೆ ಮುಂದೆ ಆಗುವ ಎಲ್ಲ ಪರಿಣಾಮಕ್ಕೆ ನೀವೇ ಹೊಣೆ.
– ಹೆಣ್ಣು ಮಕ್ಕಳು ದೈವದ ವೇಷ ಹಾಕಬಾರದು. ನಿಮಗೂ ಒಳ್ಳೆದಾಗಲ್ಲ. ಕೇಸ್ ಕೂಡಾ ಹಾಕ್ತಾರೆ. ತುಳುನಾಡ ಜನರ ಮನಸ್ಸಿಗೆ ಬೇಸರ ಆಗುತ್ತದೆ. ಅರ್ಥ ಮಾಡಿಕೊಳ್ಳದಿದ್ದರೆ ನಿಮಗೆ ಹುಚ್ಚು ಹಿಡಿಯೋದು ಖಂಡಿತ.
– ಲೈಕ್ ಮತ್ತು ಫಾಲೋವರ್ಸ್‌ಗಾಗಿ ದೈವವನ್ನು ಇನ್‌ಸಲ್ಟ್ ಮಾಡಬೇಡಿ.
ಇದನ್ನೂ ಓದಿ Kantara Movie | 120 ದೈವ ನರ್ತಕರ ಜತೆ ಕಾಂತಾರ ಸಿನಿಮಾ ನೋಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ