Site icon Vistara News

Karnataka Elections : ಬಿಎಸ್‌ವೈ ಭೇಟಿಯಾದ ಸಚಿವ ಕೆ.ಸಿ. ನಾರಾಯಣ ಗೌಡ, ಬಿಜೆಪಿಯಲ್ಲೇ ಉಳಿಯುತ್ತಾರಾ?

KC Narayana gowda

#image_title

ಬೆಂಗಳೂರು: ರಾಜ್ಯದ ರೇಷ್ಮೆ, ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವರಾಗಿರುವ ಕೆ.ಸಿ. ನಾರಾಯಣ ಗೌಡ (KC Narayana Gowda) ಅವರು ಬುಧವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ (BS yediyurappa) ಅವರನ್ನು ಭೇಟಿಯಾದರು. ಯುಗಾದಿ ಹಬ್ಬಕ್ಕೆ ಶುಭಾಶಯ ಕೋರುವ ನೆಪದಲ್ಲಿ ಬಿಎಸ್‌ವೈ ಅವರನ್ನು ಭೇಟಿಯಾಗಿ ಕೆಲವು ಹೊತ್ತು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ಬಿ.ವೈ ವಿಜಯೇಂದ್ರ ಮತ್ತು ಶರಣು ತಳ್ಳಿಕೇರಿ ಉಪಸ್ಥಿತರಿದ್ದರು.

ಮಂಡ್ಯದ ಕೆ.ಆರ್‌. ಪೇಟೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಚಿವ ಕೆ.ಸಿ. ನಾರಾಯಣ ಗೌಡ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರುತ್ತಾರೆ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಭಾರಿ ಕುತೂಹಲವನ್ನು ಸೃಷ್ಟಿಸಿದೆ. ಅದರಲ್ಲೂ ಬಿ.ವೈ. ವಿಜಯೇಂದ್ರ ಅವರ ಉಪಸ್ಥಿತಿಯಲ್ಲಿ ಭೇಟಿ ನಡೆದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಕೆ.ಸಿ. ನಾರಾಯಣ ಗೌಡ ಅವರು ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಹಲವು ನಾಯಕರ ಮುನಿಸಿಕೊಂಡಿದ್ದರು. ಆಪರೇಷನ್‌ ಕಮಲದಲ್ಲಿ ಬಿಜೆಪಿಗೆ ಬಂದು ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಅವರಿಗೆ ಈ ಬಾರಿ ಮತ್ತೆ ಕಮಲ ಪಕ್ಷದಿಂದ ನಿಂತು ಗೆಲುವು ಸಾಧಿಸುವುದು ಕಷ್ಟ ಎಂದು ಅನಿಸಿತ್ತು ಎಂದು ಹೇಳಲಾಗಿದೆ. ಇದಕ್ಕಾಗಿ ಅವರು ಕಾಂಗ್ರೆಸ್‌ ಪಕ್ಷದ ಕಡೆಗೆ ಒಲವು ತೋರಿದ್ದರು. ಆರ್‌. ಅಶೋಕ್‌ ಅವರ ನೇಮಕವನ್ನು ಹಿಂದೆ ಪಡೆದುಕೊಂಡು ತಮ್ಮನ್ನು ಮಂಡ್ಯ ಜಿಲ್ಲೆಯ ಉಸ್ತುವಾರಿ ಮಾಡಿದಾಗಲೂ ಅವರು ಸಿಟ್ಟು ತೋಡಿಕೊಂಡಿದ್ದರು.

ಕೆ.ಸಿ. ನಾರಾಯಣ ಗೌಡ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರುವುದನ್ನು ಹಲವು ಬಿಜೆಪಿ ನಾಯಕರು ಸಚಿವರೇ ಒಪ್ಪಿಕೊಂಡಿದ್ದರು. ಕೋಟ ಶ್ರೀನಿವಾಸ ಪೂಜಾರಿ ಅವರಂತೂ ನಾರಾಯಣ ಗೌಡ ಅವರು ದುಡುಕುತ್ತಿದ್ದಾರೆ ಅನಿಸುತ್ತದೆ ಎಂದೇ ಹೇಳಿದ್ದರು. ಕೆಲವರು ಅವರು ಎಲ್ಲೂ ಹೋಗದಂತೆ ನೋಡಿಕೊಳ್ಳುತ್ತೇವೆ ಎಂಬ ಧೈರ್ಯದ ಮಾತು ಆಡಿದ್ದಾರೆ.

ಕಳೆದ ಕೆಲವು ದಿನಗಳಿಂದ ನಾರಾಯಣ ಗೌಡ ಅವರ ಕಾಂಗ್ರೆಸ್‌ ಸೇರ್ಪಡೆ ಸುದ್ದಿಗಳು ವಿರಳವಾಗಿದ್ದವು. ಒಂದು ಕಡೆದ ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯಕ್ಕೆ ಆಗಮಿಸಿ ಹವಾ ಎಬ್ಬಿಸಿರುವುದು, ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ ಬಿಜೆಪಿ ಸೇರಿರುವುದು ಪಕ್ಷದಲ್ಲಿ ಹೊಸ ಹುಮ್ಮಸ್ಸು ಮೂಡಿದೆ. ಇದನ್ನು ಗಮನಿಸಿ ಕೆ.ಸಿ. ನಾರಾಯಣ ಗೌಡ ಅವರು ಕಾಂಗ್ರೆಸ್‌ ಸೇರ್ಪಡೆಗೆ ಇಟ್ಟಿರುವ ಕಾಲನ್ನು ಹಿಂದಿಟ್ಟಿರುವ ಸಾಧ್ಯತೆ ಇದೆ.

ಕೆ.ಸಿ ನಾರಾಯಣ ಗೌಡ ಅವರು ಬಿ.ಎಸ್‌. ಯಡಿಯೂರಪ್ಪ ಅವರ ಬೆಂಬಲಿಗರು. ಅದಕ್ಕಿಂತಲೂ ಹೆಚ್ಚಾಗಿ ಬಿ.ವೈ. ವಿಜಯೇಂದ್ರ ಅವರ ಮೇಲೆ ನಂಬಿಕೆ ಇಟ್ಟವರು. ಕೆ.ಆರ್‌. ಪೇಟೆಯಲ್ಲಿ ಪಡೆದ ಉಪಚುನಾವಣಾ ಗೆಲುವಿನ ಹಿಂದೆ ವಿಜಯೇಂದ್ರರ ಪಾಲು ದೊಡ್ಡದಿದೆ ಎಂದೇ ಹೇಳುತ್ತಿದ್ದರು. ಇದೀಗ ವಿಜಯೇಂದ್ರ ಅವರ ಸಮ್ಮುಖದಲ್ಲೇ ಬಿಎಸ್‌ವೈ ಅವರನ್ನು ಭೇಟಿಯಾಗಿದ್ದು, ಇದು ಅವರು ಪಕ್ಷದಲ್ಲೇ ಉಳಿಯುವ ಸೂಚನೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : Karnataka Election 2023: ಸಚಿವ ನಾರಾಯಣ ಗೌಡರು ಸ್ವಲ್ಪ ಅವಸರ ಮಾಡುತ್ತಿದ್ದಾರೆ: ಕೋಟ ಶ್ರೀನಿವಾಸ ಪೂಜಾರಿ

Exit mobile version