ಮುಂಬಯಿ: ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಸರಕಾರವು ಜೂನ್ ೨೨ರಿಂದ ೨೪ರ ನಡುವೆ ತೆಗೆದುಕೊಂಡ ಪ್ರಮುಖ ನಿರ್ಣಯಗಳ ವಿವರ ನೀಡುವಂತೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಆದೇಶ ನೀಡಿದ್ದಾರೆ.
ಜೂನ್ ೨೦ರಂದು ರಾತ್ರಿ ಏಕನಾಥ್ ಶಿಂಧೆ ಅವರ ನೇತೃತ್ವದಲ್ಲಿ ಬಂಡಾಯ ಶಾಸಕರು ಸೂರತ್‌ನ ರೆಸಾರ್ಟ್‌ಗೆ ಹೊರಟು ಹೋದ ಮೇಲೆ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ ಅಘಾಡಿ ಸರಕಾರದ ಮೇಲೆ ತೂಗುಗತ್ತಿ ತೂಗುತ್ತಿದೆ. ಯಾವುದೇ ಕ್ಷಣ ಉರುಳಬಹುದು ಎಂಬ ಆತಂಕದ ನಡುವೆಯೂ ʻಸರಕಾರಿ ಕೆಲಸಗಳುʼ ಅತ್ಯಂತ ಕರಾರುವಕ್ಕಾಗಿ ನಡೆದಿವೆ ಎಂಬ ಆರೋಪ ಕೇಳಿಬಂದಿವೆ. ಅಂದರೆ, ಸರಕಾರಲ್ಲಿರುವ ಕೆಲವು ಸಚಿವರು, ಪ್ರಭಾವಿಗಳು ತಮಗೆ ಬೇಕಾದ ಕೆಲಸಗಳನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ಅತ್ಯಂತ ಪ್ರಮುಖ ಸರಕಾರಿ ನಿರ್ಣಯಗಳನ್ನು ಮಾಡಲಾಗಿದೆ, ಸುತ್ತೋಲೆಗಳು ಬಿಡುಗಡೆಯಾಗಿವೆ ಎಂದು ಹೇಳಲಾಗಿದೆ. ಈ ಆಪಾದನೆ ಹಿನ್ನೆಲೆಯಲ್ಲಿ ರಾಜ್ಯಪಾಲರು ಅಖಾಡ ಪ್ರವೇಶಿಸಿ ಎಲ್ಲಾ ಸರಕಾರಿ ನಿರ್ಣಯ, ಸುತ್ತೋಲೆಗಳ ಬಗ್ಗೆ ಪೂರ್ಣ ಮಾಹಿತಿ ನೀಡುವಂತೆ ಸರಕಾರಕ್ಕೆ ಸೂಚಿಸಿದ್ದಾರೆ.
ನಿಜವೆಂದರೆ, ಬಂಡಾಯ ಚಟುವಟಿಕೆ ಶುರುವಾದ ದಿನವೇ ರಾಜ್ಯಪಾಲರು ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ರಾಜಭವನಕ್ಕೆ ಮರಳಿ ಆಡಳಿತಾತ್ಮಕ ಚಟುವಟಿಕೆಗಳನ್ನು ಆರಂಭ ಮಾಡಿದ್ದು ಸೋಮವಾರ. ಅವರು ಬರುತ್ತಿದ್ದಂತೆಯೇ ʻಅಲ್ಪಮತʼದ ಸರಕಾರ ಕೆಲವೊಂದು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂಬ ಬಗ್ಗೆ ದೂರುಗಳೂ ಬಂದಿವೆ. ಹೀಗಾಗಿ ಜೂನ್ ೨೨ರಿಂದ ೨೪ರ ನಡುವೆ ತೆಗೆದುಕೊಂಡ ನಿರ್ಣಯಗಳ ಮಾಹಿತಿ ಕೇಳಿದ್ದಾರೆ.
ಮಹಾರಾಷ್ಟ್ರ ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕರಾಗಿರುವ ಪ್ರವೀಣ್ ದರೇಕರ್ ಅವರು ರಾಜ್ಯಪಾಲರಿಗೆ ಪತ್ರ ಬರೆದು ಭಾರಿ ಅವಸರದಲ್ಲಿ ಕೆಲವೊಂದು ಸರಕಾರಿ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದರು. ಇದರ ಆಧಾರದಲ್ಲಿ ರಾಜ್ಯಪಾಲರ ಪ್ರಿನ್ಸಿಪಾಲ್ ಸೆಕ್ರೆಟರಿ ಆಗಿರುವ ಸಂತೋಷ್ ಕುಮಾರ್ ಅವರು ಮುಖ್ಯ ಕಾರ್ಯದರ್ಶಿ ಮನು ಕುಮಾರ್ ಶ್ರೀವಾಸ್ತವ ಅವರಿಗೆ ಪತ್ರ ಬರೆದಿದ್ದಾರೆ.
ʻಕಳೆದ ಮೂರು ದಿನಗಳಲ್ಲಿ ಸರಕಾರದ ಮಟ್ಟದಲ್ಲಿ ಕೆಲವೊಂದು ಅವಸರದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂಬ ಬಗ್ಗೆ ದೂರುಗಳು ಬಂದಿವೆ. ಹೀಗಾಗಿ ಜೂನ್ ೨೨, ೨೩ ಮತ್ತು ೨೪ರಂದು ತೆಗೆದುಕೊಳ್ಳಲಾದ ಎಲ್ಲ ಸರಕಾರಿ ನಿರ್ಣಯಗಳು, ಸುತ್ತೋಲೆಗಳ ಪೂರ್ಣ ವಿವರಗಳನ್ನು ಕೊಡಿ. ಈ ನಿರ್ಣಯ ತೆಗೆದುಕೊಳ್ಳಲು ಕಾರಣವಾದ ಉದ್ದೇಶಗಳನ್ನು ಕೂಡಾ ವಿವರಿಸಿ. ಸಂವಿಧಾನದ ೧೬೭ನೇ ವಿಧಿಯಡಿ ಬರುವ ಅಧಿಕಾರವನ್ನು ಬಳಸಿಕೊಂಡು ರಾಜ್ಯಪಾಲರು ಈ ಮಾಹಿತಿಯನ್ನು ಕೇಳುತ್ತಿದ್ದಾರೆ ಎಂದು ರಾಜ್ಯಪಾಲರ ಕಚೇರಿಯಿಂದ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.
ದರೇಕರ್ ಹೇಳಿದ್ದೇನು?
ರಾಜ್ಯದಲ್ಲಿರುವ ಮಹಾ ವಿಕಾಸ ಅಘಾಡಿ ಸರಕಾರ ಕೆಲವೊಂದು ಯೋಜನೆ, ಸ್ಕೀಂಗಳು ಮತ್ತು ಗುತ್ತಿಗೆಗಳಿಗೆ ಸಂಬಂಧಿಸಿ ಅವಸರದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದೆ. ಸರಕಾರದ ಈ ನಡೆ ಸಂಶಯಾಸ್ಪದವಾಗಿದೆ. ಒಂದ ಹಿಂದೆ ಒಂದರಂತೆ ತೆಗೆದುಕೊಳ್ಳುತ್ತಿರುವ ಈ ನಿರ್ಧಾರಗಳ ಬಗ್ಗೆ ಗಮನ ಹರಿಸಿ ತಮ್ತು ಸರಕಾರ ತೆಗೆದುಕೊಂಡಿರುವ ಎಲ್ಲ ತೀರ್ಮಾನಗಳನ್ನು ಹಿಂದಕ್ಕೆ ಪಡೆಯುವಂತೆ ಆದೇಶಿಸಿ ಎಂದು ಮೇಲ್ಮನೆಯ ಪ್ರತಿಪಕ್ಷ ನಾಯಕ ಪ್ರವೀಣ್ ದರೇಕರ್ ಅವರು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಸರಕಾರದಿಂದ ಸಮರ್ಥನೆ
ಸರಕಾರದ ಅವಸರದ ನಡುವೆ ಆಗಲೇ ಸಾರ್ವಜನಿಕ ವಲಯದಲ್ಲಿ ಆಕ್ಷೇಪಗಳು ವ್ಯಕ್ತವಾಗಿದ್ದವು. ಸಾರ್ವಜನಿಕವಾಗಿ ಇದನ್ನು ಪ್ರಶ್ನಿಸಲಾಗಿತ್ತು. ಆಗೆಲ್ಲ ಮಹಾ ವಿಕಾಸ ಆಘಾಡಿ ಸರಕಾರದ ಮಂತ್ರಿಗಳು ʻಶಿಂಧೆ ಬಣ ಗುವಾಹಟಿಗೆ ಹೋದ ಮಾತ್ರಕ್ಕೆ ಸರಕಾರ ಬಿದ್ದು ಹೋಗಿಲ್ಲ. ಸರಕಾರ ಎಂದಿನಂತೆ ಚಟುವಟಿಕೆ ನಡೆಯುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಸಮರ್ಥಿಸಿದ್ದರು. ಅಂದರೆ ದೊಡ್ಡ ಪ್ರಮಾಣದ ಗುತ್ತಿಗೆ ಮತ್ತಿತರ ಯೋಜನೆಗಳಿಗೆ ಈ ಅವಧಿಯಲ್ಲಿ ಅನುಮತಿ ಮಂಜೂರು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ| maha politics: ಶಿಂಧೆ ಟೀಮ್‌ಗೆ ಸುಪ್ರೀಂ ರಿಲೀಫ್, ವಿಚಾರಣೆ ಜುಲೈ 11ಕ್ಕೆ ಮುಂದೂಡಿಕೆ, ಅಲ್ಲಿವರೆಗೆ 16 ಶಾಸಕರು ಸೇಫ್