Site icon Vistara News

Motivational story | ಹೋಟೆಲ್ ಗೆ ಬಂದ ಅಪ್ಪ- ಮಗ ಬಿಟ್ಟು ಹೋಗಿದ್ದೇನು?

father and son

ಕೃಷ್ಣ ಭಟ್‌ ಅಳದಂಗಡಿ – Motivational story

ಅದೊಂದು ದೊಡ್ಡ ಹೋಟೆಲ್. ವಿಶ್ವನಾಥ ರಾಯರನ್ನು ಅವರ ಮಗ ಕೈ ಹಿಡಿದು ಕರೆದುಕೊಂಡು ಬಂದ. ಮೆಟ್ಟಿಲು ಹತ್ತುವಾಗ ಎಡವಿದಂತಾಯಿತು… ಮಗನೇ ಸಾವರಿಸಿ ಹಿಡಿದುಕೊಂಡ.

ರಾಯರಿಗೀಗ 90 ವರ್ಷ. ಕೈ ನಡುಗುತ್ತದೆ. ಕಾಲು ಎಳೀತದೆ. ಆದ್ರೂ ಮಗ *ಅಪ್ಪ ಹೋಟೆಲಿಗೆ ಹೋಗಿ ಇಡ್ಲಿ ಸಾಂಬಾರ್ ತಿಂದ್ಕೊಂಡು ಬರುವ ಬನ್ನಿ* ಎಂದು ಹೇಳಿದಾಗ ಬೇಡ ಅನ್ನಲು ಆಗಲಿಲ್ಲ. ಸಣ್ಣಗೆ *ಯಾಕೆ ಮಗಾ* ಅಂದರೂ ಅದನ್ನವನು ಕಿವಿಗೆ ಹಾಕಿಕೊಳ್ಳಲಿಲ್ಲ.

ಟೇಬಲ್ ಹುಡುಕಿ ಕೂತರು. ವೇಟರ್ ಗೆ ಎರಡು ಇಡ್ಲಿ ಸಾಂಬಾರ್ ಆರ್ಡರ್ ಮಾಡಿದ್ರು. ವೇಟರ್ ತಂದಿಟ್ಟ. ಅಪ್ಪ ಚಮಚ ಹಿಡಿದು ತಿನ್ನಲು ಶುರು ಮಾಡಿದ್ರು. ಮಗ ಇಡ್ಲಿಯನ್ನು ಚೆನ್ನಾಗಿ‌ ಕಟ್ ಮಾಡಿ ಇಟ್ಟಿದ್ದ.

ರಾಯರು ಚಮಚದಲ್ಲಿ ಇಡ್ಲಿ ಸಾಂಬಾರ್ ಎತ್ತಿ ಬಾಯಿ ಹತ್ತಿರ ತರುವಾಗ ಅದು ಜಾರಿ ಚೆಲ್ಲಿತು. ಒಮ್ಮೆ ಬಾಯಿ ಬದಲು ಮೂಗಿನ ಹತ್ರ ಹೋಯಿತು. ಆಗೆಲ್ಲ ಮಗನೇ ಬಟ್ಟೆ ಒರೆಸಿದ. ಕೊನೆಗೆ ಹೇಳಿದ: ಅಪ್ಪಾ ನಾನೇ ತಿನಿಸ್ಲಾ ಒಂದೆರಡು ತುತ್ತು?

ಅಪ್ಪ ಓಕೆ ಅನ್ನುವ ಮೊದಲೇ ತಿನ್ನಿಸಲು ಆರಂಭಿಸಿದ. ಆಗಲೂ ಕೆಲವೊಮ್ಮೆ ಕೆಳಗೆ ಬಿತ್ತು. ಆಗ ಅಕ್ಕ ಪಕ್ಕದವರೆಲ್ಲ… ಯಾಕೆ ಇಂಥವರನ್ನು ಕರೆದುಕೊಂಡು ಬರ್ತಾರಪ್ಪ… ಬೇಕಿದ್ರೆ ಮನೆಗೇ ಪಾರ್ಸೆಲ್ ತಗೊಂಡು ಹೋಗಿ ತಿನ್ನಿಸಬಹುದಿತ್ತು ಎಂದು ಸ್ವಲ್ಪ ಕೇಳುವಂತೆಯೇ ಹೇಳಿದರು. ಕೆಲವರು ಅಸಹ್ಯಪಟ್ಟುಕೊಂಡರು. ಇನ್ನು ಕೆಲವರು ಹೋಟೆಲ್ ನಲ್ಲಿ ಇಂಥದ್ದಕ್ಕೆಲ್ಲ ಅವಕಾಶ ನೀಡಬಾರದು ಎಂದರು.

ವಿಶ್ವನಾಥ ರಾಯರಿಗೆ ಕಿವಿ ಅಷ್ಟೇನೂ ಕೇಳಿಸುತ್ತಿರಲಿಲ್ಲ. ಮಗ ಕಿವಿಗೇ ಹಾಕಿಕೊಳ್ಳಲಿಲ್ಲ. ಬಹುಶಃ ಕೇಳಿಸಿರಲಿಕ್ಕೂ ಇಲ್ಲ ಅನಿಸ್ತದೆ.

ಇಡ್ಲಿ ಸಾಂಬಾರ್ ತಿಂದಾಯಿತು. ಅಪ್ಪಾ ಶೀರಾ ತರಿಸೋಣ್ವ ಅಂದ ಮಗ‌. ಅಪ್ಪ ಉತ್ತರ ಕೊಡುವ ಮೊದಲೇ ಮಗ ಆರ್ಡರ್ ಮಾಡಿ ಆಗಿತ್ತು. ಎಲ್ಲವನ್ನೂ ತಿಂದಾದ ಮೇಲೆ ಮಗ ತಂದೆಯನ್ನು ಸಿಂಕ್ ಬಳಿಗೆ ಕರೆದುಕೊಂಡು ಹೋಗಿ ಕೈ ತೊಳೆದ, ಬಾಯಿ ತೊಳೆಸಿದ. ಮುಖಕ್ಕೂ ನೀರು ಹಾಕಿದ. ಬಟ್ಟೆ ಮೇಲೆ ಬಿದ್ದಿತ್ತಲ್ಲ, ಅದನ್ನೂ ತೊಳೆದು ಟೇಬಲ್ ಹತ್ರ ತಂದು ಕೂರಿಸಿದ.

ಬಿಲ್ ಎಲ್ಲ ಪೇ ಮಾಡಿ ಮತ್ತೆ ಅಪ್ಪನ ಕೈ ಹಿಡಿದು ನಡೆಸಿಕೊಂಡು ಹೊರಟ.

ಆಗ ಹಿಂಬದಿಯಿಂದ ಯಾರೋ ಕರೆದ ಹಾಗಾಯ್ತು.. ತಿರುಗಿ ನೋಡಿದ್ರೆ ಒಬ್ಬರು ಹಿರಿಯರು.

ಅವರು ಹೇಳಿದ್ರು: ನೀವು ಏನೋ ಬಿಟ್ಟು ಹೋದ್ರಲ್ವಾ? ಅಂತ.

ಆಗ ಯುವಕ ಚೆಕ್ ಮಾಡಿ ಹೇಳಿದ: ಇಲ್ಲ ಸ್ವಾಮಿ ಏನೂ ಬಿಟ್ಟಿಲ್ಲ.

ಆಗ ಹಿರಿಯರು ಹೇಳಿದ್ರು: ಒಬ್ಬ ಮಗ ಅಪ್ಪನನ್ನು ಎಷ್ಟು ಪ್ರೀತಿಯಿಂದ ನೋಡ್ಕೊಬಹುದು ಮತ್ತು ಅವರಲ್ಲಿ ಆತ್ಮ ವಿಶ್ವಾಸ ತುಂಬಬಹುದು ಅನ್ನೋ ಸಂದೇಶಾನ ಬಿಟ್ಟು ಹೋಗಿರುವೆ ಹುಡುಗ..

ಆ ಕ್ಷಣಕ್ಕೆ ಹುಡುಗ ಏನೂ ಹೇಳಲಾಗದೆ ಗದ್ಗದಿತನಾದ.

ಹೋಟೆಲ್ ನಲ್ಲಿದ್ದ ಅಷ್ಟೂ ಜನ ಕಣ್ಣೀರು ಒರೆಸಿಕೊಂಡರು.

ಇದನ್ನೂ ಓದಿ| Motivational story | ಇನ್ನೊಂದು ಐದು ನಿಮಿಷ, ಐದೇ ನಿಮಿಷ.. ಪ್ಲೀಸ್‌ ಅಪ್ಪ!

Exit mobile version