ಬರ್ಮಿಂಗ್ಹಮ್ : ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿಯ ಪದಕ ಲಭಿಸಿದೆ. ೧೦ ಸಾವಿರ ಮೀಟರ್ ರೇಸ್ ವಾಕ್‌ನಲ್ಲಿ ಭಾರತದ ಪ್ರಿಯಾಂಕ ಗೋಸ್ವಾಮಿ ರಜತ ಪದಕ ಗೆದ್ದಿದ್ದು, ಈ ಮೂಲಕ ಒಟ್ಟಾರೆ ಪದಕಗಳ ಸಂಖ್ಯೆ ೨೭ಕ್ಕ ಏರಿಕೆಯಾಗಿದೆ.
ಶನಿವಾರ ಮಧ್ಯಾಹ್ನ (ಭಾರತೀಯ ಕಾಲಮಾನ) ನಡೆದ ಓಟದಲ್ಲಿ ಸೀಮಾ ಅವರು ೪೩ ನಿಮಿಷ ೩೮ ಸೆಕೆಂಡ್‌ಗಳಲ್ಲಿ ಗುರಿ ಮುಟ್ಟುವುದರೊಂದಿಗೆ ಎರಡನೇ ಸ್ಥಾನ ಪಡೆಯುವ ಮೂಲಕ ರಜತ ಪದಕ ತಮ್ಮದಾಗಿಸಿಕೊಂಡರು. ೪೨:೩೪. ೩೦ ನಿಮಿಷಗಳಲ್ಲಿ ಗುರಿ ಮುಟ್ಟಿದ ಆಸ್ಟ್ರೇಲಿಯಾದ ಜೆಮಿಮಾ ಮೊಂಟಾಗ್ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಆಸ್ಟ್ರೇಲಿಯಾ ಅಥ್ಲೀಟ್ ಪಾಲಿಗೆ ಇದು ಜೀವನ ಶ್ರೇಷ್ಠ ಸಾಧನೆಯಾಗಿದೆ. ಓಟ ಆರಂಭದಲ್ಲಿ ೩ನೇ ಸ್ಥಾನದಲ್ಲಿದ್ದ ಅವರು ೫೦೦೦ ಮೀಟರ್ ಕ್ರಮಿಸಿದ ಬಳಿಕ ಉಳಿದ ಸ್ಪರ್ಧಿಗಳನ್ನು ಮೀರಿಸಿ ಮೊದಲ ಸ್ಥಾನ ತಮ್ಮದಾಗಿಕೊಂಡಿದ್ದರು. ಕೀನ್ಯಾದ ಎಮಿಲಿ ವಮುಸಿ ಗಿ ಅವರು ೪೩: ೫೦. ೮೬ ನಿಮಿಷಗಳಲ್ಲಿ ಗುರಿ ಮುಟ್ಟುವ ಮೂಲಕ ಕಂಚಿನ ಪದಕ ಗೆದ್ದರು.
ಭಾರತದ ಇನ್ನೊಬ್ಬರು ಸ್ಪರ್ಧಿ ಭಾವನಾ ಜಾಟ್ ಅವರು ೪೭:೧೪. ೧೩ ನಿಮಿಷಗಳಲ್ಲಿ ಗುರಿ ಮುಟ್ಟಿ ಎಂಟನೇ ಸ್ಥಾನ ಪಡೆದುಕೊಂಡರು.
ಲಡ್ಡೂ ಗೋಪಾಲ್‌ಗೆ ಪದಕ ಅರ್ಪಣೆ
ತಾವು ಗೆದ್ದ ಪದಕವನ್ನು ಲಡ್ಡೂ ಗೋಪಾಲ್ (ಬಾಲಕೃಷ್ಣ) ಅವರಿಗೆ ಅರ್ಪಿಸುತ್ತೇನೆ ಎಂದು ಬೆಳ್ಳಿ ಪದಕ ವಿಜೇತೆ ಪ್ರಿಯಾಂಕ ಗೋಸ್ವಾಮಿ ಹೇಳಿದ್ದಾರೆ.