ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಪಟ್ಟಂತೆ ಸಿಐಡಿ ಅಧಿಕಾರಿಗಳು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣಪತಿ ಭಟ್ ಎಂಬವರನ್ನು ವಿಚಾರಣೆ ನಡೆಸಿದ್ದಾರೆ.
ಬೆಂಗಳೂರಿಗೆ ಕರಸಿಕೊಂಡ ಅಧಿಕಾರಿಗಳು ಹಗರಣದ ಕುರಿತು ಮಾಹಿತಿ ಪಡೆದಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹಸಚಿವ ಆರಗ ಜ್ಞಾನೇಂದ್ರ, ಗಣಪತಿ ಭಟ್ ಎಂಬವರು ಹಿಂದೆ ವರ್ಗಾವಣೆಗಳನ್ನು ಮಾಡಿಸುತ್ತಿದ್ದರಂತೆ. ಇದನ್ನೇ ಅವರು ವೃತ್ತಿ, ಪ್ರವೃತ್ತಿಯಾಗಿಯೂ ಮಾಡುತ್ತಿದ್ದರಂತೆ. ಇದೀಗ ಪಿಎಸ್‌ಐ ಹಗರಣದಲ್ಲಿ ಅವರ ಸಂಪರ್ಕವಿದೆ ಎಂಬ ಕಾರಣಕ್ಕೆ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಯಾರೇ ತಪ್ಪಿತಸ್ಥರಿದ್ದರೂ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ | ಪಿಎಸ್‌ಐ ನೇಮಕಾತಿ ಅಕ್ರಮ | ಇಡಿ ತನಿಖೆ ಇಲ್ಲವೆಂದ ಗೃಹ ಸಚಿವ
ನನ್ನ ಒಎಸ್‌ಡಿ ಅಲ್ಲ
ಗಣಪತಿ ಭಟ್ ಎಂಬವರು ಬಂಧನವಾಗುತ್ತಿದ್ದಂತೆಯೇ, ಅವು ಗೃಹಸಚಿವ ಆರಗ ಜ್ಞಾನೇಂದ್ರ ಅವರ ವಿಶೇಷ ಕರ್ತವ್ಯಾಧಿಕಾರಿ (ಒಎಸ್‌ಡಿ) ಗಣಪತಿ ಭಟ್ ಎಂಬ ಸುದ್ದಿ ಹರಿದಾಡಿತ್ತು. ಆರಗ ಜ್ಞಾನೇಂದ್ರ ಅವರ ಮೇಲೆ ಈಗಾಗಲೆ ಹರಿಹಾಯುತ್ತಿದ್ದ ಪ್ರತಿಪಕ್ಷಗಳು ಆರೋಪಗಳನ್ನು ಆರಂಭಿಸಿದ್ದವು.
ಈ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ʻನಾನು ಮೊದಲೇ ಹೇಳಿದ್ದೇನೆ, ಪಿಎಸ್‌ಐ ಹಗರಣದ ಸೂತ್ರಧಾರಿಗಳು ಬೇರೆ ಇದ್ದಾರೆ. ಆದರೆ ತನಿಖೆ ಪಾತ್ರಧಾರಿಗಳ ಸುತ್ತಲೇ ಗಿರಕಿ ಹೊಡೆಯುತ್ತಿದೆ. ಇಂದು ಪಿಎಸ್ಐ ಹಗರಣ ಸಂಬಂಧ ಸಿಐಡಿ ಬಂಧಿಸಿದ ಗಣಪತಿ ಭಟ್‌ಗೂ ಗೃಹ ಸಚಿವರ ಕಚೇರಿಗೂ ಏನು ಸಂಬಂಧ ಆರಗ ಜ್ಞಾನೇಂದ್ರ ಅವರೇ? ಗೃಹ ಸಚಿವರ ಕಚೇರಿಗೆ ಆರೋಪಿ ಗಣಪತಿ ಭಟ್ ಬರ್ತಾ ಇದ್ದಿದ್ದು ನಿಜವೇ?
ಪಿಎಸ್ಐ ನೇಮಕಾತಿ ಹಗರಣ ನಡೆಯುತ್ತಿದ್ದ ದಿನಗಳ ಗೃಹ ಸಚಿವರ ಕಚೇರಿ, ಮನೆಯ ಸಿಸಿಟಿವಿಗಳ ದೃಶ್ಯಾವಳಿಗಳನ್ನು ಗೃಹ ಸಚಿವರು ಬಹಿರಂಗ ಮಾಡುತ್ತಾರೆಯೇ ? ಜನರಿಗೆ ವದಂತಿಗಳಿಂದ ಮುಕ್ತಿ ಕೊಟ್ಟು ಪಾರದರ್ಶಕವಾಗಿರಬೇಕಾದುದು ಗೃಹ ಸಚಿವರ ಕರ್ತವ್ಯ ಅಲ್ವೇ ಆರಗ ಜ್ಞಾನೇಂದ್ರ ಅವರೇ. ನ್ಯಾಯಾಂಗ ತನಿಖೆ ನಡೆಯದೆ ಪಿಎಸ್‌ಐ ಹಗರಣಕ್ಕೆ ಮುಕ್ತಿ ಇಲ್ಲ ಎಂದು ಟೀಕಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಆರಗ ಜಾನೇಂದ್ರ, ಇದೀಗ ವಿಚಾರಣೆಗೆ ಒಳಪಟ್ಟಿರುವವರ ಹೆಸರು ಗಣಪತಿ ಭಟ್. ಅವರು ಶಿರಸಿಯವರು. ಇವರು ಯಾರು ಎಂದು ಸಿಒಡಿ ಅಧಿಕಾರಿಗಳನ್ನು ಕೇಳಿದೆ, ಅವರು ಈ ಹಿಂದೆ ವರ್ಗಾವಣೆಗಳನ್ನು ಮಾಡಿಸುತ್ತಿದ್ದರು ಎಂದು ತಿಳಿಸಿದ್ದಾರೆ. ನನ್ನ ಜತೆಗಿರುವ ವಿಶೇಷ ಕರ್ತವ್ಯಾಧಿಕಾರಿಯ ಹೆಸರೂ ಗಣಪತಿ ಭಟ್ ಆಗಿದ್ದು, ಈಗ ಸಿಐಡಿ ವಿಚಾರಣೆ ನಡೆಸಿರುವವರು ಅವರಲ್ಲ, ಈ ಕುರಿತು ಅನವಶ್ಯಕ ಗೊಂದಲ ಬೇಡ ಎಂದರು. ಬಹುಶಃ ವಿಶೇಷ ಕರ್ತವ್ಯಾಧಿಕಾರಿ ಗಣಪತಿ ಭಟ್ ಅವರಿಗೆ ಇದ್ದ ಕಂಟಕ ಕಳೆಯಿತು ಎಂದು ನಗುತ್ತ ತಿಳಿಸಿದರು.
ಇದನ್ನೂ ಓದಿ | ಪ್ರಾಮಾಣಿಕ ಪಿಎಸ್‌ಐ ಅಭ್ಯರ್ಥಿಗಳಿಗೆ ನ್ಯಾಯ ಸಿಗಲಿ: ಗೃಹ ಸಚಿವರಿಗೆ 8 ಶಾಸಕರ ಪತ್ರ