Site icon Vistara News

ಹಾಸನ ಬಿಜೆಪಿ ಮುಖಂಡನ ಮನೆಗೆ ಪಿಸ್ತೂಲ್‌ ಹಿಡಿದು ದುಷ್ಕರ್ಮಿಗಳ ಲಗ್ಗೆ, ಧೈರ್ಯದಿಂದ ಹಿಮ್ಮೆಟ್ಟಿಸಿದ ಮಹಿಳೆ

D T Prakash

ಹಾಸನ: ಹಾಸನದ ಬಿಜೆಪಿ ಮುಖಂಡ ಡಿ.ಟಿ. ಪ್ರಕಾಶ್‌ ಅವರ ಮನೆಗೆ ಇಬ್ಬರು ದುಷ್ಕರ್ಮಿಗಳು ಪಿಸ್ತೂಲು ಹಿಡಿದುಕೊಂಡು ಬಂದಿರುವುದು ಭಾರಿ ಆತಂಕ ಸೃಷ್ಟಿಸಿದೆ. ಅದೇ ಹೊತ್ತಿಗೆ ಡಿ.ಟಿ. ಪ್ರಕಾಶ್‌ ಅವರ ಅಮ್ಮ ರಂಗಮ್ಮ ಅವರು ತೋರಿದ ಸಮಯಪ್ರಜ್ಞೆ ಮತ್ತು ತೋರಿದ ಪ್ರತಿರೋಧ ಭಾರಿ ಪ್ರಶಂಸೆಗೆ ಒಳಗಾಗಿದೆ. ಹಾಸನ ನಗರ ಹೌಸಿಂಗ್‌ ಬೋರ್ಡ್‌ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಆಗಂತುಕರ ಆಗಮನ ಸಿಸಿ ಟಿವಿಯಲ್ಲಿ ಸೆರೆ

ಡೆಲಿವರಿ ಬಾಯ್‌ಗಳಂತೆ ಬಂದರು
ಕಪ್ಪು ಶರಟು ಧರಿಸಿದ ಇಬ್ಬರು ಯುವಕರು ಡೆಲಿವರಿ ಬಾಯ್‌ಗಳಂತೆ ನಟಿಸುತ್ತಾ ಗೇಟು ತೆಗೆದು ಅಂಗಳ ಪ್ರವೇಶಿಸಿದ್ದಾರೆ. ಅವರ ಕೈಯಲ್ಲಿ ಎರಡು ಚೀಲಗಳು ಇದ್ದವು. ಮನೆಯ ಪೋರ್ಟಿಕೋ ಭಾಗಕ್ಕೆ ಬಂದ ಇಬ್ಬರು ಮೊದಲು ಕಾಲಿಂಗ್‌ ಬೆಲ್‌ ಒತ್ತಿದ್ದಾರೆ. ಆದರೆ, ಬೆಲ್‌ ಆಗದೆ ಇದ್ದಾಗ ಬಾಗಿಲು ಬಡಿದಿದ್ದಾರೆ. ಇದೆಲ್ಲವೂ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಮುಂದಿನ ವಿಚಾರವನ್ನು ಹೀಗೆ ವಿವರಿಸಿದ್ದಾರೆ.

ʻʻಮಧ್ಯಾಹ್ನ ೧೨.೩೦ರ ಹೊತ್ತು ಇರಬಹುದು. ನನ್ನ ಮಗ ಇರಲಿಲ್ಲ. ಸೊಸೆ ಮೊಮ್ಮಗನಿಗೆ ಊಟ ಕೊಡಲೆಂದು ಹೋಗಿದ್ದಳು. ನಾನು ಯಾಕೋ ಕಾಲಿಂಗ್‌ ಬೆಲ್‌ ಆಫ್‌ ಮಾಡಿದ್ದೆ. ಆದರೆ, ಬಾಗಿಲು ಬಡಿದ ಸದ್ದು ಕೇಳಿತು ಮೊದಲು ತೆರೆಯಲಿಲ್ಲ. ಆಮೇಲೆ ಏನೋ ಅವಸರ ಇರಬಹುದಾ ಅಂತ ಬಾಗಿಲು ತೆರೆದೆ. ಆಗ ಇಬ್ಬರು ಯುವಕರು ಬಾಗಿಲಲ್ಲಿ ನಿಂತಿದ್ದರು. ಡಿ.ಟಿ. ಪ್ರಕಾಶ್‌ ಮನೆಯಲ್ಲಿದ್ದಾರಾ ಎಂದು ಕೇಳಿದರು. ನಾನು ಇಲ್ಲ ಎಂದೆ. ಅವರಿಗೆ ಒಂದು ಪಾರ್ಸೆಲ್‌ ಇದೆ ಎಂದರು. ನಾನು ಬಾಗಿಲ ಕಡೆಗೆ ತಿರುಗುತ್ತಿದ್ದಂತೆಯೇ ಅವರಲ್ಲಿ ಒಬ್ಬ ನನ್ನ ಕೊರಳಿನಲ್ಲಿದ್ದ ಚಿನ್ನದ ಸರಕ್ಕೆ ಕೈ ಹಾಕಿದ. ನನ್ನ ಹಣೆಗೆ ಪಿಸ್ತೂಲು ಹಿಡಿದ. ಏನು ಮಾಡುವುದು ಎಂದು ತಿಳಿಯದಿದ್ದರು ಕೊಸರಿಕೊಂಡೆ. ಮತ್ತು ಜೋರಾಗಿ ಬೊಬ್ಬೆ ಹೊಡೆದೆ. ಆತ ಅವರಿಗೆ ಹೆದರಿಕೆಯಾಗಿ ನನ್ನನ್ನು ಬಿಟ್ಟು ಓಡಿದರು. ಆಗ ನಾನು ಜೋರಾಗಿ ಚಪ್ಪಾಳೆ ಹೊಡೆದು ಕೂಗಿದೆ. ಕೆಲವರು ಬಂದರು. ಆಷ್ಟು ಹೊತ್ತಿಗೆ ಈ ಕಳ್ಳರು ಓಡಿ ಹೋಗಿದ್ದರು. ಎಲ್ಲಿ ಹುಡುಕಿದರೂ ಸಿಗಲಿಲ್ಲ- ಎಂದು ರಂಗಮ್ಮ ವಿವರಣೆ ನೀಡಿದ್ದಾರೆ. ರಂಗಮ್ಮ ಅವರ ಈ ಧೈರ್ಯ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಆಗಂತುಕರನ್ನು ಧೈರ್ಯವಾಗಿ ಹಿಮ್ಮೆಟ್ಟಿಸಿದ ರಂಗಮ್ಮ

ಈ ನಡುವೆ, ಬಂದವರು ಯಾರು? ಪಿಸ್ತೂಲು ಹಿಡಿದುಕೊಂಡು ಬಂದಿದ್ಯಾಕೆ? ತಂದಿರುವ ಪಿಸ್ತೂಲು ಒರಿಜಿನಲ್ಲಾ? ನಿಜಕ್ಕೂ ಏನಾದರೂ ಅಪರಾಧಿ ಕೃತ್ಯಕ್ಕಾಗಿ ಬಂದಿದ್ದರೇ? ಅಥವಾ ಕೆಲವರು ಹೇಳುವಂತೆ ಮಹಿಳೆಯ ಸರ ಕದಿಯಲು ಬಂದಿದ್ದರೇ? ಸರ ಕದಿಯಲು ಪಿಸ್ತೂಲು ಹಿಡಿದುಕೊಂಡು ಬರುತ್ತಾರಾ? ಎಂಬೆಲ್ಲ ಪ್ರಶ್ನೆಗಳನ್ನು ಇಟ್ಟುಕೊಂಡು ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.

Exit mobile version