ಮೈಸೂರು: ಸರಗೂರು ತಾಲೂಕಿನ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ (Hostel) ಮಕ್ಕಳು ಶನಿವಾರ ಸಂಜೆಯಿಂದ ರಾತ್ರಿ ಸುಮಾರು ೧೧ ಗಂಟೆವರೆಗೂ ಊಟವೂ ಇಲ್ಲದೆ, ಚಳಿಯಲ್ಲಿಯೇ ಹೊರಗಡೆ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದು ಸಾರ್ವಜನಿಕವಾಗಿ ತೀವ್ರ ಆಕ್ರೋಶಕ್ಕೂ ಕಾರಣವಾಗಿತ್ತು. ನಿರ್ಲಕ್ಷ್ಯ ವಹಿಸಿದ ವಾರ್ಡನ್ ಅನ್ನು ಸ್ಥಳೀಯರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.
ಶನಿವಾರದ ಹಿನ್ನೆಲೆಯಲ್ಲಿ ಮಕ್ಕಳು ಆಟವಾಡಲೆಂದು ಹೊರಗಡೆ ಹೋಗಿದ್ದರು. ಆದರೆ, ಈ ವೇಳೆ ಹಾಸ್ಟೆಲ್‌ಗೆ ವಾರ್ಡನ್ ಬೀಗ ಹಾಕಿ ಅಲ್ಲಿಂದ ನಿರ್ಗಮಿಸಿದ್ದರು. ಮಕ್ಕಳು ಆಟವಾಡಿ ಸಂಜೆ ಹಾಸ್ಟೆಲ್‌ಗೆ ಬಂದರೆ ಬೀಗ ಹಾಕಿರುವುದು ಗೊತ್ತಾಗಿದೆ. ಎಷ್ಟೇ ಕೂಗಿಕೊಂಡರೂ ಅಲ್ಲಿ ಬಾಗಿಲು ತೆಗೆಯುವವರು ಯಾರೂ ಇರಲಿಲ್ಲ. ಹೀಗಾಗಿ ವಾರ್ಡನ್ ಈಗ ಬರುತ್ತಾರೆ, ಆಗ ಬರುತ್ತಾರೆ ಎಂದು ಬಾಗಿಲ ಮುಂದೆಯೇ ಕಾದು ಕುಳಿತಿದ್ದಾರೆ.
ಸಂಜೆ ಕಳೆದು ಕತ್ತಲಾಯಿತು, ರಾತ್ರಿಯೂ ಆಯಿತು. ಆದರೂ ವಾರ್ಡನ್ ಸುಳಿವು ಅಲ್ಲಿರಲಿಲ್ಲ. ಚಳಿ ಬೇರೆ ಪ್ರಾರಂಭವಾಗಿದ್ದರಿಂದ ಮಕ್ಕಳು ಆ ಚಳಿಯಲ್ಲಿಯೇ ಕಾದು ಕುಳಿತಿದ್ದರು. ರಾತ್ರಿ ಮಕ್ಕಳಿಗೆ ಊಟವೂ ಇರಲಿಲ್ಲ. ಇದು ಸ್ಥಳೀಯರ ಗಮನಕ್ಕೂ ಬಂದಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಸ್ಥಳೀಯರೇ ಬನ್, ಬಿಸ್ಕತ್ ನೀಡಿದ್ದಾರೆ.
ಕೊನೆಗೆ ವಾರ್ಡನ್‌ಗೆ ಕರೆ ಮಾಡಿ ಕರೆಸಲಾಗಿದ್ದು, ಸುಮಾರು ೧೧ ಗಂಟೆಗೆ ಬಾಗಿಲು ತೆರೆದಿದ್ದಾರೆ ಎನ್ನಲಾಗಿದೆ. ಈ ವೇಳೆ ವಾರ್ಡನ್ ಅವರನ್ನು ಸ್ಥಳೀಯರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ಮಕ್ಕಳು ಇಲ್ಲವೆಂದು ಭಾವಿಸಿ ಬೀಗ ಹಾಕಿ ಹೋಗಿದ್ದಾಗಿ ವಾರ್ಡನ್ ಹೇಳಿದ್ದಾರೆನ್ನಲಾಗಿದೆ. ಆದರೆ, ಎಷ್ಟು ಮಕ್ಕಳು ಇದ್ದಾರೆ? ಅವರಿಗೆ ಊಟೋಪಚಾರದ ವ್ಯವಸ್ಥೆ ಏನು? ಎಂಬಿತ್ಯಾದಿ ಅಂಶಗಳೂ ನಿಮ್ಮ ಗಮನಕ್ಕೆ ಇರುವುದಿಲ್ಲವೇ ಎಂದೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Suicide Case | ಹೆಣ್ಣು ಮಗು ಹುಟ್ಟಿತು ಎಂಬ ಕಾರಣಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ