Site icon Vistara News

Farmers suicide : ಲವ್‌ ಕೇಸಲ್ಲಿ ಸತ್ತಿದ್ದೆಲ್ಲ ರೈತರ ಆತ್ಮಹತ್ಯೆ ಆಗಲ್ಲ, 5 ಲಕ್ಷ ಪರಿಹಾರಕ್ಕೆ ಸುಸೈಡ್ ಜಾಸ್ತಿ ಆಗ್ತಿದೆ ಅಂದ ಸಚಿವ!

Shivananda pateel

ಹಾವೇರಿ:‌ ರಾಜ್ಯದಲ್ಲಿ ಬರಗಾಲದಿಂದ ರೈತರು ಕಂಗೆಟ್ಟಿದ್ದಾರೆ (Farmer suicide), ಬೆಳೆ ಹಾನಿಯಿಂದ ತತ್ತರಿಸಿದ್ದಾರೆ, ಉತ್ಪನ್ನಗಳಿಗೆ ಸರಿಯಾದ ಧಾರಣೆ ಸಿಗದೆ ಸಾಲದ ಸುಳಿಗೆ ಬಿದ್ದಿದ್ದಾರೆ. ಇಂಥ ಹೊತ್ತಿನಲ್ಲಿ ರೈತರು ಹತಾಶರಾಗಿ ಮಾಡಿಕೊಳ್ಳುವ ಆತ್ಮಹತ್ಯೆಯನ್ನು ಸಂಶಯದಿಂದ ನೋಡುವ, ಅವಹೇಳನ ಮಾಡುವ ರೀತಿಯಲ್ಲಿ ಹೇಳಿಕೆ ನೀಡುವ ಮೂಲಕ ಕೃಷಿ ಮಾರುಕಟ್ಟೆ ಸಚಿವ (Agricuture Marketing Minister) ಶಿವಾನಂದ ಪಾಟೀಲ್‌ ಅವರು ವಿವಾದದ ಸುಳಿಗೆ ಸಿಲುಕಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಆ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಶಿವಾನಂದ ಪಾಟೀಲ್‌ ಅವರು ಐದು ಲಕ್ಷ ಪರಿಹಾರ ಘೋಷಣೆ ಬಳಿಕ ರೈತರ ಆತ್ಮಹತ್ಯೆ ಜಾಸ್ತಿ ಆಗುತ್ತಿದೆ, ಪ್ರೇಮ ಪ್ರಕರಣದಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡವರನ್ನು ಕೂಡಾ ಪರಿಹಾರಕ್ಕಾಗಿ ರೈತರ ಆತ್ಮಹತ್ಯೆ ಪಟ್ಟಿಗೆ ಸೇರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಸತ್ತ ಕೂಡಲೇ ರೈತರ ಆತ್ಮಹತ್ಯೆ ಎಂದು ಹೇಳಬೇಡಿ

ಯಾರಾದರೂ ಸತ್ತ ಕೂಡಲೇ ರೈತರ ಆತ್ಮಹತ್ಯೆ ಎಂದು ಷರಾ ಬರೆಯಬೇಡಿ. ಸಾವಿಗೆ ಅವರ ಕೃಷಿ ಹಾನಿ, ಸಾಲಗಳಷ್ಟೇ ಕಾರಣವಾಗಿರುವುದಿಲ್ಲ. ವೈಯಕ್ತಿಕವಾದ ಸಂಗತಿಗಳೂ ಇರುತ್ತವೆ ಎಂದು ಮಾಧ್ಯಮಗಳಿಗೆ ಕೃಷಿ ಸಚಿವರು ಕಿವಿಮಾತು ಹೇಳಿದಾಗ ಈ ವಿವಾದ ಹುಟ್ಟಿಕೊಂಡಿದೆ.

ಹಾವೇರಿ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಇಂದು ನಿನ್ನೆಯದೇನಲ್ಲ. 2020ರಲ್ಲಿ 500 ಜನ ಆತ್ಮಹತ್ಯೆ ಮಾಡಿಕೊಂಡಿದ್ದರು. 2021ರಲ್ಲಿ 595 ಜನ, 2022ರಲ್ಲಿ 651 ಜನ, 2023ರಲ್ಲಿ 412 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಇದು ಈ ಜಿಲ್ಲೆಯ ಸ್ವಾಭಾವಿಕ ಆತ್ಮಹತ್ಯೆಗಳು. ನೀವು ಲವ್ ಕೇಸ್ ನಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನೂ ರೈತ ಆತ್ಮಹತ್ಯೆ ಎಂದು ವರದಿ ಮಾಡಿದ್ದೀರಿ ಎಂದು ಶಿವಾನಂದ ಪಾಟೀಲ್‌ ಹೇಳಿದರು.

ಎಫ್‌ಐಆರ್ ಆದ ತಕ್ಷಣ ನೀವು ರೈತ ಆತ್ಮಹತ್ಯೆ ಎಂದು‌ ವರದಿ ಮಾಡೋದು ತಪ್ಪು. ಹೃದಯಾಘಾತವಾಗಿದ್ದು, ಹಾವು ಕಡಿದು ಸತ್ತಿದ್ದು ರೈತ ಆತ್ಮಹತ್ಯೆ ಎಂದು ಪ್ರಕರಣ ದಾಖಲಾಗಿದೆ. ಎಫ್‌ಎಸ್‌ಎಲ್‌ ವರದಿ ಬರುವವರೆಗೂ ಕಾಯಿರಿ. ಜನರಲ್ಲಿ ಆತಂಕ ಮೂಡಿಸುವ ರೀತಿಯಲ್ಲಿ ವರದಿ ಮಾಡಿದರೆ ಕಷ್ಟ ಎಂದು ಶಿವಾನಂದ ಪಾಟೀಲ್‌ ಹೇಳಿದರು.

ಪರಿಹಾರ ಸಿಗುತ್ತದೆ ಎಂದು ಎಲ್ಲ ಪ್ರಕರಣ ರೈತರ ಆತ್ಮಹತ್ಯೆ ಆಗುತ್ತಿದೆ

ʻʻರಾಜ್ಯ ಸರ್ಕಾರ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ ಬಳಿಕ ರೈತರ ಆತ್ಮಹತ್ಯೆ ಜಾಸ್ತಿ ಆಗುತ್ತಿದೆ. ರೈತ ಆತ್ಮಹತ್ಯೆ ಎಂದು ಕಂಪ್ಲೆಂಟ್ ಕೊಟ್ಟಾಗಲೇ ಪರಿಹಾರ ಸಿಗುತ್ತೆ ಎನ್ನುವ ದುರಾಶೆ ಮನಸ್ಸಿನಲ್ಲಿ ಇರುತ್ತದೆʼʼ ಎಂದು ಹೇಳಿದ ಶಿವಾನಂದ ಪಾಟೀಲ್‌, ʻʻವಿರೇಶ ಕಮಿಟಿ ವರದಿ ಬರುವವರೆಗೂ ರೈತ ಆತ್ಮಹತ್ಯೆ ಕಡಿಮೆ ಇತ್ತು. ಯಾವಾಗ 2015ರಲ್ಲಿ ಐದು ಲಕ್ಷ ರೂ. ಪರಿಹಾರ ಕೊಡಲು ಪ್ರಾರಂಭ ಮಾಡಿದೆವೋ ಅಂದಿನಿಂದ ವರದಿ ಆಗೋದು ಹೆಚ್ಚಾಗುತ್ತಿದೆʼʼ ಎಂದು ಹೇಳಿದರು.

5 ಲಕ್ಷ ಪರಿಹಾರ ಘೋಷಣೆ ಬಳಿಕ ರೈತರ ಆತ್ಮಹತ್ಯೆ ಜಾಸ್ತಿ ಆಗುತ್ತಿದೆ. ಪರಿಹಾರ ಸಿಗಬಹುದು ಎನ್ನುವ ಆಸೆಯಿಂದ ರೈತ ಆತ್ಮಹತ್ಯೆ ಎಂದು ತಪ್ಪು ಪ್ರಕರಣ ದಾಖಲಿಸುತ್ತಿದ್ದಾರೆ. 2015ಕ್ಕಿಂತ ಮುಂಚೆ ರೈತರ ಆತ್ಮಹತ್ಯೆ ವರದಿ ಕಡಿಮೆ ಆಗ್ತಿತ್ತು, ಪರಿಹಾರದ ಮೊತ್ತವು ಕಡಿಮೆ ಇತ್ತು ಎಂದು ವಿವರಿಸಿದರು.

ಇದನ್ನೂ ಓದಿ : Farmer suicide : ಸಹಕಾರ ಬ್ಯಾಂಕ್‌ನಿಂದ ಸಾಲ ಪಾವತಿಗೆ ನೋಟಿಸ್‌; ಆತಂಕಗೊಂಡು ರೈತ ಆತ್ಮಹತ್ಯೆ

50 ಲಕ್ಷ ಕೊಡ್ತೀವಿ, ಆತ್ಮಹತ್ಯೆ ಮಾಡಿಕೊಳ್ಳಿ: ಸಚಿವರಿಗೆ ಸವಾಲು

ಈ ನಡುವೆ ಸಚಿವರ ಉದ್ಧಟತನದ ಹೇಳಿಕೆಗೆ ಆಕ್ರೋಶ ಭುಗಿಲೆದ್ದಿದೆ. ಹಾವೇರಿಯಲ್ಲಿ ಸಿಡಿದೆದ್ದ ರೈತರು ಸಚಿವರ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಶಿವಾನಂದ ಪಾಟೀಲ್ ಅವರನ್ನು ಕೈ ಬಿಡಬೇಕು ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದ್ದಾರೆ.

ʻʻರೈತ ಸಂಘದಿಂದ 50 ಲಕ್ಷ ರೂ. ಪರಿಹಾರ ಕೊಡಲು ನಿರ್ಧಾರ ಮಾಡಿದ್ದೇವೆ. ಈಗ ಶಿವಾನಂದ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳಲಿʼʼ ಎಂದು ಹೇಳಿರುವ ಅವರು, ಯಾವುದೇ ರೈತರು ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ ಎಂದರು.

ಇನ್ನು ಮುಂದೆ ಶಿವಾನಂದ ಪಾಟೀಲ್ ಹೋದಲ್ಲೆಲ್ಲ ಘೇರಾವ್ ಹಾಕಲಾಗುವುದು ಎಂದು ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಕೆ ನೀಡಿದರು.

Exit mobile version