ನವ ದೆಹಲಿ: ಭೂತಾನ್‌ನಿಂದ ಪ್ರತಿ ವರ್ಷ 17 ಸಾವಿರ ಮೆಟ್ರಿಕ್ ಟನ್ ಹಸಿ ಅಡಕೆಯನ್ನು ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರವು ಅನುಮತಿ ನೀಡಿದ್ದು, ಈ ಸಂಬಂಧ ಬುಧವಾರ ಅಧಿಸೂಚನೆ ಹೊರಡಿಸಿದೆ. ಅಡಕೆ ಆಮದನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ದೇಶದ ಅಡಕೆ ಬೆಳೆಗಾರರು ಒತ್ತಾಯಿಸುತ್ತಿರುವ ಸಂದರ್ಭದಲ್ಲಿಯೇ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿರುವುದು ಆಶ್ಚರ್ಯ ಮೂಡಿಸಿದೆ.
ಕನಿಷ್ಠ ಆಮದು ಬೆಲೆಯ (ಎಂಐಸಿ) ಷರತ್ತು ಇಲ್ಲದೇ 17 ಸಾವಿರ ಮೆಟ್ರಿಕ್ ಟನ್ ಹಸಿ ಅಡಕೆಯನ್ನು ಮುಕ್ತವಾಗಿ ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. 2006ರಲ್ಲಿಜಾರಿಗೆ ಬಂದಿದ್ದ ದಕ್ಷಿಣ ಏಷ್ಯಾ ಮುಕ್ತ ವ್ಯಾಪಾರ ಒಪ್ಪಂದ(ಸಫ್ಟಾ)ದ ಅಡಿಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಕಳ್ಳ ಮಾರ್ಗಗಳಲ್ಲಿ ಕಳಪೆ ಅಡಕೆಯು ವಿದೇಶದಿಂದ ಆಮದಾಗುತ್ತಿದ್ದುದ್ದರಿಂದ ದೇಶೀಯ ಅಡಕೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತಗೊಂಡು ಬೆಳೆಗಾರರು ಆತಂಕ ಪಡುತ್ತಿರುವ ಹೊತ್ತಿನಲ್ಲಿಯೇ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿರುವುದು ಬೆಳೆಗಾರರಿಗೆ ಅಘಾತ ತಂದಿದೆ. ಕಳೆದ ಎರಡೂವರೆ ದಶಕಗಳಿಂದ ಅಡಕೆ ಆಮದಿನಿಂದಾಗಿ ಮಾರುಕಟ್ಟೆ ಏರಿಳಿತವನ್ನು ಕಾಣುತ್ತಲೇ ಇದೆ. ಈ ಬಗ್ಗೆ ಆಗಾಗ ಬೆಳೆಗಾರರ ಸಂಘಟನೆಗಳು ಕೇಂದ್ರ ಸರ್ಕಾರದ ಗಮನ ಸೆಳೆಯುತ್ತಲೇ ಬಂದಿವೆ.
ಪರಿಣಾಮವಾಗಿ ಕೇಂದ್ರವು ಅಡಕೆಯ ಕನಿಷ್ಠ ಆಮದು ಬೆಲೆಯನ್ನು (ಎಂಐಪಿ) 2015ರಲ್ಲಿ 52 ರೂ.ಗಳಿಂದ 162 ರೂ.ಗಳಿಗೆ, 2017ರ ಜನವರಿಯಲ್ಲಿ 251 ರೂ.ಗಳಿಗೆ ಏರಿಸಿತ್ತು. ಈ ವರ್ಷ ಆಮದು ಸುಂಕವನ್ನು ಶೇ.100ರಷ್ಟು ವಿಧಿಸಲಾಗುತ್ತಿದೆ. ಆದರೂ 2006ರಲ್ಲಿ ಜಾರಿಗೆ ಬಂದಿದ್ದ ದಕ್ಷಿಣ ಏಷ್ಯಾ ಮುಕ್ತ ವ್ಯಾಪಾರ ಒಪ್ಪಂದ(ಸಫ್ಟಾ)ದ ಅಡಿಯಲ್ಲಿ ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾದಿಂದ ಮುಕ್ತವಾಗಿ ಅಡಕೆ ಆಮದು ಮಾಡಿಕೊಳ್ಳಲು ಅವಕಾಶವಿರುವುದರಿಂದ ಈ ದೇಶಗಳ ಅಡಕೆ ಭಾರತ ಮಾರುಕಟ್ಟೆಗೆ ಹರಿದು ಬರುತ್ತಲೇ ಇದೆ. ಕನಿಷ್ಠ ಆಮದು ಧಾರಣೆಯನ್ನು ಹೆಚ್ಚಿಸಿದರೂ ಪ್ರಯೋಜನವಾಗದೇ ಇದ್ದಾಗ 2018ರ ಜುಲೈನಲ್ಲಿ “251 ರೂ.ಗಳಿಗಿಂತ ಕಡಿಮೆ ಬೆಲೆಯ ಅಡಕೆಯನ್ನು ಆಮದು ಮಾಡಿಕೊಳ್ಳುವಂತಿಲ್ಲʼʼಎಂದು ಕೇಂದ್ರ ಆದೇಶ ಕೂಡ ಹೊರಡಿಸಿತ್ತು.
ಆದರೆ ಈಗ ಕೇಂದ್ರ ಸರ್ಕಾರವೇ ಕನಿಷ್ಠ ಆಮದು ಬೆಲೆ (ಎಂಐಪಿ) ಇಲ್ಲದೇ ಭೂತಾನ್‌ನಿಂದ ಅಡಕೆ ಆಮದಿಗೆ ಅವಕಾಶಮಾಡಿಕೊಟ್ಟಿದೆ. ಈ ಸಂಬಂಧ ವಿದೇಶಾಂಗ ವ್ಯಾಪಾರ ನಿರ್ದೇಶನಾಲಯ (DGFT) ಅಧಿಸೂಚನೆ ಹೊರಡಿಸಿದ್ದು, ಭೂತಾನ್‌ನಿಂದ ಭೂಮಾರ್ಗದಲ್ಲಿ, ಅದರಲ್ಲೂ ಜೈಗಾನ್ (INJIGB) ಮಾರ್ಗದಲ್ಲಿ ಮಾತ್ರ ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
“17ಸಾವಿರ ಮೆಟ್ರಿಕ್ ಟನ್ ಹೊಸ ಹಸಿರು ಅಡಕೆಯನ್ನು ಯಾವುದೇ ಆಮದು ಶುಲ್ಕವಿಲ್ಲದೆ, ಪ್ರತಿ ವರ್ಷ ಆಮದು ಮಾಡಿಕೊಳ್ಳಬಹುದಾಗಿದೆ. ಆಮದು ಮಾಡಿಕೊಳ್ಳುವವರು ವಿದೇಶಾಂಗ ವ್ಯಾಪಾರ ನಿರ್ದೇಶನಾಲಯ ನೀಡುವ ಅಧಿಕೃತ ಪರವಾನಿಗೆಯನ್ನು (ರಿಜಿಸ್ಟೇಷನ್ ಸರ್ಟಿಫಿಕೇಟ್ -ಆರ್‌ಸಿ) ಹೊಂದಿರಬೇಕುʼʼ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಕೇಂದ್ರ ಸರ್ಕಾರದ ಅಧಿಸೂಚನೆ ಇಲ್ಲಿದೆ:
ಪ್ರಸಕ್ತ ಸಾಲಿನ ( 2022-23) ಸಾಲಿನ ದ್ವಿತೀಯ ಅರ್ಧದಲ್ಲಿ 8,500 ಮೆಟ್ರಿಕ್ ಟನ್ ಆಮದು ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಮುಂದಿನ ಆರ್ಥಿಕ ಸಾಲಿನಲ್ಲಿ 17,000 ಸಾವಿರ ಮೆಟ್ರಿಕ್ ಟನ್ ಆಮದು ಮಾಡಿಕೊಳ್ಳಬಹುದು. ರಿಜಿಸ್ಟೇಷನ್ ಸರ್ಟಿಫಿಕೇಟ್ ಅನ್ನು ಪ್ರತಿ ಆರು ತಿಂಗಳಿಗೊಮ್ಮೆ ವಿತರಿಸಲಾಗುತ್ತದೆ. ಒಮ್ಮೆ ಪಡೆದ ಆರ್‌ಸಿಯಲ್ಲಿ ಒಬ್ಬ ವ್ಯಾಪಾರಿಯು 500ಮೆಟ್ರಿಕ್ ಟನ್ ಅಡಕೆ ಆಮದು ಮಾಡಿಕೊಳ್ಳಬಹುದಾಗಿರುತ್ತದೆ.
ಈಗಾಗಲೇ ಅಡಕೆ ಆಮದಿಗೆ ನಿರ್ಬಂಧ ಇದ್ದರೂ ಈಶಾನ್ಯ ರಾಜ್ಯಗಳ ಮೂಲಕ ಕಳಪೆ ಅಡಕೆ ಆಮದಾಗುತ್ತಲೇ ಇದೆ. ಅಧಿಕೃತ ಮಾಹಿತಿ ಪ್ರಕಾರವೇ 2021-22ನೇ ಸಾಲಿನಲ್ಲಿ ಕೇಂದ್ರೀಯ ಸುಂಕ ಇಲಾಖೆಯು ಸುಮಾರು 132.70 ಕೋಟಿ ಮೌಲ್ಯದ 9.7 ಲಕ್ಷ ಕೇಜಿ ಅಡಕೆಯನ್ನು ವಶಪಡಿಸಿಕೊಂಡಿದೆ. ಇದು ಯಾವ ಪ್ರಮಾಣದಲ್ಲಿ ಕಳ್ಳ ಮಾರ್ಗದಲ್ಲಿ ಅಡಕೆ ಆಮದಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಹೀಗಿದ್ದರೂ ಯಾವುದೇ ಸುಂಕವಿಲ್ಲದೆ ಅಡಕೆ ಆಮದಿಗೆ ಈಗ ಅವಕಾಶ ಮಾಡಿಕೊಟ್ಟಿರುವುದರಿಂದ ಅಡಕೆ ಮಾರುಕಟ್ಟೆಯ ಮೇಲೆ ಇದು ಯಾವ ರೀತಿಯ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಾಗಿದೆ.
ಇದನ್ನು ಓದಿ | ಅಡಕೆ ಅಕ್ರಮ ಆಮದಿಗೆ ಕಡಿವಾಣ ಹಾಕಿ: ಪ್ರಧಾನಿಗೆ ಡಾ. ವೀರೇಂದ್ರ ಹೆಗ್ಗಡೆ ಪತ್ರ