ಐಜ್ವಾಲ: ಅಡಕೆ ಆಮದು ಸುಂಕವನ್ನು ಹೆಚ್ಚಿಸಿದ್ದರೂ ವಿದೇಶದಿಂದ ಕಳಪೆ ಅಡಕೆ ಆಮದಾಗುವುದು ನಿಂತಿಲ್ಲ. ಕಳ್ಳ ಮಾರ್ಗದ ಮೂಲಕ ಮುಖ್ಯವಾಗಿ ಮ್ಯಾನ್ಮಾರ್‌ನಿಂದ ಈಶಾನ್ಯ ರಾಜ್ಯಗಳಿಗೆ ಅಡಕೆ (areca) ಸರಬರಾಜಾಗುತ್ತಲೇ ಇದೆ. ಇದು ದೇಶೀಯ ಅಡಕೆ ಮಾರುಕಟ್ಟೆಗೆ ದೊಡ್ಡ ಹೊಡೆತ ನೀಡುವ ಆತಂಕ ಮತ್ತೆ ಎದುರಾಗಿದೆ.
ಅಧಿಕೃತ ಮಾಹಿತಿ ಪ್ರಕಾರವೇ 2021-22ನೇ ಸಾಲಿನಲ್ಲಿ ಕೇಂದ್ರೀಯ ಸುಂಕ ಇಲಾಖೆಯು ಸುಮಾರು 132.70 ಕೋಟಿ ಮೌಲ್ಯದ 9.7 ಲಕ್ಷ ಕೇಜಿ ಅಡಿಕೆಯನ್ನು ವಶಪಡಿಸಿಕೊಂಡಿದೆ. ಇದು ಯಾವ ಪ್ರಮಾಣದಲ್ಲಿ ಕಳ್ಳ ಮಾರ್ಗದಲ್ಲಿ ಅಡಿಕೆ ಆಮದಾಗುತ್ತಿದೆ ಎಂಬುದಕ್ಕೆ ದಿಕ್ಸೂಚಿಯಾಗಿದೆ.
ಈಶಾನ್ಯ ರಾಜ್ಯಗಳ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಿರುವ ಈ ಕಳ್ಳ ವ್ಯವಹಾರದಲ್ಲಿ ಸ್ಥಳೀಯ ರಾಜಕಾರಣಿಗಳು, ಅಧಿಕಾರಿಗಳು ಶಾಮೀಲಾಗಿದ್ದಾರೆ. ಕಳೆದ ಜನವರಿಯಲ್ಲಿ ಮಿಜೋರಾಂನ ಗಡಿಯ ಜಿಲ್ಲೆ ಚಂಪಾಯಿಯಲ್ಲಿ ಅಡಕೆಯನ್ನು ಕಳ್ಳ ಮಾರ್ಗದ ಮೂಲಕ ಆಮದು ಮಾಡಿಕೊಳ್ಳುವುದರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದ್ದ ಜಿಲ್ಲಾಧಿಕಾರಿ ಸಿ ಟಿ ಜುಆಲಿ ಅವರನ್ನು ಮಿಜೋರಾಂ ಸರ್ಕಾರವೇ ವರ್ಗಾವಣೆ ಮಾಡಿತ್ತು. ಇದು ಅಡಕೆ (areca) ಆಮದು ಮಾಫಿಯಾ ಎಷ್ಟು ಬಲಿಷ್ಠವಾಗಿದೆ ಎಂಬುದಕ್ಕೆ ಉದಾಹರಣೆಯಾಗಿದೆ.
ಕಳ್ಳ ಆಮದಿಗೆ ಕೊನೆಯೇ ಇಲ್ಲ
ಕಳಪೆ ಅಡಕೆಯು ವಿದೇಶದಿಂದ ಆಮದಾಗುತ್ತಿದ್ದುದ್ದರಿಂದ ದೇಶೀಯ ಅಡಕೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತಗೊಂಡು ಬೆಳೆಗಾರರು ಸಂಕಷ್ಟಕ್ಕೀಡಾಗುವುದು ಹೊಸ ವಿಷಯವೇನೂ ಅಲ್ಲ. ಕಳೆದ ಎರಡೂವರೆ ದಶಕಗಳಿಂದ ಇದೇ ಪರಿಸ್ಥಿತಿ ಇದ್ದು, ಇದರಿಂದ ಅಡಕೆ ಬೆಲೆ ನಿರಂತವಾಗಿ ಷೇರುಮಾರುಕಟ್ಟೆಯಂತೆ ಏರಿಳಿತ ಕಾಣುತ್ತಲೇ ಇದೆ. ಈ ಬಗ್ಗೆ ಆಗಾಗ ಬೆಳೆಗಾರರ ಸಂಘಟನೆಗಳು ಕೇಂದ್ರ ಸರ್ಕಾರದ ಗಮನ ಸೆಳೆಯುತ್ತಲೇ ಬಂದಿವೆ.
ಪರಿಣಾಮವಾಗಿ ಕೇಂದ್ರವು ಅಡಕೆಯ ಕನಿಷ್ಠ ಆಮದು ಬೆಲೆಯನ್ನು (ಎಂಐಪಿ) 2015ರಲ್ಲಿ 52 ರೂ.ಗಳಿಂದ 162 ರೂ.ಗಳಿಗೆ, 2017ರ ಜನವರಿಯಲ್ಲಿ251 ರೂ.ಗಳಿಗೆ ಏರಿಸಿತ್ತು. ಈಗ ಆಮದು ಸುಂಕವನ್ನು ಶೇ.100ರಷ್ಟು ವಿಧಿಸಲಾಗುತ್ತಿದೆ.
ಆದರೂ 2006ರಲ್ಲಿಜಾರಿಗೆ ಬಂದಿದ್ದ ದಕ್ಷಿಣ ಏಷ್ಯಾ ಮುಕ್ತ ವ್ಯಾಪಾರ ಒಪ್ಪಂದ(ಸಫ್ಟಾ)ದ ಅಡಿಯಲ್ಲಿ ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾದಿಂದ ಮುಕ್ತವಾಗಿ ಅಡಕೆ ಆಮದು ಮಾಡಿಕೊಳ್ಳಲು ಅವಕಾಶವಿರುವುದರಿಂದ ಈ ದೇಶಗಳ ಅಡಕೆ ಭಾರತ ಮಾರುಕಟ್ಟೆಗೆ ಹರಿದು ಬರುತ್ತಲೇ ಇತ್ತು. ಕನಿಷ್ಠ ಆಮದು ಧಾರಣೆಯನ್ನು ಹೆಚ್ಚಿಸಿದರೂ ಪ್ರಯೋಜನವಾಗದೇ ಇದ್ದಾಗ 2018ರ ಜುಲೈನಲ್ಲಿ “251 ರೂ.ಗಳಿಗಿಂತ ಕಡಿಮೆ ಬೆಲೆಯ ಅಡಕೆಯನ್ನು ಆಮದು ಮಾಡಿಕೊಳ್ಳುವಂತಿಲ್ಲʼʼಎಂದು ಕೇಂದ್ರ ಆದೇಶ ಕೂಡ ಹೊರಡಿಸಿತ್ತು.
ಇದರಿಂದ ಆಧಿಕೃತವಾಗಿ ವಿದೇಶಿ ಅಡಕೆ ಆಮದಿನ ಪ್ರಮಾಣ ಕಡಿಮೆಯಾಗುತ್ತಾ ಬಂದಿದ್ದರೂ ಕಳ್ಳ ಮಾರ್ಗದಿಂದ ಕಳಪೆ ಅಡಕೆ ಆಮದಾಗುವುದು ಸಂಪೂರ್ಣವಾಗಿ ನಿಂತಿಲ್ಲ.
ಕೋರ್ಟ್ ನಿಂದ ಕ್ರಮ
ಕಳಪೆ ಅಡಕೆ ಪ್ರಮಾಣ ಅಧಿಕವಾಗಿ ದೇಶೀಯ ಅಡಕೆ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ ಸಾಮಾನ್ಯವಾಗಿ ಹೋಗಿತ್ತು. ಇತ್ತೀಚೆಗೆ ಸ್ವಲ್ಪ ಸ್ಥಿರಗೊಂಡು, ಅಡಕೆ ಬಂಗಾರದ ಬೆಲೆಯೂ ಬಂದಿತ್ತು. ಇದಕ್ಕೆ ಕಾರಣವಾಗಿದ್ದು ಕಳಪೆ ಅಡಕೆ ಆಮದಿನ ವಿರುದ್ಧ ಕೋರ್ಟ್ ನ ಸೂಚನೆ ಮೇರೆಗೆ ಸಿಬಿಐ ತೆಗೆದುಕೊಂಡಿದ್ದ ಕ್ರಮಗಳು.
ಏನಿದು ವಿಷಯ: 2016ರಲ್ಲಿಮಹಾರಾಷ್ಟ್ರದ ನಾಗ್‌ಪುರದಲ್ಲಿರೈಲ್ವೇ ಪೊಲೀಸರು 23 ವ್ಯಾಗನ್ ಅಕ್ರಮ ಕಳಪೆ ಗುಣಮಟ್ಟದ ಆಮದು ಅಡಕೆಯನ್ನು ವಶಪಡಿಸಿಕೊಂಡಿದ್ದರು. ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯದಿದ್ದಾಗ ಡಾ.ಮೆಹಬೂಬ್ ಎಂಕೆ ಚಿಂತನ್‌ವಾಲಾ ಎಂಬವರು ಹೈಕೋರ್ಟ್‌ನಲ್ಲಿಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದರು. ಅತ್ಯಂತ ಕಳಪೆ ದರ್ಜೆಯ ಅಡಕೆ ವಿದೇಶದಿಂದ ಕಳ್ಳ ಮಾರ್ಗದಲ್ಲಿ ಆಮದಾಗುತ್ತಿದ್ದು, ಅನಾಮಧೇಯರು ಈ ಅಕ್ರಮ ಚಟುವಟಿಕೆಯಲ್ಲಿಭಾಗಿಯಾಗಿದ್ದಾರೆ. ಇದರಿಂದ ಪ್ರತಿ ವರ್ಷ ಸರಕಾರಕ್ಕೆ 15 ಸಾವಿರ ಕೋಟಿ ರೂ. ಆಮದು ಸುಂಕ ನಷ್ಟವಾಗುತ್ತಿದೆ ಎಂದು ಅವರು ಅರ್ಜಿಯಲ್ಲಿಹೇಳಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್‌ನ ನಾಗಪುರ್ ಪೀಠ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು.
ಇದನ್ನೂ ಓದಿ| ನಿಮ್ಮ ಜಮೀನು ಸ್ಕೆಚ್ ನೀವೇ ಮಾಡಿಕೊಳ್ಳಿ: ಕಂದಾಯ ಇಲಾಖೆಯಿಂದ ಸ್ವಾವಲಂಬಿ ಆ್ಯಪ್
2021ರ ಮಾರ್ಚ್‌ನಲ್ಲಿಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಸಿಬಿಐ, ಕೇಂದ್ರ ಅಬಕಾರಿ ಮತ್ತು ಸುಂಕ ಇಲಾಖೆಯ ಅಧಿಕಾರಿಗಳು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕೋರ್ಟ್‌ಗೆ ತಿಳಿಸಿತ್ತು. ಆದರೆ ಅಧಿಕಾರಿಗಳ ಹೆಸರನ್ನು ತಿಳಿಸಿರಲಿಲ್ಲ. ಅಧಿಕಾರಿಗಳ ಮಾಹಿತಿಯನ್ನೂ ನೀಡಬೇಕು, ಕಟ್ಟುನಿಟ್ಟಿನ ತನಿಖೆ ನಡೆಸಬೇಕು ಎಂದು ಕೋರ್ಟ್ ಸಿಬಿಐಗೆ ಸೂಚಿಸಿತ್ತು. ಇದರ ಪರಿಣಾಮ 2021ರ ಜೂನ್ 29ರಂದು ಸಿಬಿಐ ಮಂಬಯಿ, ನಾಗ್‌ಪುರ್ ಮತ್ತು ಅಹ್ಮದಾಬಾದ್‌ನ 19 ಕಡೆ ದಾಳಿ ನಡೆಸಿ, ಅಕ್ರಮ ಅಡಕೆ ಆಮದಿಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿತ್ತು. ಅಲ್ಲದೆ ಈ ಹಗರಣದಲ್ಲಿಭಾಗಿಯಾಗುತ್ತಿದ್ದ ಅಧಿಕಾರಿಗಳಿಗೂ ಬಿಸಿ ಮುಟ್ಟಿಸಿತ್ತು. ಪರಿಣಾಮ ಅಡ್ಡ ಹಾದಿಯಲ್ಲಿಅಡಕೆ ತರಿಸಿಕೊಳ್ಳುತ್ತಿದ್ದ ವ್ಯಾಪಾರಿಗಳೆಲ್ಲಾಹೆದರಿದರು. ತನಿಖೆ ವೇಗ ಪಡೆಯುತ್ತಿದ್ದಂತೆ ಅಕ್ರಮವಾಗಿ ವ್ಯಾಪಾರ ಮಾಡುತ್ತಿದ್ದವರೆಲ್ಲಾಬಿಲ ಸೇರಿದರು. ಹೆಚ್ಚು ಕಡಿಮೆ ಸಂಪೂರ್ಣವಾಗಿ ಆಮದು ಸ್ಥಗಿತಗೊಂಡಿತು. ದೇಶಿಯ ಅಡಕೆಗೆ ಸಹಜವಾಗಿಯೇ ಬೇಡಿಕೆ ಹೆಚ್ಚಾಗತೊಡಗಿತ್ತು.
ಈಗ ಮತ್ತೊಂದು ಪಿಐಎಲ್
ಕಳೆದ ಕೆಲವು ತಿಂಗಳಿನಿಂದ ಮ್ಯಾನ್ಮಾರ್‌ನಿಂದ ಕಳಪೆ ಅಡಕೆ ಆಮದಾಗುವುದು ಹೆಚ್ಚಿದ್ದು, ಮಿಜೋರಾಂನ ಚಂಪಾಯಿ ಜಿಲ್ಲೆಯಲ್ಲಿಯೇ ಒಟ್ಟು 40 ಕಳ್ಳ ಮಾರ್ಗಗಳ ಮೂಲಕ ಅಡಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಮ್ಯಾನ್ಮಾರ್, ಇಂಡೋನೇಷ್ಯಾ ಮತ್ತಿತರ ರಾಷ್ಟ್ರಗಳಿಂದ ಈ ಅಡಕೆ ಬರುತ್ತಿದ್ದು, ಭಾರತಕ್ಕೆ ಬಂದ ಕೂಡಲೇ ಅದಕ್ಕೆ ಸ್ಥಳೀಯ ಅಡಕೆಯ ರೂಪ ನೀಡಿ, ದೇಶದ ಪ್ರಮುಖ ಮಾರುಕಟ್ಟೆಗೆ ರವಾನಿಸಲಾಗುತ್ತಿದೆ.
ಈ ಕಳ್ಳವ್ಯವಹಾರದಿಂದ ಬೇಸತ್ತಿರುವ ಮಿಜೋರಾಂನ ಹೆಸರಾಂತ ಸಾಮಾಜಿಕ ಕಾರ್ಯಕರ್ತೆ ವನ್ರಾಮುಚುವಾಂಗಿ ಗುವಾಹತಿ ಹೈಕೋರ್ಟ್, ಇದರ ತಡೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚಿಸಬೇಕೆಂದು ಗುವಾಹತಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ (ಪಿಐಎಲ್-PIL) ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆಗೆ ಕೋರ್ಟ್ ಒಪ್ಪಿಕೊಂಡಿದ್ದು, ಒಟ್ಟು 37 ಮಂದಿ ಈ ಅಕ್ರಮಕ್ಕೆ ಹೊಣೆಗಾರರು ಎಂದು ಪಿಐಎಲ್‌ನಲ್ಲಿ ಹೇಳಲಾಗಿದೆ. ಈ ಹಿಂದೆ ಕೂಡ ಕಳಪೆ ಅಡಕೆ ಆಮದನ್ನು ನಿಯಂತ್ರಿಸಬೇಕೆಂದು ವನ್ರಾಮುಚುವಾಂಗಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು.
ನ್ಯಾಯಾಲಯ ಅರ್ಜಿಯ ವಿಚಾರಣೆ ನಡೆಸಿ, ಈ ಹಿಂದಿನಂತೆ ಸೂಕ್ತ ಕ್ರಮಕ್ಕೆ ಸೂಚಿಸಿದರೆ ಮೀಜೋರಾಂ ಮೂಲಕ ಕಳಪೆ ಅಡಕೆ ಆಮದಾಗುವುದು ತಪ್ಪಿ, ದೇಶೀಯ ಅಡಕೆ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರವಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.