ಬೆಂಗಳೂರು: ಮಾಹಾರಾಷ್ಟ್ರದ ನಾಗಪುರ್ ಮತ್ತು ಈಶಾನ್ಯ ರಾಜ್ಯಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸಿಬಿಐನ ದಾಳಿಗಳ ನಡುವೆಯೂ ಕಳ್ಳ ಮಾರ್ಗದ ಮೂಲಕ ನಿರಂತರವಾಗಿ ಕಳಪೆ ವಿದೇಶಿ ಅಡಿಕೆ ಆಮದಾಗುತ್ತಲೇ ಇದೆ (Areca News). ಕಳೆದ ಶನಿವಾರ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮೇಘಾಲಯದಲ್ಲಿ 11,000 ಕೆಜಿ ಒಣ ಅಡಿಕೆಯನ್ನು ವಶಪಡಿಸಿಕೊಂಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
ಡಿಸೆಂಬರ್‌ನಲ್ಲಿ ಜಾರಿ ನಿರ್ದೇಶನಾಲಯವು ನಾಗಪುರ್‌ನ 17ಸ್ಥಳಗಳಲ್ಲಿ ದಾಳಿ ನಡೆಸಿ, ಅಕ್ರಮವಾಗಿ ವಿದೇಶದಿಂದ ಆಮದು ಮಾಡಿಕೊಂಡಿದ್ದ 11.50 ಕೋಟಿ ಮೌಲ್ಯದ 290 ಮೆಟ್ರಿಕ್ ಟನ್ ಅಡಿಕೆಯನ್ನು ವಶಪಡಿಸಿಕೊಂಡಿತ್ತು. ಇದರ ಬೆನ್ನಲ್ಲೇ ಅಲ್ಲಿಯ ಕುಖ್ಯಾತ ಅಡಿಕೆ ಸ್ಮಗ್ಲರ್ ಜಸ್‌ಬಿರ್ ಸಿಂಗ್ ಚತ್ವಾಲರನ್ನು ಅವರ ಸಹಚರರೊಂದಿಗೆ ಅಸ್ಸಾಂನ ಪೊಲೀಸರು ಬಂಧಿಸಿದ್ದರು. ಆದರೂ ಅಕ್ರಮವಾಗಿ ಅಡಿಕೆ ಆಮದಾಗುವುದು ಮಾತ್ರ ನಿಂತಿಲ್ಲ.
ಕಳೆದ ಶುಕ್ರವಾರ ಅಸ್ಸಾಂನಲ್ಲಿ ಮ್ಯಾನ್ಮಾರ್‌ನಿಂದ ಆಯಿಲ್ ಟ್ಯಾಂಕರ್‌ನಲ್ಲಿ ಅಕ್ರಮವಾಗಿ ತಂದಿದ್ದ ಎರಡು ಸಾವಿರ ಕೆಜಿ ಅಡಿಕೆಯನ್ನು ವಶಪಡಿಸಿಕೊಂಡ ಸ್ಥಳೀಯ ಪೊಲೀಸರು ಒಬ್ಬಾತನನ್ನು ಬಂಧಿಸಿದ್ದರು. ಇದರ ಬೆನ್ನಲ್ಲೇ ಮೇಘಾಲಯದಲ್ಲಿ ಮೂರು ಲಾರಿಗಳಲ್ಲಿ ತರಲಾಗುತ್ತಿದ್ದ 11,000 ಕೆಜಿ ಒಣ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಮೂರು ಲಾರಿಗಳ ಚಾಲಕರೂ ಓಡಿ ನಾಪತ್ತೆಯಾಗಿದ್ದಾರೆ ಎಂದು ಬಿಎಸ್‌ಎಫ್ ಹೇಳಿದೆ. ಹೀಗೆ ಪ್ರತಿನಿತ್ಯ ಈಶಾನ್ಯ ರಾಜ್ಯಗಳ ಒಂದಲ್ಲಾ ಒಂಡು ಕಡೆ ವಿದೇಶಿ ಅಡಿಕೆಯನ್ನು ಅಕ್ರಮವಾಗಿ ತರುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅದರೆ ಸಿಕ್ಕಿ ಬೀಳದೇ, ಭದ್ರತಾಪಡೆಗಳೊಂದಿಗೆ ʼಹೊಂದಾಣಿಕೆʼ ಮಾಡಿಕೊಂಡು ಸಾವಿರಾರು ಟನ್ ಅಡಿಕೆ ಆಮದಾಗುತ್ತಿದೆ ಎಂದು ಹೇಳಲಾಗುತ್ತಿದೆ.
“ಅಕ್ರಮ ಅಡಿಕೆ ಸಾಗಾಣಿಕೆ ಮಾಫಿಯಾವು ರಾಜಕೀಯವಾಗಿಯೂ ಪ್ರಬಲವಾಗಿದೆ. ಇದರ ನಿಯಂತ್ರಣಕ್ಕೆ ಮುಂದಾಗುವ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಲಾಗುತ್ತದೆ. ಈಶಾನ್ಯ ರಾಜ್ಯಗಳ ಸರ್ಕಾರದ ಮಟ್ಟದಲ್ಲಿ ಈ ಮಾಫಿಯಾ ಕೆಲಸ ಮಾಡುವಷ್ಟರ ಮಟ್ಟಿಗೆ ಬೆಳೆದಿದೆ. ಕೇವಲ ಒಂದೆರಡು ಪ್ರಕರಣಗಳಲ್ಲಿ ಮಾತ್ರ ವಶಪಡಿಸಿಕೊಳ್ಳುವ ನಾಟಕ ನಡೆಯುತ್ತಿದೆ. ಈ ಬಗ್ಗೆ ಸಮಗ್ರ ಮಾಹಿತಿಯನ್ನು ನಾನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇನೆ.ʼʼ ಎಂದು ಅಕ್ರಮವಾಗಿ ಅಡಿಕೆ ಆಮದು ಮಾಡಿಕೊಳ್ಳುವುದರ ವಿರುದ್ಧ ದಾಖಲೆಗಳೊಂದಿಗೆ ನ್ಯಾಯಾಲಯದ ಮೆಟ್ಟಿಲೇರಿರುವ ನಾಗಪುರ್‌ನ ಹೋಮಿಯೋಪತಿ ವೈದ್ಯ ಡಾ. ಮೆಹಬೂಬ್ ಚಿಮ್ತನವಾಲಾ ಹೇಳಿದ್ದಾರೆ.
ಒಟ್ಟಾರೆಯಾಗಿ ಅಕ್ರಮವಾಗಿ ಈಶಾನ್ಯ ರಾಜ್ಯಗಳ ಗಡಿಯುದ್ಧಕ್ಕೂ ವಿದೇಶದಿಂದ ಅಡಿಕೆ ಆಮದಾಗುತ್ತಲೇ ಇದೆ. ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳದಿದ್ದರೆ ದೇಶೀಯ ಮಾರುಕಟ್ಟೆಗೆ ದೊಡ್ಡ ಹೊಡೆತ ಬೀಳಲಿದೆ.
ಬೆಲೆ ಕುಸಿತಕ್ಕೆ ವಿದೇಶಿ ಅಡಿಕೆ ಕಾರಣವಲ್ಲ ಎಂದ ಕೇಂದ್ರ
ಈ ನಡುವೆ ಕೇಂದ್ರ ಸರ್ಕಾರವು ದೇಶೀಯ ಅಡಿಕೆ ಮಾರುಕಟ್ಟೆಯ ಮೇಲೆ ಆಮದು ಅಡಿಕೆಯು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ. ದೇಶದಲ್ಲಿ ಒಟ್ಟಾರೆ ಉತ್ಪಾದನೆಯಾಗುತ್ತಿರುವ ಅಡಿಕೆಗೆ ಹೋಲಿಸಿದರೆ ಕೇವಲ ಶೇ.2 ರಷ್ಟು ಅಡಿಕೆ ಮಾತ್ರ ವಿದೇಶದಿಂದ ಆಮದಾಗುತ್ತಿದೆ. ಹೀಗಾಗಿ ಇದು ದೇಶೀಯ ಅಡಿಕೆ ಮಾರುಕಟ್ಟೆಯ ಧಾರಣೆಯ ಮೇಲೆ ಪರಿಣಾಮ ಬೀರುತ್ತಿದೆ ಎಂಬುದು ಸುಳ್ಳು ಎಂದು ಕೇಂದ್ರ ವಿವರಣೆ ನೀಡಿದೆ.
ಕಳೆದ ಸಂಸತ್ ಅಧಿವೇಶನದ ಸಮಯದಲ್ಲಿ ಜೆಡಿಯುನ ರಾಜ್ಯಸಭಾ ಸದಸ್ಯ, ಕರ್ನಾಟಕ ಮೂಲಕ ಅನೀಲ್ ಪ್ರಸಾದ್ ಹೆಗ್ದೆ ಕೇಳಿದ ಪ್ರಶ್ನೆಗೆ ಲಿಖಿತವಾಗಿ ಉತ್ತರ ನೀಡಿದ್ದ ವಾಣಿಜ್ಯ ಮತ್ತು ಕೈಗಾರಿಕಾ ಖಾತೆಯ ರಾಜ್ಯ ಸಚಿವೆ ಅನುಪ್ರಿಯ ಪಟೇಲ್, 2021-22ರಲ್ಲಿ ದೇಶದಲ್ಲಿ 7.77 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 13.99 ಲಕ್ಷ ಟನ್ ಅಡಿಕೆ ಬೆಳೆಯಲಾಗಿತ್ತು. ಆ ವರ್ಷ 25,979 ಟನ್ ಅಡಿಕೆಯನ್ನು ಮಾತ್ರ ಆಮದು ಮಾಡಿಕೊಳ್ಳಲಾಗಿತ್ತು. ಅಂದರೆ ಆಮದು ಮಾಡಿಕೊಂಡಿರುವ ಅಡಿಕೆ ಪ್ರಮಾಣ ದೇಶೀಯ ಒಟ್ಟಾರೆ ಉತ್ಪಾದನೆಯಲ್ಲಿ ಶೇ.2 ರಷ್ಟು ಮಾತ್ರ. ಇದು ಆಮದು ಅಡಿಕೆಯು ದೇಶೀಯ ಅಡಿಕೆ ಮಾರುಕಟ್ಟೆ ಮೇಲೆ ಯಾವುದೇ ಪರಿಣಾಮ ಬೀರದು ಎಂಬುದನ್ನು ತೋರಿಸುತ್ತದೆ ಎಂದು ವಿವರಿಸಿದ್ದಾರೆ.
ಆದರೆ ಅಕ್ರಮವಾಗಿ ಆಮದಾಗುತ್ತಿರುವ ಅಡಿಕೆಯ ಕುರಿತು ಸಚಿವೆ ಅನುಪ್ರಿಯ ಪಟೇಲ್ ಮಾಹಿತಿ ನೀಡಿರಲಿಲ್ಲ. ಅಡಿಕೆಯನ್ನು ತಪ್ಪಾಗಿ ವರ್ಗೀಕರಿಸಿ, ಇಂಡೋನೇಷ್ಯಾ ಮತ್ತು ಮ್ಯಾನ್ಮಾರ್‌ನಿಂದ ಆಮದು ಮಾಡಿಕೊಳ್ಳಲಾಗುತ್ತಿದೆಯೇ ಎಂಬ ಪ್ರಶ್ನೆಗೂ ಇಲ್ಲ ಎಂದು ಉತ್ತರಿಸಿದ್ದಾರೆ. ಕಾನೂನು ಪ್ರಕಾರ ಅಡಿಕೆ ಆಮದಿನ ಮೇಲೆ ಕೇಂದ್ರ ನಿಯಂತ್ರಣ ಹೇರಿದೆ. ಆದರೆ ಅಕ್ರಮವಾಗಿ ಆಮದಾಗುವುದನ್ನು ತಪ್ಪಿಸಬೇಕಾಗಿದೆ.
ಇದನ್ನೂ ಓದಿ | Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್ ಅರೆಸ್ಟ್; ಇನ್ನಾದರೂ ಏರೀತೆ ಅಡಿಕೆಯ ಬೆಲೆ?