Site icon Vistara News

Areca Nut Illegal Import: ಭಾರತದೊಳಗೆ 3 ತಿಂಗಳಲ್ಲಿ 3009 ಟನ್‌ ವಿದೇಶಿ ಅಡಿಕೆ ಅಕ್ರಮ ಆಮದು; ಬೆಳೆಗಾರರಿಗೆ ಕಾದಿದೆ ಆಪತ್ತು!

Areca Nut Illegal Import

ಅರವಿಂದ ಸಿಗದಾಳ್, ಮೇಲುಕೊಪ್ಪ
ಪ್ರಸಕ್ತ ಹಣಕಾಸು ವರ್ಷದ (Areca Nut Illegal Import) ಜೂನ್‌ ಅಂತ್ಯದವರೆಗೆ ಒಟ್ಟು 84 ವಿದೇಶಿ ಅಡಿಕೆ ಅಕ್ರಮ ಆಮದಿನ ಪ್ರಕರಣಗಳನ್ನು ಪತ್ತೆ ಹಚ್ಚಿ 3,009 ಟನ್‌ ಅಡಿಕೆ ವಶಪಡಿಸಿಕೊಳ್ಳಲಾಗಿದೆ. ವರ್ಷದಿಂದ ವರ್ಷಕ್ಕೆ ವಿದೇಶಿ ಅಕ್ರಮ ಅಡಿಕೆ ಆಮದಿನ ‍ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಖಾತೆಯ ರಾಜ್ಯ ಸಚಿವ ಜಿತಿನ್‌ ಪ್ರಸಾದ್ ರಾಜ್ಯಸಭೆಯಲ್ಲಿ ಸದಸ್ಯ ಡಿ. ವೀರೇಂದ್ರ ಹೆಗ್ಗಡೆ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ.

ಸರಾಸರಿ ಪ್ರತೀ ದಿನ ಒಂದು ಅಕ್ರಮ ಪ್ರಕರಣ!

ಮೂರು ತಿಂಗಳಲ್ಲಿ 84 ವಿದೇಶಿ ಅಡಿಕೆ ಅಕ್ರಮ ಆಮದಿನ ಪ್ರಕರಣಗಳನ್ನು ಪತ್ತೆ ಆಗಿವೆ ಅಂದರೆ, ಸರಾಸರಿ, ಪ್ರತೀ ಒಂದು ದಿನ ಒಂದು ಅಕ್ರಮ ವಿದೇಶ ಅಡಿಕೆ ಕಳ್ಳಸಾಗಣಿಕೆ ಆಗುತ್ತಿದೆ ಎಂದಾಯ್ತು! ಇದು ಬಯಲಿಗೆ ಬಂದು, ವಶಪಡಿಸಿಕೊಂಡ ಅಕ್ರಮ ಪ್ರಕರಣಗಳು. ಬಯಲಿಗೆ ಬಾರದೆ ಡೀಲ್ ಆದ ಪ್ರಕರಣಗಳು ಎಷ್ಟಿರಬಹುದು? ಡ್ರೈ ಫ್ರೂಟ್ ಹೆಸರಲ್ಲಿ, ಇನ್ಯಾವುದೋ ಕಡಿಮೆ ಬೆಲೆಯ ವಸ್ತುವಿನ ಹೆಸರಲ್ಲಿ ಬಂದ ಅಕ್ರಮ ವಿದೇಶಿ ಅಡಿಕೆ ಪ್ರಕರಣಗಳು ಎಷ್ಟಿರಬಹುದು? ಈಶಾನ್ಯ ರಾಜ್ಯಗಳ ಚೆಕ್‌ಪೋಸ್ಟ್‌ಗಳಲ್ಲಿ, ನಮ್ಮಲ್ಲಿ ಅಕ್ರಮ ಮರಳು ಸಾಗಾಣಿಕೆ ರೀತಿಯಲ್ಲಿ ಆದಂತೆ, ದೇಶದ ಒಳಗೆ ಬಂದು ಉದುರುತ್ತಿರುವ ಅಕ್ರಮ ವಿದೇಶಿ ಅಡಿಕೆ ಪ್ರಕರಣಗಳು ಎಷ್ಟಿರಬಹುದು? ಅವುಗಳ ಒಟ್ಟು ತೂಕ ಎಷ್ಟು ಲಕ್ಷ ಟನ್ ಇರಬಹುದು? ಅವುಗಳ ಮೌಲ್ಯದ ಕತೆ ಏನು?

ಈಗ ಬಹಿರಂಗಗೊಂಡ 84 ಪ್ರಕರಣಗಳಲ್ಲಿನ ಒಟ್ಟು ಅಡಿಕೆ 3009 ಟನ್‌ಗಳು

ಅಂದರೆ, 30,09,000 ಕೆ.ಜಿ! ಸರಾಸರಿ ಪ್ರತೀ ಕೆಜಿ ಅಡಿಕೆಗೆ ₹ 400 ಎಂದು ಪರಿಗಣಿಸಿದರೆ, ₹ 120 ಕೋಟಿ ಮೌಲ್ಯದ ಅಕ್ರಮ ವಿದೇಶಿ ಅಡಿಕೆ ಭಾರತಕ್ಕೆ ಸಾಗಾಣಿಕೆ ಆಗಿದೆ. ಇದು ಲೆಕ್ಕ ಸಿಕ್ಕಿದ ಅಕ್ರಮ ಅಡಿಕೆ! ಲೆಕ್ಕ ಸಿಗದೇ ಇರುವ ಅಕ್ರಮ ಅಡಿಕೆಯ ಮೌಲ್ಯ ಎಷ್ಟಿರಬಹುದು? ಖಂಡಿತವಾಗಿ ಅದು ಭಯಾನಕವಾದ ಮೊತ್ತವೇ ಆಗಿರುತ್ತದೆ. ಇಷ್ಟಕ್ಕೂ ಇದು ಮೂರು ತಿಂಗಳ ವ್ಯವಹಾರದ್ದು! ವರ್ಷ ಪೂರ್ತಿಗೆ ಎಷ್ಟಾಗಬಹುದು?

ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಇದೇ ರೀತಿ ಅಕ್ರಮವಾಗಿ ವಿದೇಶಿ ಅಡಿಕೆ ಭಾರತಕ್ಕೆ ಬರುತ್ತಿರುವ ಅಂಕಿ ಅಂಶಗಳು ಕೇಂದ್ರ ಸರಕಾರ ನಿರ್ಮಿಸಿರುವ ವ್ಯವಸ್ಥೆಯ ಒಳಗಿನ ಬಿಗಿ ಹಿಡಿತವನ್ನು ಅನುಮಾನಿಸುವಂತಿವೆ.
2020–21ರಲ್ಲಿ 278 ಪ್ರಕರಣಗಳನ್ನು ಪತ್ತೆ ಹಚ್ಚಿ 3,449 ಟನ್ ವಶಪಡಿಸಿಕೊಂಡಿದ್ದರೆ, 2021–22ರಲ್ಲಿ 260 ಪ್ರಕರಣಗಳಲ್ಲಿ 3,388 ಟನ್‌ ವಶಪಡಿಸಿಕೊಳ್ಳಲಾಗಿದೆ. 2022–23ರಲ್ಲಿ 454 ಪ್ರಕರಣಗಳಲ್ಲಿ 3,400 ಟನ್ ಅಕ್ರಮ ವಿದೇಶಿ ಅಡಿಕೆ ದೇಶದ ಒಳಗೆ ಬಂದಿದೆ. 2023–24ರಲ್ಲಿ 643 ಪ್ರಕರಣಗಳಲ್ಲಿ 12,881 ಟನ್‌ ಅಡಿಕೆ ವಶಪಡಿಸಿಕೊಂಡಿತ್ತು ಎಂದು ಕೇಂದ್ರ ಸಚಿವ ಜಿತಿನ್‌ ಪ್ರಸಾದ್ ರಾಜ್ಯಸಭೆಯಲ್ಲಿ ಸದಸ್ಯ ಡಿ. ವೀರೇಂದ್ರ ಹೆಗ್ಗಡೆ ಅವರ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಇಷ್ಟೊಂದು ಅಕ್ರಮ ವಿದೇಶಿ ಅಡಿಕೆ ದೇಶದ ಒಳಗೆ ರಾಜಾರೋಷವಾಗಿ ಪ್ರತೀ ವರ್ಷವೂ ನುಗ್ಗಿ ಬರುತ್ತಿದೆ ಎಂದಾದರೆ, ದೇಶದ ಆರ್ಥಿಕ ಮತ್ತು ಭದ್ರತೆಯ ವಿಷಯದಲ್ಲೂ ಸಂಶಯ ಮತ್ತು ಭಯ ಹುಟ್ಟಿಸುತ್ತಿದೆ. ಅಡಿಕೆಯೇ ಅಕ್ರಮವಾಗಿ ಈ ಪರಿ ಬರುತ್ತಿರುವಾಗ, ಬೇರೆ ವಸ್ತುಗಳೂ ಕೂಡ ಹೀಗೇ ಬರುತ್ತಿರಬಹುದಲ್ಲವೆ? ಅವುಗಳ ಕತೆ ಏನು?
ಈ ಬಾರಿ ಕಾಫಿ, ಮೆಣಸು, ಕೋಕೊ ಬೆಲೆಗಳು ಏರಿದಂತೆ, ದೇಶೀಯ ಅಡಿಕೆಗೂ ಕ್ವಿಂಟಾಲ್‌ಗೆ ‘ಅಬ್ ಕಿ ಬಾರ್ 60,000 ಪಾರ್’ ಎಂದು ನಿರೀಕ್ಷಿಸಿದ್ದ ಅಡಿಕೆಗೆ, ಈಗ ವಿದೇಶಿ ಅಕ್ರಮ ಆಮದಿನಿಂದಾಗಿ ಅಡಿಕೆ ದರ ಇಳಿ ಮುಖವಾಗಿದೆ.

ಇದನ್ನೂ ಓದಿ: Train services: ಎಡಕುಮೇರಿಯಲ್ಲಿ ಭೂಕುಸಿತ; ಆಗಸ್ಟ್‌ 4ರವರೆಗೆ 14 ರೈಲುಗಳ ಸಂಚಾರ ರದ್ದು

ಸಂಸದರ ಮೌನವೇಕೆ?

ಇಷ್ಟೆಲ್ಲ ಅಕ್ರಮಗಳು ನೆಡೆಯುತ್ತಿದ್ದರೂ ಬಹಿರಂಗವಾಗಿ ಸುದ್ದಿಯಾಗುತ್ತಿದ್ದರೂ, ಅಡಿಕೆ ಬೆಳೆಯುವ ಜಿಲ್ಲೆಗಳ (ಎಲ್ಲಾ ರಾಜ್ಯಗಳ) ಸಂಸದರು ಯಾಕೆ ಗಟ್ಟಿ ಧ್ವನಿ ಎತ್ತುತ್ತಿಲ್ಲ? ಅಕ್ರಮ ಅಡಿಕೆ ಆಮದಿಗೆ ಮೌನ ಸಮ್ಮತಿಯ ಬೆಂಬಲ ಕೊಡುತ್ತಿದ್ದಾರಾ? ಅಕ್ರಮವನ್ನು ತಡೆಯಲು ಸಂಸದರಿಗೆ ಸಾಧ್ಯವಾಗುತ್ತಿಲ್ಲವಾ? ಅಥವಾ ಪರೋಕ್ಷವಾಗಿ ಅಕ್ರಮ ಅಡಿಕೆ ಆಮದಿನಲ್ಲಿ ಕೆಲವು ಸಂಸದರು ಫಲಾನುಭವಿಗಳಾಗಿದ್ದಾರಾ? ಹಾಗಾಗಿಯೇ ಅಕ್ರಮ ಅಡಿಕೆ ಸಾಗಾಣಿಕೆಯಲ್ಲಿ ಮೌನವಾಗಿದ್ದಾರಾ? ವರ್ಷದಲ್ಲಿ ಒಂದೋ ಎರಡೋ ಪ್ರಕರಣಗಳಾದರೆ ಅದು ಅಷ್ಟು ಗಂಭೀರವಲ್ಲದ್ದಿರಬಹುದು.

ಇದು ಕಳೆದ ಮೂರು ತಿಂಗಳಲ್ಲಿ ಬಯಲಿಗೆ ಬಂದ ಪ್ರಕರಣಗಳೇ 84 ಅಂದರೆ? ಯಾವ ಸಂಸದರಿಗೂ ಇದು ಸೀರಿಯಸ್ ವಿಷಯ ಅಂತ ಅನಿಸುತ್ತಿಲ್ಲವಾ? ವಿರೋಧ ಪಕ್ಷಗಳ ಸಂಸದರಿಗೂ ಇದು ಮಹತ್ವದ ವಿಚಾರ ಅಂತ ಅನಿಸುತ್ತಿಲ್ಲವಾ? ಸೂಕ್ತ ಕಡಿವಾಣದ ಚಿಂತನೆಗೆ ಯಾರೂ ಮುಂದಾಗುತ್ತಿಲ್ಲವಾ? ಆಡಳಿತ ಮತ್ತು ವಿರೋಧ ಪಕ್ಷಗಳ ಸಂಸದರು, ದೇಶದ ಬಹುದೊಡ್ಡ ಹಗರಣದಂತೆ ಕಂಡು ಬರುವ ಈ ವಿದೇಶಿ ಅಕ್ರಮ ಅಡಿಕೆ ಆಮದನ್ನು ನಿಯಂತ್ರಣ ಮಾಡಲು ಸಮರೋಪಾದಿಯಲ್ಲಿ ಮುನ್ನುಗ್ಗಬೇಕಲ್ವಾ? ಯಾಕೆ ಮೌನ? ಕಳೆದ ವಾರ ಇದೇ ರೀತಿ ಅಕ್ರಮ ವಿದೇಶಿ ಅಡಿಕೆ ಒಳ ಬಂದ ಪ್ರಕರಣವನ್ನು ತನಿಖೆಗಾಗಿ ಸಿಬಿಐ(CBI) ಗೆ ವಹಿಸಿದ ಸುದ್ದಿ ಪ್ರಕಟವಾಗಿತ್ತು.

ಈಗ ಎಲ್ಲಾ 84 ಪ್ರಕರಣಗಳನ್ನೂ, ಮತ್ತು ಬಹಿರಂಗವಾಗದ, ವಶಪಡಿಸಿಕೊಳ್ಳದ ಅಕ್ರಮ ಅಡಿಕೆ ಸಾಗಾಣಿಕೆಗಳ ಪ್ರಕರಣಗಳನ್ನು ಸಿಬಿಐ(CBI) ತನಿಖೆಗೆ ವಹಿಸಬೇಕೆಂದು ಕೇಂದ್ರ ಸಂಸದರೆಲ್ಲ ಕೇಂದ್ರ ಸರಕಾರವನ್ನು ಗಂಭೀರವಾಗಿ ಒತ್ತಾಯಿಸುತ್ತಿಲ್ಲ ಏಕೆ? ಅಕ್ರಮ ವಿದೇಶಿ ಅಡಿಕೆಯ ಸಾಗಾಣಿಕೆಯ ಒಂದೇ ಒಂದು ಪ್ರಕರಣವೂ ಮುಂದೆ ನಡೆಯದಂತೆ ದೇಶದ ಎಲ್ಲಾ ಮಾರ್ಗಗಳನ್ನು (ಭೂ, ಜಲ, ವಾಯು) ಬಿಗಿಗೊಳಿಸಬೇಕಾದ ಅನಿವಾರ್ಯತೆ ಇಲ್ಲವಾ?
ದೇಶದೊಳಕ್ಕೆ ಬರುತ್ತಿರುವ ಅಕ್ರಮ ವಿದೇಶಿ ಅಡಿಕೆ ಸಮಸ್ಯೆ ಕೇವಲ ದೇಶೀಯ ಅಡಿಕೆ ಬೆಲೆಯ ಮೇಲೆ ಮಾತ್ರ ಪರಿಣಾಮ ಬೀರುವುದಲ್ಲ. ಸಮಸ್ಯೆಯ ಗಂಭೀರತೆ ನೋಡಿದರೆ, ಇದು ಸಮಗ್ರ ದೇಶದ ಅರ್ಥ ವ್ಯವಸ್ಥೆ ಮತ್ತು ಭದ್ರತಾವ್ಯವಸ್ಥೆಯ ಮೇಲೆ ದೊಡ್ಡ ಪರಿಣಾಮ ಬೀರಬಹುದಾದ ಪ್ರಕರಣಗಳಾಗಿ ಕಾಣುತ್ತಿವೆ.
ದಯವಿಟ್ಟು ರಾಜ್ಯದ ಎಲ್ಲ ಸಂಸದರು, ಶಾಸಕರು, ಸಚಿವರು ಈ ಅಕ್ರಮ ವಿದೇಶಿ ಅಡಿಕೆ ಸಾಗಾಣಿಕೆ ಬಗ್ಗೆ ಪರಿಣಾಮಕಾರಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಮುಂದಾಗಲಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version