ಅರವಿಂದ ಸಿಗದಾಳ್, ಮೇಲುಕೊಪ್ಪ
ಕಳೆದೊಂದು ವಾರದಿಂದ ಗ್ರಾಫ್‌ನಲ್ಲಿ ಅಡಿಕೆ ಧಾರಣೆಯ ಬಾಣ ಕೆಂಪು ಬಣ್ಣದೊಂದಿಗೆ ಇಳಿಮುಖವಾಗಿ ಚಲಿಸುತ್ತಿದೆ. ಅಡಿಕೆ ಮಾರುಕಟ್ಟೆಯಲ್ಲಿನ (Areca Nut Price) ಧಾರಣೆ ಕುಸಿತಕ್ಕೆ ಕಾರಣಗಳನ್ನು ಪತ್ರಿಕೆಗಳು ಬಿಚ್ಚಿಡುತ್ತಿವೆ. ವಾಟ್ಸಪ್, ಫೇಸ್‌ಬುಕ್‌ಗಳಂತಹ ಜಾಲತಾಣಗಳಲ್ಲಿ ಧಾರಣೆ ಕುಸಿತಕ್ಕೆ ಕಾರಣವಾದ ಅಂಶಗಳೊಂದಿಗೆ ದೊಡ್ಡ ಚರ್ಚೆ ನೆಡೆಯುತ್ತಿದೆ.
ಅಡಿಕೆ ರೈತರ ಮುಖದಲ್ಲಿ ಗಾಬರಿ, ಆತಂಕ, ಗೊಂದಲಗಳ ಎಮೋಜಿಗಳು ಎದ್ದು ಕಾಣುತ್ತಿವೆ. ಕಳೆದ ವರ್ಷ ₹23000 ತಲುಪಿದ್ದ ಸಿಪ್ಪೆ ಗೋಟು ಧಾರಣೆ, ಈ ಬಾರಿ ₹18000 ತಲುಪಿ ರಿವರ್ಸ್ ಗೇರ್‌ಗೆ ಹಾಕಿದ್ದು, ಮತ್ತೆ ಮುಂದೆ ಹೋಗಲಿಲ್ಲ. ಈಗ ₹16,000 ಬಂದು, ಹಿಮ್ಮುಖ ಚಲನೆಯಲ್ಲೇ ಇದೆ. ರಾಶಿ ಇಡಿ ಧಾರಣೆಯಲ್ಲಿ ಮೂರು ದಿನದಲ್ಲಿ ₹.3000 ಇಳಿದು ಹೋಗಿದೆ. ₹.50,000 ಇದ್ದ ರಾಶಿ ಇಡಿ ದರ ಈಗ ₹.47,000 ಬಂದಿದೆ. ಮಂಡಿ, ಸಹಕಾರಿ ಸಂಘಗಳಲ್ಲಿ ಒಂದೆರಡು ಲಾಟ್‌ಗಳಿಗೆ ₹.48,000+ ತೋರಿಸಿ, ಬೆಳೆಗಾರರನ್ನು ಸಮಾಧಾನ ಮಾಡುವ ಪ್ರಯತ್ನವೂ ನಡೆಯುತ್ತಿದೆ. ಅಡಿಕೆ ವ್ಯಾಪಾರದಲ್ಲಿ ನೆಡೆಯುತ್ತಿದ್ದ ಮುಸುಕಿನ ಕೈ ವ್ಯಾಪಾರದಲ್ಲಿ ರಾಶಿ ಇಡಿ ಧಾರಣೆ ₹.45,000 ಕ್ಕೆ ಕುಸಿದಿದೆ. ಅಡಿಕೆ ಧಾರಣೆಯ ಇಳಿಮುಖದ ಕಂಪನಕ್ಕೆ ಅನಧಿಕೃತ (ಬಿಲ್ ಇಲ್ಲದೆ, ಮನೆ ಅಂಗಳದಲ್ಲಿ, ಪೇಟೆಯ ಮೂಲೆ ಗಲ್ಲಿಯಲ್ಲಿ) ವ್ಯಾಪಾರಗಳು ತಟಸ್ಥವಾಗಿವೆ.
ಶ್ರಾವಣ ಮಾಸದಲ್ಲಿ ಅಡಿಕೆಗೆ ಬೆಲೆ ಬರುತ್ತೆ ಎಂಬ ಪ್ರಬಲ ಸಾಂಪ್ರದಾಯಿಕ ನಂಬಿಕೆಯಿಂದ ಮನೆಯಲ್ಲೇ ಇಟ್ಟುಕೊಂಡ ರೈತರ 20, 50 ಕೆಜಿ ಅಡಿಕೆಗೆ ಈ ಬಾರಿ ಮೌಲ್ಯ ಬರುವುದಿಲ್ಲ ಅಂತ ಪಂಚಾಂಗದ ಕ್ರೋಧಿ ಸಂವತ್ಸರಕ್ಕೂ ಗೊತ್ತಾಗಿದೆ!
ರೈತರು ಡೈರಿ ತೆಗೆದು, ಕನ್ನಡಕ ಧರಿಸಿ, ಬೇಸಿಕ್ ಸೆಟ್ ಫೋನಿನ ಕೀ ಪ್ಯಾಡ್‌ನ ನಂಬರ್ ಒತ್ತಿ ಮಧ್ಯವರ್ತಿ ವ್ಯಾಪಾರಿಗಳನ್ನು, ಅನಧಿಕೃತ ಏಜೆಂಟರುಗಳನ್ನು ಸಂಪರ್ಕಿಸಿದರೆ “ಈಗ ರೇಟಿಲ್ಲ ಗೌಡ್ರೆ, ಹಬ್ಬ ಮುಗಿಯಲಿ ಆಮೇಲೆ ಫೋನ್ ಮಾಡಿ, ನೋಡುವಾ” ಅಂತಿದಾರೆ.
ಸಹಕಾರಿ ಸಂಘಗಳಲ್ಲಿ ವಾರಗಳ ಹಿಂದೆ ₹.48,000 ಕ್ಕೆ ಬಿಡ್ಡಿಂಗ್ ಆಗಿದ್ದ ರಾಶಿ ಇಡಿ ‘ಲಾಟ್’ಗೆ ಈಗ ₹.35,000 ಬಿಡ್ಡಿಂಗ್ ದರ ಹಾಕಿ, ಗಾಬರಿ ಆತಂಕ ಮೂಡುವಂತೆ ಮಾಡಲಾಗಿದೆ! ಒಂದು ಕಡೆ ಮಳೆಗಾಲದಲ್ಲಿ ಬಿಸಿಲು ರಣಗುಡುತ್ತಿದೆ. ಇದ್ದಕ್ಕಿದ್ದಂತೆ ದಿನಕ್ಕೊಂದೆರಡು ಬಾರಿ ಹತ್ತು ನಿಮಿಷಗಳ ಆರ್ಭಟದ ಮಳೆ ಬಂದು ‘ರೌಡಿಸಮ್’ ತೋರಿಸುತ್ತಿದೆ! ಇಂತಹ ಒಂದು ವಿಶಿಷ್ಟ, ವಿಪರೀತ, ವಿಸ್ಮಯ ಸನ್ನಿವೇಷದ ಮಲೆನಾಡು/ಕರಾವಳಿಯಲ್ಲಿ, ಭೇಟಿಯಾದ ಅಡಿಕೆ ಬೆಳೆಗಾರರು ಪರಸ್ಪರ ಮಾತಾಡಿಕೊಳ್ಳುತ್ತಿರುವುದು ಎರಡು-ಮೂರು ಕಾಮನ್ ಸಬ್ಜೆಕ್ಟ್‌ಗಳ ಬಗ್ಗೆ ಮಾತ್ರ!!
ಮಾತಾಡಿಕೊಳ್ಳುವ ಟಾಪ್ ಟೆನ್ ವಿಷಯಗಳಲ್ಲಿ ಮೊದಲ ಮೂರು ವಿಷಗಳು: ಅಡಿಕೆ ಧಾರಣೆ ಇಳಿತ! ಅಡಿಕೆ ಕೊಳೆ ಉದುರಿದ್ದು! ಅಡಿಕೆ ಭೂಮಿಯ ಒತ್ತುವರಿ ತೆರವು! ಮೂರ್ನಾಲ್ಕು ದಿನಗಳಿಂದ ಅಡಿಕೆ ಧಾರಣೆ ಇಳಿತದ ವಿಚಾರವೇ ಅತ್ಯಂತ ಪ್ರಮುಖವಾದುದು. ಮತ್ತು ಪರಸ್ಪರ ಆಡಿಕೊಳ್ಳುತ್ತಿರುವ ಮಾತುಗಳಲ್ಲಿರುವುದು ಪ್ರಶ್ನೆ ಪತ್ರಿಕೆ ಮಾತ್ರ. ಪ್ರಶ್ನೆ ಪತ್ರಿಕೆಯ ಪ್ರಶ್ನೆಗಳೆಲ್ಲವೂ ಔಟ್ ಆಫ್ ಸಿಲಬಸ್ ಮಾಹಿತಿಯವು! ಯಾರಿಗೂ ನಿಖರ ಉತ್ತರ ಗೊತ್ತಿಲ್ಲ!
1) ಅದಾನಿ ಗ್ರೂಪ್ ಆಫ್ ಕಂಪನೀಸ್ v/s ಹಿಂಡನ್ ಬರ್ಗ್ ಪ್ರಕರಣಗಳ ರೀತಿ ಸಹಕಾರಿ ವಲಯ v/s ಖಾಸಗೀ ವಲಯಗಳ ನಡುವೆ ಒಂದು ವ್ಯಾಪಾರೀ ಘರ್ಷಣೆಯ ವ್ಯವಹಾರ ಶುರುವಾಗಿದೆಯಾ?
2) ಹಿಂಡನ್ ಬರ್ಗ್ ಪ್ರಕರಣದಿಂದ ಷೇರು ಪೇಟೆ ತಲ್ಲಣವಾದಂತೆ, ಅಡಿಕೆ ಮಾರುಕಟ್ಟೆಯಲ್ಲೂ ಸಂಚಲನ ಉಂಟಾಗುತ್ತಿದೆಯಾ!!? ಮುಂದುವರೆಯಲಿದೆಯಾ?
3) ಹೂಡಿಕೆ ಮಾಡಿದ ಷೇರುದಾರರ ರೀತಿ, ಶ್ರಮ ಹೂಡಿ, ಅಡಿಕೆ ಬೆಳೆದ ಬೆಳೆಗಾರರ ಮೇಲೆ ಮಾರುಕಟ್ಟೆ ವಿಪರೀತ ದರ ಏರಿಳಿತದ ಪರಿಣಾಮ ಬೀರಲಿದೆಯಾ?
4) ಕೆಲವು ಖಾಸಗೀ ವರ್ತಕರು, ಮಧ್ಯವರ್ತಿಗಳು, ಬಿಲ್ ಇಲ್ಲದೇ ವ್ಯವಹಾರ ಮಾಡುವ ಏಜಂಟರ್‌ಗಳು ತಮ್ಮ ‘ಫಾರಂ ಹೌಸ್‌ಗಳಲ್ಲಿ’, ಶೆಡ್‌ಗಳಲ್ಲಿ ದೇಶೀ ಅಡಿಕೆ ಜೊತೆ, ವಿದೇಶಿ ಕಳಪೆ ಅಡಿಕೆ ಮತ್ತು ದೇಶೀಯ ಕಲ್ಲುಗೋಟಿನಂತಹ ಅಡಿಕೆಗಳನ್ನು ಕ್ವಾಲಿಟಿ ಅಡಿಕೆ ಜೊತೆ ಮಿಶ್ರಣ ಮಾಡುವ ದಂದೆ ಮಾಡುತ್ತಿದ್ದಾರೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿವೆ! ಇದು ನಿಜವಾ?
5) ವಿದೇಶಿ ಕಳಪೆ ಅಡಿಕೆ ಅವ್ಯಾಹತವಾಗಿ ಕಳ್ಳದಾರಿಯಲ್ಲಿ ಒಳ ನುಸುಳುತ್ತಿದ್ದರೂ… ಅನೇಕ ಸಂಸದರು, ಶಾಸಕರು ಮೌನವಾಗಿರುವುದರ ಹಿಂದಿನ ‘ಚಿದಂಬರ ರಹಸ್ಯ’ ಏನು?
6) ವಿದೇಶಿ ಕಳಪೆ ಅಡಿಕೆ ಅಕ್ರಮವಾಗಿ ದೇಶ ವ್ಯಾಪಿ ಸಿಗುವಂತಾಗಿದೆ ಎಂದು ಪತ್ರಿಕೆಗಳಲ್ಲಿ ವ್ಯಾಪಕ ಸುದ್ದಿ ಆಗುತ್ತಿದ್ದರೂ ಸರಕಾರದ ದಿಟ್ಟತನದ ಕ್ರಮ ಆಗದಿರುವುದಕ್ಕೆ ‘ಯಾರೆಲ್ಲ’ಕಾರಣರಾಗಿದ್ದಾರೆ?
7) ಗುಟ್ಕಾ ಕಂಪನಿಯವರು ಸಡನ್ನಾಗಿ ಕ್ವಾಲಿಟಿ ಕಾನ್ಸೆಪ್ಟ್ ತಂದು ಮಾರ್ಕೇಟ್‌ನಲ್ಲಿ ಅಡಿಕೆ ಧಾರಣೆ ಇಳಿಸುವ ಡ್ರಾಮಾ ಆಡ್ತಾ ಇದಾರಾ?
8) ಗುಟ್ಕಾ ಕಂಪನಿಯ ಹೆಸರು ಹೇಳಿ, ಕಳಪೆ ಅಡಿಕೆ ಕತೆ ಹಣೆದು, ಗೊರಬಲು ಫಾಲಿಷರ್ ಯಂತ್ರದ ಮೇಲೆ ಗೂಬೆ ಕೂರಿಸಿ ಮಧ್ಯವರ್ತಿಗಳೇ ಗೇಮ್ ಆಡ್ತಾ ಇದಾರಾ?
9) ವಿದೇಶಿ ಕಳಪೆ ಅಡಿಕೆಯನ್ನು ತಂದು ಮಿಶ್ರ ಮಾಡಿದ ಮಧ್ಯವರ್ತಿ ವ್ಯಾಪಾರಿಗಳು, ಆ ‘ಕಳಪೆ ಅಡಿಕೆಯ’ ಆಪಾದನೆಯನ್ನು ರೈತರ ಫಾಲೀಷ್ಡ್ ಗೊರಬಲು ಅಡಿಕೆಯ ಕಡೆ ತಿರುಗಿಸಿ, ತಾವು ಸಾಚಾ ಆಗಲು ರಂಗ ಸಜ್ಜಿಕೆ ನಿರ್ಮಾಣ ಮಾಡಿದ್ದಾರಾ?
10) ಸಹಕಾರಿ ಮತ್ತು ಖಾಸಗೀ ಅಡಿಕೆ ವ್ಯಾಪಾರಿಗಳ ಮಧ್ಯೆ ನೆಡೆಯುತ್ತಿರುವ ಘರ್ಷಣೆಗೆ ನಿಜವಾದ ಕಾರಣ ಏನು? ಅಡಿಕೆ GST?, ಅಕ್ರಮ ಸಾಗಾಣಿಕೆ?, ಲಾಭದ ವ್ಯತ್ಯಾಸ? ಬಿಗಿ ಕ್ರಮಗಳು, ವ್ಯಾಪಾರಿಗಳು/ಗುಟ್ಕಾ ಕಂಪನಿಗಳು ಖಾಸಗಿ ಮಂಡಿಯಲ್ಲಿನ ಅಡಿಕೆಯಲ್ಲಿ ಕಳಪೆ ಅಡಿಕೆ ಹೆಚ್ಚು ಮಿಶ್ರಣವಾಗಿದೆ ಎಂದಿದ್ದು?
11) ಚೇಣಿದಾರರು ಲಾಭದ ಆಸೆಯಿಂದ 100 ಕೆಜಿ ಹಸಿ ಅಡಿಕೆಗೆ 13 ಕೆಜಿ ರಾಶಿ ಇಡಿ ಕೊಡುವಾಗ ಕಳಪೆ ಗೊರಬಲು ಅಡಿಕೆಯನ್ನು ಮಿಶ್ರ ಮಾಡಿ ಕೊಡುತ್ತಿರುವುದು?
12) ಸಿಪ್ಪೆ ಗೋಟು ಸುಲಿದು, ನೆನಸಿ, ಚೊಗರಿನ ಬಣ್ಣ ಹಚ್ಚಿ, ಕಳಪೆ ಅಡಿಕೆಯನ್ನು “ತಲೆ ಮೇಲೆ ಹೊಡೆದಂತೆ” ಅದನ್ನು ರಾಶಿ ಇಡಿ ಅಡಿಕೆಯಾಗಿಸಿ ಮಾರಾಟ ದಂದೆ ಮಾಡುವ ಶಿರಸಿ, ಸಾಗರದ ಕೆಲವು ಮಧ್ಯವರ್ತಿಗಳು ಮಾಡುವ ಅವ್ಯವಹಾರ ವಿಪರೀತವಾಗಿ ಇಡೀ ಮಾರುಕಟ್ಟೆಯ ಎಲ್ಲ ಅಡಿಕೆಯ ಕ್ವಾಲಿಟಿಯನ್ನು ಅನುಮಾನಿಸುವಂತೆ ಮಾಡಿದೆಯಾ?
13) ಪಾನ್ ಮಸಾಲ ತಯಾರಕ ಪ್ರತಿನಿಧಿಗಳು ಕರ್ನಾಟಕಕ್ಕೆ ಬಂದು ಅಡಿಕೆ ಕ್ವಾಲಿಟಿ ಚೆಕ್ ಮಾಡ್ತಾ ಇದ್ದಾರೆ. ಕೆಲವು ಖಾಸಗಿ ದೊಡ್ಡ ಮಂಡಿಗಳಲ್ಲೇ ಹೆಚ್ಚು ಕಳಪೆ ಅಡಿಕೆ ಇರುವುದು ಬಯಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ನಿಜವೇ?
14) ಮಲೆನಾಡು ಮತ್ತು ಕರಾವಳಿಯ ಕೆಂಪಡಿಕೆಯ ಒಟ್ಟು ವ್ಯವಹಾರದಲ್ಲಿ 20-25% ಗೊರಬಲು ಅಡಿಕೆಯೇ ಇರುತ್ತಿತ್ತು. ಆಗ ಗುಟ್ಕಾ ತಯಾರಿಕೆಗೆ ಕಳಪೆ ಅಡಿಕೆ ಆಗಿರದ ಅದು ಈಗ ಕಳಪೆ ಅಂತ ಸುದ್ದಿ ಆಗುತ್ತಿರುವುದೇಕೆ? ಗುಟ್ಕಾದಲ್ಲಿ ಈ ಅಡಿಕೆ ಬಳಸುವುದಿಲ್ಲ ಅಂತಾದರೆ, ಇಷ್ಟು ಸಮಯ ಈ ಎರಡನೇ ದರ್ಜೆಯ ಅಡಿಕೆ ಏನಾಗುತ್ತಿತ್ತು? ರಾತ್ರಿ ಬೆಳಗಾಗುವುದರೊಳಗೆ ಗುಟ್ಕಾದಲ್ಲಿ ಗಟ್ಟಿ ಅಡಿಕೆ ಬಳಸದಿರುವ ನಿರ್ಧಾರ ತೀರ್ಮಾನ ಆಯ್ತಾ?
15) ಇರುವ ಮಾಹಿತಿ ಪ್ರಕಾರ ಮತ್ತು ಗುಟ್ಕಾ ತಿನ್ನುವವರ ಅಭಿಪ್ರಾಯ ಗುಟ್ಕಾಕ್ಕೆ ಒಳ್ಳೆಯ ಸಾಫ್ಟ್ ಅಡಿಕೆ ಬೇಡ, ಗೋಟು, ಕಲ್ಲುಗೊಟು ರಾಮಡಿಕೆ ತರಹದ ಗಟ್ಟಿ ಅಡಿಕೆಗಳೇ ಬೇಕು. ಹಾಗಾದರೆ, ಅದು ಹೌದಾದರೆ ಈಗ ಶುರು ಆಗಿರುವ ಕ್ವಾಲಿಟಿ ಅಡಿಕೆ ಪ್ರಹಸನದ ಹಿಂದಿನ ಸೂತ್ರದಾರರು ಯಾರು? ವ್ಯಾಪಾರಿಗಳಾ? ಮಧ್ಯವರ್ತಿಗಳಾ? ಸ್ವತಃ ಗುಟ್ಕಾ ಕಂಪೆನಿಗಳಾ?
16) ಗಟ್ಟಿ ಅಡಿಕೆಯನ್ನು ಗುಟ್ಕಾದಲ್ಲಿ ಬಳಸುವುದಿಲ್ಲಾ ಅಂತಾದರೆ, ಈಗಲೂ ಎರಡನೇ ದರ್ಜೆಯ ಅಡಿಕೆ, ಕಳಪೆ ಅಡಿಕೆ, ಗೊರಬಲು ಅಡಿಕೆ, ಗಟ್ಟಿ ಅಡಿಕೆ, ಕಲ್ಲುಗೋಟು ಅಡಿಕೆ, ಗಟ್ಟಿ ಚಾಲಿ ಅಡಿಕೆಗಳನ್ನು ವಿಭಾಗಿಸಿ ಕೊಡುವುದನ್ನು ಪಾನ್ ಮಸಾಲ/ಗುಟ್ಕಾ ಕಂಪನಿಗಳು ಖರೀಧಿ ಮಾಡುತ್ತಿವೆ. ಅದನ್ನು ಏನು ಮಾಡುತ್ತಾರೆ?
17) ಸಹಕಾರಿ ಸಂಘಗಳು ಕೊಟ್ಟ ಅಧಿಕೃತ ಮಾಹಿತಿ ಪ್ರಕಾರ, ಎಲ್ಲಾ ಅಡಿಕೆಗಳು ತಿನ್ನುವುದಕ್ಕಾಗಿಯೇ ಸರಬರಾಜು ಆಗುತ್ತಿರುವುದು. ಅದರಲ್ಲೂ ಬಹುತೇಕ ಎಲ್ಲಾ ಅಡಿಕೆಗಳು ಗುಟ್ಕಾಕ್ಕೇ ಹೋಗುವುದು. ಅದು ಹೌದಾದರೆ, ಬೇಯಿಸಿದ ಕೆಂಪಡಿಕೆ ರಾಶಿ ಇಡಿ ಮತ್ತು ಬೇಯಿಸದ ಚಾಲಿ ಇಡಿ ಎಂದು ಯಾಕೆ ಬೇರೆ ಬೇರೆ ವರ್ಗೀಕರಣದಲ್ಲಿ ವ್ಯವಹಾರ ನೆಡೆಯುತ್ತಿದೆ?
18) ತೀರ್ಥಹಳ್ಳಿಯ ಸಾಂಪ್ರದಾಯಿಕ ಅಡಿಕೆ ಎಂಬ ಒಂದು ವಿಶೇಷ ಪ್ರಾಧಾನ್ಯತೆ ತೀರ್ಥಹಳ್ಳಿ ಭಾಗದ ಅಡಿಕೆಗೆ ಇತ್ತು ಮತ್ತು ಧಾರಣೆಯಲ್ಲೂ ಸ್ವಲ್ಪ ಮಟ್ಟದ ಮೌಲ್ಯ ಹೆಚ್ಚಿತ್ತು. ಆದರೆ, ಈಗ ಅಷ್ಟೇ ಸಾಂಪ್ರದಾಯಿಕ ಪದ್ದತಿಯಲ್ಲೇ ಮಾಡಿದ ತೀರ್ಥಹಳ್ಳಿ ಅಡಿಕೆಗಿಂತ, ಸಾಂಪ್ರದಾಯಕ ಪದ್ದತಿ ಅನುಸರಿಸದೇ ಸಂಸ್ಕರಣೆ ಮಾಡಿದ ಚನ್ನಗಿರಿ-ಚಿತ್ರದುರ್ಗದ ಅಡಿಕೆಗೆ ದರದ ಮೌಲ್ಯ ಹೆಚ್ಚಿದೆ. ಇದು ಹೇಗೆ?
19) ಅಡಿಕೆಯಲ್ಲದ ಅಡಿಕೆಯಂತಹ ಒಂದು ರೀತಿಯ ಬೀಜಕ್ಕೆ ಅಡಿಕೆ ಬಣ್ಣ ಬಳಿದು, ಅಡಿಕೆಗೆ ಸೇರಿಸುವ ಒಂದು ಸಂಚು ಬಹಿರಂಗಗೊಂಡಿದ್ದರ ಸುದ್ದಿ ಬ್ರೇಕಿಂಗ್ ನ್ಯೂಸ್ ಆಗಿದೆ. ಏನಿದರ ಒಳ ಮರ್ಮ?
ಹಿಂಡನ್ ಬರ್ಗ್ ಷೇರು ಮಾರುಕಟ್ಟೆ ಅಲ್ಲಾಡಿಸಿದರೆ, ಅಡಿಕೆ ಕ್ವಾಲಿಟಿಯ hidden bug ಅಡಿಕೆ ಮಾರುಕಟ್ಟೆಯನ್ನು ಅಲ್ಲೋಲಕಲ್ಲೋಲ ಮಾಡುತ್ತಿದೆ. ಅಡಿಕೆ ಮಾರುಕಟ್ಟೆಯಲ್ಲಿ ಗೂಳಿ ಕರಡಿಗಳ ಕಾಂತಾರ ಕುಣಿತ!
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ