ಉಡುಪಿ: ರೈತ ಅಂದ ಕೂಡಲೇ ಬಡವ, ಸಾಲ ಸುಳಿಗೆ ಸಿಲುಕಿದವರು ಎಂಬೆಲ್ಲಾ ಚಿತ್ರಣಗಳು ಮೂಡುವ ಕಾಲದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರದ ತೆಕ್ಕಟ್ಟೆಯ ವ್ಯಕ್ತಿಯೊಬ್ಬರು ಬಿಲಿಯನೇರ್ ರೈತ (Billionaire Farmer) ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೇಂದ್ರ ಸರ್ಕಾರ ಕೊಡುವ ಈ ಪ್ರಶಸ್ತಿಯನ್ನು ಪಡೆದವರು ತೆಕ್ಕಟ್ಟೆಯ ರೈತ ಕಮ್ ಉದ್ಯಮಿ ರಮೇಶ್ ನಾಯಕ್ (Ramesh Nayak). ಡಿಸೆಂಬರ್ 7ರಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರೇ ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ರೈಸ್‌ಮಿಲ್ ಉದ್ಯಮದ ಜತೆಗೆ ಕೃಷಿ ಮೌಲ್ಯವರ್ಧನೆ ಹಾಗೂ ಗ್ರಾಮೀಣ ರೈತರಿಗೆ ಬೆನ್ನೆಲುಬಾಗಿ ನಿಂತ ಉದ್ಯಮಿ ರಮೇಶ್ ನಾಯಕ್ ಕೇಂದ್ರ ಸರಕಾರ ಕೊಡಮಾಡುವ ಬಿಲಿಯನೇರ್ ರೈತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ತೆಕ್ಕಟ್ಟೆಯ ರೈಸ್‌ಮಿಲ್ ಉದ್ಯಮಿ ರಮೇಶ್ ನಾಯಕ್ ಅವರು ಕುಂದಾಪುರ ತಾಲೂಕಿನ ಕೆದೂರು ಗ್ರಾಮದಲ್ಲಿ ಸುಮಾರು 13 ಎಕರೆ ಜಾಗದಲ್ಲಿ ಸುಮಾರು 11 ಜಾತಿಯ, ಸುಮಾರು 1,634 ವಿವಿಧ ತಳಿಯ ಹಣ್ಣಿನ ಗಿಡಗಳನ್ನು ನೆಟ್ಟು ಉತ್ತಮ ಫಸಲು ಕಂಡುಕೊಳ್ಳುವ ಮೂಲಕ ನಿಸರ್ಗ ಪ್ರೇಮ ಮೆರೆದು ಜಿಲ್ಲೆಯಲ್ಲಿ ಮಾದರಿಯಾಗಿದ್ದಾರೆ.
ವಾರ್ಷಿಕ ಸುಮಾರು ಕೋಟಿ ರೂ.ಗಳಿಗೂ ಅಧಿಕ ವಹಿವಾಟು ಮಾಡಿರುವ ಹಿನ್ನೆಲೆಯಲ್ಲಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಹೊಸದಿಲ್ಲಿಯಲ್ಲಿ ಡಿ. 7ರಂದು ನಡೆಯುವ ಕಾರ್ಯಕ್ರಮದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಯಾರಿವರು ರೈತ ರಮೇಶ್ ನಾಯಕ್?
ತೆಕ್ಕಟ್ಟೆ ರಮೇಶ್ ನಾಯಕ್, ಮೂಲತಃ ರೈಸ್ ಮಿಲ್ ಉದ್ಯಮಿ, ಇವರು ಹಣ್ಣುಗಳ ಬಗ್ಗೆ ಇರುವ ವಿಶೇಷ ಪ್ರೀತಿಯಿಂದ ವಿವಿಧ ಉಪ ಉಷ್ಣ ವಲಯದಲ್ಲಿ ಎಳೆಯುವ ವಿಶೇಷ ಹಣ್ಣುಗಳ ಬಗ್ಗೆ ಅಧ್ಯಯನ ಮಾಡಿ
ಕೆದೂರು ಗ್ರಾಮದಲ್ಲಿ ಸುಮಾರು 13 ಎಕ್ರೆ ಜಾಗದಲ್ಲಿ ಕಾಮಾಕ್ಷಿ ಫಾರ್ಮ್ಸ ಅನ್ನು 2019ರಲ್ಲಿ ಸ್ಥಾಪಿಸಿದರು. ರಂಬುಟನ್, 5 ವಿಧದ ಹಲಸು, ಮ್ಯಾಂಗೋಸ್ಟೀನ್, ದುರಿಯನ್, ಡ್ರಾಗನ್, ಪ್ಯಾಶನ್ ಹಣ್ಣು ಹೀಗೆ ವಿವಿಧ ಹಣ್ಣುಗಳನ್ನು ಯಾವುದೇ ಹಾನಿಕಾರಕ ರಾಸಾಯನಿಕಗಳನ್ನು ಬಳಸದೆ ಬೆಳೆಯುತ್ತಾರೆ.
ಹಣ್ಣುಗಳನ್ನು ಬೆಳೆಯುವುದು ಅಷ್ಟೇ ಅಲ್ಲದೆ ಹಣ್ಣುಗಳನ್ನು ಸ್ವಚ್ಛಗೊಳಿಸಿ ಕತ್ತರಿಸಿ ಬಾಕ್ಸ್ ಗಳಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡಿ ಕರಾವಳಿ ಕರ್ನಾಟಕದಲ್ಲಿ ಹಣ್ಣುಗಳ ವ್ಯಾಪಾರಕ್ಕೆ ಹೊಸ ಭಾಷ್ಯ ಬರೆದಿದ್ದು ರಮೇಶ್ ನಾಯಕ್ ಅವರ ಕಾಮಾಕ್ಷಿ ಫಾರ್ಮ್ಸ್.
ಹಲಸಿನ ಸೊಳೆ ಹೋಮ್ ಡೆಲಿವರಿ ಮಾಡ್ತಾರೆ!
ವಿವಿಧ ತಳಿಯ ಹಲಸಿನ ಹಣ್ಣನ್ನು ಬಾಕ್ಸ್ ಮಾಡಿ ತಳಿಗಳ ಬಗ್ಗೆ ಗ್ರಾಹಕರಿಗೆ ತಿಳಿಸಿ ಉತ್ತಮ ರುಚಿಯ ಶುಚಿಯಾದ ಹಲಸಿನ ಸೊಳೆಗಳ ಬಾಕ್ಸ್ ಅನ್ನು ಹೋಂ ಡೆಲಿವರಿ ಮೂಲಕ ಮನೆ ಮನೆಗೆ ತಲುಪಿಸಿ ಪ್ರಾರಂಭವಾದ ಹಣ್ಣುಗಳ ಬಾಕ್ಸ್ ಮಾರಾಟ ನಂತರದ ದಿನಗಳಲ್ಲಿ ಅನಾನಸ್, ಪಪಾಯ, ಡ್ರಾಗನ್ ಹೀಗೆ ತೋಟದಲ್ಲಿ ಬೆಳೆಯುವ ಎಲ್ಲ ಹಣ್ಣುಗಳಿಗೆ ಅಳವಡಿಸಿ ಅದರಲ್ಲಿ ಯಶ ಕಂಡಿದ್ದಾರೆ. ತೋಟದಿಂದ ಗ್ರಾಹಕರಿಗೆ ಎಂಬ ವಿಚಾರವನ್ನಿಟ್ಟು ಉತ್ತಮ ಗುಣಮಟ್ಟದ ಹಣ್ಣುಗಳನ್ನು ನೇರವಾಗಿ ಗ್ರಾಹರಿಗೆ ತಲುಪಿಸುವಲ್ಲಿ ಹೆಜ್ಜೆಯನ್ನು ಇಟ್ಟಿದ್ದಾರೆ.
ಇದನ್ನೂ ಓದಿ: Agriculture APP : ರೈತರಿಗಾಗಿ AI ಆಧಾರಿತ ಆ್ಯಪ್ ಶೀಘ್ರ; ಕೃಷಿ ಇಲಾಖೆಯಿಂದ ಮಹತ್ವದ ಹೆಜ್ಜೆ
ವಿದೇಶದಿಂದ ಆಮದಾಗುವ ಹಣ್ಣುಗಳನ್ನು ರುಚಿ ಮತ್ತು ಗುಣಮಟ್ಟದಲ್ಲಿ ಯಾವುದೇ ರಾಜಿಯಾಗದೇ ಹಾನಿಕಾರಕ ರಾಸಾಯನಿಕಗಳನ್ನೂ ಬಳಸದೆ ಬೆಳೆದು ಮಾರುಕಟ್ಟೆ ಮಾಡುವಲ್ಲಿ ಕಾಮಾಕ್ಷಿ ಫಾರ್ಮ್ಸ್ ಯಶ ಕಂಡಿದೆ.