ಬೆಂಗಳೂರು: ಹವಾಮಾನ ವೈಪರಿತ್ಯಗಳಿಂದ ದೇಶದ ಕಾಫಿ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಹವಾಮಾನಕ್ಕೂ ಹೊಂದಿಕೊಳ್ಳುವ ಕಾಫಿ ತಳಿಯನ್ನು ಅಭಿವೃದ್ಧಿಪಡಿಸಲು ಕಾಫಿ ಮಂಡಳಿ ಮುಂದಾಗಿದೆ.
ಜಾಗತಿಕ ಭೂತಾಪಮಾನ ಏರಿಕೆಯಿಂದಾಗಿ ಹವಾಮಾನದಲ್ಲಿ ತೀವ್ರ ತರದ ಬದಲಾವಣೆಗಳಾಗುತ್ತಿದ್ದು, ಬಿಸಿಲು ಬರಬೇಕಾದ ಸಮಯದಲ್ಲಿ ಮಳೆ ಬೀಳುತ್ತಿದೆ, ಕೆಲವೆಡೆ ಮಳೆಯೇ ಕಡಿಮೆಯಾಗಿದೆ. ಮುಖ್ಯವಾಗಿ ಕಾಫಿ ಬೆಳೆಯುವ ರಾಜ್ಯದ ಮಲೆನಾಡು ಭಾಗದ ಹವಾಮಾನದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತಿರುವುದು ಈಗ ಎಲ್ಲರ ಗಮನಕ್ಕೂ ಬಂದಿದೆ. ಇದು ಎಲ್ಲ ಬೆಳೆಗಳಂತೆ ಕಾಫಿ ಬೆಳೆಯ ಮೇಲೂ ಪರಿಣಾಮ ಬೀರುತ್ತಿದೆ. ಕಾಫಿ ಹೂ ಬಿಡುವ ಮತ್ತು ಕಾಯಿ ಕಟ್ಟುವ ಸಂದರ್ಭದಲ್ಲಿ ವಾತಾವರಣದಲ್ಲಿ ಆಗುವ ಬದಲಾವಣೆಗಳು ಬೆಳೆಯ ಇಳುವರಿಯ ಮೇಲೆ ತೀವ್ರ ತರದ ಪರಿಣಾಮಗಳನ್ನುಂಟು ಮಾಡುತ್ತಿದೆ.
ಕಡಿಮೆ ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬೀಳುತ್ತಿರುವುದರಿಂದ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಪ್ರತಿಕೂಲ ಪರಿಸ್ಥಿತಿಗೂ ಹೊಂದಿಕೊಂಡು ಬೆಳೆಯುವ ಕಾಫಿ ತಳಿಯನ್ನು ಅಭಿವೃದ್ಧಿ ಪಡಿಸಲು ಮಂಡಳಿ ನಿರ್ಧರಿಸಿದೆ ಎಂದು ಮಂಡಳಿಯ ಸಿಇಒ ಮತ್ತು ಕಾರ್ಯದರ್ಶಿ ಕೆ ಜಿ ಜಗದೀಶ್ ಹೇಳಿದ್ದಾರೆ.
ಮಂಡಳಿಯ ವಿಜ್ಞಾನಿಗಳೇ ಈ ತಳಿಯನ್ನು ಅಭಿವೃದ್ಧಿಪಡಿಸುತ್ತಿದ್ದು, ಹವಾಮಾನ ವೈಪರಿತ್ಯಗಳ ಬಗ್ಗೆ ಅಗತ್ಯವಾಗಿರುವ ಮಾಹಿತಿಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ (ಇಸ್ರೊ) ಪಡೆದುಕೊಳ್ಳಲು ಉದ್ದೇಶಿಸಲಾಗಿದೆ. “ಇಸ್ರೊ ಹೊಂದಿರುವ ತಂತ್ರಜ್ಞಾನದ ನೆರವಿನಿಂದ ಹವಾಮಾನ ವೈಪರಿತ್ಯವನ್ನು ಸರಿಯಾಗಿ ಅರ್ಥಮಾಡಿಕೊಂಡು, ಇದಕ್ಕೆ ಹೊಂದಿಕೊಳ್ಳುವಂತಹ ತಳಿಯನ್ನು ಅಭಿವೃದ್ಧಿ ಪಡಿಸಲಾಗುವುದುʼʼ ಎಂದು ಕೆ ಜಿ ಜಗದೀಶ್ ವಿವರಿಸಿದ್ದಾರೆ.
ತಂತ್ರಜ್ಞಾನದ ನೆರವಿನ ಕುರಿತು ಮಂಡಳಿಯು ಇಸ್ರೊ ಜತೆಗೆ ಸದ್ಯವೇ ಒಪ್ಪಂದ ಮಾಡಿಕೊಳ್ಳಲಿದೆ. ಈ ತಳಿಯನ್ನು ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ಕಾಫಿ ಬೆಳೆಯು ಎಷ್ಟು ಇಂಗಾಲದ ಸೃಷ್ಟಿಗೆ ಕಾರಣವಾಗುತ್ತದೆ. ಯಾವ ಪ್ರಮಾಣದಲ್ಲಿ ಇಂಗಿಸುತ್ತದೆ ಎಂಬ ಕುರಿತೂ ಅಧ್ಯಯನ ನಡೆಯಲಿದೆ. ಈ ಎಲ್ಲ ಮಾಹಿತಿಯನ್ನು ಇಟ್ಟುಕೊಂಡೇ ಹೊಸ ತಳಿಯನ್ನು ಸೃಷ್ಟಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನಲ್ಲಿರುವ ಕಾಫಿ ಮಂಡಳಿಯ ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ (ಸಿಸಿಆರ್‌ಐ)ಯಲ್ಲಿ ಈ ನೂತನ ತಳಿಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ಸಿಸಿಆರ್‌ಐನಲ್ಲಿ ನೂರಾರು ಹಳೆಯ ಮತ್ತು ಹೊಸ ತಳಿಗಳಿವೆ. ಇವುಗಳಲ್ಲಿನ ಅಂಶಗಳನ್ನು ಸಂಗ್ರಹಿಸಿಕೊಂಡು ಹೊಸ ತಳಿಯನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಸಂಶೋಧನಾ ಕೇಂದ್ರವು ಕೊಡಗು, ವಿಶಾಖಪಟ್ಟಣ ಸೇರಿದಂತೆ ದೇಶ ಐದು ಕಡೆ ಸಂಶೋಧನಾ ಕೇಂದ್ರಗಳನ್ನು ಹೊಂದಿದ್ದು, ಹೊಸ ತಳಿಯ ಅಭಿವೃದ್ಧಿಗೆ ಇವುಗಳ ಸಹಕಾರವನ್ನೂ ಪಡೆದುಕೊಳ್ಳಲಾಗುತ್ತದೆ.
ಇದುವರೆಗೆ ಸಂಶೋಧನಾ ಕೇಂದ್ರವು ಕೀಟ, ರೋಗ ನಿರೋಧಕ, ಹೆಚ್ಚಿನ ಇಳುವರಿ ನೀಡುವ ತಳಿಗಳನ್ನು ಮಾತ್ರ ಅಭಿವೃದ್ಧಿಪಡಿಸುತ್ತಿತ್ತು. ಇದೇ ಮೊದಲ ಬಾರಿಗೆ ಹವಾಮಾನ ವೈಪರೀತ್ಯವನ್ನು ಎದುರಿಸುವ ತಳಿಯನ್ನು ಅಭಿವೃದ್ಧಿ ಪಡಿಸಲು ತೀರ್ಮಾನಿಸಿದೆ. ಈ ತಳಿಯ ಅಭಿವೃದ್ಧಿಗೆ ಎಷ್ಟು ಹಣ ಮತ್ತು ಸಮಯ ಬೇಕಾಗಬಹುದು ಎಂಬೆಲ್ಲಾ ಲೆಕ್ಕಾಚಾರದಲ್ಲಿ ಸದ್ಯ ಮಂಡಳಿ ತೊಡಗಿಸಿಕೊಂಡಿದೆ.
ಕಾಫಿ ಮಂಡಳಿಯು ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾಯತ್ತ ಸಂಸ್ಥೆಯಾಗಿದೆ. ಕಾಫಿ ಬೆಳೆಗಾರರು ಹಾಗೂ ಕಾಫಿ ಉದ್ಯಮದಲ್ಲಿ ತೊಡಗಿರುವ ಇತರ ಪಾಲುದಾರರ ಯೋಗಕ್ಷೇಮಕ್ಕಾಗಿ ಭಾರತದ ವಿವಿಧ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಕಚೇರಿಗಳನ್ನು ಹೊಂದಿದೆ. ಬೆಂಗಳೂರಿನಲ್ಲಿ ಇದರ ಕೇಂದ್ರ ಕಚೇರಿ ಇದೆ.
ಇದನ್ನೂ ಓದಿ | ಬಿಸಿಲ ನಾಡಿನಲ್ಲಿ ಕಾಶ್ಮೀರ ಫಲ, ಚೀನೀ ಫಲ, ದುಬೈ ಫಲ ಬೆಳೆದ ರೈತ !