Site icon Vistara News

Donkey milk: ಕತ್ತೆಗೂ ಬಂತು ಕಾಲ; ಕತ್ತೆ ಹಾಲು ಲೀಟರ್‌ಗೆ 1,350 ರೂ.

donkey milk

donkey milk

ಗಾಂಧಿನಗರ: ತನ್ನ ಔಷಧೀಯ ಗುಣಗಳಿಂದಾಗಿ ಕತ್ತೆ ಹಾಲಿಗೆ (Donkey milk) ಬೇಡಿಕೆ ಹೆಚ್ಚಾಗುತ್ತಿದ್ದು, ಸದ್ಯ ಲೀಟರ್‌ಗೆ 1,350 ರೂ. ಇದೆ. ಈ ಬಗ್ಗೆ ಸ್ವತಃ ಕೇಂದ್ರ ಪಶುಸಂಗೋಪನಾ ಸಚಿವ ಪುರುಷೋತ್ತಮ್ ರೂಪಾಲಾ (Union Minister for Animal Husbandry Parshottam Rupala) ಮಾಹಿತಿ ನೀಡಿದ್ದು, ಮೇಕೆ ಮತ್ತು ಒಂಟೆ ಹಾಲಿನ ಔಷಧೀಯ ಮೌಲ್ಯಗಳನ್ನು ಪ್ರತಿಪಾದಿಸುವಾಗ ಕತ್ತೆ ಹಾಲು ದುಬಾರಿಯಾಗಿದೆ ಎಂದು ತಿಳಿಸಿದರು.

ಗುಜರಾತ್‌ನ ಗಾಂಧಿನಗರದಲ್ಲಿ ಪ್ರಾಣಿಗಳ ಸಂಚಾರಿ ಡಿಸ್ಪೆನ್ಸರಿ ಘಟಕಗಳ ಕಾರ್ಯಾರಂಭದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಈಗ ಮೇಕೆ ಹಾಲಿಗೆ ಬೇಡಿಕೆ ಇದೆ. ಗುಜರಾತ್‌ನ ಮೇಕೆ ಸಾಕಾಣಿಕೆದಾರರು ನನ್ನನ್ನು ಭೇಟಿ ಮಾಡಿದ್ದಾರೆ. ಹಸುವಿನ ಹಾಲನ್ನು ಸಂಗ್ರಹಿಸುವ ರೀತಿಯಲ್ಲಿಯೇ ಮೇಕೆ ಹಾಲನ್ನು ಸಂಗ್ರಹಿಸಲು ಸಹಾಯ ಮಾಡಲು ಅಮುಲ್‌ನೊಂದಿಗೆ ಸಭೆಯನ್ನು ನಡೆಸುವಂತೆ ಅವರು ನನ್ನಲ್ಲಿ ಮನವಿ ಮಾಡಿದ್ದಾರೆ. ಮೇಕೆ ಹಾಲು ಸಾಮಾನ್ಯ ಹಾಲಿಗಿಂತ ಹೆಚ್ಚಿನ ಬೆಲೆಗೆ ಮಾರಾಟವಾಗಲು ಪ್ರಾರಂಭಿಸಿದರೆ ಆಶ್ಚರ್ಯಪಡಬೇಡಿ. ಏಕೆಂದರೆ ಮೇಕೆ ಹಾಲು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ” ಎಂದು ರೂಪಾಲಾ ಹೇಳಿದರು.

“ಪ್ರಸ್ತುತ, ಕತ್ತೆಯ ಹಾಲು ಪ್ರತಿ ಲೀಟರ್‌ಗೆ 1,350 ರೂ.ಗೆ ಮಾರಾಟವಾಗುತ್ತಿದೆ. ಇದು ಮಾರುಕಟ್ಟೆಯಲ್ಲಿ ಅತ್ಯಂತ ದುಬಾರಿ ಹಾಲು. ದೆಹಲಿಯ ಮಹಿಳೆಯೊಬ್ಬರು ಕತ್ತೆಯ ಹಾಲಿನಿಂದ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಸ್ಟಾಲ್ ಹೊಂದಿದ್ದ ಅವರ ಬಳಿ, ಇಷ್ಟು ದುಬಾರಿ ಹಾಲಿನೊಂದಿಗೆ ನೀವು ಏನು ಮಾಡುತ್ತಿದ್ದೀರಿ? ಎಂದು ಕೇಳಿದ್ದೆ. ಅದಕ್ಕೆ ಅವರು ಹಾಲನ್ನು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುತ್ತಿದೆ ಎಂದು ತಿಳಿಸಿದ್ದರು. ಈ ಉತ್ಪನ್ನಗಳಿಗೆ ಸಾಕಷ್ಟು ಬೇಡಿಕೆ ಇದೆʼʼ ಎಂದು ರೂಪಾಲಾ ವಿವರಿಸಿದರು.

ಸೂಕ್ತ ಮಾರುಕಟ್ಟೆ ಲಭಿಸಬೇಕು

ʼʼಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿರುವ ಮೇಕೆ ಮತ್ತು ಒಂಟೆ ಹಾಲುಗಳಿಗೆ ಸೂಕ್ತ ಮಾರುಕಟ್ಟೆ ಲಭಿಸಬೇಕುʼʼ ಎಂದು ರೂಪಾಲಾ ಅಭಿಪ್ರಾಯಪಟ್ಟರು. ಇನ್ನು ಗೋವುಗಳ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ ಅವರು, “ಹಸುಗಳನ್ನು ಹೊಂದಿರುವವರನ್ನು ಹಳ್ಳಿಯಲ್ಲಿ ಮಾತ್ರವಲ್ಲ, ಎಲ್ಲೆಡೆ ಸಮೃದ್ಧರೆಂದು ಪರಿಗಣಿಸುವ ದಿನ ದೂರವಿಲ್ಲ. ಈಗ ಹಾಲು ಮಾತ್ರವಲ್ಲದೆ ಗೋಬರ್ (ಹಸುವಿನ ಸೆಗಣಿ) ಮತ್ತು ಗೋಮೂತ್ರ, ಗೊಬ್ಬರಗಳನ್ನು ಬಳಸಲಾಗುತ್ತಿದೆ. ಗುಜರಾತ್‌ನಲ್ಲಿ ಹಸುವಿನ ಸೆಗಣಿಗೆ ಈಗಾಗಲೇ ಕೆ.ಜಿ.ಗೆ 2 ರೂ. ಇದೆ ಮತ್ತು ಮುಂದಿನ ದಿನಗಳಲ್ಲಿ ಇದು ಹೆಚ್ಚಾಗುವ ಸಾಧ್ಯತೆ ಇದೆʼʼ ಎಂದು ತಿಳಿಸಿದರು.

ಇದನ್ನೂ ಓದಿ: ಮೋದಿ ಇರುವ ಸಿರಿಧಾನ್ಯಗಳ ಹಾಡು ಗ್ರ್ಯಾಮಿ ಅವಾರ್ಡ್‌ಗೆ ನಾಮಿನೇಟ್!

“ಹಾಲು ಸಹಕಾರ ಸಂಘಗಳ ವಾರ್ಷಿಕ ವರದಿಗಳಲ್ಲಿ ಹಸುವಿನ ಸೆಗಣಿ ಮತ್ತು ಗೋಮೂತ್ರದಿಂದ ಬರುವ ಆದಾಯವನ್ನೂ ಪರಿಗಣಿಸಲಾಗುತ್ತದೆ” ಎಂದು ಅವರು ಹೇಳಿದರು. ಜತೆಗೆ ಅವರು ದೇಸಿ ತಳಿಯ ಹಸುಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಉಪಸ್ಥಿತರಿದ್ದರು.

ಪೋಷಕಾಂಶಗಳಿಂದ ಸಮೃದ್ಧ ಕತ್ತೆ ಹಾಲು

ಕತ್ತೆ ಹಾಲು ಚರ್ಮ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ. ಹಸು, ಮೇಕೆ, ಕುರಿ, ಎಮ್ಮೆ ಮತ್ತು ಒಂಟೆಗಳ ಹಾಲಿಗೆ ಹೋಲಿಸಿದರೆ ಕತ್ತೆ ಹಾಲು ಮಾನವನ ಎದೆ ಹಾಲನ್ನು ಹೋಲುತ್ತದೆ ಎನ್ನುವುದು ಹಲವು ಅಧ್ಯಯನಗಳ ಮೂಲಕ ಸಾಬೀತಾಗಿದೆ. ಇದರಲ್ಲಿ ವಿಟಮಿನ್‌ಗಳು, ಖನಿಜ ಮತ್ತು ಪ್ರಮುಖ ಕೊಬ್ಬಿನಾಮ್ಲಗಳಿವೆ. ಜತೆಗೆ ಕ್ಯಾಲ್ಸಿಯಂ, ರಂಜಕ ಮತ್ತು ಪೊಟ್ಯಾಸಿಯಮ್ ಅನ್ನು ಹೊಂದಿದೆ. ಆದರೆ ಕತ್ತೆ ಹಾಲು ವಿರಳವಾಗಿರುವುದರಿಂದ ದುಬಾರಿಯಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version