ಬೆಂಗಳೂರು: ಕರ್ನಾಟಕದ ಇತಿಹಾಸದಲ್ಲಿಯೇ ಈ ಬಾರಿ ಅತಿ ಭೀಕರ ಬರಗಾಲಕ್ಕೆ (Karnataka Drought) ರಾಜ್ಯ ತುತ್ತಾಗಿದೆ. 236 ತಾಲೂಕುಗಳ ಪೈಕಿ 223 ತಾಲೂಕುಗಳು ಸಂಪೂರ್ಣ ಬರಪೀಡಿತವಾಗಿವೆ. ಇನ್ನು ಬಾಕಿ ಕೇವಲ 13 ತಾಲೂಕುಗಳು ಮಾತ್ರವೇ ಬರಪೀಡಿತ ಪಟ್ಟಿಯಿಂದ ಹೊರಗುಳಿದಂತೆ ಆಗಿದೆ. ಈಗಾಗಲೇ ರಾಜ್ಯ ಸರ್ಕಾರ (Karnataka Government) ಸಹ 324 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ. ಈಗ ರೈತರು ಬರ ಪರಿಹಾರವನ್ನು ಪಡೆಯಬೇಕೆಂದರೆ ಅದಕ್ಕೆ 15 ದಿನಗಳ ಒಳಗೆ ರಾಜ್ಯದ ಫ್ರೂಟ್ಸ್ (FRUITS Karnataka) ಪೋರ್ಟಲ್ನಲ್ಲಿ ಕೆಲವು ಮಾಹಿತಿಯನ್ನು ಭರ್ತಿ ಮಾಡಬೇಕಿದೆ.
ಫ್ರೂಟ್ ಐಡಿಯಲ್ಲಿ (FRUITS ID) ದಾಖಲಾಗಿರುವ ಜಮೀನಿನ ಮಾಹಿತಿ ಆಧಾರದ ಮೇಲೆ ಪರಿಹಾರ ಪಾವತಿ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ (Revenue Minister Krishna ByreGowda) ಹೇಳಿದ್ದಾರೆ. ರೈತರು ತಮ್ಮ ಜಮೀನಿನ ನಿಖರ ಮಾಹಿತಿಯನ್ನು ಮುಂದಿನ 15 ದಿನಗಳ ಒಳಗೆ ಫ್ರೂಟ್ಸ್ ದತ್ತಾಂಶದಲ್ಲಿ (Fruits Data) ಭರ್ತಿ ಮಾಡಿಸಬೇಕು. ಇದರಿಂದ ಅಕ್ರಮಗಳು ತಪ್ಪುವುದಲ್ಲದೆ, ನೈಜ ಫಲಾನುಭವಿಗಳಿಗೆ ಪರಿಹಾರದ ಹಣ ಬಿಡುಗಡೆಯಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಒಂದು ತಿಂಗಳೊಳಗೆ ಇದನ್ನು ಸರಿಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: Ration Card : ಹೀಗಿದ್ದರೆ 3.26 ಲಕ್ಷ ಬಿಪಿಎಲ್, ಅಂತ್ಯೋದಯ ಕಾರ್ಡ್ ರದ್ದು? ಸರ್ಕಾರದ ಗ್ಯಾರಂಟಿಗೂ ಕೊಕ್ಕೆ?
ಇದಕ್ಕೆ ಬೇಕು ಎಫ್ಐಡಿ ಸಂಖ್ಯೆ (FID Number)
ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಎಲ್ಲ ಇಲಾಖೆಗಳಲ್ಲಿ ರೈತರಿಗಾಗಿ ಜಾರಿಯಲ್ಲಿರುವ ಯೋಜನೆಗಳ ಸೌಲಭ್ಯ ಪಡೆಯಲು ರೈತರು ಎಫ್.ಐ.ಡಿ (FID number) ಕಡ್ಡಾಯವಾಗಿದೆ. ಇದನ್ನು ಕೃಷಿ ಇಲಾಖೆಯಿಂದ ಮಾಡಿಸಿಕೊಳ್ಳಬೇಕು. ಬರ ಪರಿಹಾರ, ಬೆಳೆ ವಿಮೆ, ವಿವಿಧ ಯೋಜನೆಯಡಿ ಯಂತ್ರೋಪಕರಣಗಳ ಸಹಾಯಧನ ಪಡೆಯಲು ಹೀಗೆ ಅನೇಕ ಯೋಜನೆಯಡಿ ರೈತರು ಸೌಲಭ್ಯ ಪಡೆಯಲು ಈ ನಂಬರ್ ಅತಿ ಅವಶ್ಯಕವಾಗಿದೆ.
ಬರ ಪರಿಹಾರಕ್ಕಾಗಿ FID ನಂಬರ್ ಬೇಕೇ ಬೇಕು
ಬರ ಪರಿಹಾರದ ಹಣವನ್ನು ರೈತರು ಪಡೆದುಕೊಳ್ಳಬೇಕು ಎಂದರೆ ಇದಕ್ಕೆ ಎಫ್ಐಡಿ ಸಂಖ್ಯೆಯನ್ನು ಹೊಂದಬೇಕಾಗಿರುತ್ತದೆ. ಇಲ್ಲದಿದ್ದರೆ ಸರ್ಕಾರ ನಿಮ್ಮ ಖಾತೆಗೆ ಹಣ ಮಾಡುವುದಿಲ್ಲ. ಇಲ್ಲಿ ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಈ ವ್ಯವಸ್ಥೆಯನ್ನು ಮಾಡಲಾಗಿದೆ.
ಎಫ್ಐಡಿ ಮಾಡಿಸದವರು ಈಗ ಏನು ಮಾಡಬೇಕು?
ಇದುವರೆಗೂ ಎಫ್ಐಡಿ ಮಾಡಿಸದೇ ಇದ್ದರೆ ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರಕ್ಕೆ ಇಲ್ಲವೇ ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಅಗತ್ಯ ದಾಖಲೆಗಳನ್ನು ನೀಡಿ ಎಫ್ಐಡಿ ಮಾಡಿಸಬೇಕು.
“ಪ್ರೂಟ್ಸ್” ನಂಬರ್ ಎಂದರೆ ಏನು? ಏಕೆ ಉಪಯೋಗ?
ಇದು ರೈತರಿಗಾಗಿ ಮಾಡಿರುವ ಪೋರ್ಟಲ್ ಆಗಿದೆ. ಕೃಷಿ ಜಮೀನಿನ ಮಾಹಿತಿಯನ್ನು ಇದರಲ್ಲಿ ನೀಡಲಾಗುತ್ತದೆ. ಈ ಪೋರ್ಟಲ್ ಮೂಲಕ ನೋಂದಾಯಿಸಿಕೊಂಡಾಗ ರೈತರಿಗೆ ಎಫ್ಐಡಿ ನಂಬರ್ ಲಭ್ಯವಾಗುತ್ತದೆ. ಇಲ್ಲಿ ಒಮ್ಮೆ ಎಫ್ಐಡಿ ನಂಬರ್ ಅನ್ನು ಪಡೆದರೆ ಆ ರೈತರ ಸಂಪೂರ್ಣ ಜಮೀನಿನ ಮಾಹಿತಿಯು ಇಲ್ಲಿ ಸಿಗುತ್ತದೆ. ಜಮೀನಿನ ವಿವರ, ಬೆಳೆದ ಬೆಳೆಗಳ ಸಹಿತ ಸರ್ಕಾರದಿಂದ ದೊರೆಯುವ ಕೃಷಿ ಸೌಲಭ್ಯಗಳನ್ನು ಪಡೆಯಲು ನೋಂದಾಯಿಸಿಕೊಳ್ಳಬಹುದು.
ನೋಂದಣಿ ಹೇಗೆ? ಯಾವೆಲ್ಲ ದಾಖಲೆಗಳು ಬೇಕು?
ಸಮೀಪದ ಕೃಷಿ ಇಲಾಖೆ (ಹೋಬಳಿಯ ರೈತ ಸಂಪರ್ಕ ಕೇಂದ್ರ), ತೋಟಗಾರಿಕೆ ಇಲಾಖೆಗೆ ದಾಖಲೆಗಳೊಂದಿಗೆ ರೈತ ಭೇಟಿ ನೀಡಬೇಕು.
ಆರ್.ಟಿ.ಸಿ / ಪಹಣಿ / ಉತಾರ್, ಆಧಾರ್ ಕಾರ್ಡ್, ರಾಷ್ಟ್ರೀಕೃತ ಬ್ಯಾಂಕ್ನ ಪಾಸ್ ಪುಸ್ತಕದ ಪ್ರತಿ, ಪಾಸ್ಪೋರ್ಟ್ ಅಳತೆಯ ಫೋಟೊ, ಮೊಬೈಲ್ ನಂಬರ್ ನೀಡಿದರೆ ನಿಮ್ಮ ಹೆಸರು ಪೋರ್ಟಲ್ನಲ್ಲಿ ಸೇರ್ಪಡೆಗೊಂಡು ಬಳಿಕ ಎಫ್.ಐ.ಡಿ. (FID) ನಂಬರ್ ದೊರೆಯುತ್ತದೆ.
ಮೊಬೈಲ್ನಲ್ಲಿಯೇ FID ಸಂಖ್ಯೆ ಪಡೆಯಿರಿ!
ಎಫ್ಐಡಿ ಸಂಖ್ಯೆಯನ್ನು ನೀವು ನಿಮ್ಮ ಮೊಬೈಲ್ ಮೂಲಕವೇ ಪಡೆಯಬಹುದಾಗಿದೆ. ಇದಕ್ಕೆ ನೀವು ಕೆಲವು ನಿಯಮಗಳನ್ನು ಅನುಸರಿಸಬೇಕು. ಇಲ್ಲಿ ಕೆಳಗಿನ ಹಂತಗಳನ್ನು ಅನುಸರಿಸಿ ಎಫ್ಐಡಿ ನಂಬರ್ ಅನ್ನು ನೀವೇ ಪಡೆಯಿರಿ.
- ಫ್ರೂಟ್ಸ್ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ Citizen Login ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
- ಬಳಿಕ ವೆಬ್ಸೈಟ್ ಬಲಬದಿಯಲ್ಲಿ ಅನುಕೂಲಕ ಭಾಷೆಯಾಗಿ ಕನ್ನಡ ಮತ್ತು ಇಂಗ್ಲಿಷ್ ಅನ್ನು ನೀಡಲಾಗಿದ್ದು, ಯಾವುದಾದರೂ ಒಂದು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇದಾದ ಮೇಲೆ Citizen Registration ಮೇಲೆ ಕ್ಲಿಕ್ ಮಾಡಬೇಕು.
- ಅಲ್ಲಿ ನಿಮ್ಮ ಆಧಾರ್ ಕಾರ್ಡ್ನಲ್ಲಿರುವಂತೆ ಹೆಸರನ್ನು ನಮೂದು ಮಾಡಲು ಸೂಚಿಸುತ್ತದೆ. ಜತೆಗೆ ಆಧಾರ್ ಸಂಖ್ಯೆಯನ್ನೂ ಟೈಪ್ ಮಾಡಿ ದೃಢೀಕರಣ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಸಬ್ಮಿಟ್ ಮಾಡುವುದು.
- ತರುವಾಯ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಇ-ಮೇಲ್ ವಿಳಾಸ ಇದ್ದಲ್ಲಿ ಅದನ್ನೂ ನಮೂದಿಸುವುದು. ಇಲ್ಲದೇ ಹೋದ ಪಕ್ಷದಲ್ಲಿ “NO” ಎಂಬ ಆಯ್ಕೆಯನ್ನು ಆಯ್ದುಕೊಳ್ಳಬೇಕು. ಬಳಿಕ “PROCEED” ಬಟನ್ ಅನ್ನು ಆಯ್ಕೆ ಮಾಡಬೇಕು.
- ಬಳಿಕ ನಮೂದಿಸಲ್ಪಟ್ಟ ಮೊಬೈಲ್ ಸಂಖ್ಯೆಗೆ “ಒಟಿಪಿ” ಬಂರುತ್ತದೆ. ಆ ಸಂಖ್ಯೆಯನ್ನು ನಮೂದಿಸಿ “Submit” ಮೇಲೆ ಕ್ಲಿಕ್ ಮಾಡಬೇಕು.
- ಈಗ ಪ್ರೂಟ್ಸ್ ಖಾತೆಗೆ ಪಾಸ್ವರ್ಡ್ ರಚಿಸಬೇಕಾಗುತ್ತದೆ. ಇದಾದ ಬಳಿಕ ಫ್ರೂಟ್ಸ್ ಲಾಗಿನ್ ಲಭ್ಯವಾಗುತ್ತದೆ.
- ಪುನಃ Citizen Login ಮೂಲಕ ನಿಮ್ಮ ಪ್ರೂಟ್ಸ್ ಖಾತೆಗೆ ಲಾಗಿನ್ ಆಗಿ ಅದನ್ನು ತೆರೆಯಬೇಕು.
- ಲಾಗಿನ್ ಆದ ಬಳಿಕ “REGISTRATION” (ನೋಂದಣಿ) ಆಯ್ಕೆಯಲ್ಲಿ Online Registration ಮೇಲೆ ಕ್ಲಿಕ್ ಮಾಡಬೇಕು.
- ಹೊಸತಾಗಿ ಅರ್ಜಿ ಸಲ್ಲಿಬೇಕಿದ್ದರಿಂದ ಅಲ್ಲಿ Registration New Farmer ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. ನಿಮ್ಮ ಹೆಸರು, ಜನ್ಮ ದಿನಾಂಕ, ತಂದೆಯ ಹೆಸರು, ನಿಮ್ಮ ಮೊಬೈಲ್ ಸಂಖ್ಯೆ, ವಿಳಾಸ, ಭೂಮಿಯ ಮಾಹಿತಿಯನ್ನು ಹಾಗೂ ಆಯ್ಕೆಯಲ್ಲಿ ನಿಮ್ಮ ಹೆಸರಿನಲ್ಲಿರುವ ಎಲ್ಲ ಸರ್ವೆ ನಂಬರ್ಗಳನ್ನು ನಮೂದು ಮಾಡಬೇಕು. ಅಲ್ಲದೆ, ಬ್ಯಾಂಕ್ ಖಾತೆ ವಿವರ ನಮೂದಿಸಿದ ಬಳಿಕ ಪೋಟೊವನ್ನು ಅಪ್ಲೋಡ್ ಮಾಡಬೇಕು.
- ಎಲ್ಲ ವಿವರ ಭರ್ತಿ ಮಾಡಿದ ನಂತರ “save and Forward” ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಈ ಎಲ್ಲ ಪ್ರಕ್ರಿಯೆಗಳ ನಂತರ ನಿಮಗೆ ಎಫ್.ಐ.ಡಿ. (FID) ನಂಬರ್ ದೊರೆಯುತ್ತದೆ.
ಎಫ್.ಐ.ಡಿ ಸಂಖ್ಯೆಯಿಂದ ಏನೆಲ್ಲ ಲಾಭ?
ಈ ವೆಬ್ ಪೋರ್ಟಲ್ನಲ್ಲಿ ಹೆಸರನ್ನು ನೋಂದಾಯಿಸಿಕೊಂಡರೆ ವಿವಿಧ ಕೃಷಿಗೆ ಪೂರಕ ಇಲಾಖೆಗಳ ಸೌಲಭ್ಯ, ಬೆಳೆ ಸಾಲ, ಬೆಳೆ ವಿಮೆ, ಕೃಷಿಕನ ಮಕ್ಕಳಿಗೆ ಸಿಗುವ ವಿದ್ಯಾನಿಧಿ, ಬೆಂಬಲ ಬೆಲೆ ಯೋಜನೆಯಡಿ ಉತ್ಪನ್ನ ಮಾರಾಟ ಹಾಗೂ ಕೃಷಿಗೆ ಪೂರಕವಾದ ಇತರೆ ಸೌಲಭ್ಯಗಳು ದೊರೆಯುತ್ತವೆ. ಇನ್ನು ಕಳೆದ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ ರೈತ ಶಕ್ತಿ ಯೋಜನೆಯಡಿ ಪ್ರತಿಯೊಬ್ಬ ಕೃಷಿಕನಿಗೂ 1 ಎಕರೆಗೆ 250 ರೂ.ಯಂತೆ ಗರಿಷ್ಠ 5 ಎಕರೆಗೆ 1250 ರೂ. ಇಂಧನ ವೆಚ್ಚ ಕೃಷಿಕನ ಖಾತೆಗೆ ನೇರ ಜಮೆಗೊಳ್ಳುತ್ತದೆ. ಹೀಗಾಗಿ ಇದೂ ಸೇರಿದಂತೆ ಸರ್ಕಾರದ ಹಲವು ಯೋಜನೆಗಳ ಲಾಭವನ್ನು ಪಡೆಯಬೇಕು ಎಂದರೆ ಕೃಷಿಕ ಕಡ್ಡಾಯವಾಗಿ ಎಫ್ಐಡಿ ಸಂಖ್ಯೆಯನ್ನು ಹೊಂದಿರಬೇಕು.
ಇದನ್ನೂ ಓದಿ: HSRP Number Plate : ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಲ್ವಾ? ನಿಮಗಿರೋದು ಆರೇ ದಿನ; ಇಲ್ದಿದ್ರೆ ದಂಡ!
ಎಫ್ಐಡಿ ಸಂಖ್ಯೆ ಇದ್ದರೆ ತಿಳಿಯುವುದು ಹೇಗೆ?
ಈಗಾಗಲೇ ಎಫ್ಐಡಿಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದರೆ, ಆ ನಂಬರ್ ನಿಮಗೆ ನೆನಪಿಲ್ಲದೇ ಇದ್ದರೆ ಅದನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ವೆಬ್ಸೈಟ್ನ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಿ “Search” ಬಟನ್ ಮೇಲೆ ಕ್ಲಿಕ್ ಮಾಡಿದರೆ ಎಫ್ಐಡಿ ಸಂಖ್ಯೆ ತಿಳಿಯುತ್ತದೆ.