Site icon Vistara News

GM Mustard | ಕೃಷಿ ಕ್ಷೇತ್ರದಲ್ಲಿ ಮತ್ತೆ ಕುಲಾಂತರಿ ಬಿರುಗಾಳಿ; ಬಿಟಿ ಸಾಸಿವೆಗೆ ಅನುಮತಿ

GM Mustard

ಬೆಂಗಳೂರು: ಹೈಬ್ರಿಡ್‌ ಕುಲಾಂತರಿ ಸಾಸಿವೆ (GM mustard) ಬೆಳೆಯಲು ಕುಲಾಂತರಿ ನಿಯಂತ್ರಕ ಜೆನೆಟಿಕ್‌ ಎಂಜಿನಿಯರಿಂಗ್‌ ಮೌಲ್ಯಮಾಪನ ಸಮಿತಿ (Genetic Engineering Appraisal Committee (GEAC)) ಅನುಮತಿ ನೀಡಿದ್ದು, ಇದರ ಕುರಿತು ಕೃಷಿ ಕ್ಷೇತ್ರದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಆರು ವರ್ಷಗಳ ಹಿಂದೆ ದೆಹಲಿ ವಿಶ್ವವಿದ್ಯಾಲಯದ ತಳಿ ವಿಜ್ಞಾನಿಗಳ ತಂಡ (ಮಾಜಿ ಕುಲಪತಿ ದೀಪಕ್‌ ಪೆಂಟಾಲ್‌ ನೇತೃತ್ವದ ವಿಜ್ಞಾನಿಗಳು) ಕೇಂದ್ರ ಸರ್ಕಾರದ ಧನ ಸಹಾಯದಿಂದ ಅಭಿವೃದ್ಧಿ ಪಡಿಸಿದ ಹೆಚ್ಚು ಇಳುವರಿ ನೀಡುವ ಡಿಎಂಎಚ್‌-11 ((Dhara Mustard Hybrid-11) ಎಂಬ ಕುಲಾಂತರಿ ಸಾಸಿವೆಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಬೆಳೆಯಲು ಕೇಂದ್ರ ಪರಿಸರ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಈ ಸಮಿತಿ ಅಕ್ಟೋಬರ್‌ 18 ರಂದು ಅನುಮತಿ ನೀಡಿತ್ತು.

ನಾಲ್ಕು ವರ್ಷಗಳವರೆಗೆ ಈ ಕುಲಾಂತರಿ ಸಾಸಿವೆ ಬೆಳೆಯಲು ಅನುಮತಿ ನೀಡಲಾಗಿದ್ದು, ಇದರ ಸಾಧಕ-ಬಾಧಕಗಳ ಕುರಿತು ಭಾರತೀಯ ಕೃಷಿ ಸಂಶೋಧನಾ ಮಂಡಳಿಗೆ (ICAR) ಹೆಚ್ಚಿನ ಅಧ್ಯಯನ ನಡೆಸಲು ಸೂಚಿಸಲಾಗಿದೆ. ಎರಡು ವರ್ಷಗಳ ಕಾಲ ಇದರ ಅಧ್ಯಯನ ನಡೆಯಲಿದೆ.

ಈ ಹಿಂದೆಯೇ ಅಂದರೆ 2016ರ ಅಕ್ಟೋಬರ್‌ನಲ್ಲಿಯೇ ಈ ಕುಲಾಂತರಿ ಸಾಸಿವೆಗೆ ಅನುಮತಿ ನೀಡಲು ಮುಂದಾಗಿದ್ದ ಕೇಂದ್ರ ಸರ್ಕಾರ ಸಾರ್ವಜನಿಕರ ಅಭಿಪ್ರಾಯವನ್ನು ಆಹ್ವಾನಿಸಿತ್ತು. 2017ರ ಮೇನಲ್ಲಿ ಪಂಜಾಬ್‌ನ ಕೃಷಿ ವಿವಿ ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಗೆ ಇದನ್ನು ಬೆಳೆಯಲು ಅನುಮತಿ ಸಹ ನೀಡಿತ್ತು. ಆದರೆ ಕೇಂದ್ರ ಪರಿಸರ ಸಚಿವಾಲಯ ಇದಕ್ಕೆ ಅನುಮತಿ ನೀಡಿರಲಿಲ್ಲ. ಈ ಸಂದರ್ಭದಲ್ಲಿ ತೀವ್ರ ಪ್ರತಿರೋಧ ವ್ಯಕ್ತವಾಗಿದ್ದರಿಂದ ಈ ವಿಷಯವನ್ನು ಕೈ ಬಿಟ್ಟಿತ್ತು.

ಇದೀಗ ವಾಣಿಜ್ಯ ಬಳಕೆಗೆ ಅನುಮತಿ ನೀಡಲಾಗಿದೆ. ಇದರಿಂದಾಗಿ ನಮ್ಮ ದೇಶದಲ್ಲಿ ವಾಣಿಜ್ಯ ಬಳಕೆಯ ಮೊದಲ ಕುಲಾಂತರಿ ಆಹಾರ ಬೆಳೆಗೆ ಒಪ್ಪಿಗೆ ನೀಡಿದಂತಾಗಿದೆ. ಇದು ಬಿಟಿ ಹತ್ತಿಯ ನಂತರ ಪರವಾನಿಗೆ ಪಡೆದ ಎರಡನೇ ಕುಲಾಂತರಿ ಬೆಳೆಯಾಗಿದೆ.

2010ರಲ್ಲಿ ಬಿಟಿ ಬದನೆಗೆ ಅನುಮತಿ ನೀಡಲು ಆಗಿನ ಕೇಂದ್ರ ಸರ್ಕಾರ ಮುಂದಾಗಿತ್ತಾದರೂ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿತ್ತು. ಸಂಘಪರಿವಾರದ ಸ್ವದೇಶಿ ಜಾಗರಣ ಮಂಚ್‌ನಂತಹ ಸಂಘಟನೆಗಳು, ವಿವಿಧ ರೈತ ಸಂಘಟನೆಗಳು ಮತ್ತು ರೈತಪರ ಸಂಘಟನೆಗಳು, ಪರಿಸರವಾದಿಗಳು ಕುಲಾಂತರಿ ಬೆಳೆಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದಾರೆ.

ಕೇಂದ್ರ ಸರ್ಕಾರದ ಧನ ಸಹಾಯದಿಂದಲೇ ಈ ತಳಿಯನ್ನು ಅಭಿವೃದ್ಧಿಪಡಿಸಲಾಗಿದೆ. ಯಾವುದೇ ಬಹುರಾಷ್ಟ್ರೀಯ ಕಂಪನಿಯು ಇದರ ಮೇಲೆ ಹಕ್ಕು ಹೊಂದಿಲ್ಲ. ನಮ್ಮ ದೇಶ ಖಾದ್ಯ ತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಹೆಚ್ಚು ಇಳುವರಿ ನೀಡುವ ಅಂದರೆ ಈಗಿರುವ ತಳಿಗಳಿಗಿಂತ ಶೇ. 35 ಹೆಚ್ಚು ಇಳುವರಿ ಕೊಡುವ ಈ ತಳಿಗೆ ಅನುಮತಿ ನೀಡಲಾಗಿದೆ.

ಇದರಿಂದ ತೈಲ ಆಮದಿನ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಈ ಕುಲಾಂತರಿ ಸಾಸಿವೆ ಮಾನವ, ಪರಿಸರ, ಪಶುಪಕ್ಷಿ- ಕೀಟಗಳ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಆದರೂ ಹೆಚ್ಚಿನ ಅಧ್ಯಯನ ನಡೆಸಿಯೇ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರ ಈ ಅನುಮತಿ ನೀಡಿರುವ ಕ್ರಮವನ್ನು ಸಮರ್ಥಿಸಿಕೊಂಡಿದೆ.

ವಿರೋಧ ಏಕೆ?
ದೆಹಲಿ ವಿವಿಯ ವಿಜ್ಞಾನಿಗಳು ಈ ತಳಿಯನ್ನು ಅಭಿವೃದ್ಧಿಪಡಿಸಿದ್ದರೂ ಇದಕ್ಕೆ ಸೇರಿಸಿರುವ ವಂಶವಾಹಿಯ (ಜೀನ್)
ಹಕ್ಕುಸ್ವಾಮ್ಯ (ಪೇಟೆಂಟ್‌) ಇರುವುದು ‘ಬಾಯರ್ ಆಗ್ರೋ ಸೈನ್ಸಸ್’ ಎನ್ನುವ ಜರ್ಮನಿ ಮೂಲದ ಬಹುರಾಷ್ಟ್ರೀಯ ಕಂಪೆನಿ ಬಳಿ. ಈ ಕುಲಾಂತರ ತಳಿಯು (DMH-11) ಕಳೆನಾಶಕ ಸಹಿಷ್ಣು ವಂಶವಾಹಿಯನ್ನು ಹೊಂದಿದೆ. ಈ ವಂಶವಾಹಿಯ ಶೇ. 100 ರಷ್ಟು ಹಕ್ಕನ್ನು ಬಾಯರ್ ಕಂಪೆನಿ ಹೊಂದಿದ್ದು, ಮುಂದೆ ಇದು ತನ್ನ ಪೇಟೆಂಟ್‌ ಹಕ್ಕನ್ನು ಚಲಾಯಿಸುವ ಅಪಾಯವಿದೆ. ಹೀಗಾಗಿ ದೇಶದಲ್ಲಿಯೇ ಅಭಿವೃದ್ಧಿಪಡಿಸಿದ ಈ ತಳಿ ನಮ್ಮದೆಂದು ಹೇಳುವಹಾಗಿಲ್ಲ ಎಂದು ಇದನ್ನು ವಿರೋಧಿಸುತ್ತಿರುವ ತಜ್ಞರು ಹೇಳುತ್ತಿದ್ದಾರೆ.

ಕಳೆನಾಶಕ ಸಹಿಷ್ಣು ಕುಲಾಂತರಿ ತಂತ್ರಜ್ಞಾನ ಬಹಳ ಅಪಾಯಕಾರಿಯಾಗಿದ್ದು, ಇದನ್ನು ಬಳಸಲು ಅನುಮತಿ ನೀಡಬಾರದು ಎಂದು 2012ರಲ್ಲಿ ಲೋಕಸಭೆಯ ಸ್ಥಾಯಿ ಸಮಿತಿ ಮತ್ತು 2013ರಲ್ಲಿ ಸುಪ್ರೀಂ ಕೋರ್ಟ್‌ನ ತಾಂತ್ರಿಕ ತಜ್ಞ ಸಮಿತಿ ಶಿಫಾರಸು ಮಾಡಿವೆ. ಆದರೂ ಇದರ ಅಪಾಯವನ್ನು ಲೆಕ್ಕಿಸದೇ ಜೆಇಎಸಿ ಅನುಮತಿ ನೀಡಿದೆ ಎಂಬುದು ವಿರೋಧಿಗಳ ವಾದವಾಗಿದೆ.

ಕುಲಾಂತರಿ ಬೆಳೆಗಳು ಬೆಳೆಗಳ ವೈವಿಧ್ಯತೆಯನ್ನು ನಾಶ ಪಡಿಸುತ್ತವೆ ಮಾತ್ರವಲ್ಲ, ಜೀವ ಜಗತ್ತಿನಲ್ಲಿಯೇ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಅಪಾಯವಿದೆ. ಹೀಗಾಗಿ ಪ್ರಪಂಚದಾದ್ಯಂತ ಕುಲಾಂತರಿ ಬೆಳೆಗಳಿಗೆ ವಿರೋಧ ವ್ಯಕ್ತವಾಗುತ್ತಿರುವಾಗ ಇದಕ್ಕೆ ಭಾರತದಲ್ಲಿ ಅನುಮತಿ ನೀಡಬಾರದು ಎಂದು ಪರಿಸರವಾದಿಗಳೂ ಆಗ್ರಹಿಸುತ್ತಿದ್ದಾರೆ.

ಇದನ್ನು ಓದಿ| ʻಹತ್ತಿʼದಷ್ಟೇ ಇಳಿದ ಬೆಲೆ, ಇಳುವರಿಯೂ ಖೋತಾ, ನಿರಾಸೆಯ ಮಡುವಲ್ಲಿ ಕಾಟನ್‌ ಕಿಂಗ್‌ ಕೃಷಿಕರು!

Exit mobile version