ರಂಬುಟಾನ್ (Rambutan Fruit) ಇದೊಂದು ಹಣ್ಣಿನ ಹೆಸರು. ನಮ್ಮ ದೇಶದಲ್ಲಿ ಇತ್ತೀಚೆಗೆ ಕಾಲಿಟ್ಟ ವಿದೇಶಿ ಹಣ್ಣು ಇದು. ಮಾರುಕಟ್ಟೆಯಲ್ಲಿ ಲಭ್ಯವಿದ್ದ ಈ ವಿದೇಶಿ ಹಣ್ಣನ್ನು ಈಗ ನಮ್ಮ ನಾಡಿನಲ್ಲಿಯೂ ಬೆಳೆಯಲಾಗುತ್ತಿದೆ. ಈ ಹಣ್ಣಿಗೆ ಒಳ್ಳೆಯ ಬೇಡಿಕೆಯಂತೂ ಇದೆ. ಹೀಗಾಗಿ ಇದನ್ನು ಬೆಳೆದ ರೈತರು ಹೆಚ್ಚು ರಿಸ್ಕೇ ಇಲ್ಲದೆ ವರ್ಷ ವರ್ಷವೂ ಲಕ್ಷಾಂತರ ರೂಪಾಯಿ ಆದಾಯವ ಕಾಣಬಹುದು.
ಇದು ಮಲೇಷ್ಯಾದ ಹಣ್ಣು
ರಂಬುಟಾನ್ ಲೀಚಿ ಜಾತಿಯ ಹಣ್ಣು. ಈ ಹಣ್ಣಿನ ಮೂಲ ಮಲೇಷ್ಯಾ. ಆಗ್ನೇಯ ಏಷ್ಯಾದ ಭಾಗದ ದೇಶಗಳಲ್ಲಿ ರಂಬುಟಾನ್ ಹಣ್ಣನ್ನು ಬೆಳೆಯಲಾಗುತ್ತದೆ. ಅದರಲ್ಲೂ ಥೈಲ್ಯಾಂಡ್ ಜಗತ್ತಿನಲ್ಲಿಯೇ ಅತಿ ಹೆಚ್ಚು ರಂಬುಟಾನ್ ಬೆಳೆಯುವ ಮತ್ತು ರಫ್ತು ಮಾಡುವ ದೇಶ. ಥೈಲ್ಯಾಂಡ್, ಇಂಡೋನೇಷ್ಯಾ, ಮಲೇಷ್ಯಾ ಕೇವಲ ಈ ಮೂರು ದೇಶಗಳೇ ಜಗತ್ತಿಗೆ ಬೇಕಾಗುವ ಶೇಕಡ 95 ಕ್ಕೂ ಹೆಚ್ಚು ರಂಬುಟಾನ್ ಹಣ್ಣುಗಳನ್ನು ಬೆಳೆಯುತ್ತವೆ. ವರ್ಷಕ್ಕೆ 1.5 ಮಿಲಿಯನ್ ಟನ್ ರಂಬುನ್ ಹಣ್ಣುಗಳನ್ನು ಬೆಳೆಯಲಾಗುತ್ತದೆ. ರಂಬುಟ್ ಎಂದರೆ ಮಲೇಷಿಯನ್ ಭಾಷೆಯಲ್ಲಿ ರೋಮ ಎಂದರ್ಥ. ಹಣ್ಣಿನ ಮೇಲ್ಮೈ ಮೃದುವಾದ ಮುಳ್ಳುಗಳಿಂದ ರಚನೆಯಾಗಿರುವುದರಿಂದ ಈ ಹಣ್ಣಿಗೆ ರಂಬುಟಾನ್ ಎಂದು ಹೆಸರು ಬಂದಿದೆ. ನೋಡಲು ಕರೋನಾ ವೈರಸ್ ಕಾಣುವ ಈ ಹಣ್ಣನ್ನು ಕರೋನಾ ಫ್ರೂಟ್ ಎಂದೂ ತಮಾಷೆ ಮಾಡಲಾಗುತ್ತಿದೆ.
ಕೊರೊನಾದಿಂದ ಬೇಡಿಕೆ!
ಹಲವಾರು ದಶಕಗಳಿಂದಲೂ ರಂಬುಟಾನ್ ಹಣ್ಣಿನ ಬಳಕೆಯಿದ್ದರೂ ಕೊರೊನಾ ಕಾಲಘಟ್ಟದಲ್ಲಿ ಇದರ ಬಳಕೆ ಮತ್ತು ಬೇಡಿಕೆ ಹೆಚ್ಚಾಯ್ತು. ಕಾರಣ ಈ ಹಣ್ಣಿನಲ್ಲಿರುವ ಅದ್ಭುತ ಪೋಷಕಾಂಶಗಳು. ರಂಬುಟಾನ್ ಹಣ್ಣಿನ ನಿರಂತರ ಸೇವನೆಯಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ ಈ ಹಣ್ಣಿನಲ್ಲಿ ಹೇರಳವಾಗಿದೆ. ಇದರ ಜತೆಗೆ ಕ್ಯಾಲ್ಸಿಯಂ ಮಿನರಲ್ಸ್, ಐರನ್, ಪೊಟ್ಯಾಶಿಯಮ್, ಮೆಗ್ನೀಷಿಯಮ್, ಜಿಂಕ್ ಮತ್ತು ಕಾಪರ್ ಅಂಶಗಳೂ ಇವೆ.
ಈ ಹಣ್ಣಿನಲ್ಲಿ ಫೈಬರ್ ಅಂಶ ಇರುವುದರಿಂದ ರೆಗ್ಯುಲರ್ ಡಯೆಟ್ ಮಾಡುವವರಿಗೆ ಒಳ್ಳೆಯದು. ಹೃದಯ ಸಂಬಂಧಿ ಸಮಸ್ಯೆಗಳ ಉಪಶಮನಕ್ಕೂ ಈ ಹಣ್ಣಿನ ಸೇವನೆ ತುಂಬಾ ಉಪಯುಕ್ತ.ರಂಬುಟಾನ್ ಹಣ್ಣಿನ ನಿರಂತರ ಸೇವನೆಯಿಂದ ಚರ್ಮ ಸುಕ್ಕುಗಟ್ಟುವುದು ಕಡಿಮೆಯಾಗಿ ಕಾಂತಿ ಹೆಚ್ಚಾಗುತ್ತದೆ. ಹೀಗೆ ಆರೋಗ್ಯ ವೃದ್ಧಿಯ ಸಾಕಷ್ಟು ಉಪಯೋಗಗಳು ಈ ಹಣ್ಣಿನಲ್ಲಿ ಅಡಕವಾಗಿರುವುದರಿಂದ ಈ ಹಣ್ಣಿಗೆ ಬೇಡಿಕೆ ಮತ್ತು ಬೆಲೆಯೂ ಹೆಚ್ಚು, ಮಾರ್ಕೆಟ್ ನಲ್ಲಿ ಒಂದು ಕೆಜಿ ರಂಬುಟಾನ್ ಹಣ್ಣಿಗೆ 300 ರಿಂದ 400 ರೂಪಾಯಿ ಬೆಲೆ ಇರುತ್ತದೆ.
ಈಗ ಕೊಡಗಿ ಫಲ !
ಇಂತಹ ಅದ್ಭುತ ಹಣ್ಣನ್ನು ತಮ್ಮ ತೋಟದಲ್ಲಿ ಬೆಳೆದು ಯಶಸ್ವಿಯಾಗಿದ್ದಾರೆ ಕೊಡಗಿನ ಕೃಷಿಕರಾದ ಅಂಬೆಕಲ್ಲು ಗೋಪಾಲಕೃಷ್ಣ ಅವರು. ಮೂಲತಃ ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಸಂಪಾಜೆ ಗ್ರಾಮದವರಾದ ಗೋಪಾಲಕೃಷ್ಣ ಮೊದಲಿಗೆ ಆರಂಭಿಸಿದ್ದು ವ್ಯವಹಾರವನ್ನ. ತಮ್ಮ ಹೆಚ್ಚಿನ ಸಮಯವನ್ನ ವ್ಯವಹಾರದಲ್ಲೆ ಕಳೆಯುತ್ತಿದ್ದವರಿಗೆ ಕೃಷಿಯ ಮೇಲೆ ಹೆಚ್ಚಾಗಿ ಆಸಕ್ತಿ ಇರಲಿಲ್ಲ. ಇವರ ತಂದೆ ಕಾಲದಲ್ಲಿ ಗೇರು, ಅಡಿಕೆ, ರಬ್ಬರ್ ಬೆಳೆಯುತ್ತಿದ್ದರು. ಆ ನಂತರ ಸ್ವಂತ ಊರಲ್ಲಿ ನೆಲೆಸಿ ಕೃಷಿ ಮಾಡಬೇಕೆಂದು ವಾಪಸ್ ಆದ ಮೇಲೆ ಕೇರಳದ ವ್ಯಾಪಾರಿಯೊಬ್ಬರ ಸಲಹೆಯಂತೆ ರಂಬುಟಾನ್ ಹಣ್ಣು ಬೆಳೆಯಲು ನಿರ್ಧರಿಸಿದರು.
ತಮ್ಮ ಎರಡೂವರೆ ಎಕರೆಯಲ್ಲಿ 300 ರಂಬುಟಾನ್ ಗಿಡಗಳನ್ನು ಬೆಳೆಸಿದ್ದಾರೆ, 2017 ರಲ್ಲಿ ಕೇರಳದ ತ್ರಿಶೂರ್ ನಿಂದ 2 ವರ್ಷದ ಒಂದು ಗಿಡಕ್ಕೆ 360 ರೂ,ಯಂತೆ ತರಿಸಿಕೊಂಡು ರಂಬುಟಾನ್ ಕೃಷಿ ಮಾಡಲು ಆರಂಭಿಸಿದರು, ಇದೀಗ ರಂಬುಟಾನ್ ಫಲ ಕೊಡುತ್ತಿದೆ.
ರಂಬುಟಾನ್ ನಲ್ಲಿ 8 ತಳಿಗಳಿವೆ. ಆದರೆ ಸುಧಾರಿತ ಎನ್ 18 ತಳಿಯೇ ಹೆಚ್ಚು ಪಾಪ್ಯುಲರ್ ಆಗಿದೆ. ಗೋಪಾಲಕೃಷ್ಣ ಅವರು ಕೂಡ ಎನ್ 18 ತಳಿಯನ್ನೇ ಬೆಳೆದಿರುವುದು, ಈ ತಳಿಯ ಹಣನ್ನು ಪ್ರೆಸ್ ಮಾಡಿದರೆ ಅದರ ಸಿಪ್ಪೆ ಓಪನ್ ಆಗಿ ಒಳಗೆ ಮೊಟ್ಟೆಯಂತೆ ಬಿಳಿಯಾದ ತಿನ್ನುವ ಫಲ ಸಿಗುತ್ತದೆ. ಅಳತೆಯಲ್ಲೂ ದೊಡ್ಡದಾಗಿರುತ್ತೆ. ತಿಂದರೆ ತುಂಬಾ ಸಿಹಿಯಾಗಿರುತ್ತದೆ.
ಇದರ ಕೃಷಿ ಹೇಗೆ?
ರಂಬುಟಾನ್ ನಮ್ಮ ದೇಶದ ಬೆಳೆಯಲ್ಲ. ತೀರಾ ಕೆಲ ವರ್ಷಗಳ ಹಿಂದಷ್ಟೇ ದೇಶಕ್ಕೆ ಪರಿಚಯವಾದ ಗಿಡ. ಅದಕ್ಕೂ ಮೊದಲು ಕೇರಳದಲ್ಲಿ ಬೆರಳೆಣಿಕೆಯಷ್ಟು ರೈತರು ತುಂಬಾ ಕಡಿಮೆ ಸಂಖ್ಯೆಯಲ್ಲಿ ಗಿಡ ಬೆಳೆಸಲು ಆರಂಭಿಸಿದ್ದರು. ಇಂತಹ ಹೆಚ್ಚು ಪರಿಚಯವಿಲ್ಲದ ರಂಬುಟಾನ್ ನನ್ನು ಒಂದೇ ಬಾರಿ ಹತ್ತಾರು ಎಕರೆಯಲ್ಲಿ ಬೆಳೆಯುವುದಕ್ಕಿಂತ ಆರಂಭದಲ್ಲಿ 1 ಎಕರೆಯಲ್ಲಿ ಬೆಳೆದರೆ ಉತ್ತಮ. ಇದು ಟ್ರೈಯಲ್ ಕ್ರಾಪ್ ನಂತಾಗುತ್ತೆ. ಈ ಗಿಡ ಗೇರು ಮರದಂತೆ ವಿಶಾಲವಾಗಿ ರೆಂಬೆ ಕೊಂಬೆಗಳನ್ನು ಬಿಡುವುದರಿಂದ ಕನಿಷ್ಠ 15 ಅಡಿ ಅಂತರದಲ್ಲಿ ಸಸಿ ನೆಡಬೇಕು, ಅದಕ್ಕಿಂತಲೂ ಹೆಚ್ಚಿನ ಅಂತರದಲ್ಲಿ ಬೆಳೆದರೂ ಉತ್ತಮ.
ಹೀಗಾಗಿ 1 ಎಕರೆಯಲ್ಲಿ 130 ಗಿಡಗಳಷ್ಟೇ ನೆಡಲು ಸಾಧ್ಯ, 2 ವರ್ಷದ ಒಂದು ಗಿಡಕ್ಕೆ 350 ರಿಂದ 500 ರೂಪಾಯಿವರೆಗೂ ಬೆಲೆ ಇರುತ್ತದೆ, ಸರಾಸರಿ 400 ರೂಪಾಯಿ ಅಂತಾದರೂ 130 ಗಿಡಕ್ಕೆ 50 ಸಾವಿರ ರೂಪಾಯಿಗೂ ಹೆಚ್ಚಾಗುತ್ತದೆ, ಒಂದು ಗುಂಡಿ ತಗೆಯಲು, ಗಿಡ ನೆಡಲು, ಅದಕ್ಕೆ ಆಗುವ ಗೊಬ್ಬರ ಖರ್ಚು ಡ್ರಿಪ್ ಇರಿಗೇಶನ್ ಖರ್ಚು ಸೇರಿ ಆರಂಭದಲ್ಲಿ ಒಂದು ಎಕರೆಗೆ ಗರಿಷ್ಠ ಒಂದು ಲಕ್ಷ ರೂಪಾಯಿ ಬಂಡವಾಳ ಹೂಡಬೇಕಾಗುತ್ತದೆ.
ರಂಬುಟಾನ್ ಬೆಳೆ ಸಾಮಾನ್ಯವಾಗಿ ಕೆಂಪು ಮಣ್ಣು, ಕಪ್ಪು ಮಣ್ಣು, ಕಲ್ಲು ಮರಳು ಮಿಶ್ರಿತ ಮಣ್ಣಲ್ಲೂ ಬೆಳೆಯುತ್ತದೆ. ಆದರೆ ಈ ಬೆಳೆಗೆ ಮಣ್ಣಿಗಿಂತ ಹವಾಗುಣವೇ ತುಂಬಾ ಮುಖ್ಯ. ಏಕೆಂದರೆ ಇದು ಟ್ರಾಪಿಕಲ್ ಕ್ರಾಪ್. ಅಂದರೆ ಉಷ್ಣವಲಯದಲ್ಲಿ ಬೆಳೆಯುವಂತಹ ಬೆಳೆ. ಸಮಭಾಜಕ ವೃತ್ತದ 15 ರಿಂದ 20 ಡಿಗ್ರಿಯಲ್ಲಿರುವ ಉಷ್ಣವಲಯ ಪ್ರದೇಶಗಳಲ್ಲಿ ರಂಬುಟಾನ್ ಉತ್ತಮವಾಗಿ ಬೆಳೆಯುತ್ತದೆ.
ಉದಾಹಣೆಯೊಂದಿಗೆ ಸಿಂಪಲ್ ಆಗಿ ಹೇಳಬೇಕೆಂದರೆ ಕರ್ನಾಟಕದ ಕರಾವಳಿ ಜಿಲ್ಲೆಗಳು ಮತ್ತು ಅದಕ್ಕೆ ಹೊಂದಿರುವ ಪ್ರದೇಶಗಳು, ಕೇರಳ ಮತ್ತು ತಮಿಳು ನಾಡಿನ ಇಂತಹ ಪ್ರದೇಶಗಳಲ್ಲಿನ ಉಷ್ಣ ವಾತಾವರಣ. ಮಳೆಯೂ ಆಗಬೇಕು, ಸೂರ್ಯನ ಬಿಸಿಲೂ ಹೆಚ್ಚಾಗಿರಬೇಕು, ಆ ಬಿಸಿಲಿನಲ್ಲಿ ಉಷ್ಣಾಂಶವೂ ಇರಬೇಕು. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಂತಹ ವಾತಾವರಣದಲ್ಲಿ ರಂಬುಟಾನ್ ಬೆಳೆಯಬಹುದು. ಮಲೆನಾಡು, ಬಯಲು ಸೀಮೆಯಲ್ಲಿ ರಂಬುಟಾನ್ ಟ್ರಯಲ್ ಕ್ರಾಪ್ ಆಗಿ ಬೆಳೆಯಬಹುದು ಎನ್ನುತ್ತಾರೆ ರಂಬುಟಾನ್ ಬೆಳೆಗಾರರಾದ ಗೋಪಾಲಕೃಷ್ಣ.
ಕಾರ್ಮಿಕರ ಅಗತ್ಯತೆ ಕಡಿಮೆ
ರಂಬುಟಾನ್ ಕೃಷಿಯಲ್ಲಿ ಕಾರ್ಮಿಕರ ಅಗತ್ಯತೆ ತುಂಬಾ ಕಡಿಮೆ. ಒಂದೆರಡು ಸಲಕರಣೆಗಳಿದ್ದರೆ ಸಾಕು. ಮೊದಲಿಗೆ ಗಿಡ ನೆಡಲು 2X2 ಅಡಿ ವಿಸ್ತೀರ್ಣದೊಂದಿಗೆ ಒಂದೂವರೆ ಅಡಿ ಆಳವಾಗಿರಬೇಕು. ಗುಂಡಿ ತೆಗೆದ ಬಳಿಕ ಅದರಲ್ಲಿ ಹಿಡಿಸುವಷ್ಟು ಸಾವಯವ ಗೊಬ್ಬರ ಹಾಕಿ ಮಣ್ಣಿನಿಂದ ಮುಚ್ಚಿ ಸುಮಾರು 15 ದಿನಗಳವರೆಗೂ ಇಡಬೇಕು. ಇದರಿಂದ ಆರ್ಗಾನಿಕ್ ಕಾಂಪೋಸ್ಟ್ ತಯಾರುವುದಕ್ಕೆ ಅವಕಾಶ ಸಿಗುತ್ತದೆ, ತಂದ ಗಿಡಗಳನ್ನು ಅದನ್ನು ಹೂಳಲು ಎಷ್ಟು ಹಳ್ಳಬೇಕೋ ಅಷ್ಟು ಮಾತ್ರ ತೆಗೆದು ಗಿಡ ನಾಟಿ ಮಾಡಿ ನೀರು ಹಾಯಿಸಬೇಕು. ಅಂದ ಹಾಗೆ ಸಸಿ ನಾಟಿ ಮಾಡುವಾಗ ಅಗತ್ಯ ಪ್ರಮಾಣದ ರಾಕ್ ಫಾಸ್ಪೆಕ್ಟ್ ರಾಸಾಯನಿಕ ಗೊಬ್ಬರ ಹಾಕಿದರೆ ಉತ್ತಮ.
ರಂಬುಟಾನ್ ಸಸಿ ತಂದು ನೆಟ್ಟಾಗ ಒಂದು ಗಿಡಕ್ಕೆ ದಿನವೊಂದಕ್ಕೆ 15 ಲೀಟರ್‌ಗೂ ಹೆಚ್ಚಿನ ನೀರು ಬೇಕಾಗುತ್ತದೆ. ಗಿಡ ಬೆಳೆದು ಮೂರ್ನಾಲ್ಕು ವರ್ಷ ಆಗುತ್ತಿದ್ದಂತೆ 25 ರಿಂದ 30 ಲೀಟರ್ ನೀರು ಅಗತ್ಯವಿರುತ್ತದೆ. ಗಿಡಕ್ಕೆ ಅಗತ್ಯ ಪ್ರಮಾಣದ ನೀರು ಸಿಗದಿದ್ದಾಗ ಎಲೆಗಳು ಒಣಗಲು ಆರಂಭಿಸುತ್ತದೆ. ಹೀಗಾಗಿ ನೀರಿನ ಪೂರೈಕೆಯನ್ನು ಗಮನಿಸುತ್ತಿರಬೇಕಾ ಗುತ್ತದೆ ಎನ್ನುತ್ತಾರೆ ಈ ರಂಬುಟಾನ್ ಫಾರ್ಮನ್ನು ನಿರ್ವಹಣೆ ಮಾಡುತ್ತಿರುವ ಕೇಶವ ಚೌಟಾಜೆ.
ಇನ್ನು ಗೊಬ್ಬರ ವಿಚಾರಕ್ಕೆ ಬಂದರೆ, ಗಿಡ ನೆಡುವಾಗ ಹಾಕುವ ಗೊಬ್ಬರ ಬಿಟ್ಟು ವರ್ಷಕ್ಕೆ ಎರಡು ಬಾರಿ ಸಾವಯವ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರ ಹಾಕಬೇಕಾಗುತ್ತದೆ. ಮಳೆಗಾಲದ ಆರಂಭ ಅಂದರೆ ಮೇ ಜೂನ್ ತಿಂಗಳಲ್ಲಿ ಒಮ್ಮೆ ಹಾಗೂ ಮಳೆ ನಿಂತ ಸಮಯದಲ್ಲಿ ಅಂದರೆ ಸೆಪ್ಟಂಬರ್ ಅಕ್ಟೋಬರ್ ನಲ್ಲಿ ಸಾವಯವ ಮತ್ತು ರಾಸಾಯನಿಕ ಗೊಬ್ಬರವನ್ನು ಕಾಂಬಿನೇಷನ್ ನಲ್ಲಿ ಹಾಕಿದರೆ ಸಾಕು. ರಾಸಾಯನಿಕ ಗೊಬ್ಬರ ಹಾಕಿದರೆ ಇಳುವರಿ ಹೆಚ್ಚಾಗಿರುತ್ತದೆ. ಆರ್ಗ್ಯಾನಿಕ್ ಗೊಬ್ಬರ ಹಾಕಿದರೆ ಮಣ್ಣಿನ ನೈಸರ್ಗಿಕ ಜೈವಿಕತೆ ಉಳಿಯುತ್ತದೆ. ಕ್ರಮೇಣ ಸಾವಯವ ಗೊಬ್ಬರವನ್ನೇ ಪೂರ್ಣ ಪ್ರಮಾಣದಲ್ಲಿ ಬಳಸಿದರೆ ಉತ್ತಮ.
ರಂಬುಟಾನ್ ಕೃಷಿ ಭೂಮಿಯಲ್ಲಿ ಮಳೆಗಾಲದಲ್ಲಿ ಹೆಚ್ಚಿನ ಕಳೆ ಗಿಡಗಳು ಬೆಳೆಯುತ್ತವೆ. ಅದರಲ್ಲೂ ಕರಾವಳಿ ಜಿಲ್ಲೆ, ದಕ್ಷಿಣ ಕನ್ನಡಕ್ಕೆ ಹೊಂದಿಕೊಂಡಿರುವ ಕೊಡಗಿನ ಪ್ರದೇಶಗಳಲ್ಲಿ ಮಳೆಗಾಲ ಮತ್ತು ಚಳಿಗಾಲದಲ್ಲಿ ಹೆಚ್ಚಾಗಿ ಕಳೆ ಬೆಳೆಯುತ್ತದೆ. ಹೀಗಾಗಿ ಕಳೆ ನಿಯಂತ್ರಣ ಔಷಧ ಸಿಂಪಡಿಸಬೇಕು. ಅದಕ್ಕಿಂತಲೂ ಉತ್ತಮವೆಂದರೆ ಬುಷ್ ಕಟರ್ ಮೂಲಕ ಇಲ್ಲವೇ ಆಳುಗಳ ಮೂಲಕ ಕಳೆಯನ್ನು ಕತ್ತರಿಸಿ ಅದೇ ನೆಲದಲ್ಲಿ ಕೊಳೆಯುವಂತೆ ಮಾಡಿದರೆ ಗೊಬ್ಬರವಾಗುತ್ತದೆ.
ಉಪ ಬೆಳೆಗಳಿಗೂ ಇದೆ ಅವಕಾಶ
ರಂಬುಟಾನ್ ಗಿಡಗಳಿಗೆ ಅಂತರ 15 ರಿಂದ 20 ಅಡಿಗಳವರೆಗೆ ಇರುತ್ತದೆ. ಹೀಗಾಗಿ ಎರಡು ವರ್ಷಗಳರೆಗೆ ಕೆಲವು ಅಂತರ್ ಬೆಳೆ ಬೆಳೆಯಬಹುದು. ಗಿಡ ದೊಡ್ಡದಾಗಿ ಅದರ ರೆಂಬೆ ಕೊಂಬೆಗಳು ವಿಶಾಲವಾಗಿ ಚಾಚಿಕೊಳ್ಳಲು ಆರಂಭಿಸಿದ ನಂತರ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ. ಎರಡು ವರ್ಷಗಳಲ್ಲಿ ಕೊನೆಯಾಗುವ ಪಪ್ಪಾಯದಂತಹ ಗಿಡ ನಾಟಿ ಮಾಡಿ ಫಸಲು ತೆಗೆಯಬಹುದು. ನೆಲದೊಳಗೆ ಬೆಳೆಯುವಂತಹ ಸುವರ್ಣಗಡ್ಡೆ, ಗೆಣಸಿನಂತ ಬೆಳೆಯನ್ನೂ ಬೆಳೆಯಬಹುದು. ಮೂರು ವರ್ಷಗಳ ನಂತರ ಗಿಡಗಳು ದೊಡ್ಡದಾಗುವುದರಿಂದ ನೆರಳು ಹೆಚ್ಚಾಗಿ ಬೀಳುತ್ತದೆ. ಹೀಗಾಗಿ ಬಹುತೇಕ ಯಾವ ಬೆಳೆಯನ್ನೂ ಬೆಳೆಯಲು ಸಾಧ್ಯವಾಗುವುದಿಲ್ಲ.
ರಂಬುಟಾನ್ ಗಿಡಗಳನ್ನು 15 ಅಡಿಗೂ ಹೆಚ್ಚಿನ ಅಂತರದಲ್ಲಿ ನಾಟಿ ಮಾಡಿದರೂ ಗಿಡಗಳು ದೊಡ್ಡದಾಗುತ್ತಿದ್ದಂತೆ ಒಂದರ ಜೊತೆ ಒಂದು ಬೆರೆಯುವ ಮಟ್ಟಕ್ಕೆ ಬೆಳೆಯುತ್ತವೆ. ಹೀಗಾಗಿ 7 ವರ್ಷವಿದ್ದಾಗ ಪ್ರೂನಿಂಗ್ ಮಾಡಬೇಕು. ಅಂದರೆ ಗಿಡಗಳ ರೆಂಬೆಗಳು ಒಂದಕ್ಕೊಂದು ತಾಗುವ ರೀತಿ ಬೆಳೆದಿರುತ್ತವೆ. ಆಗ ಅವನ್ನು ತುದಿಯಿಂದ 2 ಅಡಿಯವರಗೆ ಕಟ್ ಮಾಡಿ ಹಾಕಬೇಕು. ಹೀಗೆ ಮಾಡುವುದರಿಂದ ರೆಂಬೆಗಳು ಮತ್ತೆ ಬೆಳಯಲು ಜಾಗ ಸಿಗುತ್ತದೆ. ಮತ್ತು ಗಿಡ ಇಳುವರಿಯಲ್ಲಿ ನಿರ್ದಷ್ಟತೆ ಕಾಯ್ದುಕೊಳ್ಳಲು ಸಹಾಯವಾಗುತ್ತದೆ. ತುಂಬಾ ಎತ್ತರಕ್ಕೆ ಬೆಳೆಯಲು ಬಿಟ್ಟರೆ ಹಣ್ಣು ಕೀಳಲು ಮತ್ತು ನಿರ್ವಹಣೆ ಮಾಡಲು ಕಷ್ಟವಾಗುತ್ತದೆ. ಹೀಗೆ ಪ್ರೂನಿಂಗ್ ಮಾಡುವುದರಿಂದ 7 ವರ್ಷದ ನಂತರ ಗಿಡ ಇಳುವರಿಯಲ್ಲಿ ನಿರ್ದಿಷ್ಟತೆಯನ್ನು ಕಾಪಾಡಿಕೊಂಡು ಗಿಡಕ್ಕೆ 30 ರಿಂದ 40 ಕೆಜಿಯಷ್ಟು ಹಣ್ಣು ಬಿಡುತ್ತದೆ ಎನ್ನುತ್ತಾರೆ ಗೋಪಾಲಕೃಷ್ಣ ಅವರು.
ರಂಬುಟಾನ್ ಬೆಳೆಗೆ ರೋಗಬಾಧೆ ತುಂಬಾ ಕಡಿಮೆ. ಆದರೆ ಮಳೆ ಹೆಚ್ಚಾಗಿ ಬಿದ್ದಾಗ ಕಾಯಿಗೆ ಫಂಗಸ್ ತಾಗುವ ಸಾಧ್ಯತೆ ಹೆಚ್ಚು. ಫಂಗಸ್ ತಾಗಿದರೆ ಕಾಯಿ ಕಪ್ಪಾಗುತ್ತಾ ಗಿಡದಿಂದ ಉದುರಿ ಹೋಗುತ್ತದೆ. ಈ ಸಮಸ್ಯೆ ತಪ್ಪಿಸಲು 15 ದಿನಕ್ಕೊಮ್ಮೆ ವೆಟಿಬಲ್ ಸಲ್ಫರ್ ಅನ್ನು ನಿಗದಿತ ಪ್ರಮಾಣದಲ್ಲಿ ಗಿಡಕ್ಕೆ ಸಿಂಪಡಿಸಬೇಕು.
ವರ್ಷಕ್ಕೊಮ್ಮೆ ಫಸಲು
ರಂಬುಟಾನ್ ವರ್ಷಕ್ಕೆ ಒಂದೇ ಬಾರಿ ಹಣ್ಣು ಬಿಡುವಂತಹ ಗಿಡಗಳು. ಮಾರ್ಚ್ ತಿಂಗಳಲ್ಲಿ ಹೂ ಬಿಡಲು ಆರಂಭಿಸಿ ಜೂನ್ ನಲ್ಲಿ ಹಣ್ಣು ಬಿಡುತ್ತದೆ. ಮೂರು ತಿಂಗಳವರೆಗೆ ಗಿಡದಲ್ಲಿ ಹಣ್ಣುಗಳು ಬಿಡುತ್ತಿರುತ್ತವೆ. ಸಾಮಾನ್ಯವಾಗಿ ಗೊಂಚಲಿನಲ್ಲಿ ರಂಬುಟಾನ್ ಹಣ್ಣಿರುತ್ತವೆ. ಗೊಂಚಲಿನಲ್ಲಿ ಎಲ್ಲಾವೂ ಹಣ್ಣಾಗಿದ್ದರೆ ಗೊಂಚಲು ಬಿಟ್ಟಿರುವ ಕೊಂಬೆ ಸಮೇತ ಕಟ್ ಮಾಡಬೇಕು.
ಗೊಂಚಲು ಎತ್ತರದಲ್ಲಿದ್ದರೆ ದೋಟಿ ತರದ ಉದ್ದನೆಯ ಫ್ರೂಟ್ ಕಟರ್ ನಿಂದ ಕಟಾವು ಮಾಡಬೇಕು. ಕೈಗೆಟುಕುವಂತಿದ್ದರೆ ಕ್ರಿಪ್ಪರ್ ಎಂಬ ಸಣ್ಣ ಸಲಕರಣೆಯಿಂದ ಹಣ್ಣು ಕಟಾವು ಮಾಡಬೇಕು. ಹಣ್ಣಿನ ಫ್ರೆಶ್ ನೆಸ್ ಉಳಿಸಲು ಕೊಯ್ಲು ಮಾಡಿದ ಹಣ್ಣನ್ನು ಗಾಳಿಯಾಡುವ ಕ್ರೇಟ್ ನಲ್ಲಿಯೇ ಸಾಗಿಸುವುದು ಮತ್ತು ಪ್ಯಾಕ್ ಮಾಡುವುದು ಉತ್ತಮ. ಕಟಾವು ಮಾಡಿದ ಹಣ್ಣುಗಳನ್ನು ಎ, ಬಿ ಮತ್ತು ಸಿ ಗ್ರೇಡ್ ಎಂದು ವಿಂಗಡಿಸಿದರೆ ಎ ಗ್ರೇಡ್ ಹಣ್ಣಿಗೆ ಹೆಚ್ಚಿನ ಬೆಲೆ ಸಿಗುತ್ತದೆ.
ಬೆಲೆ ಎಷ್ಟಿರುತ್ತದೆ?
ಭಾರತದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಬೆಳೆಯಲಾಗುತ್ತಿರುವ ರಂಬುಟಾನ್ ಹಣ್ಣಿಗೆ ಬೇಡಿಕೆಯಂತೂ ಇದೆ. ಜೊತೆಗೆ ಬೆಲೆಯೇ ತುಸು ಜಾಸ್ತಿಯೇ ಇದೆ. ಹಾಗಾದರೆ ವರ್ಷಕ್ಕೆ ಒಂದು ಬಾರಿ ಫಸಲು ಬಿಡುವ ರಂಬುಟಾನ್ ಕೃಷಿಯಿಂದ ಎಷ್ಟು ಆದಾಯ ಗಳಿಸಬಹುದು ನೋಡೋಣ.
ಒಂದು ಗಿಡದಲ್ಲಿ 30 ರಿಂದ 50 ಕೆಜಿ ಅದಕ್ಕಿಂತಲೂ ಹೆಚ್ಚಿನ ಹಣ್ಣು ಬಿಡುತ್ತದೆ. ಮಾರುಕಟ್ಟೆಯಲ್ಲಿ ಒಂದು ಕೆಜಿ ರಂಬುಟಾನ್ ಹಣ್ಣಿಗೆ 350 ರಿಂದ 400 ರೂ ಬೆಲೆ ಇರುತ್ತದೆ. ಈ ಹಣ್ಣು ಬೆಳೆದ ರೈತರು ತೋಟದಲ್ಲೇ 200 ರೂಪಾಯಿವರೆಗೂ ಬೆಲೆ ಕೊಟ್ಟು ಖರೀದಿಸುತ್ತಾರೆ. ವರ್ಷಕ್ಕೆ ಒಂದು ಎಕರೆಗೆ ಎಲ್ಲಾ ಖರ್ಚುವೆಚ್ಚ ಸೇರಿ 40 ಸಾವಿರ ರೂಪಾಯಿ ಕಳೆದರೂ ರೈತನ ಕೈಗೆ ಮೂರೂವರೆಯಿಂದ 5 ಲಕ್ಷ ರೂಪಾಯಿವರೆಗೂ ಆದಾಯ ಬಂದು ಸೇರುತ್ತದೆ.
ರಂಬುಟಾನ್ ತೋಟಗಾರಿಕಾ ಬೆಳೆಯಾಗಿದ್ದರೂ ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳೆಯದ ಕಾರಣಕ್ಕೆ ರಂಬುಟಾನ್ ಬೆಳೆಗೆ ಸರ್ಕಾರಗಳಿಂದ ಸಬ್ಸಿಡಿ ಸಾಲ ಸೌಲಭ್ಯ ಸಿಗುವುದಿಲ್ಲ. ಆದರೆ ಡ್ರಿಪ್ ಇರಿಗೇಶನ್ ವ್ಯವಸ್ಥೆಗೆಂದು 70 ಪರ್ಸೆಂಟ್ ವರೆಗೆ ಸಬ್ಸಿಡಿ ಮಾತ್ರ ಸಿಗುತ್ತದೆ. ಏನೇ ಆಗಿರಲಿ ರಂಬುಟಾನ್ ಬೆಳೆಯುವ ಆಸಕ್ತಿಯಿದ್ದರೆ ಸ್ಥಳೀಯ ತೋಟಗಾರಿಕಾ ಇಲಾಖೆಯ ಕಚೇರಿಯಲ್ಲಿ ಸಲಹೆ ಪಡೆಯುವುದು ಉತ್ತಮ.
ರಂಬುಟಾನ್ ಕೃಷಿ ದೇಶಕ್ಕೆ ಇತ್ತೀಚಿನ ಪರಿಚಯದ ಬೆಳೆಯಾದರೂ ಇದರಿಂದ ಲಾಭವಿದೆ. ಇದು ಉಷ್ಣವಲಯದ ಬೆಳೆ ಆಗಿರುವುದರಿಂದ ಕೃಷಿ ಅಧಿಕಾರಿಗಳ ಸಲಹೆ ಪಡೆದು ಆಸಕ್ತರು ರಂಬುಟಾನ್ ಕೃಷಿ ಆರಂಭಿಸಬಹುದು.
ಇದನ್ನೂ ಓದಿ | ಅಡಕೆ ಬೆಳೆ ಪ್ರದೇಶ ಹೀಗೇ ವಿಸ್ತರಣೆ ಆಗುತ್ತಿದ್ದರೆ ಒಂದಲ್ಲ ಒಂದು ದಿನ ಬೆಲೆ ಕುಸಿದು ಬೀಳಲಿದೆ ಎಂದ ಆರಗ ಜ್ಞಾನೇಂದ್ರ