ಬೆಂಗಳೂರು: ರಾಜ್ಯದಲ್ಲಿ ಬೆಳೆ ನಷ್ಟ, ಎಲೆ ಚುಕ್ಕೆ ರೋಗ (Leaf spot disease for arecanut), ಬೆಲೆ ಕುಸಿತಗಳಂತಹ ಹೊಡೆತದಿಂದ ಕಂಗಾಲಾಗಿರುವ ಅಡಿಕೆ ಬೆಳಗಾರರಿಗೆ ಈಗ ಮತ್ತೊಂದು ಶಾಕಿಂಗ್ ನ್ಯೂಸ್. ರಾಜ್ಯದಲ್ಲಿ ಅಡಿಕೆ ಅಕ್ರಮ ದಂಧೆಯ ವ್ಯವಸ್ಥಿತ ಜಾಲವೊಂದು ಹುಟ್ಟಿಕೊಂಡಿದೆ ಎಂದು ಗೊತ್ತಾಗಿದೆ. ಅಂತಾರಾಜ್ಯ ಜಾಲ ಇದಾಗಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bangalore Kempegowda International Airport) 11 ಟನ್ ಅಕ್ರಮ ಅಡಿಕೆಯನ್ನು (Illegal Arecanut) ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದಾಗ ಈ ವಿಷಯ ತಿಳಿದುಬಂದಿದೆ.
ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ವಿಜಿಲೆನ್ಸ್ ವಿಭಾಗವು 11,500 ಕೆಜಿ ತೂಕದ 460 ಚೀಲ ಅಡಿಕೆಯನ್ನು (11 ಟನ್) ವಶಪಡಿಸಿಕೊಂಡಿತ್ತು. ಅಗತ್ಯ ಸಾರಿಗೆ ದಾಖಲೆಗಳನ್ನು ನೀಡದ ಹಿನ್ನಲೆಯಲ್ಲಿ ಸರಕು ಮೂಲದ ಬಗ್ಗೆ ಅನುಮಾನಗಳನ್ನು ಹುಟ್ಟು ಹಾಕಿದ್ದು, ಪರಿಶೀಲನೆ ನಡೆಸಿದಾಗ ಅಕ್ರಮ ಬಯಲಿಗೆ ಬಂದಿದೆ. ಹೀಗಾಗಿ ಅಂತಾರಾಜ್ಯಗಳಿಂದ ರಾಜ್ಯದ ಮಾರುಕಟ್ಟೆಯನ್ನು ಅಡಿಕೆ ಅಕ್ರಮವಾಗಿ ಪ್ರವೇಶ ಮಾಡುತ್ತಿದೆ ಎಂಬುದು ಈಗ ಕಳವಳಕಾರಿ ಸಂಗತಿಯಾಗಿದೆ. ಇಂತಹ ಅಕ್ರಮಕ್ಕೆ ಕೂಡಲೇ ಕಡಿವಾಣ ಹಾಕಬೇಕು ಎಂದು ಬೆಳೆಗಾರರು ಆಗ್ರಹಿಸುತ್ತಿದ್ದಾರೆ.
ಭಾರತದಲ್ಲಿ ಅಡಿಕೆ ಬೆಳೆಯುವ ಪ್ರಮುಖ ರಾಜ್ಯ ಕರ್ನಾಟಕವಾಗಿದೆ. ಭೂತಾನ್‌ನಿಂದ ಹಸಿ ಅಡಿಕೆ ಆಮದಿಗೆ ಸರ್ಕಾರ ಒಪ್ಪಿಗೆ ನೀಡಿದ್ದ ಸುದ್ದಿ ಹರಡುತ್ತಿದ್ದಂತೆ ರಾಜ್ಯದಲ್ಲಿ ರಾಶಿ ಕೆಂಪಡಿಕೆಯ ಬೆಲೆಯಲ್ಲಿ ಅಲ್ಪ ಕುಸಿತ ಕಂಡಿತ್ತು. ಇನ್ನು ಭೂತಾನ್, ಮ್ಯಾನ್ಮಾರ್‌ನಿಂದ ಅಕ್ರಮವಾಗಿ ಅಡಿಕೆಯನ್ನು ಭಾರತಕ್ಕೆ ಸಾಗಾಟ ಮಾಡಲಾಗುತ್ತಿದೆ. ಈ ಬಗ್ಗೆ ಕಠಿಣ ಕಾನೂನು ರೂಪಿಸಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ. ಇಲ್ಲದಿದ್ದರೆ ಅಡಿಕೆ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ಆತಂಕ ಎದುರಾಗಿದೆ.
ಈಶಾನ್ಯ ಪ್ರದೇಶಗಳಿಂದ ಬರುತ್ತಿವೆ ಕಳಪೆ ಗುಣಮಟ್ಟದ ಅಡಿಕೆ
ಈಶಾನ್ಯ ಪ್ರದೇಶಗಳಿಂದ ಕಳಪಡೆ ಗುಣಮಟ್ಟದ ಅಡಿಕೆಗಳು ಬರುತ್ತಿವೆ. ಅಸ್ಸಾಂ ಮತ್ತು ಮಣಿಪುರದಂತಹ ಪ್ರದೇಶಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟ ಇಲ್ಲದ ಅಡಿಕೆಯು ಮಧ್ಯಪ್ರದೇಶ ಮತ್ತು ಬೆಂಗಳೂರಿಗೆ ಸರಬರಾಜಾಗುತ್ತಿದೆ. ಇದು ನೋಂದಾಯಿತರಲ್ಲದ ಗುಂಪಿಗೆ ಪೂರೈಕೆಯಾಗುತ್ತಿದ್ದು, ಈ ಜಾಲ ವ್ಯಾಪಕವಾಗಿ ವ್ಯಾಪಿಸುತ್ತಿದೆ ಎಂದು ತನಿಖೆ ವೇಳೆ ಗೊತ್ತಾಗಿದೆ.
ಮ್ಯಾನ್ಮಾರ್‌ನಿಂದ ಕಳ್ಳಸಾಗಣೆ?
ಸಂಬಂಧಿತ ರಾಜ್ಯಗಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಧಿಕಾರಿಗಳೊಂದಿಗೆ ಸಹಕರಿಸಿ, ನಡೆಸಿದ ವಿಚಾರಣೆಯು ಏರ್‌ವೇ ಬಿಲ್‌ಗಳಲ್ಲಿ ಹೆಸರುಗಳು ಮತ್ತು ಮೊಬೈಲ್ ಸಂಖ್ಯೆಗಳ ಬಳಕೆಯನ್ನು ಬಹಿರಂಗಪಡಿಸಿದೆ, ಮ್ಯಾನ್ಮಾರ್‌ನಿಂದ ಕಳ್ಳಸಾಗಣೆ ಆಗಿರಬಹುದು ಎನ್ನುವ ಸುಳಿವು ನೀಡಿದೆ. ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಡಿಕೆಯ ಬೆಲೆ ಕೆಜಿಗೆ 250 ರಿಂದ 300 ರೂಪಾಯಿ ಎಂದು ಹೇಳಲಾಗಿದೆ. ಹೀಗಾಗಿ ಇದು ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೆ, ಗುಣಮಟ್ಟದ ಅಡಿಕೆ ಮಿಕ್ಸ್ ಮಾಡಿದರೆ ಕರ್ನಾಟಕದ ಅಡಿಕೆ ಮೇಲಿನ ವಿಶ್ವಾಸಾರ್ಹತೆಯೂ ಹಾಳಾಗುವ ಭೀತಿ ಎದುರಾಗಿದೆ.
ಇದರ ಸಂಬಂಧ ಮತ್ತೊಂದು ಕಾರ್ಯಾಚರಣೆ ನಡೆಸಿದ್ದು, ಇ-ವೇ ಬಿಲ್ ಅನ್ನು ಮರುಬಳಕೆ ಮಾಡುವ ಅಡಿಕೆ ಸಾಗಿಸುವ ವಾಹನವನ್ನು ವಶಪಡಿಸಿಕೊಳ್ಳಲಾಗಿತ್ತು. ರೈತರ ಸೋಗಿನಲ್ಲಿದ್ದ ಅಕ್ರಮ ವ್ಯಾಪಾರಿಗಳನ್ನು ತೆರಿಗೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಡಿಜಿಟಲ್ ಸಾಕ್ಷ್ಯದ ಮೂಲಕ ತೆರಿಗೆ ವಂಚನೆಯಾಗಿರುವುದನ್ನು ಸಾಬೀತುಪಡಿಸಿ, ವಂಚಕರಿಂದ ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯಡಿಯಲ್ಲಿ 24.26 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ.
ಇದನ್ನೂ ಓದಿ: PSI Exam: ಪಿಎಸ್‌ಐ ಪರೀಕ್ಷೆ ಮುಂದೂಡಿಕೆ, ಜ. 23ಕ್ಕೆ ಫಿಕ್ಸ್: ಗೃಹ ಸಚಿವರ ಘೋಷಣೆ
ಪ್ರತ್ಯೇಕ ತಂಡವನ್ನು ರಚಿಸಿ ತನಿಖೆ ಮಾಡಲು ಆಗ್ರಹ
ಇಂತಹ ಅಕ್ರಮದ ವಿರುದ್ಧ ರಾಜ್ಯದಲ್ಲಿ ಸಂಘಟಿತ ಕಾರ್ಯಾಚರಣೆ ನಡೆಯಬೇಕು. ರಾಜ್ಯ ಸರ್ಕಾರ ತನಿಖೆಗೆ ಪ್ರತ್ಯೇಕ ತಂಡವನ್ನು ರಚಿಸಿ ಅಡಿಕೆ ಮಾರುಕಟ್ಟೆಯನ್ನು ಅಕ್ರಮಗಳಿಂದ ಮುಕ್ತ ಮಾಡಬೇಕು. ಅಂತಾರಾಜ್ಯ ಹಾಗೂ ವಿದೇಶಗಳಿಂದ ಬರುವ ಅಕ್ರಮ ಅಡಿಕೆಗೆ ಕಡಿವಾಣ ಹಾಕಬೇಕು. ಬೆಳಗಾರರಿಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡಲು ಕ್ರಮ ವಹಿಸಬೇಕು. ಈ ಮೂಲಕ ಅಡಿಕೆ ಬೆಳೆಗಾರರ ಹಿತ ಕಾಪಾಡಬೇಕು ಎಂದು ಅಡಿಕೆ ಬೆಳೆಗಾರರು ಆಗ್ರಹಿಸಿದ್ದಾರೆ.