Site icon Vistara News

Karnataka Budget 2023 : ಅಡಿಕೆ ಸಂಶೋಧನೆಗೆ 10 ಕೋಟಿ; ತಿಪಟೂರಿನಲ್ಲಿ ತೋಟಗಾರಿಕಾ ಮಹಾವಿದ್ಯಾಲಯ

Karnataka Budget 2023

Karnataka Budget 2023

ಬೆಂಗಳೂರು: ಮಲೆನಾಡು ಮತ್ತು ಕರಾವಳಿಯ ಅಡಿಕೆ ಬೆಳೆಗಾರರು ಎಲೆ ಚುಕ್ಕಿ ರೋಗದಿಂದ ಕಂಗಾಲಾಗಿರುವ ಹೊತ್ತಿನಲ್ಲಿಯೇ, ಅಡಿಕೆ ಬೆಳೆಯನ್ನು ಬಾಧಿಸುವ ರೋಗಗಳ ನಿರ್ವಹಣೆಗೆ ನೂತನ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವ ಜೊತೆಗೆ ಉತ್ಪಾದಕತೆ ಹೆಚ್ಚಿಸುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಕ್ಕೆ 10 ಕೋಟಿ ರೂ. ಗಳ ನೆರವು ನೀಡಲಾಗುವುದು ಎಂದು ಶುಕ್ರವಾರ ಮಂಡಿಸಲಾದ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಆದರೆ ಎಲೆ ಚುಕ್ಕೆ ರೋಗ ಭಾದೆಯಿಂದ ನಷ್ಟ ಅನುಭವಿಸುತ್ತಿರುವ ಅಡಿಕೆ ಬೆಳೆಗಾರರಿಗೆ ಯಾವುದೇ ಪರಿಹಾರವನ್ನು ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಲಾಗಿಲ್ಲ. ಇದರಿಂದ ಅಡಿಕೆ ಬೆಳೆಗಾರರಿಗೆ ನಿರಾಸೆಯಾಗಿದೆ.

ತೋಟಗಾರಿಕೆಗೆ ಬಜೆಟ್‌ನಲ್ಲಿ ಆದ್ಯತೆ

ತೋಟಗಾರಿಕೆ ವಲಯದಲ್ಲಿ ಅಪಾರ ಸಾಧನೆ ಮಾಡಿ ದೇಶದಲ್ಲಿಯೇ ಅತ್ಯುತ್ತಮ ತೋಟಗಾರಿಕೆ ರಾಜ್ಯ ಎಂಬ ಹೆಗ್ಗಳಿಕೆಗೆ ನಮ್ಮ ರಾಜ್ಯ ಪಾತ್ರವಾಗಿದ್ದು, ಈ ಕ್ಷೇತ್ರಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ರಾಜ್ಯದ 26.21 ಲಕ್ಷ ಹೆಕ್ಟೇರ್ ವಿಸ್ತೀರ್ಣ ಪ್ರದೇಶದ ತೋಟಗಾರಿಕೆ ಬೆಳೆಗಳಿಂದ ಲಭಿಸುವ 242 ಲಕ್ಷ ಮೆಟ್ರಿಕ್ ಟನ್ ವಾರ್ಷಿಕ ಉತ್ಪನ್ನದ ಮೌಲ್ಯವು 66,263 ಕೋಟಿ ರೂ. ಗಳಾಗಿದ್ದು, ಇದು ರಾಜ್ಯದಲ್ಲಿನ ಸಮಗ್ರ ಕೃಷಿ ವಲಯದ ಒಟ್ಟಾರೆ ಆದಾಯದ ಶೇ.30 ರಷ್ಟಿದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.

ತುಮಕೂರಿನಲ್ಲಿ ಮಹಾವಿದ್ಯಾಲಯ
ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ತೋಟಗಾರಿಕಾ ಮಹಾವಿದ್ಯಾಲಯವನ್ನು ಸ್ಥಾಪಿಸಲಾಗುವುದು ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ದ್ರಾಕ್ಷಿ ಬೆಳೆಗಾರರಿಗೆ ನೆರವಾಗಲು ಕರ್ನಾಟಕ ದ್ರಾಕ್ಷಿ ಹಾಗೂ ದ್ರಾಕ್ಷಾರಸ ಮಂಡಳಿ ಮುಖಾಂತರ 100 ಕೋಟಿ ರೂ. ಗಳ ವೆಚ್ಚದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಬಜೆಟ್‌ನಲ್ಲಿ ಸರ್ಕಾರ ಹೇಳಿದೆ.

ಕೊಲ್ಲೋತ್ತರ ತಂತ್ರಜ್ಞಾನಕ್ಕೆ ಒತ್ತುಕೊಟ್ಟು ತೋಟಗಾರಿಕೆ ಬೆಳೆಗಳ ಮೌಲ್ಯವರ್ಧನೆಯ ಮೂಲಕ ರೈತರಿಗೆ ಉತ್ತಮ ಆದಾಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ರಫ್ತು ಮತ್ತು ಸಂಸ್ಕರಣೆಯ ಉತ್ತೇಜನಕ್ಕೆ ರೈತ ಸಂಪದ ಯೋಜನೆಯಡಿ ಕೆಪೆಕ್ ಸಂಸ್ಥೆಯ ಮೂಲಕ 100 ಕೋಟಿ ರೂ. ಗಳಲ್ಲಿ ಯೋಜನೆ ರೂಪಿಸಲಾಗುವುದು ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

ತೋಟಗಾರಿಕೆ ಇಲಾಖೆಯಡಿಯಲ್ಲಿನ 12 ತೋಟಗಳಲ್ಲಿ “ಒಂದು ತೋಟ ಒಂದು ಬೆಳೆʼʼ ಯೋಜನೆಯಡಿ ಆಯಾ ಭಾಗದ ಕೃಷಿಹವಾಮಾನ- ಮಣ್ಣಿನ ಗುಣಕ್ಕೆ ಅನುಗುಣವಾಗಿ ತೋಟಗಾರಿಕೆ ಉತ್ಪಾದಕತೆಯನ್ನು ಹೆಚ್ಚಿಸಲು 10 ಕೋಟಿ ರೂ. ಗಳ ಒಂದು ಬಾರಿಯ ವಿಶೇಷ ಅನುದಾನ ನೀಡಲಾಗುವುದು ಎಂದು ಪ್ರಕಟಿಸಲಾಗಿದೆ.

ಎಪಿಕಲ್ ರೂಟ್ ಕಲ್ಟರ್ ಪರಿಚಯ

ರಾಜ್ಯದಲ್ಲಿ ಆಲೂಗಡ್ಡೆ ಬೆಳೆಯಲು ಬೀಜವನ್ನು ಉತ್ತರದ ರಾಜ್ಯಗಳಿಂದ ಆಮದು ಮಾಡಲಾಗುತ್ತಿತ್ತು. ಆಲೂಗಡ್ಡೆ ಬಿತ್ತನೆಯಲ್ಲಿ ಸ್ವಾವಲಂಬನೆ ಸಾಧಿಸಲು ಮೊದಲ ಬಾರಿಗೆ ಎಪಿಕಲ್ ರೂಟ್ ಕಲ್ಟರ್ ತಂತ್ರಜ್ಞಾನವನ್ನು ಯೋಗ್ಯ ದರದಲ್ಲಿ ಬೆಳೆಗಾರರಿಗೆ ಪರಿಚಯಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ರಾಜ್ಯದಲ್ಲಿ ಶ್ರೀಗಂಧ ಬೆಳೆಸುವುದು, ಕಟಾವಣೆ ಮತ್ತು ಮಾರಾಟದ ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸುವ ಹಿಂದಿನ ಆಯವ್ಯಯದಲ್ಲಿ ಘೋಷಿಸಿದಂತೆ ಅರಣ್ಯ ಇಲಾಖೆಯ ವತಿಯಿಂದ ಕ್ರಮವಹಿಸಲಾಗಿದೆ. ಈ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯ ಕ್ಷೇತ್ರಗಳಲ್ಲಿ ಸುಧಾರಿತ ಶ್ರೀಗಂಧ ಪ್ರಬೇಧಗಳನ್ನು ಉತ್ಪಾದಿಸಿ ರೈತರಿಗೆ ವಿತರಿಸಲಾಗುವುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ : Karnataka Budget 2023 : ಒಂದು ಲಕ್ಷ ಸರ್ಕಾರಿ ಹುದ್ದೆಗಳಿಗೆ ನೇಮಕ; ಬಜೆಟ್‌ನಲ್ಲಿ ಬೊಮ್ಮಾಯಿ ಘೋಷಣೆ

Exit mobile version