ಬೆಂಗಳೂರು: ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕರಾವಳಿ ಜಿಲ್ಲೆಗಳಲ್ಲಿನ ಅಡಿಕೆ ತೋಟಗಳ ನಾಶಕ್ಕೆ ಕಾರಣವಾಗುತ್ತಿರುವ ಎಲೆ ಚುಕ್ಕಿ ರೋಗದ ಕುರಿತು ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ರಚಿಸಿರುವ ಏಳು ತಜ್ಞರ ಸಮಿತಿಯು ಈಗಾಗಲೇ ಒಂದು ಸಭೆ ನಡೆಸಿದ್ದು, ನವೆಂಬರ್ 20 ಮತ್ತು 21 ರಂದು ರೋಗ ಪೀಡಿತ ತೋಟಗಳಿಗೆ ಭೇಟಿ ನೀಡಲಿದೆ.
ಎಲೆ ಚುಕ್ಕೆ ರೋಗದಿಂದ ಅಡಕೆ ತೋಟ ನಾಶವಾಗುತ್ತಿರುವ ಕುರಿತು ಅಕ್ಟೋಬರ್ 19ರಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ರಾಜ್ಯ ಅಡಿಕೆ ಕಾರ್ಯಪಡೆಯ ಅಧ್ಯಕ್ಷ ಆರಗ ಜ್ಞಾನೇಂದ್ರ ನೇತೃತ್ವದ ನಿಯೋಗವು ಕೇಂದ್ರ ಸರ್ಕಾರದ ಗಮನ ಸೆಳೆದು, ಇದಕ್ಕೆ ಔಷಧವನ್ನು ಕಂಡು ಹಿಡಿಯಲು ತಜ್ಞರ ಸಮಿತಿಯನ್ನು ರಚಿಸುವಂತೆ ಕೋರಿತ್ತು.
ಇದಕ್ಕೆ ತಕ್ಷಣ ಸ್ಪಂದಿಸಿದ ಕೇಂದ್ರ ಕೃಷಿ ಇಲಾಖೆಯು ಕಾಸರಗೋಡಿನ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ (ಸಿಪಿಸಿಆರ್‌ಐ) ಭಾರತೀಯ ಕೃಷಿ ವಿಜ್ಞಾನ ಪರಿಷತ್‌ನ ನಿರ್ದೇಶಕಿ ಅನಿತಾ ಕರುಣ್ ಅವರನ್ನೊಳಗೊಂಡ ಏಳು ಸದಸ್ಯರ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿತ್ತು. ಅಡಿಕೆಯ ಎಲೆ ಚುಕ್ಕಿ ರೋಗದ ಸಮಸ್ಯೆ ಬಗೆಹರಿಸಲು ಕಾರ್ಯತಂತ್ರಗಳನ್ನು ರೂಪಿಸುವಂತೆ ಈ ಸಮಿತಿಗೆ ಆದೇಶ ನೀಡಿತ್ತು.
ಸಮಿತಿಯು ನವೆಂಬರ್ 3 ರಂದು ಕಾಸರಗೋಡಿನ ಸಿಪಿಸಿಆರ್‌ಐನಲ್ಲಿ ಸಭೆ ನಡೆಸಿದ್ದು, ಈ ರೋಗ ವೇಗವಾಗಿ ಹರಡುತ್ತಿರುವ ಕುರಿತು ಚರ್ಚೆ ನಡೆಸಿದೆ. ಅಲ್ಲದೆ ನವೆಂಬರ್ ೪ ರಂದು ಮಂಗಳೂರಿನಲ್ಲಿ ಕ್ಯಾಂಪ್ಕೊ ಹಾಗೂ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಆಯೋಜಿಸಿದ್ದ ಅಡಿಕೆಯ ಹಳದಿ ಎಲೆ ರೋಗ ಮತ್ತು ಎಲೆ ಚುಕ್ಕಿ ರೋಗದ ಅಧ್ಯಯನದ ಕುರಿತ ವಿಚಾರ ಸಂಕಿರಣದಲ್ಲಿಯೂ ಈ ಸಮಿತಿಯ ತಜ್ಞರು ಭಾಗವಹಿಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಸಮಿತಿಯ ಸದಸ್ಯ ಡಾ. ಹೋಮಿ ಚೆರಿಯನ್, “ಸಂಶೋಧನೆಗೆ ಹೆಚ್ಚಿನ ಹಣಕಾಸಿನ ಅವಶ್ಯಕತೆ ಇದೆ. ವಿಜ್ಞಾನಿಗಳು ಸಮನ್ವಯತೆಯಿಂದ ಕೆಲಸ ಮಾಡಿದಾಗ ಪರಿಹಾರ ಕಂಡು ಕೊಳ್ಳಲು ಸಾಧ್ಯವಿದೆʼʼ ಎಂದು ಹೇಳಿದ್ದಾರೆ.
ಈಗಾಗಲೇ ಸಮಿತಿಯ ತಜ್ಞರು ಎಲೆ ಚುಕ್ಕಿ ರೋಗದ ಕುರಿತು ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದು, ನವೆಂಬರ್ 20ರಂದು ಚಿಕ್ಕಮಗಳೂರು ಜಿಲ್ಲೆಯ ಕಳಸ ಭಾಗದಲ್ಲಿ ಎಲೆಚುಕ್ಕಿ ರೋಗ ಪೀಡಿತ ತೋಟಗಳಿಗೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿದೆ. 21ರಂದು ತೀರ್ಥಹಳ್ಳಿ ತಾಲೂಕಿನ ತೋಟಗಳಿಗೆ ಈ ನಿಯೋಗ ಭೇಟಿ ನೀಡಲಿದೆ. ತೋಟಗಳ ಪರಿಶೀಲನೆಯ ನಂತರ ತಜ್ಞರು ಮತ್ತೊಂದು ಸಭೆ ನಡೆಸಲಿದ್ದಾರೆ. ಆ ನಂತರ ಈ ರೋಗ ನಿಯಂತ್ರಿಸಲು ತುರ್ತಾಗಿ ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಸಮಿತಿಯ ತಜ್ಞ ಸದಸ್ಯರೊಬ್ಬರು “ವಿಸ್ತಾರ ನ್ಯೂಸ್ʼʼಗೆ ತಿಳಿಸಿದ್ದಾರೆ.
ಈ ಸಮಿತಿಯಲ್ಲಿ ಕಾಸರಗೋಡಿನ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ (ಸಿಪಿಸಿಆರ್‌ಐ) ಭಾರತೀಯ ಕೃಷಿ ವಿಜ್ಞಾನ ಪರಿಷತ್‌ನ ನಿರ್ದೇಶಕಿ ಅನಿತಾ ಕರುಣ್, ಕಲ್ಲಿಕೋಟೆಯ ಅಡಿಕೆ ಮತ್ತು ಮಸಾಲೆ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ. ಹೋಮಿ ಚೆರಿಯನ್, ನಿರ್ದೇಶನಾಲಯದ ಉಪ ನಿರ್ದೇಶಕರಾದ ಡಾ. ಫೆಮಿನಾ, ಸಿಪಿಸಿಆರ್‌ಐ ಬೆಳೆ ಉತ್ಪಾದನಾ ವಿಭಾಗದ ಮುಖ್ಯಸ್ಥ ಡಾ. ರವಿ ಭಟ್, ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಎಂ.ವಾಲಿ, ತೋಟಗಾರಿಕೆ ಇಲಾಖೆಯ ದಕ್ಷಿಣ ಕನ್ನಡದ ಉಪನಿರ್ದೇಶಕ ಡಾ. ಎಚ್.ಆರ್.ನಾಯ್ಕ್, ಸಿಪಿಸಿಆರ್‌ಐನ ಬೆಳೆ ಸಂರಕ್ಷಣಾ ವಿಭಾಗದ ಮುಖ್ಯಸ್ಥ ಡಾ. ವಿನಾಯಕ ಹೆಗಡೆ ಇದ್ದಾರೆ. ಇವರೆಲ್ಲರೂ ತೋಟಗಳಿಗೆ ಭೇಟಿ ನೀಡಲಿದ್ದಾರೆ.
ರಾಜ್ಯದಲ್ಲಿ ಎಲೆಚುಕ್ಕಿ ರೋಗದಿಂದಾಗಿ 25 ಸಾವಿರ ಹೆಕ್ಟೇರ್‌ನಷ್ಟು ಅಡಿಕೆ ತೋಟಕ್ಕೆ ಹಾನಿಯಾಗಿದೆ ಎಂದು ಅಂದಾಜಿಸಲಾಗುತ್ತಿದೆ. ಅತಿ ಹೆಚ್ಚು ಅಡಿಕೆ ಬೆಳೆಯುವ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆವರಿಸಿದ್ದರೆ, ಉತ್ತರ ಕನ್ನಡದಲ್ಲಿಯೂ ಇತ್ತೀಚೆಗೆ ರೋಗ ಕಾಣಿಸಿಕೊಂಡಿದೆ.
ಇದನ್ನೂ ಓದಿ | ಅಡಕೆ ಎಲೆಚುಕ್ಕಿ ರೋಗ | ಕೇಂದ್ರದ ಗಮನ ಸೆಳೆದ ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದ ನಿಯೋಗ