Site icon Vistara News

PM Kisan | ಸಹಾಯಧನದ 12ನೇ ಕಂತು ಪಡೆಯಲು ಸಿದ್ಧರಾಗಿ; ಇ-ಕೆವೈಸಿ ಮಾಡಿಸಿರದಿದ್ದರೆ ಕೂಡಲೇ ಮಾಡಿಸಿ

PM Kisan

ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ “ಪ್ರಧಾನ ಮಂತ್ರಿ ಕೃಷಿ ಸಮ್ಮಾನ್‌ ನಿಧಿಯ (PM Kisan) ಲಾಭ ಪಡೆಯಲು ರೈತರು “ಇ-ಕೆವೈಸಿʼʼ ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು, ರೈತರು ಕೂಡಲೇ ಇ-ಕೆವೈಸಿ ಮಾಡಿಸಿಕೊಳ್ಳಬೇಕೆಂದು ಕೃಷಿ ಇಲಾಖೆ ಕೋರಿದೆ. ಜತೆಗೆ ಇದಕ್ಕೆ ನೀಡಲಾಗಿದ್ದ ಅಂತಿಮ ಗಡುವನ್ನು ವಿಸ್ತರಿಸಲಾಗಿದೆ.

ಈ ಯೋಜನೆಯ 12ನೇ ಕಂತಿನ ಹಣವನ್ನು ಈ ತಿಂಗಳಿನಲ್ಲಿಯೇ ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿದ್ದು, ಇದನ್ನು ಪಡೆಯಬೇಕಾದರೆ ಇ-ಕೆವೈಸಿ ಮಾಡಿಸಿರಬೇಕಾದದು ಕಡ್ಡಾಯ. ಹೀಗಾಗಿ ಇನ್ನೂ ಇ-ಕೆವೈಸಿ ಮಾಡಿಸದ ರೈತರು ಕೂಡಲೇ ಮಾಡಿಸಬೇಕೆಂದು ಇಲಾಖೆಯು ಕೋರಿದೆ.

2019ರಿಂದ ಜಾರಿಗೆ ಬಂದಿರುವ ಈ ಯೋಜನೆಯಲ್ಲಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ ತಲಾ 2 ಸಾವಿರ ರೂ.ನಂತೆ ವರ್ಷಕ್ಕೆ 6 ಸಾವಿರ ರೂ., ಸಹಾಯಧನ ನೀಡಲಾಗುತ್ತದೆ. ಇದರ ಜತೆಗೆ ರಾಜ್ಯ ಸರಕಾರವೂ 4 ಸಾವಿರ ರೂ. ನೀಡುತ್ತಿದ್ದು, ರೈತರಿಗೆ ವರ್ಷಕ್ಕೆ ಒಟ್ಟು 10 ಸಾವಿರ ರೂ. ಸಹಾಯಧನ ದೊರೆಯುತ್ತಿದೆ. ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ರೈತರ ಬ್ಯಾಂಕ್‌ ಖಾತೆಗೆ ಈ ಸಹಾಯಧನವನ್ನು ಸಂದಾಯ ಮಾಡಲಾಗುತ್ತದೆ.

ಈ ಹಿಂದೆ ಇ-ಕೆವೈಸಿ ಮಾಡಿಸಲು ಜುಲೈ 31, ಆಗಸ್ಟ್‌ 31 ಕೊನೆಯ ದಿನವೆಂದು ಪ್ರಕಟಿಸಲಾಗಿತ್ತು. ಆದರೆ ಇನ್ನೂ ಅನೇಕ ರೈತರು ಇ-ಕೆವೈಸಿ ಮಾಡಿಸಿಲ್ಲ. ಹೀಗಾಗಿ ರಾಜ್ಯದ ಎಲ್ಲ ಜಿಲ್ಲಾ ಕೃಷಿ ಇಲಾಖೆಗಳು ತಾವೇ ಅಂತಿಮ ದಿನ ನಿಗದಿಪಡಿಸಿ, ರೈತರಿಂದ ಇ-ಕೆವೈಸಿ ಮಾಡಿಸುವ ಕೆಲಸ ಮಾಡುತ್ತಿವೆ. ಕೇಂದ್ರ ಸರ್ಕಾರದ ವೆಬ್‌ಸೈಟ್‌ನಲ್ಲಿ ಈಗಲೂ ಇ-ಕೆವೈಸಿ ಮಾಡಲು ಅವಕಾಶ ನೀಡಲಾಗಿದೆ.

ರಾಜ್ಯದಲ್ಲಿ ಪಿಎಂ ಕಿಸಾನ್‌ ಯೋಜನೆಗೆ ಒಟ್ಟು 58,42,644 ಫಲಾನುಭವಿ ರೈತರಿದ್ದಾರೆ. ಇದರಲ್ಲಿ ಶೇ.80ರಷ್ಟು ರೈತರು ಈಗಾಗಲೇ ಈ-ಕೆವೈಸಿ ಮಾಡಿಸಿದ್ದಾರೆಂದು ಅಂದಾಜಿಸಲಾಗಿದೆ. ಉಳಿದ ರೈತರೂ ಇ-ಕೆವೈಸಿ ಮಾಡಿಸುವಂತೆ ಮಾಡುವುದು ರಾಜ್ಯ ಕೃಷಿ ಇಲಾಖೆಗೆ ಸವಾಲಾಗಿದೆ. ಈ ತಿಂಗಳೇ 12ನೇ ಕಂತಿನ ಹಣ ಬಿಡುಗಡೆಯಾಗಲಿರು ವುದರಿಂದ ತುರ್ತಾಗಿ ಈ ಕೆಲಸ ಮಾಡಬೇಕಾಗಿದೆ.

ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌: https://raitamitra.karnataka.gov.in/info-2/Pradhan+Mantri+KIsan+SAmman+Nidhi+(PM+KISAN)/kn

ಯಾಕೆ ಇ-ಕೆವೈಸಿ ಕಡ್ಡಾಯ?
ಯೋಜನೆಯ ನಿಯಮಗಳ ಪ್ರಕಾರ ತೆರಿಗೆ ಪಾವತಿಸುವವರು, ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರಿಯಲ್ಲಿರುವ ಸದಸ್ಯರನ್ನು ಹೊಂದಿರುವ ರೈತ ಕುಟುಂಬ ಈ ಯೋಜನೆಯ ಲಾಭ ಪಡೆಯುವಂತಿಲ್ಲ. ಆದರೆ ಅನೇಕ ರೈತರು ಈ ಬಗ್ಗೆ ಮಾಹಿತಿ ಇಲ್ಲದೆ, ಹಣ ಪಡೆದು, ಕೊನೆಗೆ ಹಿಂದಿರುಗಿಸಿದ್ದರು. ಹೀಗಾಗಿ ಈ ಬಗ್ಗೆ ನಿಖರ ಮಾಹಿತಿ ಪಡೆಯಲು ಸರ್ಕಾರ ಉದ್ದೇಶಿಸಿದೆ. ಅಲ್ಲದೆ, ಈಗಾಗಲೇ ಈ ಯೋಜನೆ ಪ್ರಾರಂಭವಾಗಿ ಮೂರು ವರ್ಷಗಳಾಗಿದ್ದು, ಅನೇಕ ರೈತರು ಮೃತಪಟ್ಟಿದ್ದಾರೆ, ಇಲ್ಲವೇ ಜಮೀನು ಮಾರಾಟ ಮಾಡಿದ್ದಾರೆ. ಈ ಬಗ್ಗೆಯೂ ಸರಿಯಾದ ಮಾಹಿತಿ ಸಂಗ್ರಹಿಸಿಕೊಂಡು ಅರ್ಹ ರೈತರಿಗೆ ಮಾತ್ರ ಸಹಾಯಧನ ನೀಡಲು ಕೇಂದ್ರ ಸರ್ಕಾರವು ಇ-ಕೆವೈಸಿ ಮಾಡಿಸುವುದನ್ನು ಕಡ್ಡಾಯಗೊಳಿಸಿದೆ.

ಇ-ಕೆವೈಸಿ ಮಾಡಿಸುವುದು ಹೇಗೆ?
ಇ-ಕೆವೈಸಿಯನ್ನು ಎರಡು ರೀತಿಯಲ್ಲಿ ಮಾಡಿಸಬಹುದಾಗಿರುತ್ತದೆ.
1. ಮೊಬೈಲ್‌ನಲ್ಲಿ ಒಟಿಪಿ ಆಧಾರಿತ ಇ-ಕೆವೈಸಿ ಮಾಡಿಸುವುದು.
೨. ಬಯೋಮೆಟ್ರಿಕ್‌ ಆಧಾರಿತರ ಇ-ಕೆವೈಸಿ ಮಾಡಿಸುವುದು.

ಮೊಬೈಲ್‌ನಲ್ಲಿ ಒಟಿಪಿ ಆಧಾರಿತ ಇ-ಕೆವೈಸಿಯನ್ನು ರೈತರು ತಮ್ಮಲ್ಲಿರುವ ಸ್ಮಾರ್ಟ್‌ ಫೋನ್‌ ಮೂಲಕ ಮನೆಯಲ್ಲೇ ಕುಳಿತು ಮಾಡಬಹುದು. ಇಂಟರ್‌ನೆಟ್‌ ಸಂಪರ್ಕ ಹೊಂದಿರುವ ಮೊಬೈಲ್‌ನಲ್ಲಿ ರೈತರು https://pmkisan.gov.in ವೆಬ್‌ಸೈಟ್‌ಗೆ ಹೋಗಬೇಕು. ವೆಬ್‌ಸೈಟ್‌ನ ಬಲಭಾಗದಲ್ಲಿರುವ “Farmers Corner” ಕೆಳಗೆ eKYC ಎಂಬ ಲಿಂಕ್‌ ನೀಡಲಾಗಿದ್ದು, ಇದನ್ನು ಕ್ಲಿಕ್‌ ಮಾಡಬೇಕು. ಆಗ ಹೊಸ ವಿಂಡೋ ಓಪನ್‌ ಆಗುತ್ತದೆ. ಇದರಲ್ಲಿ ರೈತರು ತಮ್ಮ ಆಧಾರ್‌ ನಂಬರ್‌ ಮತ್ತು ಆಧಾರ್‌ನೊಂದಿಗೆ ಜೋಡಣೆಯಾಗಿರುವ ಮೊಬೈಲ್‌ ನಂಬರ್‌ ಹಾಕಬೇಕು. ನಂತರ ಮೊಬೈಲ್‌ಗೆ ಬರುವ ಒಟಿಪಿಯನ್ನು ನಮೂದಿಸಿದಲ್ಲಿ ekyc is successfully submitted ಎಂದು ಬರುತ್ತದೆ. ಅಲ್ಲಿಗೆ ಇ-ಕೆವೈಸಿ ಮಾಡಿಸಿದಂತಾಗಲಿದೆ.

ಇ-ಕೆವೈಸಿ ಮಾಡಿಸಲು ವೆಬ್‌ಸೈಟ್‌ಗೆ ಇಲ್ಲಿ ಕ್ಲಿಕ್‌ ಮಾಡಿ | https://exlink.pmkisan.gov.in/aadharekyc.aspx

ಒಟಿಪಿ ಆಧಾರಿತ ಇ-ಕೆವೈಸಿ ಮಾಡಿಸಲು ಸಾಧ್ಯವಾಗದೇ ಇರುವ ರೈತರು, (ಸಾಮಾನ್ಯವಾಗಿ ತಾಂತ್ರಿಕ ಸಮಸ್ಯೆಗಳು ಕಂಡು ಬರುತ್ತವೆ) ಬಯೋಮೆಟ್ರಿಕ್‌ ಆಧಾರಿತ ಇ-ಕೆವೈಸಿ ಮಾಡಿಸಬಹುದು. ಇದಕ್ಕೆ ಅವರು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (ನಾಡಕಚೇರಿ) ಅಥವಾ ಗ್ರಾಮ ಒನ್‌ ಸೆಂಟರ್‌ಗೆ ಹೋಗಿ, ಅಲ್ಲಿ ಬಯೋಮೆಟ್ರಿಕ್‌ ಆಧಾರಿತ ಇ-ಕೆವೈಸಿ ಮಾಡಿಸಬೇಕಿರುತ್ತದೆ.

ಸಹಾಯವಾಣಿ ಸಂಖ್ಯೆ:  155261 / 011-24300606

ಇದನ್ನೂ ಓದಿ| Cabinet decision | ಅಲ್ಪಾವಧಿಯ ಕೃಷಿ ಸಾಲಕ್ಕೆ 1.5% ಬಡ್ಡಿ ರಿಯಾಯಿತಿಗೆ ಸಂಪುಟ ಒಪ್ಪಿಗೆ

Exit mobile version