ಬೆಂಗಳೂರು: ರಾಜ್ಯದ ಅಡಿಕೆ ಮತ್ತು ಕಾಳುಮೆಣಸು ಬೆಳೆಗಾರರಿಗೆ ಸಿಹಿ ಸುದ್ದಿ ಇಲ್ಲಿದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ (PMFBY Scheme) ಅಡಿಯಲ್ಲಿ ಬೆಳೆ ವಿಮಾ ಸೌಲಭ್ಯ ಪಡೆಯಲು ರಾಜ್ಯದ ಎಲ್ಲ ಜಿಲ್ಲೆಗಳ ಅಡಿಕೆ ಮತ್ತು ಕಾಳು ಮೆಣಸು ಬೆಳೆಗಾರರಿಗೆ ಈಗ ಅವಕಾಶ ನೀಡಲಾಗಿದೆ.
ಈ ಬೆಳೆಗಳಿಗೆ ವಿಮಾ ಕಂತು ಪಾವತಿಸಲು ಅವಕಾಶ ನೀಡದೇ ಇದ್ದುದ್ದರಿಂದ ಮಲೆನಾಡು ಮತ್ತು ಕರಾವಳಿಯ ಬೆಳೆಗಾರರು ಆತಂಕಗೊಂಡಿದ್ದರು. ಈ ಕುರಿತು ʻವಿಸ್ತಾರ ನ್ಯೂಸ್ʼ ವರದಿ ಮಾಡಿತ್ತು. ಇದಕ್ಕೆ ಸಂಸದ ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದರು. ಇದೀಗ ಎಲ್ಲ ಜಿಲ್ಲೆಗಳ ಅಡಿಕೆ ಮತ್ತು ಕಾಳು ಮೆಣಸು ಬೆಳೆಗಾರರಿಗೂ ಈ ವಿಮಾ ಸೌಲಭ್ಯ ದೊರೆಯುತ್ತಿದೆ.
ಈಗಾಗಲೇ ಬಹುತೇಕ ಜಿಲ್ಲೆಗಳಲ್ಲಿ ವಿಮಾ ಕಂತು ಪಾವತಿಸಲು ಬೆಳೆಗಾರರಿಗೆ ಅವಕಾಶ ನೀಡಲಾಗಿದೆ. ಈ ಕುರಿತು ತೋಟಗಾರಿಕಾ ಇಲಾಖೆಯು ಪ್ರಕಟಣೆ ಹೊರಡಿಸಿದ್ದು, ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ (wbcis) ಜು.31ರೊಳಗೆ ಕಂತು ಪಾವತಿಸುವಂತೆ ಬೆಳೆಗಾರಲ್ಲಿ ಕೋರಿದೆ.
ಅಡಿಕೆಗೆ ಪ್ರತಿ ಹೆಕ್ಟೇರ್‌ಗೆ 1,28,000 ವಿಮಾ ಮೊತ್ತ ನಿಗದಿಪಡಿಸಲಾಗಿದೆ. ಬೆಳೆಗಾರರು ಶೇ. 5 ರಷ್ಟು ಎಂದರೆ 6,400 ರೂ. (ಪ್ರತಿ ಹೆಕ್ಟೇರ್, ಪ್ರತಿ ಎಕರೆಗಾದರೆ 2,560 ರೂ.) ಪಾವತಿಸಬೇಕಾಗಿರುತ್ತದೆ. ಕಾಳು ಮೆಣಸಿಗೆ ಪ್ರತಿ ಹೆಕ್ಟೇರ್‌ಗೆ 47,000 ರೂ. ವಿಮಾ ಮೊತ್ತ ನಿಗದಿಪಡಿಸಲಾಗಿದ್ದು, ಬೆಳೆಗಾರರು ಪ್ರತಿ ಹೆಕ್ಟೇರ್‌ಗೆ 2,350 ರೂ. ಪ್ರೀಮಿಯಂ ಪಾವತಿಸಬೇಕಿರುತ್ತದೆ.
ಯೋಜನೆಯಲ್ಲಿ ಹಲವು ಬದಲಾವಣೆ
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ (PMFBY Scheme)ಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ವಿಮಾ ಮೊತ್ತವು ಜಿಲ್ಲೆಗಳ ಬೆಳೆವಾರು ಸರಾಸರಿ ಹಣಕಾಸು ಪ್ರಮಾಣಕ್ಕೆ ಸಮನಾಗಿದ್ದು, ರೈತರ ಪಾಲಿನ ವಿಮಾ ಕಂತಿನ ಮೊತ್ತವು ಬೆಳೆ ವಿಮಾ ಮೊತ್ತದ ಶೇ.5ರಷ್ಟು ಆಗಿರುತ್ತದೆ. ಒಂದು ವೇಳೆ ಟೆಂಡರ್ ಮೋಲಕ ಅಂತಿಮಗೊಳಿಸಿದ ಬೆಳೆ ವಿಮಾ ಕಂತಿನ ಮೊತ್ತವು ಬೆಳೆ ವಿಮಾ ಮೊತ್ತದ ಶೇ.5 ಕ್ಕಿಂತ ಕಡಿಮೆ ಬಿದ್ದಲ್ಲಿ ರೈತರ ಪಾಲಿನ ವಿಮಾ ಕಂತಿನ ಮೊತ್ತವನ್ನು ಅದರಂತೆ ಪರಿಗಣಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಯೋಜನೆಯಲ್ಲಿನ ಬದಲಾವಣೆ ಮಾಡಿ ಹೊರಡಿಸಿದ ಅಧಿಸೂಚನೆಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ.
ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ನೀರಾವರಿ ಜಿಲ್ಲೆಗಳಿಗೆ ಅಂದರೆ ರಾಜ್ಯದ ಬಾಗಲಕೋಟೆ, ರಾಯಚೂರು, ಶಿವಮೊಗ್ಗ, ದಕ್ಷಿಣ ಕನ್ನಡ ಮತ್ತು ಮಂಡ್ಯ ಜಿಲ್ಲೆಗಳಿಗೆ ಶೇ. 25 ಮತ್ತು ಮಳೆ ಆಶ್ರಿತ ಜಿಲ್ಲೆಗಳಿಗೆ ಶೇ. 30 ರಷ್ಟು ಪ್ರೀಮಿಯಂ ಮಿತಿ ನಿಗದಿಪಡಿಸಲಾಗಿದೆ.
ಕೃಷಿಗೆ ಸಂಬಂಧಿಸಿದ ಲೇಖನ, ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ (Click Here) ಮಾಡಿ.
ಈ ಹಿಂದೆಯೇ ಅಡಿಕೆಯನ್ನು ಈ ವಿಮಾ ಯೋಜನೆಯಡಿ ಸೇರಿಸಲಾಗಿದ್ದು, ಕೊಳೆರೋಗ, ಮುಗುಟು (ಮಿಳ್ಳೆ) ರೋಗ, ಹಳದಿ ಎಲೆ ರೋಗ ಇತ್ಯಾದಿಗಳಿಂದ ಬೆಳೆ ನಷ್ಟವಾದರೆ ವಿಮೆ ದೊರೆಯುತ್ತಿದೆ. ಈ ಹಿಂದೆಲ್ಲಾ ಜೂನ್ ತಿಂಗಳಿನಲ್ಲಿ ಪ್ರೀಮಿಯಂ ಕಟ್ಟಲು ಸೂಚನೆ ಬರುತ್ತಿತ್ತು. ಆದರೆ ಬಹಳ ತಡವಾಗಿ ಪ್ರೀಮಿಯಂ ಕಟ್ಟಲು ಅವಕಾಶ ನೀಡಲಾಗಿದೆ. ವಿಮಾ ಕಂಪನಿಗಳ ಆಯ್ಕೆ ಪ್ರಕ್ರಿಯೆ ತಡವಾಗಿದ್ದರಿಂದ ಈ ಗೊಂದಲ ಸೃಷ್ಟಿಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ನೋಡಿ: Krishi Khajane : ಸುಖದ ಬೆಳೆ; ಸುಗಂಧಿ ಬಾಳೆ