ಬೆಂಗಳೂರು: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯ (PMFBY Scheme) ಲಾಭ ಅಡಿಕೆ ಮತ್ತು ಕಾಳುಮೆಣಸು ಬೆಳೆಗಾರರಿಗೂ ದೊರೆಯಲಿದೆ. ಈ ಬಗ್ಗೆ ಬೆಳೆಗಾರರು ಆತಂಕ ಪಡಬೇಕಾಗಿಲ್ಲ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದ್ದಾರೆ.
ಈ ಯೋಜನೆಯ ಪ್ರೀಮಿಯಂ ಪಾವತಿಸಲು ಅಡಿಕೆ ಬೆಳೆಗಾರರಿಗೆ ಅವಕಾಶ ದೊರೆಯದೇ ಇರುವ ಕುರಿತು ʼʻವಿಸ್ತಾರ ನ್ಯೂಸ್ʼʼ ಮಾಡಿದ ವರದಿಗೆ ಪ್ರತಿಕ್ರಿಯಿಸಿದ ಅವರು, ಈ ವಿಮಾ ಯೋಜನೆಯ ಉಸ್ತುವಾರಿಗಾಗಿ ವಿಮಾ ಕಂಪನಿಯೊಂದನ್ನು ನೇಮಿಸುವ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಬಹುಶಃ ಹತ್ತರಿಂದ ಹದಿನೈದು ದಿನಗಳ ಒಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ನಂತರ ಅಡಿಕೆ ಮತ್ತು ಕಾಳು ಮೆಣಸು ಬೆಳೆಗಾರರಿಗೂ ಪ್ರೀಮಿಯಂ ಪಾವತಿಸಲು ಅವಕಾಶ ಲಭ್ಯವಾಗಲಿದೆ ಎಂದು ವಿವರಿಸಿದ್ದಾರೆ.
ಕೃಷಿ ಇಲಾಖೆಯ ಕಾರ್ಯದರ್ಶಿ ಜೊತೆ ನಾನು ಮಾತನಾಡಿದ್ದು, ಟೆಂಡರ್ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದ್ದಾರೆ. ಇನ್ನು 15 ದಿನ ಸಮಯ ಬೇಕಾಗಬಹುದು ಎಂದು ಹೇಳಿದ್ದಾರೆ. ಹೀಗಾಗಿ ರೈತರು ಯಾರೂ ಆತಂಕ ಪಡುವುದು ಬೇಡ. ಮುಂದೆ ವಿಮಾ ಕಂತು ಕಟ್ಟಲು ಸಮಯಾವಕಾಶ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಸೂಚನೆ ನೀಡಿದೆ ಎಂದು ಬಿ ವೈ ರಾಘವೇಂದ್ರ ತಿಳಿಸಿದ್ದಾರೆ.
ಮೂರು ವರ್ಷಕ್ಕೊಮ್ಮೆ ಇಲಾಖೆಯಿಂದ ವಿಮಾ ಕಂಪನಿಯ ಟೆಂಡರ್ ಕರೆಯುವ ಪ್ರಕ್ರಿಯೆ ನಡೆಯುತ್ತದೆ. ಈ ವರ್ಷ ಈ ಪ್ರಕ್ರಿಯೆ ನಡೆಯುತ್ತಿರುವುದರಿಂದ ಗೊಂದಲ ಸೃಷ್ಟಿಯಾಗಿದೆ. ಅಡಿಕೆ ಮತ್ತು ಕಾಳುಮೆಣಸನ್ನು ಈ ಯೋಜನೆಯಿಂದ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ.
ಈ ವಿಮೆಯ ಪ್ರಯೋಜನೆ ಪಡೆಯಲು ʻಸಂರಕ್ಷಣೆʼ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗಿದ್ದು, ಈಗ ಅರ್ಜಿ ಸಲ್ಲಿಸಲು ಹೋದರೆ ʻʻfor this crop premium rate has not defined, please contact to administrator” ಎಂಬ ಸಂದೇಶ ಬರುತ್ತಿದೆ. ಇದರಿಂದ ಅಡಿಕೆ ಬೆಳೆಗಾರರು ಆತಂಕಕ್ಕೊಳಗಾಗಿದ್ದರು. ಈ ಕುರಿತು ವಿಸ್ತಾರ ನ್ಯೂಸ್ ಸೋಮವಾರ ವಿವರವಾಗಿ ವರದಿ ಮಾಡಿತ್ತು.
ಬೆಳೆ ವಿಮೆ ಸಿಗುತ್ತೆ, ಆತಂಕ ಬೇಡ: ಜ್ಞಾನೇಂದ್ರ
ಹವಮಾನ ಆಧಾರಿತ ಬೆಳೆವಿಮೆಯಲ್ಲಿ ಅಡಿಕೆ, ಕಾಳುಮೆಣಸು ಸೇರಿದೆ. ಇವುಗಳನ್ನು ವಿಮೆಯಿಂದ ಕೈಬಿಟ್ಟಿಲ್ಲ. ಈ ಬಗ್ಗೆ ಅಡಿಕೆ ಬೆಳೆಗಾರರು ಆತಂಕ ಪಡುವುದು ಬೇಡ ಎಂದು ಅಡಿಕೆ ಕಾರ್ಯಪಡೆಯ ಮಾಜಿ ಅಧ್ಯಕ್ಷ, ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ʻವಿಸ್ತಾರ ನ್ಯೂಸ್ʼ ನ ವರದಿಗೆ ಪ್ರತಿಕ್ರಿಯಿಸಿದ ಅವರು, ವಿಮಾ ಕಂಪನಿಯ ಆಯ್ಕೆಗಾಗಿ ಟೆಂಡರ್ ಕರೆಯಲಾಗಿದ್ದು, ಟೆಂಡರ್ ಗೆ ಯಾರೂ ಬರ್ತಾ ಇಲ್ಲ. ಹೀಗಾಗಿ ವಿಳಂಬ ಆಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : PMFBY Scheme : ಅಡಿಕೆ, ಕಾಳುಮೆಣಸಿಗೆ ಇಲ್ಲವೇ ಬೆಳೆ ವಿಮೆ?; ಬೆಳೆಗಾರರ ಆತಂಕ
ಅಡಿಕೆ, ಕಾಳುಮೆಣಸಿಗೆ ಅಗತ್ಯವಾಗಿ ಬೆಳೆವಿಮೆ ಬೇಕೇಬೇಕು. ಈ ಬೆಳೆಗಳಿಗೆ ಅತಿವೃಷ್ಟಿ ಆದರೂ ತೊಂದರೆ, ಅನಾವೃಷ್ಟಿಯಾದರೂ ತೊಂದರೆ. ಹೀಗಾಗಿ ಈ ಹಿಂದೆಯೇ ಇದನ್ನು ವಿಮಾ ಯೋಜನೆಯಡಿ ತರಲಾಗಿದೆ. ಈಗ ಪ್ರೀಮಿಯಂ ಕಟ್ಟಲು ಅವಕಾಶ ನೀಡದೇ ಇರುವುದರಿಂದ ಆಗಸ್ಟ್ ಒಂದರ ವರೆಗೆ ಅವಕಾಶ ನೀಡುವ ಸಾಧ್ಯತೆಗಳಿವೆ. ಈ ಬಗ್ಗೆ ಅಡಿಕೆ ಬೆಳೆಗಾರರು ಆತಂಕ ಪಡೆದೇ, ಕೃಷಿ ಇಲಾಖೆಯು ನೀಡುವ ಪ್ರಕಟಣೆಗೆ ಕಾಯಬೇಕಿದೆ ಎಂದು ಜ್ಞಾನೇಂದ್ರ ತಿಳಿಸಿದ್ದಾರೆ.