Site icon Vistara News

PMFBY Scheme : ಅಡಿಕೆ, ಕಾಳುಮೆಣಸಿಗೆ ಇಲ್ಲವೇ ಬೆಳೆ ವಿಮೆ?; ಬೆಳೆಗಾರರ ಆತಂಕ

pmfby web portal pmfby samrakshane

pmfby web portal

ಬೆಂಗಳೂರು: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಬಿಮಾ (ವಿಮಾ) ಯೋಜನೆ (PMFBY Scheme) ಜಾರಿಯಲ್ಲಿದ್ದರೂ, ಅಡಿಕೆ ಬೆಳೆಗಾರರಿಗೆ ಈ ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಆತಂಕಕ್ಕೊಳಗಾಗಿದ್ದಾರೆ. ಈ ವಿಮೆಯ ಪ್ರಯೋಜನೆ ಪಡೆಯಲು ʻಸಂರಕ್ಷಣೆʼ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗಿದ್ದು, ಅರ್ಜಿ ಸಲ್ಲಿಸಲು ಹೋದರೆ ʻʻfor this crop premium rate has not defined, please contact to administrator” ಎಂಬ ಸಂದೇಶ ಬರುತ್ತಿದೆ.

ಅರ್ಜಿ ಸಲ್ಲಿಸಲು ಮಲೆನಾಡು ಮತ್ತು ಕರಾವಳಿ ಭಾಗದ ಜಿಲ್ಲೆಗಳಿಗೆ ಜೂನ್‌ 30 ಕೊನೆಯ ದಿನವಾಗಿದ್ದು, ಇನ್ನು ಕೇವಲ ನಾಲ್ಕ ದಿನ ಮಾತ್ರ ಬಾಕಿ ಇದೆ. ಒಂದು ವೇಳೆ ಅವಕಾಶವೇ ದೊರೆಯದಿದ್ದರೆ ಈ ಯೋಜನೆಯ (Pradhan Mantri Fasal Bima Yojana) ಲಾಭ ನಮಗೆ ಸಿಗದು ಎಂದು ಅಡಿಕೆ ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಅಡಿಕೆಗೆ ವಿಮೆ ಮಾಡಿಸಲು ಹೋದರೆ ಹೀಗೆ ತೋರಿಸುತ್ತಿದೆ.

ಈ ಹಿಂದೆಯೇ ಅಡಿಕೆಯನ್ನು ಈ ವಿಮಾ ಯೋಜನೆಯಡಿ ಸೇರಿಸಲಾಗಿದ್ದು, ಕೊಳೆರೋಗ, ಮುಗುಟು (ಮಿಳ್ಳೆ) ರೋಗ, ಹಳದಿ ಎಲೆ ರೋಗ ಇತ್ಯಾದಿಗಳಿಂದ ಬೆಳೆ ನಷ್ಟವಾದರೆ ವಿಮೆ ದೊರೆಯುತ್ತಿದೆ. ಈ ಹಿಂದೆಲ್ಲಾ ಜೂನ್‌ ತಿಂಗಳಿನಲ್ಲಿ ಪ್ರೀಮಿಯಂ ಕಟ್ಟಲು ಸೂಚನೆ ಬರುತ್ತಿತ್ತು. ಅಂತೆಯೇ ಅಡಿಕೆ ಬೆಳೆಗಾರರು ಪ್ರೀಮಿಯಂ ಕಟ್ಟಿ ಒಂದು ವೇಳೆ ಬೆಳೆ ನಾಶವಾದಲ್ಲಿ ವಿಮೆಯನ್ನು ಪಡೆಯುತ್ತಿದ್ದರು. ಆದರೆ ಈ ವರ್ಷ ಇದುವರೆಗೂ ಮಲೆನಾಡು ಮತ್ತು ಕರಾವಳಿಯ ರೈತರಿಗೆ ಯಾವ ಸೂಚನೆಯೂ ಬಂದಿಲ್ಲ. ಹೀಗಾಗಿ ಅಡಿಕೆಯನ್ನು ಈ ವಿಮೆಯಿಂದ ಹೊರಗಿಡಲಾಗಿದೆಯೇ ಎಂಬ ಅನುಮಾನವೂ ಕಾಡಲಾರಂಭಿಸಿದೆ.

ಅಡಿಕೆ ಬೆಳೆಯು ಹವಾಮಾನ ಆಧಾರಿತವಾಗಿಯೇ ನಿರ್ಧಾರವಾಗುತ್ತದೆ. ಭಾರಿ ಮಳೆಯಾದರೆ ಅಡಿಕೆಗೆ ಕೊಳೆರೋಗ ಬಂದು ಫಸಲು ನಾಶವಾಗುತ್ತದೆ. ಇಂತಹ ಸಂದರ್ಭದಲ್ಲಿ ಬೆಳೆಗಾರರು ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಕೊಳೆರೋಗ ಪರಿಹಾರಕ್ಕಾಗಿ ಸರ್ಕಾರದ ಮೊರೆ ಹೋಗಬೇಕಾಗುತ್ತದೆ. ಆದರೆ ಇಂತಹ ವಿಮಾ ಯೋಜನೆಗಳು ಜಾರಿಯಾದರೆ ಸ್ವಲ್ಪಮಟ್ಟಿನ ಬೆಂಬಲ ಅಡಿಕೆ ಬೆಳೆಗಾರರಿಗೆ ಸಿಕ್ಕಿದಂತಾಗುತ್ತದೆ. ಹೀಗಾಗಿ ಉಪಯುಕ್ತವಾಗಿರುವ ಹವಾಮಾನ ಆಧಾರಿತ ಫಸಲು ಭೀಮಾ ಯೋಜನೆ ಅಡಿಕೆ ಬೆಳೆಗಾರರಿಗೂ ಅನ್ವಯವಾಗಬೇಕು. ಆದರೆ ಇದುವರೆಗೆ ಈ ಯೋಜನೆಗೆ ಪ್ರೀಮಿಯಂ ಪಾವತಿ ಮಾಡಲು ಬೆಳೆಗಾರರಿಗೆ ಸಾಧ್ಯವೇ ಆಗುತ್ತಿಲ್ಲ ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ದೂರಿದೆ.

ಈ ಬಗ್ಗೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದರೆ ತಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ ಎಂದು ಅಡಿಕೆ ಬೆಳೆಗಾರರು ಆರೋಪಿಸುತ್ತಿದ್ದು, ಕೂಡಲೇ ಸಂಬಂಧಪಟ್ಟ ಸಚಿವರು, ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ,ಅಡಿಕೆ ಬೆಳೆಗಾರರಿಗೆ ಪ್ರೀಮಿಯಂ ಪಾವತಿಸಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.

ಕೃಷಿಗೆ ಸಂಬಂಧಿಸಿದ ಲೇಖನ, ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್‌ (Click Here) ಮಾಡಿ.

ಅಡಿಕೆಯಂತೆ ಕಾಳುಮೆಣಸಿಗೂ ಈ ವಿಮೆ ದೊರೆಯುತ್ತಿದ್ದು, ಇದಕ್ಕೂ ಪ್ರೀಮಿಯಂ ಪಾವತಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಅಡಿಕೆ ಬೆಳೆಗಾರರಿಗೆ ಡಬ್ಬಲ್‌ ಹೊಡೆತ ಬಿದ್ದಂತಾಗಿದೆ. ಈ ನಡುವೆ ರಾಜ್ಯ ಸರ್ಕಾರ ಅಡಿಕೆ ಮತ್ತು ಕಾಳುಮೆಣಸಿಗೆ ಈ ವಿಮಾ ಸೌಲಭ್ಯದ ಅವಶ್ಯಕತೆ ಇಲ್ಲ ಎಂಬ ಕಾರಣಕ್ಕೆ ವೆಬ್‌ ಸೈಟ್‌ನಲ್ಲಿ ಪ್ರೀಮಿಯಂ ಪಾವತಿಸಲು ಸಾಧ್ಯವಾಗದಂತೆ ಮಾಡಿದೆ ಎಂಬ ವದಂತಿಯೂ ಹರಡಿದೆ. ಆದರೆ ಈ ಬೆಳೆಗಳಿಗೆ ಸಂಬಂಧಿಸಿದಂತೆ ವಿಮಾ ಕಂಪನಿಗಳೊಂದಿಗೆ ಕೇಂದ್ರ ಸರ್ಕಾರದ ಮಾತುಕತೆ ಇನ್ನೂ ಪೂರ್ಣವಾಗದೇ ಇರುವ ಕಾರಣದಿಂದ ಪ್ರೀಮಿಯಂ ಮೊತ್ತವನ್ನು ಇನ್ನೂ ನಿಗದಿಪಡಿಸಲಾಗಿಲ್ಲ. ಹೀಗಾಗಿ ಅಡಿಕೆ ಮತ್ತು ಕಾಳು ಮೆಣಸಿನ ಬೆಳೆಗೆ ವಿಮೆ ಮಾಡಿಸಲು ಅವಕಾಶ ನೀಡಲಾಗಿಲ್ಲ ಎಂದು ಕೃಷಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಯಾರೂ ಈ ಬಗ್ಗೆ ಅಧಿಕೃತ ಮಾಹಿತಿ ನೀಡುತ್ತಿಲ್ಲ.

ಈ ಬಾರಿ ಇದುವರೆಗೆ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಇದು ಅಡಿಕೆ ಮತ್ತು ಕಾಳುಮೆಣಸಿನ ಇಳುವರಿಯ ಮೇಲೆ ಪರಿಣಾಮ ಬೀರುವುದು ಖಚಿತವಾಗಿದೆ. ಹೀಗಾಗಿ ಈ ವಿಮೆ ಯೋಜನೆಯಾದರೂ ತಮ್ಮ ಕೈಹಿಡಿದೀತು ಎಂದು ಅಡಿಕೆ ಬೆಳೆಗಾರರು ನಿರೀಕ್ಷಿಸುತ್ತಿದ್ದರು. ಆದರೆ ವಿಮಾ ಯೋಜನೆಯಲ್ಲಿನ ಈ ಗೊಂದಲದಿಂದಾಗಿ ಅವರಿಗೆ ದಿಕ್ಕು ಕಾಣದಂತಾಗಿದೆ.

ತಕ್ಷಣವೇ ಈ ಬಗ್ಗೆ ಸರ್ಕಾರ ಗಮನಹರಿಸಿ, ಸೂಕ್ತವಾದ ಸಮಯಾವಕಾಶದೊಂದಿಗೆ ಹವಾಮಾನ ಆಧಾರಿತ ವಿಮಾ ಯೋಜನೆ ಅಡಿಕೆ ಬೆಳೆಗಾರರಿಗೆ ಜಾರಿಯಾಗಬೇಕು ಹಾಗೂ ಪ್ರೀಮಿಯಂ ಪಾವತಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಒತ್ತಾಯಿಸಿದೆ.

ಇದನ್ನೂ ನೋಡಿ: Krishi Khajane : ಬೆಳೆದರೆ ಬದನೆ, ಕೈ ತುಂಬಾ ಸಂಪಾದನೆ!

Exit mobile version