Site icon Vistara News

Scientist Award : IIHR ಪ್ರಧಾನ ವಿಜ್ಞಾನಿ ಡಾ.ಎಂ.ವಿ. ಧನಂಜಯ ಅವರಿಗೆ ಡಾ.ಎಂ.ಎಚ್‌. ಮರಿಗೌಡ ದತ್ತಿಪ್ರಶಸ್ತಿ

Dr MV Dhananjaya IIHR Scientist

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ನೀಡುವ 2023ನೇ ಸಾಲಿನ ಡಾ.ಎಂ.ಎಚ್‌. ಮರಿಗೌಡ ರಾಷ್ಟ್ರೀಯ ದತ್ತಿ ಪ್ರಶಸ್ತಿಗೆ (Scientist Award) ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR)ಯ ಪ್ರಧಾನ ವಿಜ್ಞಾನಿ ಡಾ.ಎಂ.ವಿ. ಧನಂಜಯ (Dr. MV Dhananjaya) ಆಯ್ಕೆಯಾಗಿದ್ದಾರೆ.

ಐಐಎಚ್‌ಆರ್‌ನ ತರಕಾರಿ ವಿಭಾಗದ ಪ್ರಧಾನ ವಿಜ್ಞಾನಿಯಾಗಿರುವ ಅವರಿಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (Gandhi Krishi vijnana Kendra) ನವೆಂಬರ್‌ 17ರಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ಕೃಷಿ ಮೇಳದ (Krishi Mela) ಉದ್ಘಾಟನಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಧನಂಜಯ ಅವರು ತೋಟಗಾರಿಕಾ ವಿಷಯಗಳ ಸಂಶೋಧನೆ, ಸೋರೆ ಕಾಯಿಯಲ್ಲಿ ಕಂಡುಬರುವ ಅಂಟು ಕಾಂಡ ಸೊರಗು ರೋಗ ನಿರೋಧಕ ತಳಿಗಳ ಅಭಿವೃದ್ಧಿಗೆ ನಡೆಸಿರುವ ಸಂಶೋಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನವರಾದ ಧನಂಜಯ ಅವರು ಬೆಂಗಳೂರಿನ ಜಿಕೆವಿಕೆಯಲ್ಲಿ ಕೃಷಿ ವಿಜ್ಞಾನದಲ್ಲಿ ಎಂಎಸ್‌ಸಿ ಪದವಿ ಪಡೆದಿದ್ದರು. ಆನುವಂಶಿಕ ಮತ್ತು ಸಸ್ಯ ಸಂತಾನೋತ್ಪತ್ತಿ (ಜೆನೆಟಿಕ್ಸ್‌ ಎಂಡ್‌ ಪ್ಲಾಂಟ್‌ ಬ್ರೀಡಿಂಗ್‌) ಕ್ಷೇತ್ರದಲ್ಲಿ ಉನ್ನತ ಅಧ್ಯಯನ ನಡೆಸಿದ್ದಾರೆ.

1997ರಲ್ಲಿ ಐಸಿಎಆರ್‌ ವಿಜ್ಞಾನಿಯಾಗಿ ಐಐಎಚ್‌ಆರ್‌ ಸೇರಿದ ಧನಂಜಯ ಅವರು ಕಳೆದ 25 ವರ್ಷಗಳಲ್ಲಿ ಬೋಧನೆ, ಸಂಶೋಧನೆ ಮತ್ತು ತೋಟಗಾರಿಕಾ ವಿಸ್ತರಣೆಯಲ್ಲಿ ಬಹುದೊಡ್ಡ ಪಾತ್ರ ವಹಿಸಿದ್ದಾರೆ. ಹತ್ತಾರು ಪಿಎಚ್‌.ಡಿ ವಿದ್ಯಾರ್ಥಿಗಳಿಗೆ ಗೈಡ್‌ ಆಗಿ ಸೇವೆ ಸಲ್ಲಿಸಿದ ಅವರು, 61 ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. 3 ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಇದನ್ನೂ ಓದಿ: Krishi Mela : ಬೆಂಗಳೂರು ಕೃಷಿ ವಿವಿಯಲ್ಲಿ ನ.17ರಿಂದ 4 ದಿನ ಕೃಷಿ ಮೇಳ; ಬೀಜ ಸಂತೆ ಸ್ಪೆಷಲ್

ದಕ್ಷಿಣ ಕೊರಿಯಾ, ಥಾಯ್ಲೆಂಡ್‌ ಸೇರಿದಂತೆ ಹಲವು ಕಡೆ ನಡೆದ ಅಂತಾರಾಷ್ಟ್ರೀಯ ಸೆಮಿನಾರ್‌ಗಳಲ್ಲಿ ಭಾಗವಹಿಸಿ ಪ್ರಬಂಧ ಮಂಡನೆ ಮಾಡಿದ ಅವರು, ಭಾರತದಲ್ಲಿ ಎರಡು ಅಂತಾರಾಷ್ಟ್ರೀಯ ಸಮಾವೇಶಗಳನ್ನು ಆಯೋಜಿಸಿದ್ದಾರೆ.

ಡಾ.ಎಂ.ವಿ ಧನಂಜಯ ಅವರು ಕೃಷಿಕರಿಗೆ ಅನುಕೂಲವಾಗುವ ತಂತ್ರಜ್ಞಾನಗಳನ್ನು ರೂಪಿಸುವಲ್ಲಿ ಸಿದ್ಧಹಸ್ತರು. ಹೊಸ ತಳಿಗಳನ್ನು ಬೆಳೆಸುವಂತೆ ಕೃಷಿಕರಿಗೆ ಪ್ರೋತ್ಸಾಹ ನೀಡುವುದು, ಸಲಹೆ ಸಹಕಾರಗಳಲ್ಲಿ ಅವರ ಬೆನ್ನಿಗೆ ನಿಲ್ಲುವುದು ಇವರ ವಿಶೇಷತೆ.

Exit mobile version