ನವ ದೆಹಲಿ: ತೋಟಗಾರಿಕೆಯಲ್ಲಿ ತೊಡಗಿರುವ ರೈತರಿಗೆ ರೋಗ ಮುಕ್ತ ಮತ್ತು ಗುಣಮಟ್ಟದ ಗಿಡಗಳನ್ನು ಒದಗಿಸಲು ಕೇಂದ್ರ ಸರ್ಕಾರವು “ಆತ್ಮನಿರ್ಭರ್ ಕ್ಲೀನ್ ಪ್ಲಾಂಟ್ʼʼ ಎಂಬ ಹೊಸ ಯೋಜನೆಯನ್ನು ಈ ಬಾರಿಯ ಬಜೆಟ್‌ನಲ್ಲಿ (Union Budget 2023) ಪ್ರಕಟಿಸಿದೆ.
ಇದಕ್ಕಾಗಿ 2,200 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ತೆಗೆದಿರಿಸಲಾಗಿದೆ. ಈ ಯೋಜನೆಯ ಮೂಲಕ ತೋಟಗಾರಿಕಾ ಬೆಳೆಗಳಿಗೆ ಸಂಬಂಧಿಸಿದ ದೇಶೀಯ ತಳಿಯ ಗಿಡಗಳನ್ನು ರೈತರಿಗೆ ಒದಗಿಸಲಾಗುತ್ತದೆ. ಈ ಯೋಜನೆಯ ಕುರಿತು ಮುಂದೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
ರಾಸಾಯನಿಕ ಬಳಕೆ ಕೃಷಿಯಲ್ಲಿ ಹೆಚ್ಚುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ವಿಷಯವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಬಜೆಟ್‌ನಲ್ಲಿ ಸಹಜ ಕೃಷಿಗೆ ಹೆಚ್ಚಿನ ಉತ್ತೇಜನ ಪ್ರಕಟಿಸಿದೆ. ಅಲ್ಲದೆ, ರಾಸಾಯನಿಕ ಗೊಬ್ಬರಗಳೊಂದಿಗೆ ಪರ್ಯಾಯ ಗೊಬ್ಬರಗಳ ಬಳಕೆ ಹೆಚ್ಚಿಸಲೂ ಯೋಜನೆ ಪ್ರಕಟಿಸಿದೆ.
ಸಹಜ ಕೃಷಿಯನ್ನು ಅಳವಡಿಸಿಕೊಳ್ಳಲು ಮುಂದಿನ ಮೂರು ವರ್ಷಗಳಲ್ಲಿ ಒಂದು ಕೋಟಿ ರೈತರಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದ್ದು, ಇದಕ್ಕಾಗಿ 10,000 “ಜೈವಿಕ ಸಂಪನ್ಮೂಲ ಕೇಂದ್ರʼʼ (Bhartiya Prakritik Kheti Bio-Input Resource Centres) ಗಳನ್ನು ಸ್ಥಾಪಿಸಿ, ಇದರ ಮೂಲಕ ಜೈವಿಕ ರಸಗೊಬ್ಬರ, ಕೀಟನಾಶಕಗಳನ್ನು ಒದಗಿಸುವ ಜಾಲವೊಂದನ್ನು ರೂಪಿಸಲಾಗುವುದು ಎಂದು ಪ್ರಕಟಿಸಲಾಗಿದೆ. ಸಣ್ಣ ಪ್ರಮಾಣದಲ್ಲಿ ಜೈವಿಕ ಗೊಬ್ಬರ, ಕೀಟನಾಶಕ ಉತ್ಪಾದಿಸುವವರಿಗೂ ಇದರಿಂದ ಮಾರಾಟ ಜಾಲ ಲಭ್ಯವಾಗಲಿದೆ. ಇದನ್ನು ಭಾರತೀಯ ಪ್ರಕೃತಿಕ ಕೃಷಿ ಪದ್ಧತಿ (BPKP) ಯೋಜನೆಯ ಅಡಿಯಲ್ಲಿ ಜಾರಿಗೆ ತರಲಾಗುತ್ತದೆ.
ಕೃಷಿಗಾಗಿ ಡಿಜಿಟಲ್ ವೇದಿಕೆ
ಕೃಷಿಯ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮುಕ್ತವಾದ ಡಿಜಿಟಲ್ ವೇದಿಕೆಯೊಂದನ್ನು ರೂಪಿಸುವುದಾಗಿ ಈ ಬಾರಿಯ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನುಇಲ್ಲಿ ಲಭ್ಯವಾಗುವಂತೆ ಮಾಡುವ ಗುರಿಯನ್ನು ಹೊಂದಲಾಗಿದೆ. ಇದರಿಂದ ರೈತರು ಯಾವ ಬೆಳೆ ಬೆಳಯಬಹುದು, ಎಷ್ಟು ಉತ್ಪಾದನೆಯಾಗುತ್ತಿದೆ? ಸಾಲ ಹೇಗೆ? ಮಾರಾಟ -ಬೆಲೆ ಹೇಗಿದೆ? ವಿಮಾ ನೀತಿ ಏನು ಎಂಬೆಲ್ಲಾ ಮಾಹಿತಿ ಒಂದೇ ಕಡೆ ಲಭ್ಯವಾಗಲಿದೆ. ಇದರಿಂದ ಅಗ್ರಿಟೆಕ್ ಉದ್ಯಮಗಳಿಗೆ ಮತ್ತು ಸ್ಟಾರ್ಟಪ್‌ಗಳಿಗೆ ರೈತರ ಸಮಸ್ಯೆಗಳನ್ನು ಗಮನಿಸಿ, ಪರಿಹಾರ ರೂಪಿಸಲು ಅನುಕೂಲವಾಗಲಿದೆ.
ಭೂಮಿಯ ಫಲವತ್ತತೆಯನ್ನು ಕಾಪಾಡಲು, ಮಣ್ಣಿನ ಗುಣಮಟ್ಟ ಹೆಚ್ಚಿಸಲು, ಈ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರಗಳು ಮುಂದಾಗಬೇಕೆಂಬ ಉದ್ದೇಶದಿಂದ ಸರ್ಕಾರಗಳಿಗೆ ಪ್ರೋತ್ಸಾಹ ನೀಡಲು “ಪಿಎಂ-ಪ್ರಣಾಮ್ʼʼ ಎಂಬ ಯೋಜನೆಯನ್ನು ಈ ಬಾರಿಯ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಈ ಯೋಜನೆಯ ಮೂಲಕ ಪರ್ಯಾಯ ರಸಗೊಬ್ಬರ ಮತ್ತು ರಾಸಾಯನಿಕ ಗೊಬ್ಬರಗಳ ಸಮತೋಲಿತ ಬಳಕೆಯನ್ನು ಪ್ರೋತ್ಸಾಹಿಸಲಾಗುತ್ತದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ. ಇದನ್ನು ಗ್ರೀನ್ ಕ್ರೆಡಿಟ್ ಪ್ರೊಗ್ರಾಮ್‌ನಡಿಯಲ್ಲಿ ಜಾರಿಗೆ ತರಲಾಗುತ್ತಿದೆ.
ಸಿರಿಧಾನ್ಯಗಳ “ಶ್ರೀ ಅನ್ನʼʼ
ಭಾರತವನ್ನು ಸಿರಿಧಾನ್ಯಗಳ ಜಾಗತಿಕ ಕೇಂದ್ರವನ್ನಾಗಿ ಮಾಡಲು ಕೇಂದ್ರ ಸರ್ಕಾರ ಹೊರಟಿದೆ. ಈಗಾಗಲೇ ಸಿರಿಧಾನ್ಯಗಳ ಉತ್ಪಾದನೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ, ರಫ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಶತಶತ ಮಾನಗಳಿಂದ ಈ ಧಾನ್ಯವನ್ನು ಆಹಾರವಾಗಿ ಬಳಸುತ್ತಿದ್ದು, ಪೌಷ್ಟಿಕವಾದ ಸಿರಿಧಾನ್ಯಗಳನ್ನು ಸಣ್ಣ ರೈತರು ಬೆಳೆಯುತ್ತಾ ಬಂದಿದ್ದಾರೆ. ಇವರಿಗೆ ನೆರವಾಗಲು ಮತ್ತು ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟವನ್ನು ಕಾಪಾಡಲು ಹೈದರಾಬಾದ್‌ನಲ್ಲಿರುವ ಭಾರತೀಯ ಸಿರಿಧಾನ್ಯ ಸಂಶೋಧನಾ ಕೇಂದ್ರಕ್ಕೆ ನೆರವು ನೀಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ.
ಬಜೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಮೀನುಗಾರರು, ಮೀನು ಮಾರಾಟಗಾರರ ವ್ಯವಹಾರಕ್ಕೆ ಪ್ರೋತ್ಸಾಹ ನೀಡಲು ಮತ್ತು ಮಾರಾಟವನ್ನು ಸುಧಾರಿಸಲು ಮತ್ತು ಮಾರುಕಟ್ಟೆಯನ್ನು ವಿಸ್ತರಿಸಲು 6,000 ಕೋಟಿ ರೂ.ಹೂಡಿಕೆಯ “ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆʼʼಯನ್ನು ಪ್ರಕಟಿಸಲಾಗಿದೆ.
ಇದನ್ನೂ ಓದಿ: Union Budget 2023 : ಕೃಷಿಕರ ಸಮಸ್ಯೆ ಬಗೆಹರಿಸುವ ಸ್ಟಾರ್ಟಪ್‌ಗೆ ಪ್ರೋತ್ಸಾಹ; ಕೇಂದ್ರದಿಂದ ಹೊಸ ನಿಧಿ ಸ್ಥಾಪನೆ