ಬೆಂಗಳೂರು: ರಾಜ್ಯದ ಏಳು ಜಿಲ್ಲೆಗಳಲ್ಲಿ ಕಾಣಿಸಿಕೊಂಡು ಲಕ್ಷಾಂತರ ಅಡಕೆ ಬೆಳೆಗಾರರನ್ನು (Arecanut Growers) ಕಂಗಾಲು ಮಾಡಿರುವ ಎಲೆಚುಕ್ಕೆ ರೋಗದ (Leaf spot Disease) ಮೂಲದ ಬಗ್ಗೆ ಉನ್ನತ ಸಂಶೋಧನೆ ನಡೆಸಲಾಗುವುದು ಮತ್ತು ಬೆಳೆಗಾರರಿಗೆ ಈ ರೋಗ ತಡೆಗೆ ಉಚಿತ ಔಷಧ (Free Medicine) ಒದಗಿಸಲಾಗುವುದು ಎಂದು ರಾಜ್ಯದ ತೋಟಗಾರಿಕೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ (S.S Mallikarjun) ಭರವಸೆ ನೀಡಿದ್ದಾರೆ.
ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಹಾಸನ, ಉಡುಪಿ, ಕೊಡಗು ಜಿಲ್ಲೆಯ ಸುಮಾರು 53,977.04 ಹೆಕ್ಟೇರ್ ತೋಟದಲ್ಲಿ ಕಾಣಿಸಿಕೊಂಡಿರುವ ರೋಗ ಮತ್ತು ಅದರಿಂದ ರೈತರ ಬದುಕಿನ ಮೇಲೆ ಆಗಿರುವ ಪರಿಣಾಮಗಳ ಬಗ್ಗೆ ವಿಸ್ತಾರ ನ್ಯೂಸ್ ನಡೆಸಿದ ವಿಶೇಷ ಅಭಿಯಾನಕ್ಕೆ (Vistara News Impact) ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸ್ಪಂದಿಸಿದ್ದು, ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಹೇಳಿದ್ದಾರೆ.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದ್ದೇನು?
ಎಲೆ ಚುಕ್ಕೆ ರೋಗ ಮಲೆನಾಡು, ಅರೆಮಲೆನಾಡು, ಕಾರವಾರ, ಮಂಗಳೂರು ಭಾಗದಲ್ಲಿ ಜಾಸ್ತಿ ಕಾಣಿಸಿಕೊಂಡಿದೆ. ಇದರ ಬಗ್ಗೆ ಉನ್ನತ ಸಂಶೋಧನೆ ನಡೆಯಬೇಕಾಗಿದೆ. ಹಿಂದಿನ ಸರ್ಕಾರ ಕೂಡಾ ಈ ನಿಟ್ಟಿನಲ್ಲಿ ಸ್ಪಂದಿಸಿದೆ. ನಮ್ಮಲ್ಲೇ ಸಂಶೋಧನೆ ಮಾಡಿ ಸೂಕ್ತವಾದ ಔಷಧ ತಯಾರಿ ಮಾಡಬೇಕು ಎನ್ನುವುದು ನಮ್ಮ ಉದ್ದೇಶ. ಅದಕ್ಕಾಗಿ ಅನುದಾನ ಕೊಟ್ಟಿದ್ದೇವೆ ಎಂದು ಸಚಿವ ಮಲ್ಲಿಕಾರ್ಜುನ್ ವಿವರಿಸಿದರು.
ವಿಶ್ವವಿದ್ಯಾಲಯಕ್ಕೆ ಅನುದಾನ ನೀಡಿ ಔಷಧ ಕಂಡುಹಿಡಿಯಬೇಕು. ಎರಡು ಕೋಟಿ ರೂಪಾಯಿ ಅನುದಾನ ನೀಡಲಾಗುತ್ತಿದೆ. ಆದಷ್ಟು ಬೇಗ ಔಷಧ ಕಂಡುಹಿಡಿದು ರೈತರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.
ಸಮಸ್ಯೆ ಎದುರಿಸುತ್ತಿರುವ ಭಾಗದ ರೈತರು ಮತ್ತು ವಿಜ್ಞಾನಿಗಳನ್ನು ಸೇರಿಸಿ ಒಂದು ಸಮಿತಿ ಮಾಡಲಾಗಿದೆ. ಶಿವಮೊಗ್ಗ, ಬಾಗಲಕೋಟೆ ಕೃಷಿ ವಿವಿಗಳು ಜಂಟಿಯಾಗಿ ಸಂಶೋಧನೆ ಮಾಡುವಂತೆ ಮನವಿ ಮಾಡಿದ್ದೇವೆ ಎಂದು ಸಚಿವರು ತಿಳಿಸಿದರು.
ಎಲೆ ಚುಕ್ಕೆ ರೋಗ ನಿವಾರಣೆಗೆ ಬೇಕಾದ ಔಷಧಗಳನ್ನು ಉಚಿತವಾಗಿ ನೀಡುತ್ತೇವೆ. ಎಲ್ಲೆಲ್ಲಿ ರೋಗ ಹೆಚ್ಚಾಗಿದೆಯೋ ಅಲ್ಲೆಲ್ಲ ಉಚಿತ ಔಷಧಗಳನ್ನು ತೋಟಗಾರಿಕಾ ಇಲಾಖೆ ಮೂಲಕ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ʻʻಹಿಂದಿನ ಬಿಜೆಪಿ ಸರ್ಕಾರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿತು. ನಮ್ಮ ಸರ್ಕಾರ ರೈತರಿಗೆ ಒಳ್ಳೆಯ ಕೆಲಸ ಮಾಡ್ತಾ ಇದೆʼʼ ಎಂದು ಸಚಿವರು ಸಮರ್ಥಿಸಿದರು.
ರಾಜ್ಯ ಸರ್ಕಾರ ಎಲ್ಲ ನೆರವು ನೀಡಲಿದೆ ಎಂದ ಸಚಿವ ಮಧು ಬಂಗಾರಪ್ಪ
ʻʻಎಲೆಚುಕ್ಕೆ ರೋಗ ತಡೆಗಟ್ಟಲು ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ನಾವು ಪ್ರಣಾಳಿಕೆಯಲ್ಲೇ ಹೇಳಿದ್ದೇವೆ. ಈಗಾಗಲೇ ಚಿಕ್ಕಮೊತ್ತದ ಹಣ ಬಿಡುಗಡೆ ಮಾಡಲಾಗಿದೆʼʼ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.
ʻʻಅಡಕೆಯನ್ನು ಕಾಡುತ್ತಿರುವ ಈ ಸಮಸ್ಯೆ ಬಗ್ಗೆ ಸಂಶೋಧನೆ ಮಾಡಲು ಯೂನಿವರ್ಸಿಟಿಗಳಿಗೆ ಹೇಳಿದ್ದೇವೆʼʼ ಎಂದು ಸಚಿವರು ತಿಳಿಸಿದರು. ʻʻಹಿಂದಿನ ಸರ್ಕಾರಗಳು ಕೂಡಾ ಹಲವು ಭರವಸೆಗಳನ್ನು ನೀಡಿವೆ. ಆದರೆ, ಯಾವುದೂ ಈಡೇರಿಲ್ಲʼʼ ಎಂಬುದನ್ನು ಸಚಿವ ಮಧು ಬಂಗಾರಪ್ಪ ಉಲ್ಲೇಖಿಸಿದರು.
ʻʻ2019ರಲ್ಲಿ ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಅವರು ಅಡಿಕೆ ಸಂಶೋಧನಾ ಕೇಂದ್ರ ಮಾಡುತ್ತೇವೆ, ಎಲೆಚುಕ್ಕಿ ರೋಗ ಕಂಟ್ರೋಲ್ ಮಾಡುತ್ತೇವೆ. ಇದಕ್ಕೆ 500 ಕೋಟಿ ಕೊಡುತ್ತೇವೆ ಎಂದು ಹೇಳಿದ್ದರು. ಆದರೆ, ಇವತ್ತಿನವರೆಗೂ ಒಂದು ಪೈಸೆ ಕೊಟ್ಟಿಲ್ಲʼʼ ಎಂದು ಉಲ್ಲೇಖಿಸಿದ ಮಧು ಬಂಗಾರಪ್ಪ, ಈ ಬಗ್ಗೆ ಯಾವ ಸಂಸದರೂ ದನಿ ಎತ್ತಿಲ್ಲ ಎಂದು ನೆನಪಿಸಿದರು.
ಹಾಗಂತ ನಾವು ಯಾರನ್ನೂ ಕಾಯುತ್ತಾ ಕುಳಿತುಕೊಲ್ಳುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಇರುವುದರಲ್ಲಿ ಸ್ವಲ್ಪ ಹಣ ನಾವು ಬಿಡುಗಡೆ ಮಾಡಿದ್ದೇವೆ. ಹೆಚ್ಚುವರಿ ಹಣ ನೀಡುವಂತೆ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಮನವಿ ಮಾಡಿದ್ದೇವೆ ಎಂದು ಸಚಿವರು ತಿಳಿಸಿದರು.
ʻʻಇದಕ್ಕೆ ಶಾಶ್ವತ ಪರಿಹಾರ ಇದಕ್ಕೆ ಹುಡುಕಬೇಕು. ಔಷಧವನ್ನು ಉಚಿತವಾಗಿ ಕೊಡುವ ವ್ಯವಸ್ಥೆ ಒಂದು ಹಂತಕ್ಕೆ ಆಗಿದೆ. ಅದನ್ನು ದೊಡ್ಡಮಟ್ಟದಲ್ಲಿ ಮಾಡಬೇಕು. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಲಾಗುವುದು. ಬರಗಾಲ ಘೋಷಣೆಯಾಗಿದ್ದರಿಂದ ಹೆಚ್ಚುವರಿ ಸಹಕಾರ ಕೊಡಿಸುವ ಬಗ್ಗೆಯೂ ಮಾತನಾಡುತ್ತೇವೆʼʼ ಎಂದು ಹೇಳಿದರು ಮಧು ಬಂಗಾರಪ್ಪ.
ಏನಿದು ಎಲೆ ಚುಕ್ಕೆ ರೋಗ, ಎಲ್ಲೆಲ್ಲಿ ಸಮಸ್ಯೆ?
ರಾಜ್ಯದ ಅಡಿಕೆ ಬೆಳೆಗಾರರು ತಮ್ಮ ಜೀವನದಲ್ಲಿ ಹಿಂದೆಂದೂ ಕಂಡರಿಯದಂತಹ ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಹಲವಾರು ವರ್ಷಗಳಿಂದ ತಮ್ಮ ಜೀವನಕ್ಕೆ ಆಸರೆಯಾಗಿದ್ದ ಅಡಿಕೆ ತೋಟಗಳೆಲ್ಲಾ ʻಎಲೆ ಚುಕ್ಕೆ ರೋಗʼದಿಂದ ನೋಡ ನೋಡತ್ತಿದ್ದಂತೆಯೇ ಬಾಡಿ ಹೋಗುತ್ತಿರುವುದು ಅವರಿಗೆ ಅಘಾತವನ್ನುಂಟು ಮಾಡಿದೆ. ಸಾಂಪ್ರದಾಯಿಕ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಅಂದರೆ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಈ ರೋಗ ವ್ಯಾಪಕವಾಗಿ ಹರಡುತ್ತಿದ್ದು, ಅಡಿಕೆ ತೋಟಗಳೆಲ್ಲಾ ನಾಶವಾಗುವ ಆತಂಕ ಎದುರಾಗಿದೆ.
ಸರ್ಕಾರದ ಪ್ರಾಥಮಿಕ ವರದಿ ಪ್ರಕಾರವೇ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಹಾಸನ, ಉಡುಪಿ, ಕೊಡಗು ಜಿಲ್ಲೆಯಲ್ಲಿ ಎಲೆಚುಕ್ಕಿ ರೋಗ ಕಾರಣಿಸಿಕೊಂಡಿದೆ. ಈ ಜಿಲ್ಲೆಗಳಲ್ಲಿ ಒಟ್ಟು 3,92,504 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ಈ ವರ್ಷ ಇದರಲ್ಲಿ 53,977.04 ಹೆಕ್ಟೇರ್ ತೋಟದಲ್ಲಿ ಈ ರೋಗ ಸದ್ಯ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಆದರೆ ಇನ್ನೂ ಸರಿಯಾಗಿ ಸರ್ವೇ ನಡೆಯದೇ ಇರುವುದರಿಂದ ಈ ರೋಗಪೀಡಿತ ತೋಟದ ಪ್ರಮಾಣ ದುಪ್ಪಟ್ಟು ಹೆಚ್ಚಿರಬಹುದೆಂದು ಅಂದಾಜಿಸಲಾಗುತ್ತಿದೆ.
ಸರ್ಕಾರದ ವರದಿ ಪ್ರಕಾರವೇ 53,977.04 ಹೆಕ್ಟೇರ್ ತೋಟದಲ್ಲಿ ರೋಗ ಉಲ್ಭಣವಾಗಿದೆ. ಇದರಲ್ಲಿ ಚಿಕ್ಕಮಗಳೂರು ಜಿಲ್ಲೆ- 28,788.04 ಹೆಕ್ಟೇರ್, ಶಿವಮೊಗ್ಗ ಜಿಲ್ಲೆ -11,950 ಹೆಕ್ಟೇರ್, ಉತ್ತರ ಕನ್ನಡ ಜಿಲ್ಲೆ -8,604 ಹೆಕ್ಟೇರ್, ಹಾಸನ ಜಿಲ್ಲೆ – 360 ಹೆಕ್ಟೇರ್, ದಕ್ಷಿಣ ಕನ್ನಡ ಜಿಲ್ಲೆ -3,623 ಹೆಕ್ಟೇರ್, ಉಡುಪಿ ಜಿಲ್ಲೆ -123 ಹೆಕ್ಟೇರ್, ಕೊಡಗು ಜಿಲ್ಲೆ – 529 ಹೆಕ್ಟೇರ್ ತೋಟ ಸೇರಿದೆ.
ರೋಗ ಬಂದಾಗ ಏನಾಗುತ್ತದೆ?
• ಅಡಿಕೆಯ ಸೋಗೆಯಲ್ಲಿ ಕಂದು ಬಣ್ಣದ ಸಣ್ಣ ಚುಕ್ಕೆ ಮೂಡುತ್ತದೆ.
• ಈ ಚುಕ್ಕೆಯ ಸುತ್ತ ಹಳದಿ ಬಣ್ಣದ ಆವೃತವಾಗಿರುತ್ತದೆ
• ಕೆಲವು ಕಡೆ ಕಪ್ಪು ಬಣ್ಣದಿಂದ ಆವೃತವಾಗಿರುವ ಬೂದು ಬಣ್ಣದ ಸಣ್ಣ ಚುಕ್ಕೆಗಳೂ ಕಾಣಿಸಿಕೊಳ್ಳುತ್ತವೆ.
• ಈ ಚುಕ್ಕೆಗಳು ಒಂದಕ್ಕೊಂದು ಸೇರಿಕೊಂಡು ಇಡೀ ಸೋಗೆಗೆ ಹಬ್ಬಿ ಅದನ್ನು ಒಗಣಿಸುತ್ತವೆ.
• ಎಲ್ಲ ಸೋಗೆ ಒಣಗಿ ಮರ ಸಾಯುತ್ತದೆ.
ಫಿಲೋಸ್ಟಿಕ್ಟಾ ಅರಕೆ ಮತ್ತು ಕೊಲೆಟೋಟ್ರೈಕಮ್ ಸ್ಪಿಸ್ಸೀಸ್ ಎನ್ನುವ ಶಿಲೀಂಧ್ರಗಳು ಎಲೆ ಚುಕ್ಕೆ ರೋಗ ಹರಡಲು ಕಾರಣ. ಕೊಲೆಟೋಟ್ರೈಕಮ್ ಶಿಲೀಂಧ್ರವು ಅಡಿಕೆಯಲ್ಲಿ ಹಿಂಗಾರ ಒಣಗುವ ರೋಗವನ್ನು ಉಂಟು ಮಾಡುತ್ತದೆ. ಈ ಶಿಲೀಂಧ್ರದ ಬೇರೆ ಬೇರೆ ಉಪಜಾತಿಗಳು ಈ ರೋಗಕ್ಕೆ ಕಾರಣವಾಗುತ್ತಿವೆ.
ನಷ್ಟದಿಂದ ಬೇಸತ್ತು ನಾಲ್ವರು ಆತ್ಮಹತ್ಯೆ
ಎಲೆಚುಕ್ಕೆ ರೋಗದಿಂದ ಆಗಿರುವ ನಷ್ಟದಿಂದ ಬೇಸತ್ತು
೧. ಕೊಪ್ಪ ತಾಲೂಕಿನ ಕಕ್ಕದ್ದೆ ಗ್ರಾಮದಲ್ಲಿ ಅಡಿಕೆ ಬೆಳೆಗಾರ ರವೀಂದ್ರ
೨. ಶೃಂಗೇರಿ ತಾಲ್ಲೂಕಿನ ತೆಕ್ಕೂರು ಕೊಡತಲು ರೈತ ಅಭಿಲಾಷ್ (36)
೩. ಕಳಸ ತಾಲೂಕಿನ ಸಂಸೆಯ ಶಂಕರೇಗೌಡ
೪. ಹೊಸನಗರ ತಾಲೂಕಿನ ಕರಿಮನೆ ಗ್ರಾಪಂ ವ್ಯಾಪ್ತಿಯ ಕಿಳಮದೂರಿನ ಕೃಷ್ಣಪ್ಪಗೌಡ
ಹೀಗೆ ಅನೇಕ ರೈತರು ಈ ರೋಗದಿಂದಾದ ನಷ್ಟ ಭರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತುರ್ತಾಗಿ ಆಗಬೇಕಿರುವುದೇನು? ವಿಸ್ತಾರ ಬೇಡಿಕೆ ಏನಿತ್ತು?
- ಎಲೆ ಚುಕ್ಕಿ ರೋಗ ಪೀಡಿತ ತೋಟಗಳ ಸಮೀಕ್ಷೆ ನಡೆಯಬೇಕು.
- ಅಗತ್ಯ ಇರುವ ರೈತರಿಗೆ ಪರಿಹಾರ ನೀಡಬೇಕು.
- ಸಲಹೆ ನೀಡಲಾಗಿರುವ ಔಷಧ ಸಿಂಪರಣೆಗೆ ಸರ್ಕಾರವೇ ನೆರವು ನೀಡಬೇಕು
- ಶೃಂಗೇರಿ ಮತ್ತು ತೀರ್ಥಹಳ್ಳಿಯಲ್ಲಿ ಅಡಕೆ ಸಂಶೋಧನಾ ಕೇಂದ್ರಗಳಿಗೆ ಆರ್ಥಿಕ ನೆರವು ನೀಡುವುದರ ಜತೆಗೆ ವಿಜ್ಞಾನಿಗಳನ್ನು ನೇಮಿಸಬೇಕು.
- ಎಲೆ ಚುಕ್ಕಿ ರೋಗ ಮತ್ತು ಹಳದಿ ಎಲೆ ರೋಗಕ್ಕೆ ಪರಿಣಾಮಕಾರಿಯಾದ ಔಷಧ ಕಂಡು ಹಿಡಿಯುವಂತೆ ಅಗತ್ಯ ಎಲ್ಲ ಕ್ರಮ ತೆಗೆದುಕೊಳ್ಳಬೇಕು.