ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಸಾಹಿತ್ಯ ಸಮ್ಮೇಳನದಲ್ಲಿ 86 ಪುಸ್ತಕಗಳು ಬಿಡುಗಡೆಯಾಗುತ್ತಿವೆ. ಇದರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕರು, ಅದರ ಮೊದಲ ಅಧ್ಯಕ್ಷರು, ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಹಲವರ ಜೀವನ ಚರಿತ್ರೆಗಳು, ಈಗಿನ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಕವನ ಸಂಕಲನ ಸೇರಿದಂತೆ ವೈವಿಧ್ಯಮಯವಾದ ಪುಸ್ತಕಗಳು ಇವೆ. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕರಾದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್, ಪರಿಷತ್ತಿನ ಬೆಳವಣಿಗೆಗೆ ಕಾರಣಕರ್ತರಾದ ಸರ್ ಮಿರ್ಜಾ ಇಸ್ಮಾಯಿಲ್, ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷ ಎಚ್.ವಿ.ನಂಜುಂಡಯ್ಯ, ಹಾವೇರಿ ನೆಲದಿಂದ ಮೂಡಿಬಂದ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿಯವರ ಜೀವನ ಚಿತ್ರಣವೂ ಈ ಮಾಲಿಕೆಯಲ್ಲಿವೆ.
ಕನ್ನಡ ಸಾಹಿತ್ಯ ಪರಿಷತ್ತಿನ ಸಮಗ್ರ ಇತಿಹಾಸ ತಿಳಿಸುವ ಕೃತಿಗಳು ಪ್ರಮುಖವಾಗಿ ಬಿಡುಗಡೆಯಾಗುತ್ತಿವೆ. ಇವರ ಜತೆಗೆ ಹಾವೇರಿ ಜಿಲ್ಲೆಯ ಮೇರು ಸಾಧಕರ ಕೃತಿಗಳೂ ಇವೆ. ಕನಕದಾಸ ವಿರಚಿತ ಹರಿಭಕ್ತಿ ಸಾರ, ಸರ್ವಜ್ಞನ ವಚನಗಳು, ಸಂತ ಶಿಶುನಾಳ ಶರೀಫರ ತತ್ವಪದಗಳ ಸಂಕಲನ ‘ಬರಕೋ ಪದ ಬರಕೋ’, ಗಳಗನಾಥ ಮಾಸ್ತರ, ಶ್ರೀನಿವಾಸ ಹಾವನೂರ, ಮಹದೇವ ಬಣಕಾರರ ‘ಆಡಳಿತದಲ್ಲಿ ಕನ್ನಡವೇ ಏಕೆ ಬೇಕು’, ಬಿ.ಜಿ. ಬಣಕಾರ ಅವರ ‘ಕನ್ನಡ ಕರ್ನಾಟಕ ಚಿಂತನೆಗಳು’ ಪ್ರಕಟವಾಗುತ್ತಿವೆ. ಕನ್ನಡ ಭಾಷೆಗಿರುವ ನಾದಗುಣವನ್ನು ಪರಿಚಯಿಸುವ, ಸುಮಾರು ನೂರು ವರ್ಷಗಳ ಹಿಂದೆ ರಚಿತವಾಗಿ ಅಪ್ರಕಟಿತವಾಗಿದ್ದ, ಭಾಷಾಶಾಸ್ತ್ರಕ್ಕೆ ಮಹತ್ವದ ಕೊಡುಗೆಯಾಗಬಲ್ಲ ಶಂ.ಬಾ.ಜೋಶಿಯವರ ‘ಕನ್ನಡ ನುಡಿಯ ಜೀವಾಳ’ ಕೃತಿ ಈ ಸಂದರ್ಭದಲ್ಲಿ ಪ್ರಕಟವಾಗುತ್ತಿದೆ.
ಸಮ್ಮೇಳನಾಧ್ಯಕ್ಷರಾದ ಡಾ.ದೊಡ್ಡರಂಗೇಗೌಡ ಅವರ ಕವನ ಸಂಕಲನ ‘ಮಣ್ಣಿನ ಹಣತೆಗಳು’, ಅವರ ಆಯ್ದ ಕವಿತೆಗಳ ಪ್ರಾಯೋಗಿಕ ವಿಮರ್ಶೆಯ ಸಂಕಲನ, ಸರಸ್ವತಿ ಸಮ್ಮಾನ್ ಪುರಸ್ಕೃತರಾದ ಡಾ.ಎಸ್.ಎಲ್. ಭೈರಪ್ಪನವರ ಕುರಿತು ಡಾ.ಶತಾವಧಾನಿ ಗಣೇಶ್ ಅವರು ಬರೆದಿರುವ ‘ಪ್ರಸ್ಥಾನ’, ವೀರಪ್ಪ ಮೊಯ್ಲಿಯವರ ಕುರಿತ ಆರತಿ ನಾಗೇಶ್ ಅವರ ‘ಸವ್ಯಸಾಚಿ ವೀರಪ್ಪ ಮೊಯ್ಲಿ’, ಕನ್ನಡದಲ್ಲಿ ಕಾನೂನಿನ ಬಳಕೆ ಮತ್ತು ಪ್ರಯೋಗವನ್ನು ಕುರಿತ ‘ಕಾನೂನು ಕನ್ನಡಿ’ ಎನ್ನುವ ಕೃತಿ ಪ್ರಕಟವಾಗುತ್ತಿವೆ.
ಹಾವೇರಿ ಮೂಲದವರಾದ ವಚನಕಾರರಾದ ಅಂಬಿಗರ ಚೌಡಯ್ಯ, ಹೆಳವನಕಟ್ಟೆ ಗಿರಿಯಮ್ಮ, ಕವಿ ಸು.ರಂ,ಎಕ್ಕುಂಡಿ, ಪಾಟೀಲ ಪುಟ್ಟಪ್ಪ, ಕೆ.ಎಫ್.ಪಾಟೀಲ, ಕನಕದಾಸರು, ಗುರು ಗೋವಿಂದ ಭಟ್ಟರು, ಸಂತ ಶಿಶುನಾಳ ಶರೀಫರು, ಶಿ.ಶಿ.ಬಸವನಾಳ, ಮೈಲಾರ ಮಹದೇವಪ್ಪ, ಪಂಡಿತ ಪಂಚಾಕ್ಷರಿ ಗವಾಯಿಗಳು, ಪಂಡಿತ್ ಪುಟ್ಟರಾಜ ಗವಾಯಿಗಳು, ಡಾ.ಗಂಗೂಬಾಯಿ ಹಾನಗಲ್ಲ, ಆರ್.ನಾಗೇಂದ್ರ ರಾವ್, ಆರ್.ಎನ್.ಜಯಗೋಪಾಲ್, ಆರ್.ಎನ್.ಸುದರ್ಶನ್, ಶೈಲಶ್ರೀ, ನಾ.ಸು.ಹರ್ಡೀಕರ್, ಹೊಸ ಮನಿ ಸಿದ್ದಪ್ಪ, ಪ್ರೊ.ಚಂದ್ರಶೇಖರ ಪಾಟೀಲ, ಡಾ.ವಿ.ಕೃ.ಗೋಕಾಕ್, ಡಾ.ಜಿ.ಎಸ್.ಅಮೂರ, ರಾಕು, ಬಸವಲಿಂಗ ಶಾಸ್ತ್ರಿ, ಜುಬೇದ ಸವಣೂರ, ಸರ್ವಜ್ಞ, ಕರ್ಜಗಿ ದಾಸರು, ಶಾಂತಕವಿ ಹೀಗೆ ನೂರಕ್ಕೂ ಹೆಚ್ಚು ಸಾಧಕರ ಜೀವನ ಮತ್ತು ಸಾಧನೆ ಇಲ್ಲಿ ಸಂಕಲಿತವಾಗಿವೆ.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಅತೃಪ್ತ ಆತ್ಮಗಳಿಂದ ಪರ್ಯಾಯ: ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡ
ಹಾವೇರಿಯ ಪ್ರಮುಖ ಹೆಗ್ಗಳಿಕೆಗಳಾದ ಸವಣೂರು ಸಂಸ್ಥಾನ, ಅಗಡಿ ಆನಂದವನ, ಹಾವನೂರು ಸಂಸ್ಥಾನ, ದೇವರಗುಡ್ಡ ಪರಂಪರೆ, ಆರೂಢ ಪರಂಪರೆ ಮೊದಲಾದವುಗಳ ಕುರಿತೂ ಮಹತ್ವದ ಕೃತಿಗಳು ಈ ಮಾಲಿಕೆಯಲ್ಲಿವೆ. ಹಾವೇರಿಯ ಹಾವೇರಿ, ರಟ್ಟೀಹಳ್ಳಿ, ರಾಣೆಬೆನ್ನೂರು, ಹಿರೇಕೆರೂರು, ಹಾನಗಲ್ಲ, ಬ್ಯಾಡಗಿ, ಶಿಗ್ಗಾಂವಿ, ಸವಣೂರು ತಾಲೂಕುಗಳ ಇತಿಹಾಸ, ಪರಂಪರೆ ಅಲ್ಲಿನ ಸಾಧಕರನ್ನು ಗುರುತಿಸುವ ತಾಲೂಕು ದರ್ಶನ ಕೃತಿಗಳು ಈ ಮಾಲಿಕೆಯಲ್ಲಿವೆ. ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪರಿಚಯದ ಕೃತಿ ಕೂಡ ಈ ಮಾಲಿಕೆಯಲ್ಲಿದೆ.
ಷಡಕ್ಷರ ದೇವನ ಶಬರ ಶಂಕರ ವಿಳಾಸ, ಡಾ.ಪಿ.ವಿ. ನಾರಾಯಣ ಅವರ ಹಳೆಗನ್ನಡ ಸಂಪದ, ಎಚ್.ಎಸ್.ಶಿವಪ್ರಕಾಶ್ ಅವರ ‘ಮಂಟೇಸ್ವಾಮಿ ಕಥಾ ಪ್ರಸಂಗ’, ಲಕ್ಷ್ಮೀಶ ಕವಿಯ ಜೈಮಿನಿ ಭಾರತ, ಗೊರೂರು ರಾಮಸ್ವಾಮಿ ಅಯ್ಯಂಗಾರರು ಸಂಪಾದಿಸಿದ ‘ಹಳ್ಳಿಯ ಹಾಡುಗಳು’, ಎಂ.ಜಿ.ಚಂದ್ರಶೇಖರಯ್ಯ ಅವರ ‘ಬಸವಣ್ಣ ಜೀವನ ಸಾಧನೆ’, ಆಲೂರು ವೆಂಕಟರಾಯರ ‘ಕರ್ನಾಟಕತ್ವದ ವಿಕಾಸ’, ಡಾ.ಯು.ಆರ್.ಅನಂತಮೂರ್ತಿಯವರ ‘ಕನ್ನಡ-ಕರ್ನಾಟಕ’, ಡಾ.ವಿಜಯಶ್ರೀ ಸಬರದ ಅವರ ‘ಅಕ್ಕಮಹಾದೇವಿ’, ಡಾ.ಸೂರ್ಯನಾಥ ಕಾಮತರ ‘ಸ್ವಾತಂತ್ರ್ಯ ಸೂರ್ಯೋದಯ’, ಕೋ.ಚನ್ನಬಸಪ್ಪನವರ ‘ಸ್ವಾಮಿ ವಿವೇಕಾನಂದರ ಸಮಗ್ರ ಕೃತಿಸಾರ ಸಂಚಯ’, ಬೀಚಿಯವರ ‘ತಿಂಮನ ತಲೆ’, ಅ.ನ.ಕೃಷ್ಣರಾಯರ ‘ಕನ್ನಡ ಕುಲರಸಿಕರು’, ಜಿ.ಪಿ.ರಾಜರತ್ನಂ ಅವರ ‘ಕಂದನ ಕಾವ್ಯಮಾಲೆ’ ಮರು ಮದ್ರಣಗೊಳ್ಳುತ್ತಿವೆ.
ಕವಿ ಸಿದ್ದಲಿಂಗಯ್ಯವರ ಆಯ್ದ ಕವಿತೆಗಳ ಸಂಕಲನ ‘ನನ್ನ ಜನರು ಮತ್ತು ಇತರ ಕವಿತೆಗಳುʼ, ಡಾ.ಡಿ.ಆರ್.ನಾಗರಾಜ್ ಅವರ ದಲಿತ ಮೀಮಾಂಸೆಯ ಇಂಗ್ಲೀಷ್ ಕೃತಿಯ ಕನ್ನಡ ಅನುವಾದ ‘ಉರಿ ಚಮ್ಮಾಳಿಗೆ’ ಕೃತಿ, ಕನ್ನಡಕ್ಕೆ ಬಹುಮುಖ್ಯವಾದ ಮಹಾಜನ ವರದಿ ಮತ್ತು ಗೋಕಾಕ್ ವರದಿಗಳ ಕುರಿತ ಕೃತಿಗಳೂ ಈ ಮಾಲಿಕೆಯಲ್ಲಿವೆ.