Site icon Vistara News

Book Excerpt: ದೇವೇಂದ್ರನ ಮೀಸೆ ಹಸುರಾದುದು ಹೇಗೆ?

ವಿದ್ವಾಂಸ, ಯಕ್ಷಗಾನ ಅರ್ಥಧಾರಿ ಮೂಡಂಬೈಲು ಸಿ.ಗೋಪಾಲಕೃಷ್ಣ ಶಾಸ್ತ್ರೀ ಅವರು ರಚಿಸಿದ ʼಪುರಾಣಕಥಾ ಚಿಂತಾರತ್ನʼ ಕೃತಿಯಿಂದ ಆಯ್ದ ಭಾಗ ಇಲ್ಲಿದೆ, ಓದಿ:

ದೇವೇಂದ್ರನಿಗೆ ರಾವಣನ ದಿಗ್ವಿಜಯ ಕಾಲದಲ್ಲಿ ಮೇಘನಾದನಿಂದ ಅಪಜಯವಾಯಿತು. ಅವನ ತೇಜಸ್ಸು ನಷ್ಟವಾಗಿತ್ತು. ಮ್ಲಾನವದನನಾಗಿದ್ದನು. ಸೋಲಿಗೆ ಕಾರಣವೇನೆಂದು ಪಿತಾಮಹನು ವಿಶದಪಡಿಸುತ್ತಾ ದೇವೇಂದ್ರನನ್ನು ಸಂತೈಸಿದನು. ಬ್ರಹ್ಮನು ಪ್ರಜೆಗಳನ್ನು ಸೃಷ್ಟಿಸಿದ ಪ್ರಥಮ ಹಂತದಲ್ಲಿ ಅವರೆಲ್ಲರಿಗೂ ಒಂದೇ ಭಾಷೆ, ಅಭಿನ್ನರೂಪ, ಸಾರೂಪ್ಯ-ಸೌಂದರ್ಯಗಳಿದ್ದವು. ಪ್ರಜೆಗಳಲ್ಲಿ ವೈವಿಧ್ಯವಿರಬೇಕೆಂದು ನಿಶ್ಚಯಿಸಿ ಪಿತಾಮಹನು ಸ್ತ್ರೀಯೊಬ್ಬಳನ್ನು ಸೃಷ್ಟಿಸಿದನು.

ಪ್ರಪಂಚದಲ್ಲಿ ʼಹಲ’ ಎಂದರೆ ಕುರೂಪ. ಕುರೂಪತೆಯೇ ಹಲ್ಯಾ. ಸರ್ವಾಂಗ ಸುಂದರಿಯಾದವಳೇ ʼಅಹಲ್ಯಾ’. ಬ್ರಹ್ಮನು ಅವಳನ್ನು ಮಹರ್ಷಿಯಾದ ಗೌತಮನಲ್ಲಿ ನ್ಯಾಸರೂಪವಾಗಿಟ್ಟನು. ಅಂದಿನಿಂದಲೇ ದೇವೇಂದ್ರನು ಆಕೆಯನ್ನು ಬಯಸಿದ್ದನು. ಗೌತಮನ ಇಂದ್ರಿಯ ಸಂಯಮಾದಿಗಳನ್ನು ಮೆಚ್ಚಿದ ಬ್ರಹ್ಮ ಆಕೆಯನ್ನು ಗೌತಮನಿಗೇ ವಿವಾಹ
ಮಾಡಿಕೊಟ್ಟನು.

ಇದರಿಂದಾಗಿ ಇಂದ್ರನಿಗೂ, ದೇವತೆಗಳಿಗೂ ಹೊಟ್ಟೆ ಉರಿ ಪ್ರಾರಂಭವಾಯಿತು. ಇಂದ್ರನ ಕಾಮೋತ್ತೇಜನ ಪ್ರಬಲವಾಯಿತು. ಅಹಲ್ಯೆಯನ್ನು ಕೀಳು ಪ್ರವೃತ್ತಿಯಿಂದಲಾದರೂ ಪಡೆಯಬೇಕೆಂದು ನಿರ್ಧರಿಸಿದನು. ಗೌತಮ ಮಹರ್ಷಿಗಳು ಮಹಾತಪೋಧನರು. ಪತ್ನಿಯಾದ ಅಹಲ್ಯೆಯೊಂದಿಗೆ ಅವರು ಮಿಥಿಲಾಪಟ್ಟಣದ ಬಳಿ ಹಲವಾರು ವರ್ಷ ವಾಸಿಸುತ್ತಿದ್ದರು. ಶಾಪಾನುಗ್ರಹ ಸಮರ್ಥರಾದ ಅವರು ಒಂದು ದಿನ ಕಾರ್ಯಾಂತರದಿಂದ ದೂರದ ಊರಿಗೆ ಪ್ರಯಾಣ ಮಾಡಿದ್ದರು.

ಆಗ ದೇವೇಂದ್ರನು ಗೌತಮರ ವೇಷಧರಿಸಿ ಅಹಲ್ಯೆಯ ಬಳಿಗೆ ಬಂದನು. ಕಾಮಾತಿರೇಕದಿಂದ ಆಕೆಯೊಡನೆ ರತಿಸುಖವನ್ನು ಕೊಡುವಂತೆ ಪ್ರಾರ್ಥಿಸಿದನು. ಅಕಾಲದಲ್ಲೇನು ಪ್ರಾರ್ಥನೆಯೆಂಬುದಕ್ಕೆ ಸಮಾಧಾನರೂಪವಾಗಿ, “ಮನ್ಮಥಪೀಡಿತರು ಋತುಕಾಲವನ್ನು ಕಾಯುವುದಿಲ್ಲʼʼವೆಂದು ಅವಸರಿಸಿದನು. ಅವನ ಮಾತಿನಿಂದಲೇ ಗೌತಮನಲ್ಲವೆಂದು ತಿಳಿಯಿತಾದರೂ, ಬಂದವನು ದೇವರಾಜನೆಂಬ ಅಭಿಮಾನದಿಂದ ಒಪ್ಪಿದಳು. ತನಗೆ ದೇವರಾಜ ದೊರಕಿದನೆಂದು ತನ್ನ ಮಹಾಭಾಗ್ಯಕ್ಕಾಗಿ ಹಿರಿಹಿರಿ ಹಿಗ್ಗಿದಳು. ಸಂಭೋಗದಿಂದ ಸಂತುಷ್ಟಳಾಗಿ, “ಅಯ್ಯಾ ಮಹೇಂದ್ರ! ನಾನು ಸಂತುಷ್ಟಳಾದೆ. ಗೌತಮರ ಶಾಪಕ್ಕೆ ನಾವು ಪಾತ್ರರಾಗಬಾರದು. ನೀನು ಬೇಗನೆ ಹೊರಡು” ಎಂದಳು.

ಸಂತೃಪ್ತಿಯಿಂದ ನಿರ್ಗಮಿಸುತ್ತಿದ್ದ ನಿರ್ಗಮಿಸುತ್ತಿದ್ದ ಇಂದ್ರನ ಮುಖಾಮುಖಿಯಾಗಿ ಗೌತಮರ ಆಗಮನವಾಯಿತು. ಸುರಪತಿಯ ಹೇಯಕೃತ್ಯಕ್ಕೆ ಕ್ರೋಧಗೊಂಡ ಮಹರ್ಷಿ ಶಾಪವನ್ನಿತ್ತನು. “ದೇವೇಂದ್ರಾ! ನನ್ನ ರೂಪ ಧರಿಸಿ ನೀನು ಮಾಡಿದ ಕೆಲಸ ಅತ್ಯಂತ ದೌಷ್ಟ್ಯಪೂರ್ಣವಾದುದು. ಮಾತ್ರವಲ್ಲ, ಅತ್ಯಂತ ಹೇಯವಾದುದು. ದುರ್ಮತಿಯಾದ ನೀನು ಫಲರಹಿತನಾಗು (ವೃಷಣವಿಲ್ಲದವ), ನನ್ನ ಪತ್ನಿಯನ್ನು ದುರಾಚಾರಕ್ಕೆಳೆದ ನೀನು ಯುದ್ಧದಲ್ಲಿ ವಿರೋಧಿಗಳಿಂದ ಬಂಧಿತನಾಗು. ನೀನು ಪ್ರಾರಂಭಿಸಿದ ಈ ಜಾರತ್ವ ಭೂಲೋಕದಲ್ಲೂ ಪ್ರವರ್ತಿತವಾಗುತ್ತದೆ. ಲೋಕದಲ್ಲಿ ವ್ಯಭಿಚಾರ ಮಾಡುವವನ ಪಾಪದಲ್ಲಿ ಅರ್ಧಭಾಗ ನಿನಗೂ ಬರಲಿ. ಯಾಕೆಂದರೆ ಜಾರತ್ವಕ್ಕೆ ನೀನು ಮಾರ್ಗದರ್ಶಕನು, ನಿನ್ನ ಪದವಿಯೂ ಸ್ಥಿರವಿಲ್ಲದಾಗಲಿ. ಯಾವನು ಸುರಪತಿಯ ಪದವಿಯಲ್ಲಿ ಅಲಂಕರಿಸಲ್ಪಡುವನೋ ಅವನಿಗೆ ಅದು ಶಾಶ್ವತವಾಗಿಲ್ಲದೆ ಹೋಗಲಿ” ಎಂದು ಶಪಿಸಿದನು.

ಪರಿಣಾಮವಾಗಿ ದೇವೇಂದ್ರನ ವೃಷಣಗಳು ಕಳಚಿಬಿದ್ದವು. ಇದರೊಂದಿಗೆ “ನಿನ್ನ ಗಡ್ಡಮೀಸೆಗಳು ಹಸುರಾಗಲಿ” ಎಂದು ಶಪಿಸಿದರು.

ಇದನ್ನೂ ಓದಿ: Book excerpt: ಉರಿದ ಅರಮನೆಯಲ್ಲಿ ವಿಚಿತ್ರ ವಾಸನೆ!

ಅಹಲ್ಯೆಯನ್ನು ಕುರಿತು, “ನೀನು ಆಶ್ರಮದ ಸಮೀಪ ಅದೃಶ್ಯಳಾಗಿರು. ತನಗೆ ಸದೃಶರಾದ ಚೆಲುವೆಯರು ಇನ್ನಿಲ್ಲವೆಂಬ ಉನ್ಮತ್ತತೆಯಿಂದ ಇಂದ್ರನಲ್ಲೂ ಕಾಮವಿಕಾರಕ್ಕೆ ಕಾರಣಳಾದೆ. ನೀನೊಬ್ಬಳೇ ಇರುವುದಲ್ಲ, ನಿನ್ನಂತಹ ಲಾವಣ್ಯವತಿಯರು ಭೂಲೋಕದಲ್ಲಿ ಹೆಚ್ಚು ಹೆಚ್ಚಾಗಿ ಹುಟ್ಟಿ ಬರಲಿ. ನೀನು ಕೆಟ್ಟ ಭಾವನೆಯುಳ್ಳವಳು. ಈ ಕಾಡಿನಲ್ಲಿ ಗಾಳಿಯನ್ನೇ ಸೇವಿಸುತ್ತಾ, ಭಸ್ಮದ ಮೇಲೆ ಬಿದ್ದುಕೊಂಡು, ಸಕಲರಿಗೂ ಅದೃಶ್ಯಳಾಗಿ ದುಃಖಿಸುತ್ತಿರು. ಮುಂದೆ ದಶರಥಪುತ್ರನಾದ ಶ್ರೀರಾಮನು ಇಲ್ಲಿಗೆ ಬಂದಾಗ ನೀನು ಶಾಪವಿಮುಕ್ತಳಾಗುವೆ. ಆಗ ಪೂರ್ವರೂಪದಿಂದ ನನ್ನೊಂದಿಗೆ ಸೇರುವೆ” ಎಂದು ಶಪಿಸಿ, ತಪಶ್ಚರಣೆಗಾಗಿ ಹಿಮವತ್ಪರ್ವತದ ಕಡೆಗೆ ನಡೆದನು.

(ಆಧಾರ: ರಾಮಾಯಣ, ಉತ್ತರಕಾಂಡ – ೩೦ನೇ ಸರ್ಗ, ಮಹಾಭಾರತ ಶಾಂತಿಪರ್ವ-೩೪೨ರಲ್ಲಿ ೨೩ನೇ ಅಧ್ಯಾಯ; ವಾಲ್ಮೀಕಿ ರಾಮಾಯಣ, ಬಾಲಕಾಂಡ, ೪೮ನೇ ಸರ್ಗ)

Exit mobile version