ಡಾ.ಆರ್.ಜಿ.ಹೆಗಡೆ ಅವರ ಕೃತಿ ʼಮೊದಲ ಮಳೆಯ ಪರಿಮಳʼ. ಇದನ್ನು ಅವರು ʼಒಂದು ಸಂಸ್ಕೃತಿಯ ಚಿತ್ರಪಟಗಳುʼ ಎಂದು ಕರೆದುಕೊಂಡಿದ್ದಾರೆ. ಸುಂದರ ಸ್ಮೃತಿಚಿತ್ರಗಳಾಗಿರುವ ಈ ಪ್ರಬಂಧಗಳಿಂದ ಆಯ್ದ ಲೇಖನಭಾಗ ಇಲ್ಲಿದೆ.
ಮೊದಲ ಮಳೆ ಯಾರನ್ನೂ ಕೇಳಿಕೊಂಡು ಬೀಳುವುದಿಲ್ಲ. ಸ್ತ್ರೀಯರ ಕಣ್ಣೀರಿನ ಹಾಗೆ. ಕೆಲವೇ ಕ್ಷಣದ ಮಾತು ಅದು. ಬೆಳಿಗ್ಗೆ ನೋಡಿದರೆ ರಣಗುಡುವ ಬಿಸಿಲು, ಕಣ್ಣು ತೆರೆದು ನೋಡಲಾಗುವುದಿಲ್ಲ. ಮಾರ್ಕೇಟುಗಳಲ್ಲಿ ಬಗೆಬಗೆಯ ಮಾವಿನ ಹಣ್ಣಿನ ರಾಶಿ ಹಾಕಿಕೊಂಡು, ಬಿಸಿಲಿಗೆ ಕೊಡೆ ಅಡಿ ಕುಳಿತುಕೊಂಡ ಹಳ್ಳಿಗರು. ಬಿಸಿಲಿನ ಝಳಕ್ಕೆ ರಕ್ಷಣೆಗೆಂದು ಅವರ ತಲೆಯ ಮೇಲೆ ದೊಡ್ಡ ಮುಂಡಾಸು, ಮುಖದಲ್ಲಿ ಇಳಿದ ಬೆವರು.
ಮಾವಿನ ಹಣ್ಣುಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್. ಬಿಸಿಲಿಗೆ ತಂಪೆನಿಸುವ ಮಾವಿನ ಹಣ್ಣುಗಳನ್ನು ಮುಗಿಬಿದ್ದು ಜನ ಖರೀದಿಸುವುದು ಸರ್ವೇಸಾಮಾನ್ಯ. ಹಾಗೆಯೇ ಮಾರುಕಟ್ಟೆ ಉದ್ದಕ್ಕೂ ತರಹಾವರಿ, ಮಳೆಗಾಲದ ಸಿದ್ಧತೆಯ ಸಾಮಾನುಗಳು. ಬೇಸಿಗೆಯ ರಜೆಯಲ್ಲಿ ಮನರಂಜನೆಗಾಗಿ ಬಂದು ನಿಂತ ಆಕಾಶದೆತ್ತರದ ಆಟದ ತೊಟ್ಟಿಲುಗಳು. ಮಧ್ಯಾಹ್ನ ಅವು ನಿಂತೇ ಇರುವುದು. ಅವಕ್ಕೆ ಸಾಯಂಕಾಲದಲ್ಲಿ ಮುತ್ತುವ ಮಕ್ಕಳು ಈಗ ಮನೆಯಲ್ಲಿ, ವಿವಿಧ ರೀತಿಯ ತಿಂಡಿ ಮಾರುವ ಅಂಗಡಿಗಳು, ಕಬ್ಬಿನ ಹಾಲಿನ, ತಂಪು ಪಾನೀಯಗಳ ಅಂಗಡಿಗಳು ತುಂಬ ಅಸ್ತವ್ಯಸ್ತ ಹರಡಿ ಕೊಂಡಿರುತ್ತವೆ.
ಪ್ರವಾಸಿಗಳ ಭರಾಟೆ ಕೂಡ ಈಗ ಜೋರು. ಮಾರುಕಟ್ಟೆಗಳ ಬೀದಿಗಳಲ್ಲಿ ಬರ್ಮುಡ ತೊಟ್ಟು ಸುಂದರ ಬಾಳೆದಿಂಡಿನಂತಹ ಕಾಲುಗಳನ್ನು ಕೆಂಪಗಾಗಿಸಿಕೊಂಡು ದೊಡ್ಡ ದೊಡ್ಡ ಕನ್ನಡಕ ಧರಿಸಿ ಕೂದಲು ಕಟ್ಟದೇ ಹಾಗೆಯೇ ಬಿಟ್ಟು ಚಿತ್ರ ವಿಚಿತ್ರ ಸಾಮಾನುಗಳನ್ನು ಖರೀದಿಸುತ್ತಾ, ಹಗಲು ಸ್ವಪ್ನಾವಸ್ಥೆಗಳಲ್ಲಿ ವಿಹರಿಸುತ್ತ ಇರುವವರು ಪ್ರವಾಸಿಗರು, ಇಂತಹ ಪ್ರವಾಸಿಗರು ಎಂಜಾಯ್ ಮಾಡಲೆಂದೇ ಬಂದವರು. ಅವರಿಗೆ ಎಲ್ಲವೂ ಮಜವೇ. ಒಂದು ರೀತಿಯ ಮಾದಕ ಜಗತ್ತಿನಲ್ಲಿಯೇ ಇರುವವರು ಅವರು. ಮಾರುಕಟ್ಟೆಯಲ್ಲಿ ಕಾಣುವ ಚಿತ್ರ-ವಿಚಿತ್ರವಾದುದೆಲ್ಲವನ್ನೂ ಎಷ್ಟು ದುಡ್ಡು ಬೇಕಾದರೂ ಕೊಟ್ಟು ಖರೀದಿಸುವುದು ಅವರಿಗೆ ಪ್ರೀತಿಯ ವಿಷಯ. ಕರೀಸೂಜಿ ಹಣ್ಣು, ಕರಜಲು ಹಣ್ಣು, ಮುರುಗಲು ಹಣ್ಣು ಇತ್ಯಾದಿಗಳನ್ನು ಎಷ್ಟು ಬೆಲೆ ಕೊಟ್ಟಾದರೂ ಅವರು ಖರೀದಿಸುವವರೇ. ಬಿರು ಬೇಸಿಗೆಯ ಎಲ್ಲ ಸಂಭ್ರಮಗಳಿಗೂ ಸಾಕ್ಷಿಯಾಗುವವರು ಅವರು.
ಈಗ ಮದುವೆಯ ಸೀಝನ್ ಕೂಡ. ಸ್ತ್ರೀಯರು ರೇಷ್ಮೆ ಸೀರೆಗಳನ್ನು ಉಟ್ಟುಕೊಂಡು ಅಡ್ಡಾಡುವುದು ಸಾಮಾನ್ಯ ದೃಶ್ಯ. ಸೀರೆಗಳನ್ನು ವಿಚಿತ್ರವಾಗಿ ಉಟ್ಟುಕೊಂಡು, ಶರೀರದ ಯಾವ ಯಾವ ಭಾಗಗಳನ್ನು ತೋರಿಸಬೇಕೆಂದು ಕರಾರುವಕ್ಕಾಗಿ ಲೆಕ್ಕ ಹಾಕಿ ಅದೇ ರೀತಿ ಅಳತೆಯಲ್ಲಿ ಬೌಸ್ ಹೊಲಿಸಿ, ಸೀರೆ ಧರಿಸಿ ಗಡಿಬಿಡಿಯಲ್ಲಿ ತಿರುಗಾಡುವ ಅಸಾಮಾನ್ಯ ದೃಶ್ಯಗಳೂ ಕೂಡ ಈಗ ಕಣ್ಣಿಗೆ ಬೀಳುತ್ತವೆ. ಪೆಂಡಾಲ್ ಅಡಿಯಲ್ಲಿ ಕುಳಿತರೆ ಎಲ್ಲರಿಗೂ ಒಂದು ವಿಚಿತ್ರ ಒಂದು ಕೆಂಪು ಬಣ್ಣ ಬಂದುಬಿಡುತ್ತದೆ. ಅದೊಂದು ಬೇರೆಯದೇ ಜಗತ್ತು.
ಪೆಂಡಾಲ್‌ನ ಅಡಿಯಲ್ಲಿ ಕುಳಿತರೆ ಎಲ್ಲ ಸ್ತ್ರೀ ಪುರುಷರು ಸುಂದರವಾಗಿ ಕಾಣುವುದೇ. ಮದ್ಯಾಹ್ನದ ಸೂರ್ಯಕಿರಣ ಪೆಂಡಾಲಿನ ಬಣ್ಣವನ್ನು ಎಲ್ಲರ ಮುಖಗಳಿಗೆ, ದೇಹದ ಭಾಗಗಳಿಗೆ ತಿದ್ದಿ ತೀಡಿ ಬಿಡುತ್ತದೆ. ವಿಪರೀತ ಸೆಖೆ, ಮಳೆಯಾಗಬಹುದು ಎಂದು ಎಲ್ಲರಿಗೂ ಗೊತ್ತು. ಆದರೆ ಅದು ಇಂದೇ, ಈಗಲೇ ಆಗಿಬಿಡುತ್ತದೆ ಎನ್ನುವುದೆಲ್ಲ ಯಾರಿಗೂ ಅಂದಾಜು ಇಲ್ಲ. ಸದ್ದಿಲ್ಲ, ಗದ್ದಲವಿಲ್ಲ. ಒಂದು ದೊಡ್ಡ ಪ್ಲಾಸ್ಟಿಕ್ ಚೀಲ ಆಕಾಶದಲ್ಲಿ ತೂಗಿ ಹಾಕಿದಂತೆ ಅಥವಾ ಆಕಾಶದ ಹಡಗಿನಂತೆ ಒಂದು ದೊಡ್ಡ ಕಪ್ಪು ಮೋಡ ತೇಲಿಬರುತ್ತದೆ. ಅದಕ್ಕೆ ಎಲ್ಲಿ ತೂತು ಬೀಳುತ್ತದೆ ಎಂದು ಹೇಳಲಾಗದು, ಒಡೆದುಕೊಳ್ಳದೇ ಹೋಗಬಹುದು. ಅದೆಲ್ಲಾ ಅದೃಷ್ಟದ ಮಾತು.
ಮಧ್ಯಾಹ್ನದ ಊಟದ ಸಮಯ. ಈಗ ಸೆಖೆ ತೀವ್ರಗೊಳ್ಳುತ್ತದೆ. ಗುಡುಗಿಲ್ಲ-ಮಿಂಚಿಲ್ಲ. ಮಳೆಯ ಮುನ್ಸೂಚನೆಗಳೇ ಇಲ್ಲ. ಆದರೆ ಮಳೆ ಸಡನ್ನಾಗಿ ಸುರಿದೇ ಬಿಡುತ್ತದೆ. ಮೊದಲು ಹನಿ ಕುಟ್ಟೆ. ಈ ಜಿನುಗು ಮಳೆ ಗಾಳಿಗೆ ಹಾರಿಹೋಗುತ್ತದೆ ಎನ್ನುವುದೇ ಎಲ್ಲರ ಲೆಕ್ಕ. ಆದರೆ ಮಳೆಯ ಮನಸ್ಸು ಮಳೆಗೇ ಗೊತ್ತು. ಎಲ್ಲವನ್ನೂ ಪೂರ್ತಿ ಮುಚ್ಚಿ ಹಾಕಿ ಬಿಡುವ ಮಳೆಯೇನಲ್ಲ. ಆದರೂ ಬೇಸಿಗೆಯ ಜೀವನವನ್ನು ಅಲ್ಲಾಡಿಸಲು, ಅಸ್ತವ್ಯಸ್ತಗೊಳಿಸಲು ಸಾಕೇ ಸಾಕು. ಪೆಂಡಾಲನ್ನು ತೂತು ಮಾಡಿ ಇಳಿದೇ ಬಿಡುತ್ತದೆ. ಮೊದಲ ಮಳೆ ಮಣ್ಣಿನ ಜೊತೆ ಸಂಯೋಗವಾಗುತ್ತಿದ್ದಂತೆ ಇಳೆ ಅದ್ಭುತ ಪರಿಮಳ ಸೂಸಿ ಬಿಡುತ್ತದೆ. ಎಂತಹ ಪರಿಮಳ ಅದು, ವರ್ಣನಾತೀತ, ನೂರು ವರ್ಷ ಹಳೆಯ ಮಾಲ್ಟ್ ವಿಸ್ಕಿಯ ಮೈ ಮರೆಸುವ, ಒಂದು ರೀತಿಯ ಮತ್ತು ತರಿಸುವ ಪರಿಮಳ, ಈ ಪರಿಮಳ ಹೊತ್ತು ತರುವುದು ಮೊದಲ ಮಳೆ.
ಮಳೆ ಹನಿಸುತ್ತಿದ್ದಂತೆ ಕವಿ ಸಮ್ಮೇಳನ, ಮದುವೆಗಳೆಲ್ಲಾ ಅಸ್ತವ್ಯಸ್ತ. ಜನರೆಲ್ಲಾ ಓಡಿ ಪರಾರಿ, ಕವಿಸಮ್ಮೇಳನದಲ್ಲಿ ಅಷ್ಟೊತ್ತಿಗೆ, ಮೈಕು ಚಟ್ಟಂತೆ ಹೋಗಿಬಿಡುತ್ತದೆ. ಕವಿತೆ ಓದುತ್ತಿದ್ದ ಸುಂದರಾಂಗಿಯ ಕವಿತೆ ಅಷ್ಟರಲ್ಲಿಯೇ ಗಂಟಲೊಳಗೆ ಉಳಿದುಬಿಡುತ್ತದೆ. ಎರಡನೇ ಅರ್ಧಭಾಗದ ಕವಿತೆ ಗಾಳಿಯಲ್ಲಿ ತೇಲಿ ಹೋಗಿಬಿಡುತ್ತದೆ. ರೇಷ್ಮೆ ಸೀರೆಗಳು ಒದ್ದೆಮುದ್ದೆ, ಹಾಲಿನ ಹೊರಗಡೆ ಎದುರಿಗೆ ಹಾಕಿದ್ದ ಪೆಂಡಾಲಿನಲ್ಲಿ ನಿಂತು ಊಟ ಮಾಡುತ್ತಿದ್ದ ಜನ ಈಗ ಓಡಿ ಹೋಗಿ ಹಾಲಿನೊಳಗೆ ಪ್ಲೇಟು ಕೈಯಲ್ಲಿಡಿದು ಊಟ ಮಾಡುವುದು. ಹುಡುಗಿಯರ ಲಿಪ್‌ಸ್ಟಿಕ್ ಹಿಮ ಕರಗಿದಂತೆ ನೀರಾಗುತ್ತದೆ. ಬಣ್ಣದ ಬಣ್ಣದ ಬಿಂದಿಗಳು ನೀರು ಕುಡಿದು ಬಣ್ಣ ಕುತ್ತಿಗೆಯ ಕೆಳಗೆ ಹರಿಯುತ್ತದೆ. ಬೆನ್ನೆಲ್ಲಾ ಕಾಣಿಸುವ ಬ್ಲೌಸಿನ ಸುಂದರಿಯ ವಿಶಾಲ ಬೆನ್ನ ಮೇಲೆ ಮಳೆ ಹನಿಗಳ ಮುತ್ತಿನ ಸಾಲು ಸಾಲು. ಒರಸಿಕೊಳ್ಳಬೇಕೆಂದರೆ ಕೈ ಮುಟ್ಟುವುದಿಲ್ಲ.
ಮಾರುಕಟ್ಟೆಯಲ್ಲಿ ಕುಳಿತ ಮಾವಿನ ಹಣ್ಣಿನ ವ್ಯಾಪಾರಿಗೆ, ಮೆಣಸಿನ ವ್ಯಾಪಾರಿಗೆ ತನ್ನ ವಸ್ತುಗಳನ್ನು ಮುಚ್ಚಿಕೊಳ್ಳಲು ಸಮಯವಿಲ್ಲ. ಒಂದೊಂದು ಪ್ಲಾಸ್ಟಿಕ್ ಕೊಟ್ಟೆ ಸಾಮಾನುಗಳ ಮೇಲೆ ಹಾಕಿ ಕವರ್ ಮಾಡುವುದು. ಪಾಪ! ಅವನ ಲುಕ್ಸಾನು ಅವನಿಗೇ ಗೊತ್ತು. ಅರಳಿಕೊಂಡಿದ್ದ ಅವನ ಮುಖ ಈಗ ಬಾಡಿದ ಹಣ್ಣು. ಗಡಿಬಿಡಿಯಲ್ಲಿ ಆತ ಮಾರಲೇ ಬೇಕು. ಒಂದೇ ಮಳೆಗೆ ದರ ಇಳಿದು ಹೋಗುತ್ತದೆ. ಆದರೆ ಅವನಿಗೆ ಗೊತ್ತು. ಇದು ಮಳೆಗಾಲವಲ್ಲ. ಇಂದೊಂದು ದಿನ ಪಾರಾದರೆ ಆಯಿತು. ನಾಳೆ ಮತ್ತೆ ಬಿಸಿಲು ಬಂದೇ ಬರುತ್ತದೆ. ಇಂದಿನ ಲಾಸನ್ನು ನಾಳೆ ನಾಳೆ ಗ್ರಾಹಕರ ತಲೆಯ ಮೇಲೆ ಹಾಕಿದರೆ ಆಯಿತು.
ಬಂದೇ ಬರತಾವ ಕಾಲ. ಮದುಮಕ್ಕಳಿಗೆ ಮತ್ತು ಚಿಕ್ಕ ಮಕ್ಕಳಿಗೆ ಮಾತ್ರ ಖುಷಿಯೇ ಖುಷಿ. ಮದುಮಗಳಿಗಂತೂ ಮನದೊಳಗೇ ಸಡಗರ. ರೋಮಾಂಚನದಲ್ಲಿ ತೇಲಾಡುತ್ತ ಅವರಿಂದ ಮಳೆಗೆ ಮನಸ್ಸಿನಲ್ಲಿಯೇ ಹಾರ್ದಿಕ ಸುಸ್ವಾಗತ.
ಇದನ್ನೂ ಓದಿ: Book Excerpt: ದೇವೇಂದ್ರನ ಮೀಸೆ ಹಸುರಾದುದು ಹೇಗೆ?