Site icon Vistara News

Book Release: ಶರಣು ಹುಲ್ಲೂರರ ‘ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ’ ಕೃತಿ ಬಿಡುಗಡೆ

sharanu

sharanu

ಬೆಂಗಳೂರು: ಸಿನಿಮಾ ಪತ್ರಕರ್ತ ಡಾ. ಶರಣು ಹುಲ್ಲೂರು ಬರೆದಿರುವ ಚಿತ್ರರಂಗದ ಕುರಿತಾದ ಮತ್ತೊಂದು ಕೃತಿ ಬಿಡುಗಡೆಯಾಗಿದೆ (Book Release). ‘ಕನ್ನಡದ 100 ಸ್ಮರಣೀಯ ಸಿನಿಮಾಗಳು- ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ’ ಹೆಸರಿನ ಕೃತಿಯನ್ನು ವರ್ಣಿರಂಜಿತ ಸಮಾರಂಭದಲ್ಲಿ ನಟ ರಮೇಶ್ ಅರವಿಂದ್ ಮತ್ತು ಹಿರಿಯ ಪತ್ರಕರ್ತ ಜೋಗಿ ಬಿಡುಗಡೆ ಮಾಡಿದರು.

ಈ ಕೃತಿಯಲ್ಲಿ ಒಟ್ಟು ನೂರು ಸಿನಿಮಾಗಳ ವಿಶ್ಲೇಷಣೆ ಇದೆ. ಈ ಸಿನಿಮಾವನ್ನು ಯಾಕಾಗಿ ನೋಡಬೇಕು? ಸಿನಿಮಾದ ವಿಶೇಷತೆ ಏನು? ಅದರ ಹಿನ್ನೆಲೆ, ಕಲಾವಿದರ, ತಂತ್ರಜ್ಞರ ಶ್ರಮ, ಸಿನಿಮಾದ ಕುತೂಹಲದ ಅಂಶಗಳು, ಅಪರೂಪದ ಸಂಗತಿಗಳನ್ನು ಒಳಗೊಂಡಿದೆ. ಮೂಕಿ ಸಿನಿಮಾ ಕಾಲದಿಂದ ಕಳೆದ ವರ್ಷದವರೆಗೆ ಬಿಡುಗಡೆಯಾದ ಸಿನಿಮಾಗಳಲ್ಲಿ 100 ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈವರೆಗೂ ನೋಡಿರದೇ ಇರುವಂತಹ ಫೋಟೋಗಳನ್ನು ಬಳಸಿಕೊಳ್ಳಲಾಗಿದೆ.

ಕೃತಿಯ ಕುರಿತು ಮಾತನಾಡಿದ ರಮೇಶ್ ಅವರಿಂದ್, ‘ʼಶರಣು ಹುಲ್ಲೂರು ಅವರನ್ನು ಹಲವು ವರ್ಷಗಳಿಂದ ಬಲ್ಲೆ. ಅವರು ಸಿನಿಮಾಗಳನ್ನು ಗ್ರಹಿಸುವ ರೀತಿ, ಅವುಗಳ ವಿಶ್ಲೇಷಣೆ ಮತ್ತು ಸಿನಿಮಾ ನೋಡಿಸುವ ಆಸಕ್ತಿಯೇ ಇಂಥದ್ದೊಂದು ಪುಸ್ತಕ ಬರುವುದಕ್ಕೆ ಸಾಧ್ಯ. ʼನೋಡಲು ಮರೆಯದಿರಿ ಮರೆತು ನಿರಾಶಾರಾಗದಿರಿʼ ಕೃತಿಯಲ್ಲಿ ಅಪರೂಪದ ಸಿನಿಮಾಗಳ ಕುರಿತಾಗಿ ಬರೆದಿದ್ದಾರೆ. ಹಾಗಾಗಿ ಈ ಪುಸ್ತಕವನ್ನು ಓದಲು ಮರೆಯದಿರಿ ಮರೆತು ನಿರಾಶಾರಾಗದಿರಿʼʼ ಎಂದರು.

ʼʼಆ ಕಾಲ ಮತ್ತು ಈ ಕಾಲದ ಮೆಚ್ಚಿನ ನೂರು ಸಿನಿಮಾಗಳನ್ನು ಗೆಳೆಯ, ಸಹೋದ್ಯೋಗಿ ಶರಣು ಹುಲ್ಲೂರು ಈ ಪುಸ್ತಕದಲ್ಲಿ ಸಂಗ್ರಹಿಸಿಕೊಟ್ಟಿದ್ದಾರೆ. ನನ್ನ ಮೆಚ್ಚಿನ ಸಿನಿಮಾಗಳು ಇಲ್ಲಿರುವುದನ್ನು ನೋಡಿ ರೋಮಾಂಚನಗೊಂಡಿದ್ದೇನೆ. ನಾನು ಮೆಚ್ಚಿದ ಕೆಲವು ಸಿನಿಮಾಗಳು ಇಲ್ಲಿಲ್ಲವಲ್ಲ ಅಂತ ಆಶ್ಚರ್ಯಪಟ್ಟಿದ್ದೇನೆ. ಈ ಸಿನಿಮಾ ನನಗೆ ನೆನಪೇ ಇರಲಿಲ್ಲವಲ್ಲ ಅಂತ ಬೆರಗಾಗಿದ್ದೇನೆ. ಶರಣು ಹುಲ್ಲೂರು ಅಸಾಧ್ಯ ಜೀವಂತಿಕೆಯ, ಹೊಸತನಗಳ ಹುಡುಕಾಟದ, ಬರೆಯುವ ಹುರುಪು ಉಳಿಸಿಕೊಂಡ ಲವಲವಿಕೆಯ ಗೆಳೆಯ. ಈ ಪುಸ್ತಕ ಅವರ ಸಿನಿಮಾ ಪ್ರೀತಿಗೆ ಮತ್ತೊಂದು ಸಾಕ್ಷಿ. ಇದು ಚಿಗುರಿಸಿದ ನೆನೆಪುಗಳಲ್ಲಿ ನಾನು ನನ್ನ ತಾರುಣ್ಯಕ್ಕೆ ಮರಳಿದ್ದೇನೆʼʼ ಎಂದು ಹಿನ್ನುಡಿಯಲ್ಲಿ ಜೋಗಿ ಬರೆದಿದ್ದಾರೆ.

ಬೆಂಗಳೂರಿನ ಸಾವಣ್ಣ ಪ್ರಕಾಶನದಿಂದ ಈ ಪುಸ್ತಕ ಬಿಡುಗಡೆ ಆಗಿದ್ದು, ಈ ಹಿಂದೆ ಇದೇ ಪ್ರಕಾಶನ ಸಂಸ್ಥೆಯಿಂದ ಶರಣು ಹುಲ್ಲೂರ ಅವರ ‘ಅಂಬರೀಶ್’ ಬಯೋಗ್ರಫಿ ಮತ್ತು ‘ನೀನೇ ರಾಜಕುಮಾರ’ ಪುನೀತ್ ರಾಜಕುಮಾರ್ ಬಯೋಗ್ರಫಿ ಕೂಡ ಹೊರ ಬಂದಿದೆ. ಸಾವಣ್ಣ ಪ್ರಕಾಶನದಿಂದ ಹೊರ ಬರುತ್ತಿರುವ ಶರಣು ಅವರ ಮೂರನೇ ಸಿನಿಮಾ ಕೃತಿ ಇದಾಗಿದೆ.

ಇದನ್ನೂ ಓದಿ: Kannada New Movie: ‘ಲವ್ ರೆಡ್ಡಿ’ ಸಿನಿಮಾಗೆ ಸಾಥ್ ಕೊಟ್ಟ ಪ್ರದೀಪ್ ಈಶ್ವರ್!

ಇದೇ ಸಂದರ್ಭದಲ್ಲಿ ಗಂಗಾವತಿ ಪ್ರಾಣೇಶ್, ಜಮೀಲ್ ಸಾವಣ್ಣ, ರಂಗಸ್ವಾಮಿ ಮೂಕನಹಳ್ಳಿ, ವಿರೂಪಾಕ್ಷ ದೇವರಮನೆ, ಶ್ವೇತಾ ಬಿ.ಸಿ., ವಸಂತ್ ಗಿಳಿಯಾರ್, ಜಗದೀಶ್ ಶರ್ಮಾ ಸಂಪ ಅವರ ಕೃತಿಗಳೂ ಬಿಡುಗಡೆಯಾದವು.

Exit mobile version