Site icon Vistara News

ಛಂದ ಪುಸ್ತಕ ಬಹುಮಾನ ವಿವಾದ | ಪ್ರಶಸ್ತಿ ಪಡೆಯದಂತೆ ಒತ್ತಡ? ಕೊನೇ ಕ್ಷಣದಲ್ಲಿ ಪುರಸ್ಕಾರ ನಿರಾಕರಿಸಿದ ಫಾತಿಮಾ ರಲಿಯಾ

fatim ralia

ಬೆಂಗಳೂರು: ಕನ್ನಡ ಸಾಹಿತ್ಯ ಲೋಕದ ಪ್ರತಿಷ್ಠಿತ ʻಛಂದ ಪುಸ್ತಕʼ ಪ್ರಶಸ್ತಿಯನ್ನು ಈ ವರ್ಷ ಪಡೆದಿದ್ದ ಲೇಖಕಿ ಫಾತಿಮಾ ರಲಿಯಾ ಅವರು ಅದನ್ನು ನಿರಾಕರಿಸಿದ್ದಾರೆ. ಅವರ ಈ ನಡೆ ಕನ್ನಡ ಸಾಹಿತ್ಯ ವಲಯದಲ್ಲಿ ಸಂಚಲನ ಮೂಡಿಸಿದೆ. ಇದು ಅನೇಕ ಬಗೆಯ ಚರ್ಚೆಗಳಿಗೆ ಕಾರಣವಾಗಿದೆ.

ʻಛಂದ ಪುಸ್ತಕʼದ ವಸುಧೇಂದ್ರ ಈ ಕುರಿತು ಪ್ರಕಟಣೆ ನೀಡಿದ್ದಾರೆ. ʼʼಈ ಸಾಲಿನ ಛಂದ ಪುಸ್ತಕ ಬಹುಮಾನ ಪಡೆದ ಫಾತಿಮಾ ರಲಿಯಾ ಅವರು, ವೈಯಕ್ತಿಕ ಕಾರಣಗಳಿಂದಾಗಿ ಈ ಬಹುಮಾನವನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಈ ಸಂಗತಿಯನ್ನು ಛಂದ ಪುಸ್ತಕ ಬೇಸರದಿಂದ ತಿಳಿಸುತ್ತಿದೆ. ಫಾತಿಮಾ ಅವರ ಈ ನಿರ್ಧಾರ ಖಾಸಗಿಯಾದ್ದರಿಂದ, ಯಾವ ಖಚಿತ ಕಾರಣವನ್ನೂ ಅವರು ನೀಡಿಲ್ಲ. ಅವರ ಆಯ್ಕೆ ಸ್ವಾತಂತ್ರ್ಯವನ್ನು ಛಂದ ಪುಸ್ತಕ ಗೌರವಿಸುತ್ತದೆ. ಮುಂದಿನ ನಾಲ್ಕು ವಾರದಲ್ಲಿ ನಮ್ಮ ಪರ್ಯಾಯ ಯೋಜನೆಯನ್ನು ತಿಳಿಸುತ್ತೇವೆ‌. ಛಂದದ ಓದುಗರಿಗೆ ಹೀಗೆ ಗೊಂದಲ ಉಂಟು ಮಾಡುತ್ತಿರುವುದಕ್ಕೆ ಕ್ಷಮೆ ಯಾಚಿಸುತ್ತೇನೆ.ʼʼ ಎಂದು ಫೇಸ್‌ಬುಕ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಕತೆಗಾರ, ಪ್ರಕಾಶಕ ವಸುಧೇಂದ್ರ ಅವರು ಛಂದ ಪುಸ್ತಕ ಬಹುಮಾನವನ್ನು ಪ್ರತಿವರ್ಷ ಹೊಸಬರ ಕಥಾ ಸಂಕಲನಗಳಿಗೆ ನೀಡುತ್ತಾರೆ. 40,000 ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿರುವ ಈ ಪ್ರಶಸ್ತಿ ಪಡೆದ ಪುಸ್ತಕವನ್ನು ಛಂದ ಪುಸ್ತಕ ಪ್ರಕಟಿಸುತ್ತದೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಇದುವರೆಗೂ ಕನ್ನಡ ಸಾಹಿತ್ಯದ ಅನೇಕ ಭರವಸೆಯ ಕಥೆಗಾರರು ಪಡೆದಿದ್ದಾರೆ. ಈ ವರ್ಷದ ಪುರಸ್ಕಾರಕ್ಕೆ 90ಕ್ಕೂ ಅಧಿಕ ಸಂಕಲನಗಳು ಬಂದಿದ್ದವು. ಅಂತಿಮ ಸುತ್ತಿನ ಸಂಕಲನಗಳನ್ನು ಖ್ಯಾತ ಚಿತ್ರ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರು ಓದಿ ಅಂತಿಮ ತೀರ್ಪು ನೀಡಿದ್ದರು.

ಗಿರೀಶ್‌ ಕಾಸರವಳ್ಳಿ ಅವರು ಫಾತಿಮಾ ಕತೆಗಳ ಬಗ್ಗೆ ಬರೆದ ಟಿಪ್ಪಣಿ ಹೀಗಿದೆ:

“ಬದುಕಿನ ಹಲವು ಸಂಕಟಗಳನ್ನು ಮತ್ತು ಸಂಕಷ್ಟಗಳನ್ನು ಇವರು ಆಳವಾದ ಕಾಳಜಿಯಿಂದ ಗಮನಿಸಿ ದಾಖಲಿಸುತ್ತಾರೆ. ಸಮಾಜವನ್ನು ವ್ಯಕ್ತಿಯ ನೆಲೆಯಿಂದಷ್ಟೇ ನೋಡದೆ, ಸಮುದಾಯದ ದೃಷ್ಟಿಯಿಂದ ನೋಡುತ್ತಾರೆ. ಕನ್ನಡ ಕಥನಲೋಕಕ್ಕೆ ಮುಸ್ಲಿಂ ಮಹಿಳೆಯರ ತಲ್ಲಣಗಳ ಕತೆಗಳನ್ನು ಈಗಾಗಲೇ ಸಾರಾ ಅಬೂಬಕ್ಕರ್ ಮತ್ತು ಬಾನು ಮುಷ್ತಾಕ್ ಅವರು ಕಟ್ಟಿಕೊಟ್ಟಿದ್ದಾರೆ. ಅವರಿಬ್ಬರ ಕತೆಗಳಲ್ಲಿ ಬರುವ ಪಾತ್ರಗಳಂತೆ, ಇವರ ಕತೆಗಳಲ್ಲೂ ಪಾತ್ರಚಿತ್ರಣವು ವಿಶಿಷ್ಟವಾಗಿದೆ. ಹೊರಸಮಾಜ ಕಟ್ಟಲಿಚ್ಚಿಸುವ ಏಕಶಿಲಾಕೃತಿಯ (ಸ್ಟೀರಿಯೋಟೈಪ್) ವ್ಯಕ್ತಿಗಳಿಗಿಂತಲೂ ಭಿನ್ನ ಪಾತ್ರಚಿತ್ರಣ ಇವುಗಳಲ್ಲಿ ಕಾಣಬಹುದು. ಧರ್ಮವು ಒಡ್ಡುವ ಹಲವು ಪ್ರಶ್ನೆಗಳಿಗೆ ಮುಖಾಮುಖಿಯಾಗಿ, ಧರ್ಮದ ಚೌಕಟ್ಟನ್ನು ದಾಟಿ ಬದುಕನ್ನು ನೋಡುವ ಆತ್ಮಸ್ಥೈರ್ಯ ಇವರಿಗಿದೆ. ಕೇವಲ ಪರ-ವಿರೋಧಗಳ ಯಾವುದೋ ಧ್ರುವದಲ್ಲಿ ನಿಲ್ಲದೆ, ಹಲವು ಆಯಾಮಗಳಿಂದ ಬದುಕನ್ನು ನೋಡುವ ಒಳನೋಟ ಇವರಿಗೆ ದಕ್ಕಿದೆ. ಹಿಂದೂ-ಮುಸ್ಲಿಂ ಸಂಬಂಧಗಳ ಸಾಮರಸ್ಯಗಳನ್ನು ಚಿತ್ರಿಸುತ್ತಲೇ, ಕ್ಷುಲ್ಲಕ ಘಟನೆಗಳಿಂದಾಗಿ ಅವು ಸಿಡಿದು ಹೋಗುವ ಅಸಹಾಯಕ ಸನ್ನಿವೇಶಗಳನ್ನು ಇವರು ಚಿತ್ರಿಸುತ್ತಾರೆ. ವಸ್ತು ವಿವರಗಳಲ್ಲಿ ನಾವಿನ್ಯತೆಯನ್ನು ತೋರುವ ರಲಿಯಾ, ಬದುಕಿನ ಘಟನೆಗಳನ್ನು ಪ್ರತ್ಯಕ್ಷವಾಗಿ ತೋರಿಸುತ್ತಲೇ ಪರೋಕ್ಷವಾಗಿ ಅದರ ಇನ್ನೊಂದು ಮಗ್ಗುಲನ್ನು ದರ್ಶಿಸುವುದರಿಂದ ಕಥಾವಸ್ತು ಹೆಚ್ಚು ಸಾಂದ್ರವಾಗಿ ಓದುಗರ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ.”

ದಕ್ಷಿಣ ಕನ್ನಡ ಜಿಲ್ಲೆಯ ಪೆರ್ನೆ ಗ್ರಾಮದವರಾದ ಫಾತಿಮಾ ರಲಿಯಾ ಸದ್ಯಕ್ಕೆ ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ ವಾಸಿಸುತ್ತಿದ್ದಾರೆ. ತಂದೆ ಅಬ್ದುಲ್ ರಶೀದ್ ಮತ್ತು ತಾಯಿ ಆಯಿಶಾ. ಇನ್ಫಾರ್ಮೇಶನ್ ಟೆಕ್ನಾಲಜಿಯಲ್ಲಿ ಎಂಬಿಎ ಪದವಿಯನ್ನು ಪಡೆದಿರುವ ಇವರ ʻಕಡಲು ನೋಡಲು ಹೋದವಳು’ ಎಂಬ ಲಲಿತ ಪ್ರಬಂಧಗಳ ಸಂಕಲನ ಪ್ರಕಟವಾಗಿದ್ದು, ಓದುಗರ ಮೆಚ್ಚುಗೆ ಗಳಿಸಿದೆ.

ವಸುಧೇಂದ್ರ ಪ್ರತಿಕ್ರಿಯೆ ಏನು?

ಲೇಖಕರು ವೈಯಕ್ತಿಕ ಕಾರಣ ಎಂದಿದ್ದರಿಂದ ನಾನು ಕೆದಕಿ ಕೇಳಲು ಹೋಗಿಲ್ಲ. ಅವರ ನಿರ್ಧಾರವನ್ನು ಗೌರವಿಸಿದ್ದೇನೆ. ಯಾವುದೇ ಧಾರ್ಮಿಕ, ಮತೀಯ ಕಾರಣವಿದ್ದ ಬಗ್ಗೆ ಲೇಖಕರು ಹೇಳಿಲ್ಲ. ಆದ್ದರಿಂದ ಊಹಾಪೋಹಗಳು ಬೇಡ ಎಂದು ವಸುಧೇಂದ್ರ ಅವರು ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯಿಸಿದ್ದಾರೆ.

ಇದೀಗ ಬಹುಮಾನದ ಹಂಚಿಕೆಯ ಬಗ್ಗೆ ಆಯೋಜಕರಿಗೆ ಇಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ. ಫಾತಿಮಾ ನಿರಾಕರಿಸಿರುವ ಪ್ರಶಸ್ತಿಯನ್ನು ಅನ್ಯರಿಗೆ ಕೊಡುವುದರಿಂದ ಇನ್ನೊಂದು ಬಗೆಯ ಮುಜುಗರ ಉಂಟಾಗುವ ಸಾಧ್ಯತೆಯೇ ಹೆಚ್ಚಿದೆ. ʻʻಈ ಸಲದ ಪ್ರಶಸ್ತಿಯನ್ನು ಯಾರಿಗೆ ನೀಡಬೇಕು, ನೀಡಬೇಕೋ ಅಥವಾ ಈ ವರ್ಷ ಹಾಗೆಯೇ ಬಿಡಬೇಕೋ ಎಂಬ ಬಗ್ಗೆ ಸದ್ಯದಲ್ಲೇ ತೀರ್ಮಾನ ತೆಗೆದುಕೊಳ್ಳುತ್ತೇನೆʼʼ ಎಂದು ವಸುಧೇಂದ್ರ ಹೇಳಿದ್ದಾರೆ.

ಇದನ್ನೂ ಓದಿ | ಸಾಲಭಂಜಿಕೆ ಅಂಕಣ | ಬಂಗಾರದಂಥ ಹುಡುಗಿ ನಗ ಬಯಸಿದಳೇ?

ಪರ- ವಿರೋಧ ಚರ್ಚೆ

ಪುರಸ್ಕಾರದ ನಿರಾಕರಣೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಬಗೆಯ ಚರ್ಚೆಗೆ ಕಾರಣವಾಗಿದೆ.

ʼʼಲೇಖಕರ ವೈಯಕ್ತಿಕ ನಿರ್ಧಾರವನ್ನು ಎಲ್ಲರೂ ಗೌರವಿಸಬೇಕುʼʼ ಎಂದು ಕೆಲವರು ಹೇಳಿದ್ದಾರೆ. ʼʼಆದರೆ ಪ್ರಶಸ್ತಿಗಾಗಿ ಸಂಘಟಕರು, ತೀರ್ಪುಗಾರರು ವ್ಯಯಿಸಿದ ಅಮೂಲ್ಯ ಸಮಯ, ಶ್ರಮ ವ್ಯರ್ಥವಾಗಿದೆ. ಲೇಖಕರ ಈ ವರ್ತನೆ ಟೀಕೆಗೆ ಅರ್ಹʼʼ ಎಂದು ಕೆಲವರು ಟೀಕಿಸಿದ್ದಾರೆ. ʼʼಛಂದ ಪ್ರಶಸ್ತಿ ಆಯೋಜಕರೇ ಹುಡುಕಿಕೊಂಡು ಹೋಗಿ ಕೊಡುವುದಲ್ಲ. ಸಂಕಲನಗಳನ್ನು ಆಹ್ವಾನಿಸಿ ಕೊಡುವಂಥದು. ಸಂಕಲನವನ್ನು ಸ್ಪರ್ಧೆಗೆ ಕಳಿಸುವಾಗಲೇ ಲೇಖಕಿಗೆ ಮುಂದಿನ ಪರಿಣಾಮಗಳ ಅರಿವು ಇರಲಿಲ್ಲವೇ? ಈ ದಿಡೀರ್‌ ವರ್ತನೆಗೆ ಸಕಾರಣ ನೀಡಬೇಕುʼʼ ಎಂದು ಹೆಚ್ಚಿನವರು ಟೀಕಿಸಿದ್ದಾರೆ. ʼʼಫಾತಿಮಾ ಅವರು ಬಿಟ್ಟುಕೊಟ್ಟ ಬಹುಮಾನವನ್ನು ಬೇರೊಬ್ಬರಿಗೆ ಹಂಚಿದರೆ ಅದು ಅಂಥ ಲೇಖಕರ ಸ್ವಾಭಿಮಾನಕ್ಕೆ ಭಂಗ ತಂದಂತಾಗುತ್ತದೆ. ಆದ್ದರಿಂದ ಈ ವರ್ಷ ಯಾರಿಗೂ ಕೊಡದಿರುವುದೇ ಸರಿʼʼ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ʼʼಇದು ಸ್ವಲ್ಪ ಗೋಜಲಾಗಿದೆ ಅಂತ ಅನಿಸುತ್ತಿದೆ. ಇದರಿಂದ ಛಂದ ಪುಸ್ತಕದ ಘನತೆಗೇನೂ ಊನವಾಗುವುದಿಲ್ಲ. ಆಕೆ ಇದನ್ನು ಸ್ವೀಕರಿಸಲು ವೈಯಕ್ತಿಕ ಕಾರಣ ಅಡ್ಡವಾಗಿದ್ದರೆ ಸಹಾನುಭೂತಿ ತೋರೋಣ. ತಾತ್ವಿಕ ಕಾರಣ ಇದ್ದು ಅದನ್ನು ಮುಂದಿಟ್ಟರೆ ಚರ್ಚಿಸೋಣʼʼ ಎಂದು ಸಾಹಿತಿ ಬಂಜಗೆರೆ ಜಯಪ್ರಕಾಶ್‌ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ | ಸಣ್ಣ ಕಥೆ | ಕಾಲ ವಟಿ

Exit mobile version