Site icon Vistara News

Children’s Day: ಮಕ್ಕಳ ದಿನಕ್ಕೆ ಮಕ್ಕಳು ನೋಡಲೇಬೇಕಾದ ಅತ್ಯುತ್ತಮ ಮಕ್ಕಳ ಸಿನಿಮಾಗಳು!

Children must watch movies on this Children's Day

ಇಂದು (ನವೆಂಬರ್ 14) ಮಕ್ಕಳ ದಿನಾಚರಣೆ (Children’s Day). ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಪಂಡಿತ ಜವಾಹರ್ ಲಾಲ್ ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಭಾರತದಲ್ಲಿ ಆಚರಿಸಲಾಗುತ್ತದೆ. ಮಕ್ಕಳನ್ನು ಅತೀವವಾಗಿ ಪ್ರೀತಿಸುತ್ತಿದ್ದ ನೆಹರು ಅವರು ಮಕ್ಕಳ ವಲಯದಲ್ಲಿ ‘ಚಾಚಾ’ ಎಂದೇ ಜನಪ್ರಿಯವಾಗಿದ್ದರು. ಪ್ರತಿಯೊಬ್ಬ ಮಗುವೂ ಶಿಕ್ಷಣ ಪಡೆಯಬೇಕೆಂದು ಅವರು ಕನಸು ಕಂಡಿದ್ದರು. ಮಕ್ಕಳ ದಿನಾಚರಣೆಯಂದು ಭಾರತದಲ್ಲಿ ಮಕ್ಕಳ ಹಕ್ಕುಗಳು, ಮಕ್ಕಳ ಶಿಕ್ಷಣದ ಅಗತ್ಯ ಮತ್ತು ಭವಿಷ್ಯದ ಬಗೆಗಿನ ಚರ್ಚೆಗಳು, ಮಂಥನಗಳು ನಡೆಯುತ್ತವೆ.

ಮಕ್ಕಳ ದಿನಾಚರಣೆ ದಿನದಂದ ಮಕ್ಕಳ ಹಕ್ಕುಗಳ ಬಗ್ಗೆ ಚರ್ಚ ಮಾಡಿದರಷ್ಟೇ ಸಾಲದು. ಅವುಗಳನ್ನು ಜಾರಿಗೊಳಿಸುವ ಮಾರ್ಗಗಳನ್ನು ಶೋಧಿಸುವುದು ಅತ್ಯಗತ್ಯವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳ ಹಕ್ಕುಗಳ ಚ್ಯುತಿ ಬರುವ ಅನೇಕ ಪ್ರಕರಣಗಳು ನಡೆಯುತ್ತಿವೆ. ಮಕ್ಕಳ ಮೇಲಿನ ದೌರ್ಜನ್ಯಗಳು ಕೂಡ ಹೆಚ್ಚುತ್ತಿವೆ. ಹಾಗಾಗಿ ಪಂಡಿತ ಜವಾಹರ್ ಲಾಲ್ ನೆಹರು ಅವರ ಜನ್ಮದಿನದಂದು, ಮಕ್ಕಳ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವುದರ ಜತೆಗೆ ಅವುಗಳ ಅನುಷ್ಠಾನದ ಬಗ್ಗೆ ಮಾತನಾಡಬೇಕಿದೆ. ಈ ಹಿನ್ನೆಲೆಯಲ್ಲಿ ವಿಸ್ತಾರ ನ್ಯೂಸ್ ಈ ಬಾರಿ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಮಕ್ಕಳು ನೋಡಲೇಬೇಕಾದ ಸಿನಿಮಾಗಳ ಪಟ್ಟಿಯನ್ನು ಇಲ್ಲಿ ನೀಡಿದೆ.

| ಬೆಟ್ಟದ ಹೂವು

ಡಾ. ಪುನೀತ್ ರಾಜಕುಮಾರ್ ಅವರು ಬಾಲ ನಟರಾಗಿ ಅದ್ಭುತವಾಗಿ ಅಭಿನಯಿಸಿದ ಚಿತ್ರವಿದು. ಈ ಚಿತ್ರಕ್ಕಾಗಿ ಅವರಿಗೆ ಅತ್ಯುತ್ತಮ ಬಾಲ ನಟ ರಾಷ್ಟ್ರೀಯ ಪ್ರಶಸ್ತಿ ಕೂಡ ಬಂತು. ವಾಟ್ ದೆನ್ ರಾಮನ್ ಕಾದಂಬರಿ ಆಧಾರಿತ ಚಿತ್ರವಿದು. ಬಡತನ ಕಾರಣದಿಂದ ರಾಮು ಎಂಬ ಬಾಲಕನಿಗೆ ಶಾಲೆಗೆ ಹೋಗಲು ಇಲ್ಲವೇ ತನ್ನಿಷ್ಟದ ಪುಸ್ತಕವನ್ನು ಕೊಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಆಗ ರಾಮು ಬೆಟ್ಟದಿಂದ ವಿಶಿಷ್ಟ ಹೂವುಗಳನ್ನು ತಂದು ಅಮೆರಿಕನ್ ಟೀಚರ್‌ರೊಬ್ಬರಿಗೆ ನೀಡುತ್ತಾನೆ. ಅವರು ನೀಡುವ ದುಡ್ಡನ್ನು ತೆಗೆದುಕೊಳ್ಳುತ್ತಾನೆ. ಹೀಗೆ ಒಂದಿಷ್ಟು ಹಣ ಹೊಂದಿಸುವ ರಾಮು, ತನ್ನಿಷ್ಟದ ಶ್ರೀ ರಾಮಾಯಣ ದರ್ಶನಂ ಪುಸ್ತಕವನ್ನು ಖರೀದಿಸಲು ಮುಂದಾಗುತ್ತಾನೆ. ಆದರೆ, ಪುಸ್ತಕ ಖರೀದಿಸಬೇಕಾ ಅಥವಾ ಮನೆಯವರಿಗಾಗಿ ಕಂಬಳಿ ಖರೀದಿಸಬೇಕೋ ಎಂಬ ಗೊಂದಲಕ್ಕೀಡಾಗಿ, ಕೊನೆಗೆ ಪುಸ್ತಕ ಬಿಟ್ಟು ಕಂಬಳಿ ಖರೀದಿಸುತ್ತಾನೆ. ಈ ಚಿತ್ರದಲ್ಲಿನ ಅಪ್ಪು ಅಭಿನಯ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿತ್ತು.

| ಕೊಟ್ರೇಶಿ ಕನಸು

1994ರಲ್ಲಿ ತೆರೆ ಕಂಡ ಕೊಟ್ರೇಶಿ ಕನಸು ಚಿತ್ರದ ನಿರ್ದೇಶಕರು ನಾಗತಿಹಳ್ಳಿ ಚಂದ್ರಶೇಖರ್. ವಿಜಯ್ ರಾಘವೇಂದ್ರ ಅವರು ಬಾಲ ನಟರಾಗಿ ಅಭಿನಯಿಸಿದ ಸಿನಿಮಾ ಇದು. ಅತ್ಯುತ್ತಮ ಚಿತ್ರ ಎಂದು ರಾಷ್ಟ್ರೀಯ ಪ್ರಶಸ್ತಿ ಕೂಡ ಇದಕ್ಕೆ ದಕ್ಕಿದೆ. ಅತ್ಯುತ್ತಮ ಬಾಲ ನಟ ಪ್ರಶಸ್ತಿ ಕೂಡ ಸಿಕ್ಕಿದೆ. ದಲಿತ ಹುಡುಗನೊಬ್ಬ ಶಿಕ್ಷಣವನ್ನು ಕಲಿಯುವುದಕ್ಕಾಗಿ ಹೋರಾಟ ಮಾಡುವ ಕತೆ ಇದು. ಕುಂವೀ ಅವರ ಕಾದಂಬರಿಯನ್ನು ಇದು ಆಧರಿಸಿದೆ.

| ಸಿಂಹದ ಮರಿ ಸೈನ್ಯ

ಮಕ್ಕಳ ಸಾಹಸ ಪ್ರಧಾನ ಸಿನಿಮಾವಿದು. ರಾಜೇಂದ್ರ ಬಾಬು ನಿರ್ದೇಶನದ ಈ ಚಿತ್ರ 1981ರಲ್ಲಿ ತೆರೆ ಕಂಡಿತು. ಮಾ. ಅರ್ಜುನ್ ಸರ್ಜಾ, ಮಾ. ಭಾನುಪ್ರಕಾಶ್, ಮಾ. ಬಿ ಆರ್ ಪ್ರಸನ್ನಕುಮಾರ್, ಬೇಬಿ ಇಂದಿರಾ, ರೇಖಾ ಹಾಗೂ ಅಮರೀಷ್ ಪುರಿ, ಸುಂದರ ಕೃಷ್ಣ ಅರಸ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ವಿಲನ್ ಅಪಹರಿಸಿದ ಮಕ್ಕಳನ್ನು ವಾಪಸ್ ಕರೆ ತರಲು ಅರ್ಜುನ್ ಸರ್ಜಾ ನೇತೃತ್ವದಲ್ಲಿ ಮೂರ್ನಾಲ್ಕು ಮಕ್ಕಳು ಕಾಡಿಗೆ ಹೋಗಿ, ಖದೀಮರನ್ನು ಪೊಲೀಸರಿಗೆ ಹಿಡಿದುಕೊಡುವ ಚಿತ್ರಕತೆ ಇದು. ಈ ಚಿತ್ರದ ಮೂಲಕ ಅರ್ಜುನ್ ಸರ್ಜಾ ಅವರ ಸಿನಿಮಾ ಕೆರಿಯರ್ ಶುರುವಾಯಿತು.

| ಪುಟಾಣಿ ಏಜೆಂಟ್ 123

ಕನ್ನಡದ ಮಕ್ಕಳ ಚಿತ್ರಗಳ ಪೈಕಿ ಇಂದಿಗೂ ತನ್ನದೇ ಮಹತ್ವವನ್ನು ಕಾಪಾಡಿಕೊಂಡು ಬಂದಿದೆ ಈ ಸಿನಿಮಾ. 1979ರಲ್ಲಿ ತೆರೆ ಕಂಡ, ಮಾ. ರಾಮಕೃಷ್ಣ ಹೆಗಡೆ, ಮಾಸ್ಟರ್ ಭಾನು ಪ್ರಕಾಶ್, ಇಂದಿರಾ ಜತೆಯಲ್ಲಿ ಅಂಬರೀಷ್, ಮಂಜುಳಾ , ಶ್ರೀನಾಥ ಮತ್ತಿತರರು ನಟಿಸಿದ್ದಾರೆ. ಯಾವುದೇ ತಪ್ಪು ಮಾಡದೇ ಜೈಲಿನಲ್ಲಿರುವ ಜನರನ್ನು ಹೊರಗೆ ಕರೆ ತರುವ ಕೆಲಸವನ್ನು ಮೂರು ಮಕ್ಕಳು ಮಾಡುತ್ತಾರೆ.

| C/O ಫುಟ್‌ಪಾತ್

C/O ಫುಟ್‌ಪಾತ್ ಚಿತ್ರವನ್ನು ನಿರ್ದೇಶಿಸುವ ಮೂಲಕ ಮಾ. ಕಿಶನ್ ಅತ್ಯಂತ ಕಿರಿಯ ನಿರ್ದೇಶಕ ಎಂಬ ಕೀರ್ತಿಗೆ ಪಾತ್ರರಾದರು. ಸುದೀಪ್, ಜಾಕಿಶ್ರಾಫ್ ಸೇರಿದಂತೆ ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ. ನಿರ್ದೇಶನದ ಜತೆಗೆ ನಟನೆ ಕೂಡ ಮಾಡಿರುವ ಕಿಶನ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಚಿಂದಿ ಆಯುವ ಬಾಲಕನೊಬ್ಬನಿಗೆ, ಶಾಲೆಗೆ ಹೋಗುವ ಮಕ್ಕಳು ಟೀಸ್ ಮಾಡುತ್ತಾರೆ. ಆಗ ಬಾಲಕ ಹೇಗೆ ಶಾಲೆ ಸೇರಿಕೊಳ್ಳುತ್ತಾನೆ ಎಂಬುದೇ ಇಡೀ ಸಿನಿಮಾದ ಕತೆ. ಈ ಚಿತ್ರಕ್ಕೆ ಅನೇಕ ಪ್ರಶಸ್ತಿಗಳೂ ಬಂದಿವೆ.

| ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು

ಇತ್ತೀಚಿನ ದಿನಗಳಲ್ಲಿ ತೆರೆ ಕಂಡ ಅತ್ಯುತ್ತಮ ಮಕ್ಕಳ ಚಿತ್ರಗಳ ಪೈಕಿ ಇದು ಒಂದು. ರಿಷಭ್ ಶೆಟ್ಟಿ ನಿರ್ದೇಶನದ ಚಿತ್ರವು ಗಡಿ ನಾಡಿನ ಕನ್ನಡ ಶಾಲೆಗಳ ದುಃಸ್ಥಿತಿಯನ್ನು ತೆರೆದಿಡುತ್ತದೆ. ಕೇರಳ ಸರ್ಕಾರವು ಕನ್ನಡ ಮಾಧ್ಯಮ ಶಾಲೆಯನ್ನು ಮುಚ್ಚಲು ಹೊರಟಾಗ, ಆ ಶಾಲೆಯ ಮಕ್ಕಳು ಹೇಗೆ, ನ್ಯಾಯಾಲಯದವರೆಗೂ ಹೇಗೆ ಶಾಲೆಯನ್ನು ಉಳಿಸಿಕೊಳ್ಳುತ್ತಾರೆಂಬುದು ಈ ಸಿನಿಮಾದ ತಿರುಳು. ಸಾಕಷ್ಟು ಭಾವನಾತ್ಮಕ ಅಂಶಗಳನ್ನು ಚಿತ್ರದಲ್ಲಿ ಕಾಣಬಹುದು.

| ತಾರೆ ಜಮೀನ್ ಪರ್

2007ರಲ್ಲಿ ತೆರೆ ಕಂಡ ತಾರೆ ಜಮೀನ್ ಪರ್ ಸೂಪರ್ ಸಕ್ಸೆಸ್ ಆದ ಚಿತ್ರ. ಡಿಸ್ಲೆಕ್ಸಿಯಾ ಎಂಬ ವಿರಳ ಸಮಸ್ಯೆಯನ್ನು ಹೊಂದಿರುವ ಬಾಲಕನ ಸುತ್ತ ಹೆಣೆದ ಕತೆ. ಈ ಪ್ರಾಬ್ಲೆಮ್ ಹೊಂದಿದ ಮಕ್ಕಳು ಕಲಿಕೆಯಲ್ಲಿ ಹಿಂದಿರುತ್ತಾರೆ. ಅವರಿಗೆ ಎಲ್ಲವೂ ಗೊಂದಲಮಯ. ಈ ಸಮಸ್ಯೆಯನ್ನು ಎದುರಿಸುತ್ತಿರುವ ಬಾಲಕನಲ್ಲಿ ಸುಪ್ತವಾಗಿ ಪ್ರತಿಭೆಯನ್ನು ಅವರ ಶಿಕ್ಷಕ ಹೇಗೆ ಹೊರ ತೆಗೆಯುತ್ತಾರೆಂಬುದೇ ಸಿನಿಮಾದ ಒಟ್ಟು ಜೀವಾಳ. ಡಿಸ್ಲೆಕ್ಸಿಯಾ ವಿರಳ ಪ್ರಾಬ್ಲೆಮ್ ಬಗ್ಗೆಯೂ ಈ ಚಿತ್ರವೂ ಜನರನ್ನು ಜಾಗೃತಗೊಳಿಸುತ್ತದೆ. ಶಿಕ್ಷಕನ ಪಾತ್ರದಲ್ಲಿ ಆಮೀರ್ ಖಾನ್ ಮತ್ತು ಡಿಸ್ಲೆಕ್ಸಿಯಾ ಸಮಸ್ಯೆ ಇರುವ ಮಗುವಾಗಿ ದರ್ಶನ್ ಸಫಾರಿ ಅದ್ಭುತವಾಗಿ ನಟಿಸಿದ್ದಾರೆ. ಅಮೂಲ್ ಗುಪ್ತೆ ಜತೆಗೂಡಿ ಆಮೀರ್ ಖಾನ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

| ಚಿಲ್ಲರ್ ಪಾರ್ಟಿ

2011ರಲ್ಲಿ ಅತ್ಯುತ್ತಮ ಮಕ್ಕಳ ಚಿತ್ರ ಎಂಬ ರಾಷ್ಟ್ರೀಯ ಪ್ರಶಸ್ತಿ ಗೆದ್ದ ಚಿಲ್ಲರ್ ಪಾರ್ಟಿ ಅನೇಕ ಬಾಲ‌ ಕಲಾವಿದರಿಗೆ ವೇದಿಕೆಯನ್ನು ಒದಗಿಸಿತು. ಮುಂಬೈನ ಸೊಸೈಟಿಯಲ್ಲಿರುವ ಕೆಲವು ಮಕ್ಕಳು ಅನಾಥ ಹುಡುಗ ಮತ್ತು ಆತನ ನಾಯಿ ಭಿಡು ಜತೆಗೆ ಗೆಳೆತನವನ್ನು ಸಂಪಾದಿಸುತ್ತಾರೆ. ಆದರೆ, ದುರಾಸೆಯ ರಾಜಕಾರಣಿಯೊಬ್ಬ ಎಲ್ಲ ಬೀದಿನಾಯಿಗಳನ್ನು ಹಿಡಿದು ಹೊರ ಹಾಕುವ ಪ್ಲ್ಯಾನ್ ಮಾಡುತ್ತಾನೆ. ಈ ರಾಜಕಾರಣಿಯಿಂದ ತಮ್ಮ ಸ್ನೇಹಿತ ಭಿಡುವನ್ನು ಹೇಗೆ ರಕ್ಷಿಸಿಕೊಳ್ಳುತ್ತಾರೆಂಬುದೇ ಸಿನಿಮಾದ ತಿರುಳು. ನಿತಿಶ್ ತಿವಾರಿ ಮತ್ತು ವಿಕಾಸ್ ಬೆಹ್ಲ್ ಅವರು ಈ ಸಿನಿಮಾದ ನಿರ್ದೇಶಕರು.

| ಮೈ ಫ್ರೆಂಡ್ ಗಣೇಶ

2007ರಲ್ಲಿ ತೆರೆ ಕಂಡ ಮೈ ಫ್ರೆಂಡ್ ಗಣೇಶ ಚಿತ್ರವು ಸಾಕಷ್ಟು ಸದ್ದು ಮಾಡಿತ್ತು. 8 ವರ್ಷದ ಮಗುವಿನ ತಂದೆ ತಾಯಿ ಸದಾ ಕೆಲಸದಲ್ಲಿ ಬ್ಯೂಸಿಯಾಗಿರುತ್ತಾರೆ. ಮಗುವಿಗೆ ಸಾಕಷ್ಟು ಟೈಮ್ ಕೊಡುತ್ತಿರಲಿಲ್ಲ. ಆಗ ಆ ಮಗುವಿಗೆ ಗಣೇಶನೇ ಸ್ನೇಹಿತನಾಗಿ ಬರುತ್ತಾನೆ. ಇಬ್ಬರು ಸೇರಿ ಹಲವರಿಗೆ ಸಹಾಯ ಮಾಡುತ್ತಾರೆ. ಕೆಟ್ಟವರಿಗೆ ನೀತಿಯ ಪಾಠ ಕಲಿಸುತ್ತಾರೆ. ಮಕ್ಕಳಲ್ಲಿ ಬಾಲ್ಯದಲ್ಲೇ ದೇವರ ಬಗ್ಗೆ ಪ್ರೀತಿಯನ್ನು ಹೆಚ್ಚಿಸುವ ಸಿನಿಮಾ ಇದಾಗಿದೆ ಎಂದು ಹೇಳಬಹುದು.

| ಚೋಟಾ ಚೇತನ್

ಇದು ಭಾರತದ ಮೊದಲ ತ್ರಿಡಿ ಫಿಲ್ಮ್. ಅತ್ಯುತ್ತಮ ಚಿತ್ರ ಮತ್ತು ಅತ್ಯದ್ಭುತ ಎಫೆಕ್ಟ್‌ಗಳಿಂದಾಗಿ ಚೋಟಾ ಚೇತನ್ ಈಗಲೂ ಮಕ್ಕಳ ಫೇವರಿಟ್ ಚಿತ್ರವಾಗಿ ಉಳಿದಿದೆ. 1998ರಲ್ಲಿ ತೆರೆ ಕಂಡ ಈ ಸಿನಿಮಾ ಭಾರೀ ಸದ್ದು ಮಾಡಿತ್ತು. ಹಳ್ಳಿಗಾಡಿನ ಲಕ್ಷ್ಮೀ ಮತ್ತು ಆಕೆಯ ಸ್ನೇಹಿತರಿಗೆ ಶಾಲೆಯಲ್ಲಿ ಟೀಸ್ ಭಾರಿ ತೊಂದರೆ ಸೃಷ್ಟಿಸುತ್ತದೆ. ಆಗ ಅವರಿಗೆ ಚೇತನ್ ಎಂಬ ಮಾಯಾ ವಿದ್ಯೆ ಬಲ್ಲ ಯುವಕ ಸಿಗುತ್ತಾನೆ. ಆತನ ನೆರವಿನಿಂದ ಮಕ್ಕಳ ಹೇಗೆ ತಮ್ಮಸಂಕಟ ದೂರ ಮಾಡಿಕೊಳ್ಳುತ್ತಾರೆಂಬುದೇ ಈ ಚಿತ್ರ. ಮೂಲತಃ ಮಲಯಾಳಂ ಭಾಷೆಯ ಮೈ ಡಿಯರ್ ಕುಟ್ಟಿಚಟ್ಟನ್ ಚಿತ್ರದ ಹಿಂದಿ ಡಬ್ಬಿಂಗ್ ಸಿನಿಮಾ ಇದು.

| ಐ ಆ್ಯಮ್ ಕಲಾಂ

2010ರಲ್ಲಿ ತೆರೆ ಕಂಡ ಸಿನಿಮಾ ಇದು. 12 ವರ್ಷದ ಚೋಟು ಎಂಬ ಬುದ್ಧಿವಂತ ಹುಡುಗನಿಗೆ ಬಡತನದ ಕಾರಣದಿಂದಾಗಿ ಓದುವುದನ್ನು ಮುಂದುವರಿಸಲು ಆಗುವುದಿಲ್ಲ. ಅನಿವಾರ್ಯವಾಗಿ ಆತ ರಸ್ತೆ ಬದಿಯ ಟೀ ಸ್ಟಾಲ್‌ನಲ್ಲಿ ಕೆಲಸ ಮಾಡಬೇಕಾಗುತ್ತದೆ. ಈ ಚೋಟು ಒಮ್ಮೆ ಟಿವಿಯಲ್ಲಿ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಭಾಷಣ ಕೇಳಿ, ತನ್ನೆಲ್ಲ ಅಡೆ ತಡೆಗಳನ್ನು ಮೀರಿ ಹೇಗೆ ಸಾಧಕನಾಗಿ ಬದಲಾಗುತ್ತಾನೆಂಬುದು ಚಿತ್ರದ ತಿರುಳು.

| ಮಿಸ್ಟರ್ ಇಂಡಿಯಾ

ಭಾರತದಲ್ಲಿ ಸಂಚಲನ ಸೃಷ್ಟಿಸಿದ ಚಿತ್ರವಿದು. ಮೇಲ್ನೋಟಕ್ಕೆ ದೊಡ್ಡವರ ಚಿತ್ರ ಎನಿಸಿದರೂ, ಮಕ್ಕಳ ಕತೆಯನ್ನು ಹೊಂದಿದೆ. ಹಾಗೆ ನೋಡಿದರೆ, ಇದು ಭಾರತದ ಮೊದಲ ಸೂಪರ್ ಹೀರೋ ಸಿನಿಮಾ. ನಟ ಅನಿಲ್ ಕಪೂರ್ ಅವರು ಅನಾಥ ಮಕ್ಕಳನ್ನು ಸಾಕುವ ನಾಯಕನಾಗಿ ಗಮನ ಸೆಳೆಯುತ್ತಾರೆ. ವಾಚ್ ಬಳಸಿಕೊಂಡು ಅವರು ಮಾಯವಾಗುವ ದೃಶ್ಯಗಳು ಮಕ್ಕಳಿಗೆ ಬಹಳ ಇಷ್ಟವಾಗಿದ್ದವು. ಭಯಂಕರ ವಿಲನ್ ಮೊಗ್ಯಾಂಬೋ ಅವರನ್ನು ಮಿಸ್ಟರ್ ಇಂಡಿಯಾ ಸೋಲಿಸುವ ಚಿತ್ರವು ಬಹಳ ಫೇಮಸ್ ಆಗಿತ್ತು.

| ಚಿಲ್ಡ್ರನ್ ಆಫ್ ಹೆವೆನ್

ವಿದೇಶಿ ಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ಇರಾನಿ ಚಿತ್ರವಿದು. ಮಜಿದ್ ಮಜಿದಿ ಈ ಚಿತ್ರದ ನಿರ್ದೇಶಕರು. 1997ರಲ್ಲಿ ತೆರೆ ಕಂಡ ಚಿತ್ರವು ವ್ಯಾಪಕ ಪ್ರಶಂಸೆಯನ್ನು ಪಡೆದುಕೊಂಡಿತು. ಅಲ್ಲದೇ, ಹಿಂದಿಯೂ ಸೇರಿದಂತೆ ವಿಶ್ವದ ಅನೇಕ ಭಾಷೆಗಳಲ್ಲಿ ಈ ಚಿತ್ರವು ರಿಮೇಕ್ ಆಗಿ ಸಕ್ಸೆಸ್ ಕಂಡಿದೆ. ಅಲಿ ತನ್ನ ತಂಗಿ ಝಾಹ್ರಾಳ ಒಂದು ಜೊತೆ ಶೂಗಳ ಪೈಕಿ ಒಂದ ಶೂ ಕಳೆದು ಹಾಕುತ್ತಾನೆ. ಇಬ್ಬರು ಈ ವಿಷಯನ್ನು ಪೋಷಕರಿಗೆ ತಿಳಿಸದೇ ಮುಚ್ಚಿಡುವ ಪ್ರಯತ್ನ ಮಾಡುತ್ತಾರೆ. ಬಡ ತಂದೆ ಮತ್ತ ಕಾಯಿಲೆಪೀಡಿತ ತಾಯಿ ಇರುತ್ತಾರೆ. ಮತ್ತೊಂದು ಜೊತೆ ಶೂ ಖರೀದಿಸುವವರೆಗೂ, ಅಲಿಯ ಶೂಗಳನ್ನೇ ಇಬ್ಬರು ಬಳಸುತ್ತಿರುತ್ತಾರೆ. ಆದರೆ, ಅಂತಿಮವಾಗಿ ಅಲಿ ತನ್ನ ಸಹೋದರಿಗೆ ಹೊಸ ಶೂ ಕೊಡಿಸುತ್ತಾನೋ ಇಲ್ಲವೋ, ಓಟದ ಸ್ಪರ್ಧೆಯಲ್ಲಿ ಶೂ ಬಹುಮಾನ ಗೆಲ್ಲುತ್ತಾನೋ ಇಲ್ಲವೋ ಎಂಬುದು ಈ ಸಿನಿಮಾದ ಕತೆ. ಅನೇಕ ಭಾವನಾತ್ಮಕ ದೃಶ್ಯಗಳಿಂದಾಗಿ ಸಾಕಷ್ಟು ರಿಚ್ ಆಗಿರುವ ಈ ಸಿನಿಮಾಗೆ ಭಾರೀ ಮೆಚ್ಚುಗೆ ದೊರೆಯಿತು.

ಈ ಸುದ್ದಿಯನ್ನೂ ಓದಿ: Children’s day: ನ. 14ರಂದು ಈ ಬಾರಿ ರಜೆ, ಹಾಗಿದ್ದರೆ ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಯಾವಾಗ?

Exit mobile version