Site icon Vistara News

World Book Day: ಪುಸ್ತಕಗಳಿಗೆ ರೆಕ್ಕೆ ನೀಡಿದ ಊರಿನ ಕತೆ

ಕಳೆದ ವರ್ಷ ಜೂನ್‌ 19ರಂದು ಕೇರಳದ ಕೊಲ್ಲಂ ಜಿಲ್ಲೆಯ ಪೆರುಂಕುಳಂ ಗ್ರಾಮವನ್ನು ‘ಕೇರಳದ ಮೊದಲ ಪುಸ್ತಕ ಗ್ರಾಮ’ ಎಂದು ಘೋಷಿಸಲಾಯಿತು. ಇಲ್ಲಿನ ‘ಬಾಪೂಜಿ ಸ್ಮಾರಕ ಗ್ರಂಥಶಾಲೆ’ ಈ ಪ್ರಯತ್ನದ ಹಿಂದೆ ಇದೆ. ಗ್ರಾಮದ ಎಲ್ಲರಲ್ಲಿ, ಮುಖ್ಯವಾಗಿ ಮಕ್ಕಳಲ್ಲಿ ಓದಿನ ಅಭಿರುಚಿ ಮೂಡಿಸುವುದು, ಅವರ ಓದಿನ ಹಸಿವಿಗೆ ತಕ್ಕ ಪುಸ್ತಕಗಳನ್ನು ಒದಗಿಸುವುದು ಇದರ ಗುರಿ.

ಈ ಗುರಿಯನ್ನು ತಲುಪಲು ಅವರು ತೆಗೆದುಕೊಂಡ ಕ್ರಮಗಳು ವಿಶಿಷ್ಟವಾಗಿವೆ. ಗ್ರಾಮದ ಹಲವು ಮೂಲೆಗಳಲ್ಲಿ ಓಪನ್‌ ಆಗಿ ‘ಪುಸ್ತಕ ಕೂಡು(ಗೂಡು)’ ಎಂದು ಕರೆಯಲಾಗುವ ಬುಕ್‌ಶೆಲ್ಫ್‌ಗಳನ್ನು ಇಡಲಾಗಿದೆ. ಅವುಗಳಲ್ಲಿ ಸುಲಭ ಓದಿನ ಪುಸ್ತಕಗಳು ಹಾಗೂ ನಿಯತಕಾಲಿಕೆಗಳು. ಯಾರೇ ಆದರೂ ಇದರಿಂದ ತಮಗೆ ಬೇಕಾದ ಪುಸ್ತಕಗಳನ್ನು ತೆಗೆದುಕೊಂಡು ಅಲ್ಲೇ ಕುಳಿತು ಓದಬಹುದು. ಅಥವಾ ಮನೆಗೆ ತೆಗೆದುಕೊಂಡು ಹೋಗಿ ಓದಿ ಮತ್ತೆ ಅಲ್ಲೇ ತಂದು ಇಡಬಹುದು. ಇಂಥ 11 ಗೂಡುಗಳು ಅಲ್ಲಲ್ಲಿ ಇವೆ. ಮುಖ್ಯ ಗ್ರಂಥಾಲಯ ಕೊಠಡಿಯಲ್ಲಿ 7000 ಪುಸ್ತಕಗಳಿವೆ. ಮನೆಗೆ ಬೇಕಾದರೂ ಪುಸ್ತಕ ತಲುಪಿಸುವ ವ್ಯವಸ್ಥೆಯಿದೆ. ಕೇರಳದ ಖ್ಯಾತ ಸಾಹಿತಿಗಳಾದ ಎಂ.ಟಿ.ವಾಸುದೇವನ್‌ ನಾಯರ್‌, ಎಂ.ಮುಕುಂದನ್‌ ಮುಂತಾದವರು ಈ ಪುಸ್ತಕ ಹಳ್ಳಿಯ ಮೆಂಟರ್‌ಗಳು.

ಇದೇನೂ ಸಣ್ಣ ಸಾಧನೆಯಲ್ಲ. 5000 ನಿವಾಸಿಗಳು ಇರುವ ಹಳ್ಳಿಯಲ್ಲಿ ಲೈಬ್ರರಿಗೆ 600 ಸದಸ್ಯರು ಇರುವುದು ವಿಶೇಷವೇ. 1948ರಲ್ಲಿ ದೇಶ ಮಹಾತ್ಮ ಗಾಂಧಿ ಸಾವಿನ ದುಃಖದಲ್ಲಿದ್ದರೆ, ಈ ಹಳ್ಳಿಯ ಕೆಲ ತರುಣರು ಒಟ್ಟು ಸೇರಿ ನೂರು ಪುಸ್ತಕಗಳೊಂದಿಗೆ ಪುಟ್ಟ ಲೈಬ್ರರಿ ಸ್ಥಾಪಿಸಿದರು. ಈ ಲೈಬ್ರರಿ ಸದಸ್ಯರ ಕಾಸು ಕೂಡಿಸುತ್ತಾ ಬಂದು 1957ರಲ್ಲಿ ಸ್ವಂತ ಕಟ್ಟಡ ಕಟ್ಟಿಕೊಂಡಿತು. 2018ರ ಮಹಾಮಳೆ- ಪ್ರವಾಹದಲ್ಲಿ ತಮ್ಮ ಪುಸ್ತಕ ಕಳೆದುಕೊಂಡ ವಿದ್ಯಾರ್ಥಿಗಳಿಗೆ ಬರೆಯುವ ಸ್ಪರ್ಧೆ ಏರ್ಪಡಿಸಿ ಎಲ್ಲರಿಗೂ ಪುಸ್ತಕಗಳನ್ನು ಕಳಿಸಿಕೊಟ್ಟಿತು. ಕಳೆದ ವರ್ಷ ಪಕ್ಕದ ಗ್ರಾಮದಲ್ಲೂ ಒಂದು ಶಾಖೆ ತೆರೆಯಿತು.

2017ರಲ್ಲಿ ಮೊದಲ ಪುಸ್ತಕ ಗೂಡು ಸ್ಥಾಪಿಸಿದಾಗ, ಇದನ್ನು ಯಾರಾದರೂ ಕಳವು ಮಾಡಬಹುದು, ನಾಶ ಮಾಡಬಹುದು ಅಥವಾ ಯಾರೂ ಬಳಸದೆಯೂ ಇರಬಹುದು ಎಂಬ ಚಿಂತೆಯೂ ಇತ್ತು. ಆದರೆ ಗ್ರಾಮಸ್ಥರು ಇದನ್ನು ಆಶ್ಚರ್ಯ, ಆನಂದದಿಂದ ಸ್ವೀಕರಿಸಿದರು. ಗೂಡಿನಲ್ಲಿ ಒಂದು ನೋಂದಣಿ ಪುಸ್ತಕವಿರುತ್ತದೆ. ಪುಸ್ತಕ ಕೊಂಡೊಯ್ಯುವವರು ಅದರಲ್ಲಿ ತಮ್ಮ ಹೆಸರು, ಪುಸ್ತಕದ ಹೆಸರು, ತಾರೀಕು ದಾಖಲಿಸಿದರೆ ಸಾಕು.

ಈ ಗ್ರಾಮದ ಯಶಸ್ಸಿನಿಂದ ಪ್ರೇರಿತವಾದ ರಾಜ್ಯ ಶಿಕ್ಷಣ ಇಲಾಖೆ ಈಗ ರಾಜ್ಯದ 5000 ಶಾಲೆಗಳಲ್ಲಿ ಪುಸ್ತಕ ಗೂಡುಗಳನ್ನು ಸ್ಥಾಪಿಸಿದೆ. ಬಾಪೂಜಿ ಗ್ರಂಥಾಲಯದ ಬೆನ್ನೆಲುಬಾಗಿರುವ ಉತ್ಸಾಹಿ ತರುಣರ ತಂಡಕ್ಕೆ ಇನ್ನೂ ಹಲವು ಕನಸುಗಳಿವೆ- ಪ್ರತಿ ಮನೆಗೂ ಗಾಂಧೀಜಿ ಆತ್ಮಕತೆ ‘ನನ್ನ ಸತ್ಯಾನ್ವೇಷಣೆ’ ಹಂಚುವುದು; ಓದಿನಲ್ಲಿ ಮುಂದಿರುವ ಬಡ ಮಕ್ಕಳ ಮನೆಗೆ ಸ್ವಂತ ಪುಸ್ತಕ ಗೂಡು ನೀಡುವುದು- ಇತ್ಯಾದಿ. ಗ್ರಂಥಾಲಯ ಸಾಮಾಜಿಕವಾಗಿಯೂ ಬೆಳೆಯುತ್ತಿದೆ.

ದೇಶದ ಮೊದಲ ಪುಸ್ತಕ ಗ್ರಾಮ

‘ಪುಸ್ತಕ ಗ್ರಾಮ’ ಮಾಡುವ ಕನಸು ಹುಟ್ಟಿಕೊಂಡದ್ದು 2017ರಲ್ಲಿ, ದೇಶದ ಮೊದಲ ಪುಸ್ತಕ ಗ್ರಾಮದ ಘೋಷಣೆಯಾದಾಗ. ಆ ವರ್ಷ ಮಹಾರಾಷ್ಟ್ರದ ಮಹಾಬಲೇಶ್ವರದ ಹತ್ತಿರದ ಪಂಚಗಣಿಯ ಭಿಲಾರ್‌ ಎಂಬ ಹಳ್ಳಿ ‘ದೇಶದ ಮೊದಲ ಪುಸ್ತಕ ಗ್ರಾಮ’ ಎನಿಸಿಕೊಂಡಿತು. ಇದೂ ಸ್ಥಳೀಯರ, ಪುಸ್ತಕಪ್ರಿಯರ ಸಾಹಸದಿಂದಲೇ. ನಾಡಿನ ಅನೇಕ ಕಡೆಗಳಿಂದ ಕಲಾವಿದರನ್ನು ಕರೆಸಿಕೊಂಡು, ಹಳ್ಳಿಯ ಹತ್ತಾರು ಆಯ್ದ ಮನೆಗಳ ಮುಂದೆ ‘ಇದು ಗ್ರಂಥಾಲಯ’ ಎಂದು ಸೂಚಿಸುವಂತೆ ಚಿತ್ರ ಬಿಡಿಸಿ, ಆ ಮನೆಗಳಲ್ಲಿ ಸಾವಿರಾರು ಪುಸ್ತಕಗಳನ್ನಿಡಲಾಯಿತು. ಅಲ್ಲೂ ಯಾರು ಬೇಕಾದರೂ ಒಳಗೆ ಹೋಗಿ ಪುಸ್ತಕ ಆಯ್ದು ಓದಿ ಬರಬಹುದು. ಮನೆಯವರು ನಿಮಗೆ ಕೂರಲು ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದಾರೆ. ಟೀ- ಬಿಸ್ಕಿಟ್‌ ಕೂಡ ಕೊಡುತ್ತಾರೆ. ಇದನ್ನು ‘ಪುಸ್ತಕಾಂಚೆ ಗಾಂವ್‌’ ಎಂದು ಕರೆಯಲಾಗುತ್ತದೆ.

ಬಾಪೂಜಿ ಲೈಬ್ರರಿಯ ರಾಜೀವ್‌ ಎಂಬವರು ಹೇಳುತ್ತಾರೆ- ‘‘ಇಲ್ಲಿ ಒಳಬರುವಾಗ ನಿಮ್ಮ ರಾಜಕೀಯ, ಜಾತಿ, ಧರ್ಮ ಇದನ್ನೆಲ್ಲ ಚಪ್ಪಲಿ ಬಿಟ್ಟು ಬರುವ ಜಾಗದಲ್ಲಿ ಬಿಟ್ಟು ಬರಬೇಕು!’’ ಅಂತ.

ಕೇರಳದ ಈ ಗ್ರಾಮದ ನಿದರ್ಶನದಿಂದ ನಾವು ಎಷ್ಟೆಲ್ಲಾ ಕಲಿಯಬಹುದು- ಮೊದಲು ಮಕ್ಕಳ ಕೈಗೆ ಸಿಗುವಂತೆ ಕೆಲವು ಸರಳ ಪುಸ್ತಕಗಳನ್ನು ಇಡೋಣ. ನಮ್ಮಲ್ಲಿ ತಾಲೂಕಿಗೊಂದು ಪುಸ್ತಕ ಅಂಗಡಿ ಕೂಡ ಇಲ್ಲ. ಕೆಲವು ಕಡೆ ಜಿಲ್ಲಾ ಕೇಂದ್ರಗಳಲ್ಲೂ ಒಂದು ದೊಡ್ಡ ಪುಸ್ತಕ ಮಳಿಗೆ ಇಲ್ಲ. ಪ್ರತಿ ತಾಲೂಕು ಕೇಂದ್ರದ ಬಸ್‌ ನಿಲ್ದಾಣದಲ್ಲೂ ಒಂದು ಪುಸ್ತಕ ಮಳಿಗೆ ಇರುವಂತೆ ನೋಡಿಕೊಳ್ಳುವುದು, ಪ್ರತಿ ತಾಲೂಕಿನ ಗ್ರಂಥಾಲಯವೂ ಎಲ್ಲರಿಗೂ ಸುಲಭ ಲಭ್ಯವಾಗುವಂತೆ ಏರ್ಪಡಿಸುವುದು, ಪ್ರತಿ ಊರಿನ ಪ್ರಾಥಮಿಕ ಶಾಲೆಯ ಗ್ರಂಥಾಲಯದಿಂದ ಕನಿಷ್ಠ ಹತ್ತು ಪುಸ್ತಕವಾದರೂ ಊರಿನ ಎಲ್ಲರ ಓದಿಗೆ ಸಿಗುವಂತೆ ಮಾಡುವುದು ಕಷ್ಟವಲ್ಲ. ಇದಕ್ಕೆ ಇಚ್ಛಾಶಕ್ತಿ ಮತ್ತು ಸೃಜನಶೀಲ ಐಡಿಯಾಗಳು ಬೇಕಷ್ಟೆ.

ಇದನ್ನೂ ಓದಿ: ಆರ್. ರಾಜು, ಸುಭಾಷ್ ಚಂದ್ರ ಸೇರಿ ಆರು ಕಲಾವಿದರಿಗೆ ಲಲಿತಕಲಾ ಅಕಾಡೆಮಿ ಪ್ರಶಸ್ತಿ

Exit mobile version