Site icon Vistara News

Pampa Award : ಪರಿಸರದ ನಾಡಿಮಿಡಿತ ಅರಿತ ನಾ. ಡಿಸೋಜ ಮುಡಿಗೆ ಪಂಪ ಪ್ರಶಸ್ತಿ ಕಿರೀಟ

Na Dsouza Books Pampa Awards

ಬೆಂಗಳೂರು: ದ್ವೀಪ, ಮುಳುಗಡೆ, ಕಾಡಿನ ಬೆಂಕಿ ಸೇರಿದಂತೆ ಹತ್ತಾರು ಕಾದಂಬರಿಗಳ ಮೂಲಕ ಪರಿಸರದ ನೋವಿಗೆ ದನಿಯಾದ ಖ್ಯಾತ ಸಾಹಿತಿ ನಾ. ಡಿಸೋಜ (Writer Na. Dsouza) ಅವರನ್ನು ಕರ್ನಾಟಕ ಸರ್ಕಾರ (Karnataka Government) ನೀಡುವ 2023-24ನೇ ಸಾಲಿನ ಪ್ರತಿಷ್ಠಿತ ಪಂಪ ಪ್ರಶಸ್ತಿಗೆ (Prestigious Pampa Award) ಆಯ್ಕೆ ಮಾಡಲಾಗಿದೆ. ಕನ್ನಡದ ಆದಿ ಕವಿ ಪಂಪನ ಹೆಸರಿನಲ್ಲಿ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿ ಇದಾಗಿದ್ದು, 1987ರಿಂದ ಕನ್ನಡ ಸಾಹಿತ್ಯ ಲೋಕದ ಅನನ್ಯ ಸಾಧಕರಿಗೆ ಇದನ್ನು ನೀಡಲಾಗುತ್ತಿದೆ. ಕುವೆಂಪು ಅವರು ಈ ಪ್ರಶಸ್ತಿ ಸ್ವೀಕರಿಸಿದ ಮೊದಲ ಸಾಹಿತಿ. ಇದು ಐದು ಲಕ್ಷ ರೂ. ನಗದು ಮತ್ತು ಫಲಕವನ್ನು ಒಳಗೊಂಡಿದೆ.

ಇದೇ ವೇಳೆ ಕರ್ನಾಟಕ ಸರ್ಕಾರವು ಸಾಂಸ್ಕೃತಿಕ ವಲಯದಲ್ಲಿ ನೀಡುವ ನಾನಾ ಪ್ರಶಸ್ತಿಗಳಿಗೆ ಸಾಧಕರನ್ನು ಆಯ್ಕೆ ಮಾಡಿದೆ. ಬಸವ ಪುರಸ್ಕಾರ, ಗುಬ್ಬಿ ವೀರಣ್ಣ ಪುರಸ್ಕಾರ, ಬಿವಿ. ಕಾರಂತ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಸಾಧಕರನ್ನು ಹೆಸರಿಸಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೂ ಜನವರಿ 31ರಂದು ಪ್ರದಾನ ಮಾಡಲಿದೆ. ಹಿರಿಯ ಕಾದಂಬರಿಕಾರ ನಾ.ಡಿಸೋಜಾ ಅವರನ್ನು ಹಂಪಿ ಪ್ರಶಸ್ತಿಗೆ ಆಯ್ಕೆ ಮಾಡಿದಂತೆ ಮಹಾರಾಷ್ಟ್ರದ ಹೋರಾಟಗಾರ ಸಾಹಿತಿ ಆನಂದ್‌ ತೇಲ್ತುಂಬಡೆ ಅವರನ್ನು ಬಸವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಸಂಗೊಳ್ಳಿ ರಾಯಣ್ಣ ಪ್ರಶಸ್ತಿಗೆ ಡಾ.ಕೆ.ಮರುಳಸಿದ್ದಪ್ಪ, ಅಕ್ಕಮಹಾದೇವಿ ಪ್ರಶಸ್ತಿಗೆ ಡಾ.ವಸುಂಧರಾ ಭೂಪತಿ ಆಯ್ಕೆಯಾಗಿದ್ದಾರೆ.

ಎಲ್ಲ ಪ್ರಶಸ್ತಿಗಳ ಪಟ್ಟಿ ಹೀಗಿದೆ

ಬಸವ ಪುರಸ್ಕಾರ: ಆನಂದ್‌ ತೇಲ್ತುಂಬಡೆ(2022-23), ಡಾ.ಎ.ಜಿ.ಮಹದೇವಪ್ಪ ಧಾರವಾಡ( 2023-24)
ಭಗವಾನ್‌ ಮಹಾವೀರ ಶಾಂತಿ ಪ್ರಶಸ್ತಿ: ಜಿನದತ್ತ ದೇಸಾಯಿ(2022-23), ಗುಜರಾತ್‌ನ ಗಾಂಧಿ (2023-24)
ಟಿ ಚೌಡಯ್ಯ ಪ್ರಶಸ್ತಿ: ನಿತ್ಯಾನಂದ ಹಳದಿಪುರ ಕೊಳಲು (2022-23), ಶ್ರೀರಾಮುಲು ನಾದಸ್ವರ ಕೋಲಾರ(2023-24)
ಗಾನಯೋಗಿ ಪಂಡಿತ್‌ ಪಂಚಾಕ್ಷರಿ ಗವಾಯಿ ಪ್ರಶಸ್ತಿ: ಪಂಡಿತ್‌ ಸೋಮನಾಥ ಮರಡೂರ ಧಾರವಾಡ (2022-23), ಡಾ.ನಾಗಮಣಿ ಶ್ರೀನಾಥ್‌ ಮೈಸೂರು(2023-24)
(ಈ ಪ್ರಶಸ್ತಿ ಆಯ್ಕೆಗೆ ಗೊ.ರು.ಚನ್ನಬಸಪ್ಪ ಅಧ್ಯಕ್ಷರಾಗಿದ್ದರು. ಪ್ರಶಸ್ತಿ 10 ಲಕ್ಷ ರೂ. ನಗದು ಒಳಗೊಂಡಿದೆ.)

ಪಂಪ ಪ್ರಶಸ್ತಿ: ನಾ.ಡಿಸೋಜಾ, ಸಾಗರ(2023-24)

ಪ್ರೊ. ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ: ಮಹಾರಾಷ್ಟ್ರದ ಡಾ. ಕೆ.ವಿಶ್ವನಾಥ್ ಕಾರ್ನಾಡ (2022–23), ಬೆಳಗಾವಿಯ ಚಂದ್ರಕಾಂತ ಪೋಕಳೆ (2023–24)

ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ: ಹಾಸನದ ಬಾನು ಮುಷ್ತಾಕ್ (2022–23), ರಾಯಚೂರಿನ ಎಚ್‌.ಎಸ್.ಮುಕ್ತಾಯಕ್ಕ (2023–24)
ಬಿ.ವಿ.ಕಾರಂತ ಪ್ರಶಸ್ತಿ: ಬೆಂಗಳೂರಿನ ಸಿ.ಬಸವಲಿಂಗಯ್ಯ (2022–23), ಮಂಗಳೂರಿನ ಸದಾನಂದ ಸುವರ್ಣ (2023–24)
ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ: ತುಮಕೂರಿನ ಚನ್ನಬಸಯ್ಯ ಗುಬ್ಬಿ (2022–23) , ವಿಜಯಪುರದ ಎಲ್.ಬಿ.ಶೇಖ್ ಮಾಸ್ತರ (2023–24)
ಡಾ. ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ: ಡಾ. ಮೊಗಳ್ಳಿ ಗಣೇಶ್ (2021–22), ಉತ್ತಮ ಕಾಂಬ್ಳೆ (2022–23), ದಾವಣಗೆರೆಯ ಬಿ.ಟಿ.ಜಾಹ್ನವಿ (2023–24)
(ಈ ಪ್ರಶಸ್ತಿಗಳು ತಲಾ 5 ಲಕ್ಷ ರೂ. ನಗದು ಒಳಗೊಂಡಿದೆ. ಡಾ. ಬರಗೂರು ರಾಮಚಂದ್ರಪ್ಪ ಅವರು ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.)

ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಶಸ್ತಿ ವಿಭಾಗದ ಪ್ರಶಸ್ತಿ

ಸಂಗೊಳ್ಳಿ ರಾಯಣ್ಣ ಪ್ರಶಸ್ತಿ: ಬೆಂಗಳೂರಿನ ಕೆ. ಮರುಳಸಿದ್ದಪ್ಪ (2020–21), ಬೆಳಗಾವಿಯ ಹಸನ್‌ ನಯೀಂ ಸುರಕೋಡ (2021–22), ಕೋಲಾರದ ಕೆ. ರಾಮಯ್ಯ (2022–23), ಬಳ್ಳಾರಿಯ ವೀರಸಂಗಯ್ಯ (2023–24)
ಅಕ್ಕಮಹಾದೇವಿ ಪ್ರಶಸ್ತಿ: ಧಾರವಾಡದ ಜಗನ್ಮಾತೆ ಅಕ್ಕಮಹಾದೇವಿ ಆಶ್ರಮ ಟ್ರಸ್ಟ್ (2020–21), ಮಂಡ್ಯದ ಡಾ. ಆರ್.ಸುನಂದಮ್ಮ (2021–22), ಕಲಬುರಗಿಯ ಮೀನಾಕ್ಷಿ ಬಾಳಿ (2022–23), ಬೆಂಗಳೂರಿನ ಡಾ. ವಸುಂಧರಾ ಭೂಪತಿ (2023–24)
ಕನಕಶ್ರೀ ಪ್ರಶಸ್ತಿ: ಹಾವೇರಿಯ ಡಾ. ಲಿಂಗದಹಳ್ಳಿ ಹಾಲಪ್ಪ (2021–22), ಮಂಗಳೂರಿನ ಡಾ. ಬಿ.ಶಿವರಾಮ ಶೆಟ್ಟಿ (2022–23)
(ಈ ಪ್ರಶಸ್ತಿಗಳು ತಲಾ 5 ಲಕ್ಷ ರೂ. ನಗದು ಒಳಗೊಂಡಿದೆ. ಬಿ.ಟಿ.ಲಲಿತಾ ನಾಯಕ್ ಅಧ್ಯಕ್ಷರು)

ಕಲಾ ಪ್ರಶಸ್ತಿ ವಿಭಾಗದ ಪ್ರಶಸ್ತಿಗೆ ಆಯ್ಕೆಯಾದವರು

ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ: ಮೈಸೂರಿನ ಜಿ.ಎಲ್.ಎನ್.ಸಿಂಹ (2022–23), ಕಲಬುರಗಿಯ ಬಸವರಾಜ್ ಎಲ್. ಜಾನೆ (2023–24)
ಜಾನಪದಶ್ರೀ ಪ್ರಶಸ್ತಿ(ವಾದನ): ದಕ್ಷಿಣ ಕನ್ನಡದ ಅರುವ ಕೊರಗಪ್ಪ ಶೆಟ್ಟಿ (2022–23), ಚಿಕ್ಕಮಗಳೂರಿನ ಜಿ.ಪಿ. ಜಗದೀಶ್ (2023–24)
ಜಾನಪದ ಶ್ರೀ ಪ್ರಶಸ್ತಿ(ಗಾಯನ): ಬೀದರ್‌ನ ಕಲ್ಲಪ್ಪ ಮಿರ್ಜಾಪುರ (2022–23), ಚಿತ್ರದುರ್ಗದ ಹಲಗೆ ದುರ್ಗಮ್ಮ (2023–24)
(ಈ ಪ್ರಶಸ್ತಿಗಳು ತಲಾ 5 ಲಕ್ಷ ರೂ. ನಗದು ಒಳಗೊಂಡಿದೆ. ಡಾ. ವಿ.ಟಿ.ಕಾಳೆ ಆಯ್ಕೆ ಸಮಿತಿ ಅಧ್ಯಕ್ಷ)

ಸಂಗೀತ, ನೃತ್ಯ ಪ್ರಶಸ್ತಿ ವಿಭಾಗದ ಪುರಸ್ಕೃತರು

ನಿಜಗುಣ–ಪುರಂದರ ಪ್ರಶಸ್ತಿ: ಮೈಸೂರಿನ ಎಂ.ಕೆ.ಸರಸ್ವತಿ (2022–23), ಧಾರವಾಡದ ಅಕ್ಕಮಹಾದೇವಿ ಮಠ (2023–24)
ಕುಮಾರವ್ಯಾಸ ಪ್ರಶಸ್ತಿ: ಗದುಗಿನ ಸಿದ್ದೇಶ್ವರ ಶಾಸ್ತ್ರಿ (2022–23), ಮೈಸೂರಿನ ಕೃ.ರಾಮಚಂದ್ರ (2023–24)
ಶಾಂತಲಾ ನಾಟ್ಯ ಪ್ರಶಸ್ತಿ: ಬೆಂಗಳೂರಿನ ಚಿತ್ರಾ ವೇಣುಗೋಪಾಲ್ (2022–23), ಬೆಂಗಳೂರಿನ ರೇವತಿ ನರಸಿಂಹನ್‌ (2023–24)
ಸಂತ ಶಿಶುನಾಳ ಷರೀಫ ಪ್ರಶಸ್ತಿ: ಬೆಂಗಳೂರಿನ ಕಸ್ತೂರಿ ಶಂಕರ್‌ (2022–23), ಶಿವಮೊಗ್ಗದ ಎನ್.ಬಿ.ಶಿವಲಿಂಗಪ್ಪ (2023–24)
(ಈ ಪ್ರಶಸ್ತಿಗಳು ತಲಾ 5 ಲಕ್ಷ ರೂ. ನಗದು ಒಳಗೊಂಡಿದೆ. ಡಾ. ನರಸಿಂಹಲು ವಡವಾಡಿ ಆಯ್ಕೆ ಸಮಿತಿ ಅಧ್ಯಕ್ಷ.)

ಇದನ್ನೂ ಓದಿ : Academy Awards : ಇದು ನಿಮ್ಮ ಮೊದಲ ಕೃತಿಯೇ?; ಹಾಗಿದ್ರೆ ಸಾಹಿತ್ಯ ಅಕಾಡೆಮಿ ಬಹುಮಾನಕ್ಕಾಗಿ ಅರ್ಜಿ ಸಲ್ಲಿಸಿ

ಜನರ ನಾಡಿಮಿಡಿತ ಅರಿತ, ಸೂಕ್ಷ್ಮ ಬರಹಗಾರ ನಾರ್ಬರ್ಟ್‌ ಡಿಸೋಜ

ಪಂಪ ಪ್ರಶಸ್ತಿಗೆ ಆಯ್ಕೆಯಾದ ಖ್ಯಾತ ಸಾಹಿತಿ ನಾ ಡಿಸೋಜ ಅವರು ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿ ನಿವೃತ್ತಿ ಹೊಂದಿದವರು. ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿರುವ ನಾರ್ಬರ್ಟ್ ಡಿಸೋಜ ಅವರು ಹುಟ್ಟಿದ್ದು 1937ರ ಜೂನ್ 6ರಂದು. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ.

ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ.

ಪ್ರಾರಂಭದ ದಿನಗಳಲ್ಲಿ ‘ಪ್ರಪಂಚ’ ಪತ್ರಿಕೆಗೆ ಕಥೆಗಳನ್ನು ಬರೆಯುತ್ತಿದ್ದರು. ಡಿಸೋಜರ ಮೊದಲ ಕಾದಂಬರಿ ‘ಬಂಜೆ ಬೆಂಕಿ’ ಪ್ರಕಟವಾದದ್ದು 1964ರಲ್ಲಿ. ನಂತರ ಮಂಜಿನ ಕಾನು, ಈ ನೆಲ ಈಜಲ, ಕೆಂಪು ತ್ರಿಕೋನ, ನೆಲೆ, ಮಾನವ – ಹೀಗೆ ಇವರು ಬರೆದಿರುವ ಕಾದಂಬರಿಗಳು ಸುಮಾರು 40. ಪರಿಸರ ನಾಶ, ಕ್ರೈಸ್ತ ಜನಾಂಗದ ಹಿನ್ನೆಲೆ, ಭ್ರಷ್ಟಾಚಾರದ ವಸ್ತು, ಹಿಂದುಳಿದ ಬುಡಕಟ್ಟು ಜನಾಂಗದ ಚಿತ್ರಣ ಹೀಗೆ ಹಲವು ಹತ್ತು ವಿಷಯಗಳನ್ನೊಳಗೊಂಡ ಅವರ ಕಾದಂಬರಿಗಳು ಹೆಚ್ಚು ಜನಪ್ರಿಯಗೊಂಡಿವೆ. ನಾ. ಡಿಸೋಜ ಅವರ ದ್ವೀಪ, ಮುಳುಗಡೆ, ಕಾಡಿನ ಬೆಂಕಿ, ಬಳುವಳಿ, ಬೆಟ್ಟದಪುರದ ದಿಟ್ಟ ಮಕ್ಕಳು, ಆಂತರ್ಯ ಕೃತಿಗಳು ಚಲನಚಿತ್ರಗಳಾಗಿ ತೆರೆಮೇಲೆಯೂ ಮೂಡಿನಿಂತು ಪ್ರಶಸ್ತಿ ಪುರಸ್ಕಾರಕ್ಕೂ ಭಾಜನವಾಗಿದೆ. ಮಕ್ಕಳ ಸಾಹಿತ್ಯದಲ್ಲಿ ಸುಮಾರು ಹನ್ನೆರಡು ಕೃತಿಗಳನ್ನು ರಚಿಸಿದ್ದಾರೆ.

ಅಜ್ಞಾತ, ಒಂದು ಜಲಪಾತದ ಸುತ್ತ , ಕೈತಾನ್ ಗಾಂಧಿಯ ಸ್ವಾತಂತ್ರ್ಯ ಹೋರಾಟ, ಜೀವಕಳೆ, ಪ್ರೀತಿಯೊಂದೆ ಸಾಲದೇ?, ಬಂಜೆ ಬೆಂಕಿ, ಪ್ರಜ್ಞಾಬಲಿ, ನೆಲೆ, ನಡುವೆ ನಿಂತ ಜನ, ಗಾಂಧಿ ಬಂದರು, ಒಡ್ಡು, ಮಾನವ, ಮುಳುಗಡೆ, ವಿಷಾನಿಲ ಇನ್ನೂ ಅನೇಕ ಕಾದಂಬರಿಗಳನ್ನೊಳಗೊಂಡತೆ ಮಕ್ಳ ಸಾಹಿತ್ಯವನ್ನೂ, ರೇಡಿಯೋ ನಾಟಕಗಳನ್ನೂ ನಾ.ಡಿಸೋಜ ಅವರು ರಚಿಸಿದ್ದಾರೆ.

Exit mobile version